ವಿಜಯಪುರದಲ್ಲಿ ತುಳಜಪ್ಪನ ಭಕ್ತಿಪಂಜರದಲ್ಲಿ ಸಿದ್ದಾರೂಢರು
🌱ವಿಜಯಪುರದಲ್ಲಿ ತುಳಜಪ್ಪನ ಭಕ್ತಿಪಂಜರದಲ್ಲಿ ಸಿದ್ದಾರೂಢರು
ಸಿದ್ಧನು ಹೀಗೆಯೇ ವಿಜಯಪುರದಲ್ಲಿ ಬಾಲಕರ ಜೊತೆಗೆ ಆಟವಾಡುತ್ತಾ ಕಾಲ ಕಳೆಯುತ್ತಿದ್ದನು. ಸಿದ್ದನ ಬಗ್ಗೆ ವಾರ್ತೆ ಕೇಳಿ ತುಳಜಪ್ಪನೆಂಬ ಸದ್ಭಕ್ತನು ಅಲ್ಲಿಗೆ ಆಗಮಿಸಿ, ಬಳಲಿ ಕೃಶವಾದ ಸಿದ್ಧನನ್ನು ಕಂಡು, ಈತನು ಷಟ್ಸ0ಪತ್ತಿ, ಷಡ್ಗುಣವಂತ, ಬ್ರಹ್ಮ ಜ್ಞಾನಸಾಗರ, ಶಾಂತಮೂರ್ತಿ, ಲೀಲಾದಿ ವಿಲಕ್ಷಣವುಳ್ಳ ಈ ಮಹಾಮಹಿಮನ ಸೇವಾ ನಮನಗಳಿಂದ ಜನ್ಮ ಸಾರ್ಥಕವಾಗುದು, ಕಾರಣ ತನ್ನ ಮನೆಗೆ ಕರೆತರಬೇಕು ಅಂತ ಸಂಕಲ್ಪ ಮಾಡಿದನು. ಕೆಲವು ಬಾಲಕರನ್ನು ಕರೆದು, ನಿಮಗೆ ಕೊಬ್ಬರಿ ಬೆಲ್ಲ ಕೊಡುವೆ ನೀವು ಆಡುತ್ತಾ ಈ ಹುಚ್ಚನನ್ನು ಕರೆತಂದು ನಮ್ಮ ಮನೆ ಮುಂದೆ ಆಡಬೇಕು ಅಂತ ಅವರ ಕಿವಿಗಳಲ್ಲಿ ಉಸುರಿದನು.
ಅದಕ್ಕೆ ಸಮ್ಮತಿಸಿ ಆ ಬಾಲಕರು ಚಿಣಿ - ಪಣಿ ಆಟವಾಡುತ್ತಾ ಸಿದ್ಧನನ್ನು ಆ ಆಟದಲ್ಲಿ ನಿಮಗ್ನನನ್ನಾಗಿ ಮಾಡಿ, ಮುಂದೆ ಮೆಲ್ಲಗೆ ಸಾಗುತ್ತಾ ಸಾಗುತ್ತಾ ತುಳಜಪ್ಪನ ಮನೆ ಎದುರಿಗೆ ಭರಾಟೆಯಿಂದಲೂ ಕೇಕೆ ಹಾಕುತ್ತ ಬಹಳ ವಿನೋದದಿಂದ ಆಟ ಸಾಗಿತು. ಇದನ್ನು ಗಮನಿಸಿದ ತುಳಜಪ್ಪನು, ಭಲೆ ಭಲೆ, ಶಹಭಾಸ್ ಅಂತಾ ಬಾಲಕರ ಡುಬ್ಬ ಚಪ್ಪರಿಸುತ್ತ, ಕೊಬ್ಬರಿ ಬೆಲ್ಲ ತಿನ್ನಲು ಕೊಡಹತ್ತಿದನು. ನಂತರ ಸಿದ್ಧನನ್ನು ಕರಪಿಡಿದು ಮೆಲ್ಲಗೆ ಮನೆಯಲ್ಲಿ ಕರೆತಂದನು. ಮೊದಲೇ ಹೇಳಿದಂತೆ ಬಂದ ಕ್ಷೌರಿಕರು ಸಿದ್ಧನ ಕ್ಷೌರ ಮಾಡಿದನು. ಮೈಯೆಲ್ಲಾ ತೈಲ ಹಚ್ಚಿ ಉಜ್ಜಿದನು. ಅಭ್ಯಂಗ ಸ್ನಾನ ಮಾಡಿಸಿ, ಮಡಿ ವಸ್ತ್ರವನ್ನು ತೊಡಿಸಿ, ತುಳಜಪ್ಪನು ಸಿದ್ಧನನ್ನು ಉಚಿತಾಸನದಲ್ಲಿ ಕೂಡ್ರಿಸಿದನು. ಭಕ್ತಿಪೂರ್ವಕ ಪಾದ ಪೂಜೆ ಮಾಡಿ ಪಂಚಪಕ್ವಾನವನ್ನು ಉಣಬಡಿಸಿ ತೃಪ್ತಿಗೊಳಿಸಿ ಕೋಣೆಯಲ್ಲಿ ಮೆತ್ತನೆಯ ತಲ್ಪದ ಮೇಲೆ ವಿಶ್ರಾಂತಿಪಡಿಸಿದನು.
