ಯಾದವಾಡದಲ್ಲಿ ಪುರಾಣಿಕನಿಗೆ ಅಲಂಕಾರ ಅರ್ಥ ಹೇಳಿದ ಕಥೆ
ಯಾದವಾಡಕ್ಕೆ ಆಗಮನ🌺
ನಂತರ ಸ್ವಸ್ವರೂಪದಲ್ಲಿ ಬ್ರಹ್ಮಾನಂದ ಸುಖವನ್ನು ಅನುಭವಿಸುತ್ತ ಸಿದ್ಧನು ಅನೇಕ ಗ್ರಾಮಗಳನ್ನು ಸಂಚರಿಸುತ್ತ ದಾಟುತ್ತ ಯಾದವಾಡಕ್ಕೆ ಆಗಮಿಸಿದನು. ಹಸಿವೆಯಾಗಲು ಭಿಕ್ಷೆಗಾಗಿ ಓರ್ವ ಬಡವಿಯ ಮನೆ ಎದುರಿಗೆ ನಿಂತನು. ಆ ಸಾದ್ವಿಯು ಪುಂಡಿ ಪಲ್ಲೆ ರೊಟ್ಟಿಯನ್ನು ಕೊಟ್ಟಳು. ಆಗ ಸಿದ್ಧನು, ಅಮ್ಮಾ ರೊಟ್ಟಿ ತುಂಬಾ ಪುಂಡಿಪಲ್ಲೆ ಇಲ್ಲವಲ್ಲ ಅಂತ ನುಡಿದನು. ಆಗ ಆ ಸಾದ್ವಿಯು ರೊಟ್ಟಿಯನ್ನು ತೆಗೆದುಕೊಂಡು ಪುಂಡಿಪಲ್ಲೆಯನ್ನು ರೊಟ್ಟಿಯ ತುಂಬಾ ಸವರಿ ಕೊಟ್ಟಳು. ಆಗ ಸಿದ್ಧನು ರೊಟ್ಟಿಯನ್ನು ಮುರಿದು ಅಮ್ಮಾ ರೊಟ್ಟಿಯೇ ಇಲ್ಲವಲ್ಲ ಎಂದರು. ಆಗ ಆಕೆಯು ನಗುತ್ತ ಒಳಗೆ ಹೋದಳು. ಬಾಲಕನಂತೆ ಬೀದಿಯಲ್ಲಿ ರೊಟ್ಟಿಯನ್ನು ತಿನ್ನುತ್ತ ಸ್ಟೇಚ್ಛಾಚಾರಿಯಾಗಿ ನಡೆದನು. ದಾರಿಯಲ್ಲಿ ಒಂದು ಮನೆಯಲ್ಲಿ ಆಲಮಯ್ಯನೆಂಬ ಪುರಾಣಿಕನು ಪುರಾಣವನ್ನು ಹೇಳುತ್ತಿರುವುದನ್ನು ಕಂಡನು. ರೊಟ್ಟಿಯನ್ನು ತಿನ್ನುತ್ತ ಉನ್ಮತ್ತನಾಗಿ ಸಿದ್ಧನು ಆ ಪುರಾಣಿಕನ ಮನೆಯಲ್ಲಿ ಹೋದನು. ಈತನು ಭವಿ. ಒಳಗೆ ಬಿಡಬೇಡಿರಿ, ಹೊರಗೆ ದೂಡಿರಿ ಅಂತಾ ಪುರಾಣಿಕನು ಹೇಳುತ್ತಿರುವಂತೆಯೇ ಒತ್ತಾಯಪೂರ್ವಕ ಸಿದ್ಧನು ಅಲ್ಲಿ ಹೋಗಿ ಕುಳಿತುಕೊಂಡನು. ಪುರಾಣಿಕನು ತನ್ನ ಭಕ್ತರಿಗೆ ಚನ್ನಬಸವೇಶ್ವರ ಪುರಾಣವನ್ನು ಹೇಳತೊಡಗಿದನು. ಅದರಲ್ಲಿಯ ಈಶನ ಪಂಚವಿಂಶತಿಯಲ್ಲಿ ಲೀಲೆಗಳನ್ನು ಹೇಳುತ್ತಿಲಿದ್ದನು. ಅಂಧಕನ ಹಗೆತನ ಎಂಬ ಕಥೆಯನ್ನು ಹೇಳುತ್ತ ಇರುವಲ್ಲಿ ಅಲಂಕಾರದ ಬಗ್ಗೆ ವಿವರಿಸಿದನು.
ಮನಸಿಜಾರಿಯ ಮುಂದೆ ಮನಸಿಜನ ಸೊಕ್ಕಾನೆಯು ಮಾಮರವಾಗಿ ಬೆಳೆಯಿತು. ಇದರಲ್ಲಿ ಮರಕ್ಕೂ ಆನೆಗೂ ಉಪಮಾನ ಉಪಮೇಯ ಇರುವದೆಂದೂ ಆ ಮಾಮರದ ಮೇಲೆ ಕುಳಿತ ಚತುರ ಪಕ್ಷಿಗಳಾದ ಮಧು ಮತ್ತು ಮಿತ್ರರು ಮೋದದಿಂದ ಮಧುರವಾಗಿ ಮಾತನಾಡುತ್ತಿದ್ದವು. ಆ ಮೃದು ಭಾಷಣದಲ್ಲಿ ಶ್ರೇಷ್ಠವಾದ ವಿದ್ಯುತ್ ಶಬ್ದ ಹೊರಟಿತು ಅಂತಾ ಆ ಪುರಾಣಿಕನು ಹೇಳುತ್ತ ಮುಂದೆ ಸಾಗುವಾಗ ತಡೆದು ಸಿದ್ಧನು , ಅಯ್ಯಾ ಪಂಡಿತನಾದ ಶಾಸ್ತ್ರಿಯೇ ನೀವು ಮರಕ್ಕೂ ಆನೆಗೂ ಹೋಲಿಸಿದ್ದು ಸರಿ. ಆದರೆ ವಿದ್ಯುತ್‌ನ್ನು ಮರಕ್ಕೆ ಹೋಲಿಸುವಿರೋ ಗಜಕ್ಕೆ ಹೋಲಿಸುವಿರೋ ಹೇಳಿರಿ ಅಂತಾ ಪ್ರಶ್ನಿಸಿದನು. ಪುರಾಣಿಕನು ನಿರುತ್ತರನಾಗಿ ಮೌನವಾದನು. ಸಿದ್ಧನು ಆತನನ್ನು ಕುರಿತು ವಿದ್ಯುತ್‌ನ್ನು ಮರಕ್ಕೆ ಹೋಲಿಸಿದರೆ ಜಡವು. ಇದು ಸರಿಯಲ್ಲ. ಗಜಕ್ಕೆ ಹೇಗೆ ಹೋಲಿಸುವಿ. ಇದೂ ಕೂಡ ಸರಿಯಲ್ಲ ಅಂತ ಹೇಳಿದರು. ಈ ಪ್ರಶ್ನೆಗಳನ್ನು ಮಾಡಿದ ವಿಧಾನವು ಪುರಾಣಿಕರಿಗೆ ಕುತೂಹಲವಾಗಿ ಈತನು ಹುಚ್ಚನಲ್ಲ, ಶೀಲಗುಣ ಸಂಪನ್ನ ವಿದ್ಯಾವಾಚಸ್ಪತಿಯಾಗಿರುವನು. ಕಾರಣ ಹೇ ಸ್ವಾಮಿ ತಾವೇ ಉತ್ತರವನ್ನು ತಿಳಿಸಬೇಕು ಅಂತಾ ಪ್ರಾರ್ಥಿಸಿದನು. ಆಗ ಸಿದ್ಧಾರೂಢ ಭಾರತಿಯು ಆ ಪುರಾಣಿಕರನ್ನು ಕುರಿತು ಅಯ್ಯಾ ಪುರಾಣಿಕರೆ ಕೇಳಿರಿ, ಇರುವೆಯಿಂದ ಆನೆ ಮುಂತಾದ ಪ್ರಾಣಿಗಳ ದೇಹಗಳ ತನುಭಾವ ಕನ್ನಡಿಯಲ್ಲಿ ಬಿಂಬಿಸಿರುವ ಶ್ರೇಷ್ಠತರ ಚಿದಾಭಾಸನಿಗೆ ವಿದ್ಯುತ್ ಹೋಲಿಸಿದರೆ ಸರಿಯಾದೀತು.
