ಸಿದ್ದನ ತಲೆಯ ಮೇಲೆ ಬೆಂಕಿ ಇಟ್ಟವರ ಗತಿ??
ಸಿದ್ದನ ತಲೆಯ ಮೇಲೆ ಬೆಂಕಿ ಇಟ್ಟವರ ಗತಿ 🌺
ಮುಂದೆ ಕೆಲ ದಿನಗಳ ನಂತರ ಶೀಗಿ ಹುಣ್ಣಿವೆ ಬಂದಿತು. ಸಿದ್ಧಾರೂಢರು ಊರಲ್ಲಿ ಭಿಕ್ಷೆ ಬೇಡಿ ಬಂದ ರೊಟ್ಟಿಯನ್ನು ತಿಂದನು. ಹೆಗ್ಗೇರಿಯಲ್ಲಿ ನೀರು ಕುಡಿದು ಆನಂದದಿಂದ ಕೆರೆಯ ಕೋಡಿಯ ಮೇಲೆ ಕೂತಿದ್ದನು. ಜನರು ಸೀಗಿ ಹುಣ್ಣಿಮೆಯ ಚರಗವನ್ನು ಕೆರೆಯಲ್ಲಿ ಚೆಲ್ಲುತ್ತಾ ಹಾಡುತ್ತಾ ನಲಿಯುತ್ತಾ ಹೋಗುತ್ತಿರುವ ರಮಣೀಯ ದೃಶ್ಯವನ್ನು ಸಿದ್ಧನು ನೋಡುತ್ತಾ ಕುಳಿತಿದ್ದನು. ಆ ಸಮಯಕ್ಕೆ ಕುಳ್ಳುಸಹಿತ ಚರಗ ತೆಗೆದುಕೊಂಡು ಒಬ್ಬ ಒಕ್ಕಲಿಗ ಬಂದನು. ಸಿದ್ಧನ ಬಳಿಗೆ ಬಂದು ಸಲುಗೆಯುಳ್ಳವನಂತೆ ಮಾತನಾಡಿ ದನು. ಅವನು ಎಷ್ಟು ಪ್ರಯತ್ನಿಸಿದರೂ ಸಿದ್ದನು ಮೌನದಿಂದ ಇದ್ದನು. ಅದಕ್ಕೆ ಒಕ್ಕಲಿಗನು ಕೋಪಾವಿಷ್ಟನಾಗಿ ಆತನನ್ನು ಬಿಡದಲೆ ಮಾತನಾಡಿಸಬೇಕು, ಹೇ ಹುಚ್ಚಾ ನಾನು ಎಷ್ಟು ಪ್ರಯತ್ನಿಸಿದರೂ ಸಲುಗೆಯಿಂದ ಮಾತಾಡಿದರೂ ಮಾತನಾಡದೆ ಸುಮ್ಮನೆ ಬೆಪ್ಪನಂತೆ ಕುಳಿತಿರುವಿ. ನಿನ್ನನ್ನು ಮಾತನಾಡಿಸಲು ನನ್ನ ಕಡೆ ಯುಕ್ತಿ ಇದೆ ನೋಡು, ಬಾಯ್ತೆರೆದು ಬೊಗಳುವಿ ಅನ್ನುತ್ತಲೇ ಕುಳ್ಳಿನ ಮೇಲೆ ಚಿಮಣಿ ಎಣ್ಣೆ ಹಾಕಿ ಬೆಂಕಿ ಹಚ್ಚಿ ಕೆಂಡದಂತಹ ದಪ್ಪವಾದ ಕುಳ್ಳನ್ನು ಸಿದ್ಧನ ತಲೆಯ ಮೇಲೆ ಇಟ್ಟು ಗಹಗಹಿಸಿ ನಗುತ್ತಾ, ವ್ಯಂಗ್ಯವಾಗಿ ನುಡಿಯುತ್ತಾ, ಆ ದುರ್ಮಾರ್ಗಿಯು ಹೊರಟು ಹೋದನು. ಅಷ್ಟರಲ್ಲಿ ಅಲ್ಲಿಯೇ ಒಬ್ಬ ಭಕ್ತನು ಬಂದು ಸಿದ್ಧನ ತಲೆಯ ಮೇಲಿನ ಬೆಂಕಿಯನ್ನು ಕಂಡು, ಹಾಯ್ ಹಾಯ್ ಇದೇನಿದು ಮಹಾತ್ಮನ ತಲೆಯ ಮೇಲೆ ಬೆಂಕಿ ಇಟ್ಟ ದುರ್ಮಾರ್ಗಿ ಯಾರು? ಅಯ್ಯೋ ದೇವರೇ ಇದೆಂತಹ ನಿರಪರಾಧಿ ಸ್ವಾಮಿಗೆ ಚಿತ್ರಹಿಂಸೆ? ಸಾಕು ಸಾಕು ಅಂತಾ ಮರಗುತ್ತಾ ರೋದನ ಮಾಡುತ್ತಾ ಚೀರುತ್ತಾ ಕೂಡಲೇ ಕಟ್ಟಿಗೆಯಿಂದ ಬೆಂಕಿಯನ್ನು ತೆಗೆದೊಗೆದನು. ನೆತ್ತಿಯ ಮೇಲಿನ ಚರ್ಮ ಸುಟ್ಟು ಹೋಗಿತ್ತು. ಹೇ ಗುರುವೇ ನಿನ್ನ ತಲೆಯ ಮೇಲೆ ಬೆಂಕಿ ಇಟ್ಟವನಾರು ಅಂತಾ ಭಕ್ತನು ಕೇಳಲು ಸಿದ್ಧನು ಅವನನ್ನು ಕುರಿತು, ಹೇ ಭಕ್ತನೇ ಕೇಳು ಪೂರ್ವದಲ್ಲಿ ಈ ಊರಿಗೆ ಬಂದಾಗ ಶಿವಾಲಯದಲ್ಲಿ ಕುಳಿತಾಗ ನನ್ನ ತಲೆಯ ಮೇಲೆ ಘಟಸರ್ಪವು ತಲೆ ಅಲ್ಲಾಡಿಸಿ ಆಡುತ್ತಿರುವಾಗ ನಮ್ಮನ್ನು ಶೇಷಧರನೆಂದು ತಿಳಿದರು. ಅದರಂತೆ ಥಳಥಳಿಸುವ ಕೆಂಡವನ್ನು ನನ್ನ ತಲೆಯ ಮೇಲೆ ಪ್ರಾರಬ್ಬ ಪುರುಷನು ಇಡಲು ನಾನು ಅಗ್ನಿಧರ ಅಂಥಾ ಭಾವಿಸಬೇಕು ಅಂತಾ ಮಂದಹಾಸವನ್ನು ಬೀರಿದ್ದನ್ನು ಕಂಡು ಶಾಂತ ಚಿತ್ತನಾದ ಮಹಾತ್ಮನಿಗೆ ವಂದಿಸಿ ವರ್ಣನೆ ಮಾಡುತ್ತಾ ಆ ಭಕ್ತನು ಅಲ್ಲಿಂದ ತೆರಳಿದರು. ಆನಂತರ ಒಕ್ಕಲಿಗನು ಸಿದ್ಧನ ಬಳಿ ಬಂದು, ಹಳಹಳಿಯಿಂದ ನಾನು ವಿನಾಕಾರಣ ನಿಮ್ಮ ತಲೆಯ ಮೇಲೆ ಬೆಂಕಿ ಇಟ್ಟು ಕಷ್ಟಕೊಟ್ಟ ಪಾಪಿಯು ನಾನು ಅಂತಾ ನುಡಿಯುತ್ತಾ ನಿಂತನು.
ಆಗ ಸಿದ್ಧನು ಆತನನ್ನು ಕುರಿತು, ಇರಲಿ ಬಿಡು ಒಕ್ಕಲಿಗಾ, ಬೀಜ ಬಿತ್ತಿ ಬೆಳೆ ತೆಗೆದುಕೊಳ್ಳುವದು ನಿನಗೆ ಗೊತ್ತು. ಕಾರಣ ಯಾರು ಯಾವ ಬೀಜವನ್ನು ಬಿತ್ತುವರೋ ಅಂತಹ ಫಲವನ್ನು ಉಣ್ಣಬೇಕಾಗುವದು ನಿಜವಲ್ಲವೇ ಅನ್ನುತ್ತಾ ಅಲ್ಲಿಂದ ತನ್ನ ಆಶ್ರಮಕ್ಕೆ ಸಿದ್ದಾರೂಢರು ಆಗಮಿಸಿದರು. ನಾನು ಸಾಧುವಿಗೆ ವ್ಯರ್ಥವಾಗಿ ಕಷ್ಟವನ್ನು ಕೊಟ್ಟೆನು ಅಂತಾ ಚಿಂತೆಯೇ ಆತನ ಮನಸ್ಸಿನಲ್ಲಿ ಪ್ರಜ್ವಲಿಸಿ ದೇಹವು ಒಣಗತೊಡಗಿತು. ಮೂರು ತಿಂಗಳುಗಳಲ್ಲಿ ಮರಣ ಹೊಂದಿದನು. ಈತನ ಪಾಪದ ಜ್ವಾಲೆಗೆ ಮನೆಯವರೆಲ್ಲರೂ ಮರಣವಾದರು. ವಂಶವೇ ಉರಿದು ಹೋಯಿತು. ಕಂಬಾರ ಸಾಲೆಯಲ್ಲಿ ಪ್ರಾಣವಿಲ್ಲದ ತಿದಿಯ ಉಸುರಿನಿಂದ ಕೆಂಪಾದ ಕೆಂಡದಲ್ಲಿಟ್ಟ ಕಬ್ಬಿಣವು ಕರಗುವಂತೆ ಬ್ರಹ್ಮಜ್ಞಾನಿಗೆ ತಾಪಕೊಟ್ಟರೆ ಆತನ ಉಸಿರಿನಿಂದ ವಂಶವು ಉರಿದು ಹೋಗುವದು. ಕಾರಣ ಸಾಧು ಕ್ಷೋಭೆಯು ವಂಶವನ್ನು ನಾಶ ಮಾಡುವದು, ಸಾಧುವನ್ನು ತೃಪ್ತಿಪಡಿಸಲು ವಂಶ ವೃದ್ಧಿಯಾಗುವದು. ಸಾಧು ಸೇವೆಯಿಂದ ಚಿತ್ತಶುದ್ದಿಯಾಗಿ ಅಂತಃಕರಣ ಪ್ರಾಪ್ತಿವಾಗುವದು. ಸಾಧು ನಮನದಿಂದ ಜ್ಞಾನ ಪ್ರಾಪ್ತಿಯಾಗುವದು. ಸಾಧು ಕರುಣಿಸಿದರೆ ಅವನಂತೆ ಸಾಧುವಾಗುವನು, ಸಾಧುವೇ ಬ್ರಹ್ಮರೂಪನೂ ಮುಕ್ತಿದಾಯಕನು. ವಸ್ತುಸ್ಥಿತಿ ಹೀಗಿರುವಾಗ ತಾಮಸ ಸ್ವಭಾವದವರು ಸಾಧುವಿಗೆ ಪೀಡಿಸಿ ಕೆಡುವರು. ರಾಜಸ ಗುಣದವರು ಜ್ಞಾನಿಗೆ ತೃಪ್ತಿಪಡಿಸಿ ಸಕಲ ಸೌಭಾಗ್ಯಗಳ ಭೋಗವನ್ನು ಪಡೆದು ಹರ್ಷಪಡುವರು. ಸಾತ್ವಿಕಗುಣದ ಭಕ್ತರು ಸಾಧುವಿಗೆ ಶರಣಾಗತರಾಗಿ ಆತನ ಬೋಧದಿಂದ ಕ್ರಮವತ್ ಸಾಧನಗಳಾದಿಗಳಿಂದ ಜೀವನ್ಮುಕ್ತಿ ವಿಲಕ್ಷಣಾನಂದ ಪ್ರಾಪ್ತಿ ಮಾಡಿಕೊಳ್ಳುವರು. ಇದು ತ್ರಿಕಾಲದಲ್ಲಿ ಸತ್ಯ ಅಂತಾ ಸಾರಿ ಹೇಳಿದ್ದಾರೆ.
👇👇👇👇👇👇👇👇👇👇👇👇👇👇
ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
👉ಉಜ್ಜಣ್ಣವರ ದಂಪತಿಗಳಿಗೆ ಸಿದ್ಧನು ಪುತ್ರನಾಗಿದ್ದುದು ಹಾಗೂ ತೊಟ್ಟಿಲೋತ್ಸವ.
ಎಲ್ಲಾ ಕಥೆಗಳ ಲಿಂಕಗಳು
👉ಸಿದ್ಧಾರೂಢ ಭಾಗವತ ಕಥಾ ಸಂಗ್ರಹ 👉🛃
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ
👇ಕೆಳಗಿನ ಲಿಂಕ್ ಕ್ಲಿಕ್ ಮಾಡಿ WhatsApp ge ಹೋಗುತ್ತೆ ಅಲ್ಲಿ ನಿಮ್ಮ್ ಫ್ರೆಂಡ್ಸ್ ಲಿಸ್ಟ್ ಬರುತ್ತೆ ಹಾಗೂ ನೀವು ಇರುವ ಗ್ರೂಪ್ ಬರುತ್ತವೆ ಅದನ್ನ select ಮಾಡಿ ಅವರಿಗೆ ಈ ಕಥೆಯನ್ನು ಶೇರ್ ಮಾಡಬಹುದು 👇👇👇1)WhatsApp shareಗಾಗಿ click ಮಾಡಿ📲☎️
2)Facebook shareಗಾಗಿ👉
3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚
«««««ಓಂ ನಮಃ ಶಿವಾಯ »»»»»»»