ಈ ವಾರ್ತೆಯು ತುಳಜಪ್ಪನ ಗೆಳೆಯ ವೃಂದದಲ್ಲಿ ಪಸರಿಸಿದ ಕೂಡಲೇ ಹೂವು ಹಣ್ಣುಗಳೊಂದಿಗೆ ಸಾಯಂಕಾಲ ಆಗಮಿಸಿ ಸಿದ್ಧನಿಗೆ ಸಾಷ್ಟಾಂಗ ನಮಸ್ಕಾರ ಮಾಡಿದರು. ತಮ್ಮ ಮನಸ್ಸಿನಲ್ಲಿ ಮೂಡಿದ ಸಂಶಯಗಳನ್ನು ನಿವಾರಣೆ ಮಾಡಿಕೊಂಡರು. ಪ್ರತಿನಿತ್ಯ ವಚನ ಶಾಸ್ತ್ರದಿಂದ ಆರಂಭಗೊಂಡು ನೀತಿ, ಭಕ್ತಿ, ವೈರಾಗ್ಯ ಜ್ಞಾನದ ಬಗ್ಗೆ ಸಿದ್ದನ ಮುಖವಾಣಿಯಿಂದ ಶ್ರವಣ ಮಾಡುತ್ತಿದ್ದರು. ಇದರಂತೆ ಆ ವಿಜಯಪುರದ ಜನರೆಲ್ಲರೂ ಭಕ್ತಿಪೂರ್ವಕ ಬಂದು ಸಿದ್ದನ ದರುಶನ ಪಡೆದು, ತತ್ವಗಳ ಶ್ರವಣ ಮಾಡುತ್ತಾ ಇರುವಲ್ಲಿ ಕೆಲವು ದಿನಗಳು ಉರುಳಿದವು. ಹೀಗಿರುವಾಗ ಒಂದು ದಿನ ತುಳಜಪ್ಪನನ್ನು ಕರೆದು ನಾನು ಇಲ್ಲಿಂದ ಹೊರಡುವೆ, ಇಚ್ಛಾನುಸಾರ ಹಾರಾಡುವ ಹಕ್ಕಿಯನ್ನು ಪಂಜರದಲ್ಲಿ ಹಾಕಿದರೆ ಅದಕ್ಕೇನು ಸುಖ. ಇಲ್ಲಿ ನಿನ್ನ ಮನೆಯಲ್ಲಿ ನನ್ನನ್ನು ಹಿಡಿದು ಹಾಕುವದರಿಂದ ನನಗೆ ಹರ್ಷವಿಲ್ಲ. ಆ ಮಸೀದಿಗೆ ನನ್ನನ್ನು ಕಳಿಸು ಅಂತ ನುಡಿದನು. ಅದಕ್ಕೆ ಒಪ್ಪಿಗೆ ಹಾಗೆ ಮಾಡಿದನು. ಬಳಿಕ ಬ್ರಾಹ್ಮಣರು, ಕೆಲ ಶ್ರೇಷ್ಠ ರಾಜಕೀಯ ಅಧಿಕಾರಿಗಳು, ಸಿದ್ಧನು ಮಸೀದಿಯಲ್ಲಿ ಬಂದಿರುವನೆಂಬ ವಾರ್ತೆಯನ್ನು