ಬರಗಾಲದ ಪ್ರಖರತೆಯಿಂದ ಹಸಿವಿನ ಬಾಧೆಗೊಳಗಾದ ಬಡಜನರಿಗಾಗಿ ನಿತ್ಯವೂ ಮಠದಲ್ಲಿ ಊಟ
🕉️ ಗೌರಿ ಹುಣ್ಣಿಮೆ ತೇರು ಹಾಗೂ ಧಾತುನಾಮ ಸಂವತ್ಸರದಲ್ಲಿ ಬರಗಾಲದ ಪ್ರಖರತೆಯಿಂದ ಹಸಿವಿನ ಬಾಧೆಗೊಳಗಾದ ಬಡಜನರಿಗಾಗಿ ನಿತ್ಯವೂ ಆಶ್ರಮದಲ್ಲಿ ಸಿದ್ಧನು ಅನ್ನಸಂತರ್ಪಣೆ ಮಾಡಿಸಿದ್ದು.
ಹಳೇಹುಬ್ಬಳ್ಳಿಯ ಕಸಬಾಪೇಟೆಯಲ್ಲಿ ಒಂಭತ್ತು ಕಳಸದ ತೇರನ್ನು ಕಟ್ಟಿ ಗೌರಿಹುಣ್ಣಿಮೆಯ ದಿವಸ ಗೌರಿಯನ್ನು ಕುಡ್ರಿಸಿ ವೈಭವದಿಂದ ಉತ್ಸವ ಆಚರಣೆ ಮಾಡುತ್ತಿದ್ದರು. ಪರಸ್ಪರರಲ್ಲಿ ಮಾತಿನ ಚಕಮಕಿಯ ದ್ವೇಷದಿಂದ ಈ ಉತ್ಸವ ಸ್ಥಗಿತಗೊಂಡಿತ್ತು. ಗೌರಿಯನ್ನು ಕುಳ್ಳಿರಿಸುವುದರಿಂದ ವ್ಯಾಜ್ಯ ಬಂದಿದೆ. ಕಾರಣ ಈ ತೇರಿನಲ್ಲಿ ಸಿದ್ಧನನ್ನು ಕೂಡ್ರಿಸಿ ಗೌರಿ ಹುಣ್ಣಿಮೆ ತೇರನ್ನು ಎಳೆಯೋಣ ಎಂತಾ ನಿರ್ಧರಿಸಿದರು. ಕೆಲವರು ವಾದ್ಯಗಳನ್ನು ತಂದರು. ಉಬ್ಬಣ್ಣನವರ ಭೀಮಪ್ಪನು ಅನ್ನ ಸಂತರ್ಪಣೆ ಮಾಡಲು ಮುಂದಾದನು. ಅದಕ್ಕಾಗಿ ತನ್ನ ಮನೆಯಲ್ಲಿಯ ಎಲ್ಲ ವಸ್ತುಗಳನ್ನು ಮಾರಿ ಹಣವನ್ನು ಸಂಗ್ರಹಿಸಿದನು. ತೇರನ್ನು ತೊಳೆದು ತಳಿರು ತೋರಣಳಿಂದ ಶೃಂಗರಿಸಿದರು. ಸಿದ್ಧನನ್ನು ಕರೆತಂದು ಅಭ್ಯಂಗ ಸ್ನಾನ ಮಾಡಿಸಿ ಹೊಸ ವಸ್ತ್ರವನ್ನು ತೊಡಿಸಿದರು. ಭಸ್ಮ, ಗಂಧ, ಕುಂಕುಮಗಳಿಂದ ಪಾದಪೂಜೆ ಮಾಡಿ ಪೂಮಾಲೆ ಹಾಕಿ ಶೃಂಗರಿಸಿ ತೇರಿನಲ್ಲಿ ಕೂಡ್ರಿಸಿದರು. ಮುತ್ತೈದೆಯರು ಆರತಿ ಮಾಡಿದರು. ಪಾರ್ವತಿ ಪತಿ ಹರ ಹರ ಮಹಾದೇವ ಅಂತ ತೇರನ್ನು ಎಳೆಯತೊಡಗಿದರು. ಚಪ್ಪಾಳೆ ತಟ್ಟತೊಡಗಿದರು. ದುಂಧುಬಿ ಮೊಳಗಿದವು. ಮಂಗಳವಾದ್ಯಗಳು ನಿನಾದಗೊಂಡವು. ಹಣ್ಣು ಹಂಪಲಗಳನ್ನು ತೇರಿನ ಮೇಲೆ ತೂರಹತ್ತಿದರು. ಇಡೀ ಓಣಿಯ ಜನರೆಲ್ಲರೂ ಹರ್ಷದಿಂದ ಓಂ ನಮಃ ಶಿವಾಯ ಎನ್ನುತ್ತ ಸಿದ್ಧಾರೂಢರಿಗೆ ಜಯ ಜಯಕಾರ ಹಾಕುತ್ತಾ ನಲಿದಾಡತೊಡಗಿದರು. ನೆತ್ತಿಯ ಮೇಲೆ ಬೆಂಕಿ ಇಟ್ಟಾಗಲೂ ತೇರಿನಲ್ಲಿ ಕೂಡ್ರಿಸಿದಾಗಲೂ ಒಂದೇ ಭಾವದಿಂದ ಇರುವ ಸಿದ್ಧನನ್ನು ಕಂಡು ಆತನ ಮಹಿಮೆಯನ್ನು ಮತ್ತು ಸ್ಥಿತಪ್ರಜ್ಞತೆಯನ್ನು ಕೊಂಡಾಡತೊಡಗಿದರು. ರಥೋತ್ಸವ ಮುಕ್ತಾಯಗೊಂಡ ನಂತರ ಅನ್ನ ಸಂತರ್ಪಣೆ ನಡೆಯಿತು. ನೆರೆದವರೆಲ್ಲರೂ ಪ್ರಸಾದ ಸ್ವೀಕರಿಸಿದರು. ಓರ್ವನು ಜರದ ಪೀತಾಂಬರವನ್ನು ಸಿದ್ಧನಿಗೆ ಅರ್ಪಿಸಿದನು. ಕೆಲವರು ಛತ್ರ ಚಾಮರಗಳನ್ನು ಕೊಟ್ಟರು. ನಂತರ ಸಿದ್ಧಾಶ್ರಮಕ್ಕೆ ವೈಭವದಿಂದ ಸಿದ್ಧನನ್ನು ಬೀಳ್ಕೊಟ್ಟರು.