ಅದು ಹೇಗೆಂದರೆ ಮೇಘದಲ್ಲಿ ಅಗ್ನಿಯ ಸಂಘರ್ಷದಿಂದ ಮಿಂಚು ಉತ್ಪನ್ನ ವಾಗಿ ಭೂಮಿಯ ಮೇಲಿನ ಸರ್ವ ವಸ್ತುಗಳಿಗೆ ಪ್ರಕಾಶಮಾನವಾಗಿ ತೋರಿ ಪುನಃ ಮೇಘದಲ್ಲಿ ಅಡಗುವಂತೆ ಚಿದಾಭಾಸನು ಕೂಟಸ್ಥದಲ್ಲಿ ಕಲ್ಪಿತವಾದ ಬುದ್ಧಿ ಎಂಬ ದರ್ಪಣದಲ್ಲಿ ಪ್ರತಿಬಿಂಬಿತನಾಗಿ ಹದಿನಾಲ್ಕು ಅಧಿದೇವತೆಗಳಿಂದ ಭಾಸಿತಗಳಾದ ಭೌತಿಕ ವಸ್ತುಗಳನ್ನು ತ್ರಿಪುಟಿಗಳಲ್ಲಿ ಏಕಕಾಲಕ್ಕೆ ಪ್ರಕಾಶಿಸಿ ತನ್ನಾಶ್ರಯವಾದ ಕೂಟಸ್ಥದಲ್ಲಿ ಅಡಗುವನು. ಅದು ಕಾರಣ ವಿದ್ಯುತ್ತಿನ ಉಪಮಾನವನ್ನು ಆ ಮದಗಜದಲ್ಲಿ ಅಡಗಿದ ಚಿದಾಭಾಸನಿಗೆ ಹೋಲಿಸಿದರೆ ಸರಿಯಾಗುತ್ತದೆ. ಅಂತಾ ತನ್ಮಯತೆಯಿಂದ ಹೇಳುತ್ತಾ ಹೇಳುತ್ತಾ ಸಿದ್ದನು ತನ್ನ ಕೈಯಲ್ಲಿದ್ದ ಉಳಿದ ಪುಂಡಿಪಲ್ಲೆ ಹಚ್ಚಲ್ಪಟ್ಟ ರೊಟ್ಟಿಯನ್ನು ಆ ಪುರಾಣದ ಮೇಲಿಟ್ಟನು . ಆಗ ಅದನ್ನು ಕೈಯಲ್ಲಿ ತೆಗೆದುಕೊಂಡು ಪರಮ ಪ್ರಸಾದವಿದು ಅಂತಾ ಪುರಾಣಿಕನು ಶಿರದ ಮೇಲೆ ಇಟ್ಟುಕೊಂಡು ಕುಣಿದಾಡುತ್ತಾ ಸೇವಿಸಿದನು. ಹಾಯ್ ಹಾಯ್ ನಾನು ಕಡುಪಾಪಿಯು , ವಿನಾಕಾರಣ ಈ ಸತ್ಯಮೂರ್ತಿ ಮಹಾತ್ಮನಿಗೆ ಜರಿದೆನು ಅಂತಾ ಪುರಾಣಿಕನು ಪಶ್ಚಾತ್ತಾಪಪಟ್ಟು ಸಿದ್ಧನ ಪಾದಗಳಲ್ಲಿ ವಂದಿಸಿದನು. ನನಗೆ ಕಾಶಿಗೆ ಹೋಗಲು ಅಪ್ಪಣೆ ಕೊಡಬೇಕು ಅಂತ ಪ್ರಾರ್ಥಿಸಿದನು. ಆಗ ಸಿದ್ಧನು ಅವನನ್ನು ಕುರಿತು ಹೇ ಪುರಾಣಿಕರೇ ಕಾಶಿಗೆ ಹೋದವರು ಮರಳಿ ಬರುವುದಿಲ್ಲ ಕಾಶಿಗೆ ಯಾತಕ್ಕೆ ಹೋಗುವಿರಿ ಹೋಗಬೇಡಿ ಅಂತ ಪರಿ ಪರಿಯಾಗಿ ಹೇಳಿದರೂ ಆ ಪುರಾಣಿಕನು ನಾನು ಹೋಗಲೇಬೇಕು. ಇಲ್ಲಿ ಇರಲಾರೆ ಹೋಗುವೆ ಅಂತ ಹಠ ಮಾಡಲು ಅವನಿಗೆ ಆಶೀರ್ವದಿಸಿ ಅಪ್ಪಣೆ ಕೊಟ್ಟನು.