ಕೇಳಿ ಅಲ್ಲಿಗೆ ಬಂದು ಭಕ್ತಿಯಿಂದ ದರ್ಶನ ಪಡೆಯುತ್ತಿದ್ದರು. ಸಾಯಂಕಾಲ ಆತನ ಮುಖದಿಂದ ಹೊರಟ ತತ್ವಗಳನ್ನು ಶ್ರವಣ ಮಾಡುತ್ತಿದ್ದರು. ಹಿಂದೆ ಸಿದ್ದನಿಗೆ ಪರಿ ಪರಿಯಿಂದ ಕಾಡಿದವರೂ ಸಹ ಪಶ್ಚಾತ್ತಾಪಗೊಂಡು ಬಂದು ದರುಶನ ಪಡೆದು ತಮ್ಮನ್ನು ಕ್ಷಮಿಸಬೇಕೆಂದು ಹೇಳಿಕೊಳ್ಳುತ್ತಿದ್ದರು. ಮತ್ತೆ ಕೆಲವರು ತಮ್ಮ ತಮ್ಮ ಮಕ್ಕಳನ್ನು ಎತ್ತಿಕೊಂಡು ಬಂದು ರೋಗ ನಿವೃತ್ತಿಗಾಗಿ ಬೇಡಿಕೊಳ್ಳುತ್ತಿದ್ದರು. ಕೆಲವರು ಭೂತ ಬಿಡುಗಡೆಗಾಗಿ, ಕೆಲವರು ಗ್ರಹಪೀಡೆ ನಿವಾರಣೆಗಾಗಿ ಕೆಲವರು ತಮಗಾದ ಬಹುವಿಧ ವಿಪತ್ತು, ಕಷ್ಟ ನಿವಾರಣೆಗಾಗಿ, ದಾರಿದ್ರ್ಯ ನಿವಾರಣೆಗಾಗಿ, ಉದ್ಯೋಗ, ವ್ಯವಹಾರ ಗಳಲ್ಲಿ ಉಂಟಾದ ಆಪತ್ತು ನಿವಾರಣೆಗಾಗಿ, ಸಂತಾನ ಭಾಗ್ಯಕ್ಕಾಗಿ ಹೀಗೆ ಬಹುವಿಧ ಬಯಕೆಗಳಿಂದ ಬಂದು ಭಕ್ತಿಪೂರ್ವಕ ಸಿದ್ಧನಲ್ಲಿ ಅರಿಕೆ ಮಾಡುತ್ತಿರುವುದು ಅವರವರ ಮನಸ್ಸಿನ ಬಯಕೆಗಳಂತೆ ಕಾರ್ಯಗಳಾಗುತ್ತ ಇವೆಲ್ಲವುಗಳನ್ನು ಕಂಡು ಈತನು ಸಾಕ್ಷಾತ್ ಪರಶಿವನು. ಈತನ ಪಾದ ತೀರ್ಥ ಪ್ರಸಾದದಿಂದ ನಾವು ಧನ್ಯರಾದೆವು. ಈತನನ್ನು ನೀವು ತಪ್ಪದೇ ಸೇವಿಸಬೇಕು ಅಂತಾ ಅಂದುಕೊಳ್ಳುತ್ತಿದ್ದರು.