🌺 ಸಿದ್ಧಾಶ್ರಮದಲ್ಲಿ ಅನ್ನಸಂತರ್ಪಣೆ 🌷
ಸಿದ್ಧಾಶ್ರಮದಲ್ಲಿ ಅಡುಗೆ ಮಾಡಲಿಕ್ಕೆ ಸೂಕ್ತ ವ್ಯವಸ್ಥೆ ಇರಲಿಲ್ಲ. ಇದನ್ನು ಕಂಡು ಭಕ್ತನಾದ ಕಾರಡಗಿ ಮಲ್ಲಪ್ಪನು ಮೂರು ಛಪ್ಪರಗಳನ್ನು ಅಡುಗೆ ಮನೆಯ ಸಲುವಾಗಿ ಹಾಕಿಸಿದನು. ಇಲ್ಲಿ ಅನ್ನ ಸಂತರ್ಪಣೆಗಾಗಿ ಸೌಕರ್ಯವಾಯಿತು.
ಧಾತುನಾಮ ಸಂವತ್ಸರ ಬಂದಿತು. ಭೀಕರ ಬರಗಾಲ ಬಿದ್ದಿತು. ದೇಶದ ತುಂಬಾ ಹಾಹಾಕಾರ ಎದ್ದಿತು, ಅನ್ನಕ್ಕಾಗಿ ತಮ್ಮ ಮಕ್ಕಳನ್ನೆ ತಂದೆ ತಾಯಿಗಳು ಮಾರತೊಡಗಿದರು. ಎಲ್ಲೆಲ್ಲಿಯೂ ಈ ಬೊಬ್ಬಾಟವು ಹೆಚ್ಚಾಗತೊಡಗಿತು. ಹಸಿವಿನಿಂದ ಬಳಲುವ ಕಡು ಬಡವರ ಸಲುವಾಗಿ ಸಿದ್ದನು ಅನ್ನಪ್ರಸಾದ ನಿಡತೊಡಗಿದನು. ಹಸಿವಿನ ತಾಪವನ್ನು ಶಮನಗೊಳಿಸಿದ್ದರಿಂದ ಸಂತಸಭರಿತರಾದ ಬಡ ಭಕ್ತರು ಸಿದ್ದನಿಗೆ ಜಯಘೋಷ ಮಾಡುತ್ತಾ ಹೋಗುತ್ತಿದ್ದರು.