ಅಲ್ಲಿಂದ ಸಿದ್ಧಾರೂಢ ಭಾರತಿಯು ತಿರುಗಾಡುತ್ತ ತನ್ನ ತನುವೆಂಬ ಉಪವನದೊಳಗೆ ಮದಗಜದಂತೆ ಅಲ್ಲಿ ಉಪವನದಲ್ಲಿ ಬೆಳೆದಿಹ ಷಡೂರ್ಮಿಗಳೆಂಬ ಕದಳಿಯ ಗಿಡಗಳನ್ನು ಕಿತ್ತೊಗೆಯುತ್ತಾ ಮುಂದೆ ಕಾಣುವ ಕೋಟೆಯಲ್ಲಿ ಪ್ರವೇಶಿಸಿದ ಕೂಡಲೇ ಕತ್ತಲು ಕವಿಯಿತು. ಆ ಕಡೆಯಿಂದ ಕೈಯಲ್ಲಿ ಕತ್ತಿಗಳನ್ನು ಹಿಡಿದುಕೊಂಡು ಕಳ್ಳರನ್ನು ಹುಡುಕುತ್ತ ಬಂದ ತಳವಾರರು ಈತನನ್ನು ಕಂಡು ನೀನಾರು? ನೀನು ಎಲ್ಲಿಯವ ಸತ್ಯವಾಗಿ ಹೇಳಿ ಅಂತಾ ಗದರಿಸಲು ಸಿದ್ದನು ಸುಮ್ಮನಿದ್ದನು. ಮೌನವಾಗಿ ನಿಂತ ಇವನು ಕಳ್ಳನು ಅಂತಾ ಕೋಲುಗಳಿಂದ ಹೊಡೆಯತೊಡಗಿದರು. ಅಷ್ಟರಲ್ಲಿ ದೈವಯೋಗದಿಂದ ಇಬ್ಬರು ಬಂದು ಅಯ್ಯಾ ಕೊತ್ವಾಲರೇ, ಈತನು ಕಳ್ಳನಲ್ಲ, ಭಿಕ್ಷುಕನಿರುವನು. ಹೊಡೆಯಬೇಡಿ ಅಂತ ನುಡಿದರು. ಹಾಗಾದರೆ ಈತನನ್ನು ಊರಿನ ಆಚೆಗೆ ಕಳಿಸಬೇಕು ಅಂತ ಊರ ಹೊರಗೆ ಹಾಕಿದರು. ಆಗ ಅರ್ಧ ಮೈಲು ನಡೆಯಲು ಮಾರುತಿ ದೇವಾಲಯ ಕಂಡಿತು. ಅಲ್ಲಿ ಸಿದ್ದು ವಿಶ್ರಾಂತಿ ಮಾಡಿದನು.
ಕೊತವಾಲನು ತನ್ನ ತಳವಾರರಿಂದ ಹೊಡೆಸಿದ ವಾರ್ತೆಯು ಪುರದಲ್ಲಿ ಹರಡಿತು. ಆಲಮಯ್ಯ ಪುರಾಣಿಕನು ತನ್ನ ಭಕ್ತಮಂಡಳಿಯನ್ನು ಕೂಡಿಸಿಕೊಂಡು ಮಾರುತಿ ದೇವಾಲಯಕ್ಕೆ ಬಂದು ಬಹಳೇ ಮರುಗಿದರು. ಹಾಯ್ ಹಾಯ್ ಸ್ವಾಮಿಗಳೇ ನಿನ್ನನ್ನು ಹೊಡೆದು ಬಡಿದು ಚಿತ್ರಹಿಂಸೆ ಮಾಡಿದ್ದನ್ನು ಕೇಳಿ ನನಗೆ ಬಹಳೇ ದುಃಖವಾಯಿತು. ಹೇ ತಂದೆಯೇ ಎಂತಹ ಸಹನಶೀಲತೆಯು ನಿನ್ನಲ್ಲಿ ಮನೆ ಮಾಡಿದೆ ಅಂತಾ ಬಹು ದುಃಖಪಟ್ಟರು. ಆಗ ಸಿದ್ಧನು ಅವರನ್ನು ಕುರಿತು ಹೇ ಸಾತ್ವಿಕರೇ ನನಗೆ ಅಂಥದೊಂದು ದುಃಖವಾಗಿಲ್ಲ . ಬಳ್ಳಾರಿಯಲ್ಲಿ ಆದ ದುಃಖಕ್ಕಿಂತಲೂ ಅತಿ ಕಡಿಮೆಯಾಗಿದೆ ಈ ದಿನದ ದುಃಖ ಅಂತಾ ನುಡಿಯಲು ಅವರು ಬಳ್ಳಾರಿಯಲ್ಲಿ ಏನಾಯಿತು ತಿಳಿಸಿರಿ ಅಂತ ಆಗ್ರಹ ಮಾಡುತ್ತಾ ವಂದಿಸಿ ಪ್ರಾರ್ಥಿಸಿದರು.