ಒಂದಾನೊಂದು ದಿನ ಸಿದ್ದನ ಹತ್ತಿರ ಆ ಊರಿನ ೧೮ ಜಾತಿಯ ಜನರು ಬಂದು ನಮ್ಮ ಜಾತಿ ಶ್ರೇಷ್ಟ, ನಮ್ಮ ಜಾತಿ ಶ್ರೇಷ್ಟ ಅಂತಾ ಪರಸ್ಪರ ಜಗಳ ಮಾಡತೊಡಗಿದರು. ಆಗ ಜಗಳವನ್ನು ಶಾಂತ ಮಾಡಿ, ಕೇಳಿರಿ ಜಗತ್ತಿಗೆ ತಂದೆಯೋಪಾಧಿಯಲ್ಲಿ ಒಬ್ಬನೇ ದೇವರು. ಸರ್ವರಲ್ಲಿ ಐದು ಜ್ಞಾನೇಂದ್ರಿಯಗಳನ್ನು, ಐದು ಕರ್ಮೇಂದ್ರಿಯಗಳನ್ನು, ಐದು ಪ್ರಾಣoಗಳನ್ನು, ಐದು ಕರಣಗಳನ್ನು, ಮೂರು ಅವಸ್ಥೆಗಳನ್ನು, ಖೇದ, ಮೋದ, ಆಲಸ್ಯ, ಹಸಿವು, ನೀರಡಿಕೆ ಮುಂತಾದವುಗಳನ್ನು ರಚನೆ ಮಾಡಿ ತಾನೇ ಜೀವರೂಪದಿಂದ ಆ ತನುಗಳಲ್ಲಿ ಪ್ರವೇಶಿಸಿರುವನು. ವಸ್ತುಸ್ಥಿತಿ ಹೀಗಿದ್ದು, ನನ್ನ ಜಾತಿ ಶ್ರೇಷ್ಠ, ನನ್ನ ಜಾತಿ ಶ್ರೇಷ್ಠ ಅಂತ ಭ್ರಾಂತಿದಾಯಕ ನಿಮ್ಮ ವಾದ ಖೇದದಾಯಕವಾಗಿದೆ. ಒಂದು ಶರೀರದಲ್ಲಿರುವ ಬೇರೆ ಬೇರೆ ಇಂದ್ರಿಯಗಳು ಅವುಗಳು ತಮ್ಮ ತಮ್ಮ ವ್ಯವಹಾರಗಳನ್ನು ಮಾಡುವಂತೆ ಅಂದರೆ ನೇತ್ರೇ0ದ್ರಿಯದಿಂದ ನೋಡುವುದು, ಕರ್ಣೇಂದ್ರಿಯದಿಂದ ಕೇಳುವುದು, ಮೂಗಿನಿಂದ ವಾಸನೆ ಹಿಡಿಯುವದು, ಬಾಯಿಂದ ಮಾತನಾಡುವಿಕೆ ಹೇಗೆ ಪರಸ್ಪರ ಇಂದ್ರಿಯಗಳು ತಮ್ಮ ತಮ್ಮ ಸ್ವಭಾವ ಜನ್ಯ ವ್ಯವಹಾರ ಮಾಡುವದು ಇದರಲ್ಲಿ ಶ್ರೇಷ್ಠತೆಯ ಪ್ರಶ್ನೆಯೇ ಬರಲಾರದು. ಅದೇ ರೀತಿಯಾಗಿ ದೇಹರೂಪ ಜಗತ್ತಿನಲ್ಲಿ ಆಯಾ ವರ್ಣಾಶ್ರಮ ಧರ್ಮ ಆಚರಣೆಗಳಲ್ಲಿ ಪರಸ್ಪರ ಶ್ರೇಷ್ಟತೆ ನೋಡಲಾಗದು. ಪರಸ್ಪರ ಕುಲದವರು ಆತ್ಮೀಯತೆಯಿಂದ ಇದ್ದಲ್ಲಿ ದೇವನೊಲಿವನು. ಪರಮಾತ್ಮನ ಕೃಪೆಗೆ ಪಾತ್ರರಾಗಲು ಸರ್ವಜಾತಿಯ ಜನರು ಪರಸ್ಪರರಲ್ಲಿ ಸಮಾನ ಭಾವ, ಸಾಮರಸ್ಯತೆ ಅವಶ್ಯ. ಜಾತಿ ಕುಲಗಳ ಉಚ್ಚ ನೀಚತೆಯನ್ನು ಎಣಿಸುವದು ದುಃಖಕ್ಕೆ ಕಾರಣ. ಇದರಿಂದ ಯಾವುದೇ ಪ್ರಯೋಜನ ವಾಗದು ಮುಂತಾಗಿ ಸಿದ್ಧಾರೂಢ ಭಾರತಿ ಹೇಳಿದ ಬುದ್ಧಿವಾದಗಳನ್ನು ಕೇಳಿ ತಮ್ಮ ತಮ್ಮಲ್ಲಿ ಕಂಡು ಉಚ್ಚ ನೀಚ ಭಾವನೆಗಳನ್ನು ತ್ಯಜಿಸಿ ಆತನ ಚರಣ ಕಮಲಗಳಲ್ಲಿ ನತಮಸ್ತಕರಾಗಿ ಪ್ರಾರ್ಥಿಸಿ ತಮ್ಮ ತಮ್ಮ ಮನೆಗಳಿಗೆ ತೆರಳಿದರು.