ಪ್ರತಿದಿನ ಹಸಿದ ಜನರಿಗೆ ಬರಗಾಲದಲ್ಲಿ ಅನ್ನದಾನ ಮಾಡುವ ಪ್ರವೃತ್ತಿಯನ್ನು ಭಕ್ತರಲ್ಲಿ ಸಿದ್ದನು ಜಾಗೃತಿ ಮಾಡುತ್ತಲಿದ್ದನು. ಮಹಮೇರು ಪರ್ವತದ ಎತ್ತರದಷ್ಟು ಬಂಗಾರ ದಾನ ಮಾಡುವುದರಿಂದ ಲಭಿಸುವ ಪುಣ್ಯ ಹಾಗೂ ಕೋಟಿ ಕೋಳಿ, ಗೋವುಗಳನ್ನು ದಾನ ಮಾಡುವ ಪುಣ್ಯಕ್ಕಿಂತಲೂ ಅನ್ನದಾನದ ಪುಣ್ಯ ಅತ್ಯಧಿಕವಾಗುವದು. ಸಂತೋಷದಿಂದ ಮಾಡುವ ಅನ್ನದಾನದಿಂದ ದೊರೆಯುವ ತೃಪ್ತಿ, ತುಷ್ಟಿ ಇತರೆ ದಾನಕ್ಕಿಂತಲೂ ಶ್ರೇಷ್ಟತರವು, ದ್ರವ್ಯದಾಸೆಯಿಲ್ಲದೆ ಅನ್ನದಾನ ಮಾಡುವವರು ಮಾನವರಲ್ಲ. ಅವರು ನನ್ನ ಪ್ರಾಣವಾಗಿದ್ದಾರೆಂದು ಪರಮಾತ್ಮನೇ ಹೇಳಿದ್ದಾನೆ. ಇವರು ಮೋಕ್ಷ ಸಾಮ್ರಾಜ್ಯಕ್ಕೆ ಅಧಿಪತಿಯಾಗುವರು. ಹೀಗೆ ಅನ್ನದಾನದ ಮಹತ್ವದ ಕುರಿತು ಸಿದ್ಧನು ವಿವರವಾಗಿ ತಿಳುವಳಿಕೆ ನೀಡಿದ್ದರಿಂದ ದಿನಕ್ಕೊಬ್ಬ ಭಕ್ತನು ಸಿದ್ಧಾಶ್ರಮದಲ್ಲಿ ಅನ್ನ ಸಂತರ್ಪಣೆ ಮಾಡಲು ಮುಂದಾದನು. ಪ್ರಪ್ರಥಮವಾಗಿ ಹಳೇಹುಬ್ಬಳ್ಳಿ ಅಕ್ಕಸಾಲಿಗರ ಓಣಿಯಲ್ಲಿಯ ಶಿರಗುಪ್ಪಿ ಹೊಂಬಣ್ಣ ಭೂರಿ ಅನ್ನ ಸಂತರ್ಪಣೆಯನ್ನು ಏರ್ಪಡಿಸಿದನು. ಈ ವಾರ್ತೆಯು ಸರಕಾರದ ಅಧಿಕಾರಿಗಳವರೆಗೆ ಪಸರಿಸಿತು. ಆಶ್ರಮಕ್ಕೆ ಆಗಮಿಸಿ ಸಿದ್ಧಾರೂಢರು ಕೈಗೊಂಡ ಅನ್ನಪ್ರಸಾದ ವಿತರಣೆಯ ಪುಣ್ಯ ಕಾರ್ಯವನ್ನು ಪ್ರತ್ಯಕ್ಷ ಕಂಡು ಸಂತಸಪಡುತ್ತಾ ವರ್ಣಿಸತೊಡಗಿದರು. ಅಲ್ಲದೆ ಶಿರಗುಪ್ಪಿಯವರನ್ನು ಕುರಿತು ಹೇ, ಪುಣ್ಯಾತ್ಮ, ಭಕ್ತ ಶಿರೋಮಣಿ ಹೊಂಬಣ್ಣನವರೇ, ಈ ಜನರಿಗೆ ಅನ್ನವಿಲ್ಲದೆ ಹಸಿವಿನಿಂದ ಇವರ ಜಠರಾಗ್ನಿಯು ಮಂದವಾಗಿದೆ. ಪಚನಶಕ್ತಿ ಕ್ಷೀಣವಾಗಿದೆ. ಕಾರಣ ಹೊಟ್ಟೆ ತುಂಬಾ ಅನ್ನವನ್ನು ನೀಡಲು ಅದು ಅಜೀರ್ಣವಾಗಿವದು, ಇದರಿಂದ ಬೇರೆ ಬೇರೆ ರೋಗಗಳಿಗೆ ಬಲಿ ಆಗುವರು. ಅರೆಹೊಟ್ಟೆ ಮಾತ್ರ ಅನ್ನ ನೀಡಿರಿ ಅಂತಾ ಸಕಾಲಿಕ ಸಲಹೆ ನೀಡಿದರು. ಅದಕ್ಕೆ ಸಿದ್ಧನನ್ನು ಕೇಳಿ ಅವರ ಸಮ್ಮತಿ ಪಡೆದು, ಒಂದು ತಾಸಿನ ನಂತರ ಅನ್ನದ ಉಂಡೆಗಳನ್ನು ನೀಡಿ ಬಂದ ಬಡಜನರಿಗೆಲ್ಲ ತೃಪ್ತಿಪಡಿಸಿದರು.
👇👇👇👇👇👇👇👇👇👇👇👇👇👇
ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
👉ಕೆಲ ದ್ವೇಷಿಗಳು ಸಿದ್ಧನನ್ನು ಕೊಲ್ಲಲಿಕ್ಕೆ ಕೌದಿಮಠಕ್ಕೆ ಕರೆದೊಯ್ದದ್ದು.
ಎಲ್ಲಾ ಕಥೆಗಳ ಲಿಂಕಗಳು
👉ಸಿದ್ಧಾರೂಢ ಭಾಗವತ ಕಥಾ ಸಂಗ್ರಹ 👉🛃
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ
1)WhatsApp shareಗಾಗಿ click ಮಾಡಿ📲☎️
2)Facebook shareಗಾಗಿ👉
3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚
«««««ಓಂ ನಮಃ ಶಿವಾಯ »»»»»»»