ಬಳ್ಳಾರಿಯಲ್ಲಾದ ದುಃಖದ ವಿವರ 🌺
ಹಾಗಾದರೆ ಕೇಳಿರಿ. ನಾನು ಬಳ್ಳಾರಿಗೆ ಹೋದಾಗ ಬೀದಿ ಬೀದಿಯಲ್ಲಿ ಅಲೆದಾಡುತ್ತಾ ಕೌಲಬಝಾರದಲ್ಲಿಯ ಚಿತ್ತೂರ ಧನಿಕಶೆಟ್ಟಿಯ ಮನೆಯ ಮುಂದೆ ಭಿಕ್ಷೆಗಾಗಿ ಗುರುಧ್ಯಾನ ಮಾಡುತ್ತಾ ನಿಂತೆನು. ಬಾಗಿಲ ಕಾಯುವ ಬಡೇಸಾಬನು ಬಂದು ನೀನಾರು ಅಂತಾ ನನ್ನನ್ನು ಕೇಳಲು ಮೌನದಿಂದ ನಿಂತೆನು. ಆಗ ಆತನು ಮೊನ್ನೆ ನೀನೇ ಬಂದು ಕನ್ನ ಹಾಕಿದ ಕೊರಸರವನು ಎನ್ನುತ್ತಾ ಸನ್ನಿ ಹಿಡಿದವನಂತೆ ಕೋಲಿನಿಂದ ಮನಬಂದಂತೆ ನನ್ನನ್ನು ಥಳಿಸಿದನು. ಪಾವಟಿಗೆಯ ಮೇಲಿಂದ ಕೆಳಕ್ಕೆ ದೂಡಲು ಉರುಳುತ್ತಾ ಉರುಳುತ್ತ ಕೆಳಗೆ ಬಿದ್ದೆನು. ಆತನು ಕೆಳಗೆ ಬಂದು ಒದ್ದನು. ಪೆಟ್ಟು ಬಹಳೇ ಬಿದ್ದಿತು. ಗಾಯವಾಗಿ ರಕ್ತ ಸುರಿಯತೊಡಗಿತು. ಮೊಣಕಾಲು ಕೈಗೆ ಗಾಯವಾಗಿ ಕುಂಟುತ್ತಾ ಬಹಳೇ ತಾಪದಿಂದ ಶಿವನಿಗೆ ಅರ್ಪಣವಾಗಲಿ ಅಂತಾ ನುಡಿಯುತ್ತ ಗದ್ದಲವಿಲ್ಲದ ಸ್ಥಾನಕ್ಕೆ ಬಂದು ಆ ಬಾಧೆಯನ್ನು ಸಹನೆ ಮಾಡಲಿಕ್ಕೆ ಸಾಧ್ಯವಾಗಲಿಲ್ಲ. ಅಲ್ಲಿ ಒದಗಿದ ದುಃಖಕ್ಕೆ ಯಾವುದು ಸರಿಸಾಟಿಯಿಲ್ಲ. ಅಂತಹ ಚಿತ್ರಹಿಂಸೆ ಇಲ್ಲಿ ಆಗಲ್ಲ ಅಂತ ಸಿದ್ಧನು ಹೇಳುತ್ತಿರುವುದನ್ನು ಕೇಳುತ್ತಿದ್ದ ಭಕ್ತರಿಗೆಲ್ಲ ದುಃಖ ಉಕ್ಕೇರತೊಡಗಿತು. ಹೇ ಪ್ರಭು, ನಮ್ಮ ಊರಿಗೆ ತಿರುಗಿ ಬರಬೇಕು. ನಾವು ನಿಮ್ಮ ಸೇವೆಯನ್ನು ಮಾಡುತ್ತೇವೆ ಅಂತಾ ಕಣ್ಣೀರನು ಸುರಿಸುತ್ತಾ ಅಂಗಲಾಚಿ ಬೇಡಿ ಕೊಂಡರು. ಅದಕ್ಕೆ ಒಪ್ಪದೇ ಇದ್ದುದರಿಂದ ಶೈತ್ಯೋಪಚಾರ ಮಾಡಿದರು. ಊರಿನಿಂದ ಭೋಜನವನ್ನು ತರಿಸಿ ತೃಪ್ತಿಪಡಿಸಿದರು. ಉಳಿದದ್ದನ್ನು ಪ್ರಸಾದ ಅಂತ ಭಕ್ತಿಯಿಂದ ಸೇವಿಸಿದರು.