ಕೆಲ ದಿನಗಳು ಉರುಳಿದ ನಂತರ ಸಿದ್ಧನು ಸಂಚಾರಕ್ಕೆ ಹೊರಡಲು ಸಿದ್ಧನಾದ ಕೂಡಲೇ ಪುರದ ಜನರು ತಡೆದು ಅಲ್ಲಿಯೇ ವಾಸ್ತವ್ಯ ಮಾಡಬೇಕೆಂದು ಪ್ರಾರ್ಥಿಸಿದರು. ಆಗ ಸಿದ್ಧನು ಅವರನ್ನು ಕುರಿತು, ಈ ಪ್ರದೇಶದಲ್ಲಿ ಬರಗಾಲ ಬೀಳುವದು. ಆಗ ನೀವೆಲ್ಲರೂ ಬಹಳೇ ದುಃಖಪಡುವಿರಿ. ಅದನ್ನು ನೋಡಲು ನನಗಾಗದು. ಅದಕ್ಕೆ ಈಗಲೇ ಹೊರಡುವೆ ಎಂದು ನುಡಿದನು. ಅದಕ್ಕೆ ಧನಿಕನೋರ್ವನು ಮುಂದೆ ಬಂದು, ಹೇ ಸ್ವಾಮಿಗಳೇ ಇಪ್ಪತ್ತು ವರ್ಷಗಳಿಗೆ ಸಾಕಾಗುವಷ್ಟು ಧಾನ್ಯದ ಸಂಗ್ರಹ ನನ್ನಲ್ಲಿದೆ. ನಿಮ್ಮನ್ನು ಪ್ರೀತಿಯಿಂದ ಜೋಪಾನ ಮಾಡುವೆ. ಇಲ್ಲಿಯೇ ಇದ್ದು ಶ್ರವಣಾಮೃತಪಾನ ಮಾಡಿಸಿರಿ ಅಂತಾ ಕೇಳಿಕೊಳ್ಳುತ್ತಾ ಧೋತರವನ್ನು ಹೊದಿಸಿದನು. ಆಗ ಸಿದ್ಧನು ಅವರೆಲ್ಲರನ್ನು ಕುರಿತು, ನನ್ನನ್ನು ರಕ್ಷಿಸುವ ಮಾತಿರಲಿ, ಈಶನ ಕ್ಷೋಭೆಯ ಅಗ್ನಿಯು ಉರಿಯುತ್ತ ಬರುವಾಗ ನರನಿಗೆ ನಿವಾರಿಸಲು ಸಾಧ್ಯವಿಲ್ಲ. ಸಪ್ತದ್ವೀಪಗಳ ರಾಜ್ಯಭಾರವನ್ನು ಮಾಡಿದವರೂ, ಭೂತದಯಾ ಸಂಪನ್ನರು, ಸತ್ಯ ಪಾಲಕ ಧರ್ಮದಿಂದ ನಡೆದುಕೊಂಡವರು ನೀತಿ, ನಿರ್ಣಯ ಸಾರ್ವಭೌಮ ಅಜಾತ ಶತ್ರುಗಳಾದ ಚಕ್ರವರ್ತಿ ಹರಿಶ್ಚಂದ್ರ, ನಳ, ಮಾಂಧಾತೃ ಮೊದಲಾದವಗೆಲ್ಲ ಸಾಧ್ಯವಾಗಿಲ್ಲ. ನಮ್ಮ ನಿಮ್ಮಿಂದಾ ಇದು ಸಾಧ್ಯವೇ ಇಲ್ಲ. ನಿನ್ನ ಮೇಲಿನ ಪ್ರೀತಿಯಿಂದ ನುಡಿದಿದ್ದೀರಿ. ಸ್ವಚ್ಛಂದದಿಂದ ಸಂಚಾರ ಮಾಡುವ ನನಗೆ, ಸ್ವರ್ಗ ಮರ್ತ್ಯ ನರಕಾದಿಗಳು ಸರಿಸಮಾನವಾಗಿರುವವು. ಉತ್ತಮರಾದ ನೀವು ನನಗೆ ಸಂಚಾರ ಮಾಡಲು ಅಡೆತಡೆ ಮಾಡಬೇಡಿರಿ ಅಂತ ಗಂಭೀರವಾಗಿ ನುಡಿದನು. ಅದಕ್ಕೆ ತಮ್ಮ ಚಿತ್ತವಿದ್ದಂತೆ ಮಾಡಿರಿ
ಅಂತಾ ನಮನಗಳನ್ನು ಅರ್ಪಿಸಿ ತಮ್ಮ ತಮ್ಮ ಮನೆಗಳಿಗೆ ತೆರಳಿದರು.
ನಂತರ ವಿಜಾಪುರದಿಂದ ಸಿದ್ಧನು ಮುಂದೆ ಸಂಚಾರಕ್ಕೆ ಹೊರಟನು. ಸದ್ಗುರುವಿನ ದಿವ್ಯ ಚರಣಗಳನ್ನು ಸ್ಮರಿಸುತ್ತಾ, ಒಂದೊಂದು ಪುರಕ್ಕೆ ಹೋಗುತ್ತ, ಅಲ್ಲಿ ಬಾಲಕರ ಕೂಡ ಆಟವಾಡುತ್ತಾ, ಭಿಕ್ಷಾನ್ನದಿಂದ ತೃಪ್ತಿಪಡುತ್ತ, ಸಾಧನಗಳನ್ನು ಸಾಧಿಸುವ ಯೋಗಿಯಂತೆ ಸಾಗಿದನು. ಅನೇಕ ಊರುಗಳನ್ನು ಸಂಚರಿಸುತ್ತಿರುವಲ್ಲಿ ಹೇಮಂತ ಋತುವು ಆರಂಭವಾಯಿತು. ಈ ಕಾಲದಲ್ಲಿ ಕೆರೆ ಬಾವಿಗಳಲ್ಲಿ ಜಲವು ತಿಳಿಯಾದಂತೆ ಧ್ಯಾನದಿಂದ ಮಲ, ವಿಕ್ಷೇಪ ಆವರಣಗಳು ಅಡಗಿ ಪರಿಶುದ್ಧ ಮನಸ್ಸು ತೋರುವದು. ಸುಖ ದುಃಖಗಳನ್ನು ದೇಹಕ್ಕೆ ಒಪ್ಪಿಸಿ ತದೇಕ ಚಿತ್ತದಿಂದ ಧ್ಯಾನ ಮಾಡುತ್ತಾ ಜೀವನ್ಮುಕ್ತಿ ವಿಲಕ್ಷಣಾನಂದದ ಸುಖವನ್ನು ಅನುಭವಿಸುತ್ತಾ ಸಿದ್ಧಾರೂಢ ಭಾರತಿಯು ಜಮಖಂಡಿ ಸಂಸ್ಥಾನದ ಚಿಕ್ಕ ಗ್ರಾಮವಾದ ಸಿದ್ದಾಪುರಕ್ಕೆ ಆಗಮಿಸಿದನು.
👇👇👇👇👇👇👇👇👇👇👇👇👇👇
ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
👉ಜಮಖಂಡಿ ಹತ್ತಿರ ಸಿದ್ದಾಪುರದಲ್ಲಿ ಸಿದ್ದನು ಹಠಯೋಗಿ ಜಂಗಮನ ಹಠವನ್ನು ಬಿಡಿಸಿದ್ದ ಕಥೆ
ಎಲ್ಲಾ ಕಥೆಗಳ ಲಿಂಕಗಳು
👉ಸಿದ್ಧಾರೂಢ ಭಾಗವತ ಕಥಾ ಸಂಗ್ರಹ 👉🛃
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ
1)WhatsApp shareಗಾಗಿ click ಮಾಡಿ📲☎️
2)Facebook shareಗಾಗಿ👉
3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚
«««««ಓಂ ನಮಃ ಶಿವಾಯ »»»»»»»