ಅಲ್ಲಿಯೇ ಇಡೀ ರಾತ್ರಿ ವಾಸ ಮಾಡಿ ಮಹಾತ್ಮನ ಪ್ರವಚನ ಕೇಳಿ ಕಾಲ ಕಳೆದರು. ಬೆಳಗಾಗುತ್ತಲೇ ಸಿದ್ಧನಿಗೆ ನಮಸ್ಕರಿಸಿ ಅಪ್ಪಣೆ ಪಡೆದು ತಮ್ಮ ತಮ್ಮ ಮನೆಗಳಿಗೆ ತೆರಳಿದರು.
ನಂತರ ಸಿದ್ಧನು ಸುಖ ದುಃಖಗಳಿಗೆ ಅಂಜದೆ ಅಳುಕದೆ ದೇಹ ಭೋಗಕ್ಕೆ ಸಾಕ್ಷಿಕನಾಗಿ ಪ್ರಾರಬ್ಧವನು ಭೋಗಿಸುತ್ತ ಸಂಚರಿಸುತ್ತ ನಡೆದನು.
ಬಳಿಕ ಅಲ್ಲಮಯ್ಯ ಪುರಾಣಿಕನು ಕಾಶಿಗೆ ಹೋಗಿ ಸದ್ಗುರುವನ್ನು ಶೋಧಿಸಿ ಭಕ್ತಿಪೂರ್ವಕ ಸೇವೆಗೈದು ಸ್ವಸ್ವರೂಪ ಜ್ಞಾನವನ್ನು ಪಡೆದುಕೊಂಡು, ಸಿದ್ಧನು ಹೇಳಿದಂತೆ ಗಂಗಾನದಿಯಲ್ಲಿ ಧುಮುಕಿ ಪ್ರಾಣಾರ್ಪಣೆ ಮಾಡಿದನು.
👇👇👇👇👇👇👇👇👇👇👇👇👇👇
ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
👉ಸಂಚಾರ ಮಾಡುತ್ತಾ ಗೋಕಾವಿಗೆ ಬಂದು ಹೊಳೆಯ ದಡದಲ್ಲಿರುವ ನಾವೆಯನ್ನು ಸಿದ್ಧನೊಬ್ಬನೇ ನೀರೊಳಗೆ ಎಳೆದು ಹಾಕಿದ ಕಥೆ.
ಎಲ್ಲಾ ಕಥೆಗಳ ಲಿಂಕಗಳು
👉ಸಿದ್ಧಾರೂಢ ಭಾಗವತ ಕಥಾ ಸಂಗ್ರಹ 👉🛃
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ
👇ಕೆಳಗಿನ ಲಿಂಕ್ ಕ್ಲಿಕ್ ಮಾಡಿ WhatsApp ge ಹೋಗುತ್ತೆ ಅಲ್ಲಿ ನಿಮ್ಮ್ ಫ್ರೆಂಡ್ಸ್ ಲಿಸ್ಟ್ ಬರುತ್ತೆ ಹಾಗೂ ನೀವು ಇರುವ ಗ್ರೂಪ್ ಬರುತ್ತವೆ ಅದನ್ನ select ಮಾಡಿ ಅವರಿಗೆ ಈ ಕಥೆಯನ್ನು ಶೇರ್ ಮಾಡಬಹುದು👇1)WhatsApp shareಗಾಗಿ click ಮಾಡಿ📲☎️
2)Facebook shareಗಾಗಿ👉
3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚
«««««ಓಂ ನಮಃ ಶಿವಾಯ »»»»»»»
