ಶ್ಯಮಂತಕ ಮಣಿಯ ಕಥೆಯನ್ನು ಭಕ್ತರಿಗೆ ಸಿದ್ಧನು ಹೇಳಿದ್ದು.

 ಚಿದ್ಘನಾನಂದ ಸಮಾಧಿ ಶಯನ ಮಂದಿರವಾಗಿದ್ದುದು 🌺



ಸಿದ್ಧನು  ಗದ್ದಲರಹಿತ ಸ್ಥಾನವನ್ನು ಹುಡುಕುತ್ತಾ, ಊರಹೊರಗಿನ ಪಶ್ಚಿಮಭಾಗಕ್ಕೆ ತೋಟ, ಹೊಲಗಳನ್ನು ದಾಟಿ ಡಬಗಳ್ಳಿ ಕಂಟಿಗಳಿಂದ ತುಂಬಿದ ಡುಮಗೇರಿಗೆ ಹೋದನು. ಆ ಕಂಟಿಗಳ ಮಧ್ಯದಲ್ಲಿ ಕಂಡು ಬಂದ ಚಿದ್ಘನಾನಂದ ಸ್ವಾಮಿಗಳ ಸಮಾಧಿಯನ್ನು ತಾನು ಶಯನ ಮಾಡುವ ತಾಣವನ್ನಾಗಿ ಮಾಡಿಕೊಂಡು. ಅಲ್ಲಿಯೇ  ಬರುತ್ತಿದ್ದ ದನಕಾಯುವ ಬಾಲಕರ ಕೂಡಾ ವಿನೋದದಿಂದ ಆಡುತ್ತಾ, ಇವರ ಸಂಗವೇ ನನಗೆ ಮುದವನ್ನು ನೀಡುತ್ತದೆ ಅಂತಾ ಅವರ ಜೊತೆಗೆ ಕಾಲಕ್ಷೇಪ ಮಾಡತೊಡಗಿದನು. ಅವರ ಕೂಡ ತೋಟದಲ್ಲಿಯ ಕವಳಿ ಹಣ್ಣು, ಪೇರಲ, ನೀರಲ, ದಾಳಿಂಬರ ಮುಂತಾದ ಫಲಗಳನ್ನು ತೆಗೆದುಕೊಂಡು ತಿನ್ನುತ್ತಿದ್ದನು. ಕುಳ್ಳು, ಶಗಣಿಗಾಗಿ ಬಂದ ಬಾಲಕಿಯರಿಗೆ ತಾನೂ ಶೆಗಣಿ, ಕುಳ್ಳು ಸಂಗ್ರಹಿಸಿ ಕೊಡುತ್ತಾ ಸಹಾಯ ಮಾಡುತ್ತಿದ್ದನು. ಇದೇ ಪ್ರಕಾರ ಕಾಲ ಕಳೆಯುತ್ತಿರುವಾಗ  ಒಂದಾನೊಂದು ದಿನ ಬಾಲಕರ ಜೊತೆಗೆ ಸೊಬಗಿನ ತೋಟವನ್ನು ಪ್ರವೇಶಿಸಿ ಆನಂದಪಟ್ಟರು. ಒಬ್ಬ ಬಾಲಕನು ಹಲಸಿನ ಹಣ್ಣನ್ನು ಹರಿದುಕೊಂಡು ಓಡತೊಡಗಿದನು, ಅದನ್ನು ಕಂಡು ಉಳಿದ ಬಾಲಕರು ಅವರು ಹರಿದು ಕೊಳ್ಳಲು ಮುಂದಾದರು. ಅವರ ಜೊತೆಗೆ ಸಿದ್ಧನು  ಇದ್ದನು. ಇದನ್ನು ಕಂಡ ತೋಟದವನು ಎಲೆ ಹುಡುಗರೇ ಅಂತ ಕೂಗುತ್ತಾ ಅವರನ್ನು ಹಿಡಿಯಲು ಧಾವಿಸಿದನು. ಹಲಸಿನ ಹಣ್ಣನ್ನು ಅಲ್ಲಿಯೇ ಬಿಟ್ಟು ಓಡಿದರು. ಹಿಂದೆ ಬಿದ್ದ ಸಿದ್ಧನನ್ನು ಹಿಡಿದು ಸಿಕ್ಕಂತೆ ಹೊಡೆದನು. ಈ ವಾರ್ತೆಯನ್ನು ಕೇಳಿದ ಕೃಷ್ಣಾಪುರ ಗ್ರಾಮದ ಗುರುಪಾದಯ್ಯ ಧಾವಿಸಿ ಅಲ್ಲಿಗೆ ಬಂದನು, ಅವರ ಅವಸ್ಥೆ ಕಂಡು ಬಹಳೇ  ಮರುಗಿದನು. ಆಗ ಸಿದ್ಧನು ನನ್ನ ಕರ್ಮ ಪರಿಹಾರವಾಗಿ ಪವಿತ್ರನಾದೆನು. ಈ ಪ್ರಕಾರ ಪವಿತ್ರತೆ ತಂದು ಕೊಟ್ಟವನು ನನಗೆ ಗುರುವಾಗಿಹನು ಅಂತಾ ನುಡಿಯಲು ಗುರುಪಾದಯ್ಯನು  ಚಕಿತಗೊಂಡನು. ಸಿದ್ಧನು ಅಯ್ಯಾ ಜಂಗಮರೇ ನಾನು ಕಳವು ಮಾಡಲಿಲ್ಲ, ಕೃಷ್ಣನಿಗೆ ಅಪವಾದ ಬಂದಂತೆ ನನಗೆ ಬಂದಿದೆ, ಆ ಅಪವಾದ ಯಾವುದೆಂಬುದನ್ನು ಹೇಳುವೆ ಕೇಳಿ ಅಂತ ಹೇಳತೊಡಗಿದರು.


🌺 ಶ್ಯಮಂತಕಮಣಿಯ  ಕಥೆ ಹೇಳಿದ್ದು 🌺


ದ್ವಾರಕಾನಗರಿಯಲ್ಲಿ ಶ್ರೀಕೃಷ್ಣನ  ಪರಿವಾರದ ಸಭೆಯು ನಡೆಯುತ್ತಿದ್ದಾಗ ಬಾಂಧವನಾದ  ಸತ್ರಾರ್ಜಿತನೂ  ಆಗಮಿಸಿದ್ದನು. ಸೂರ್ಯನಾರಾಯಣನ ಉಪಾಸನೆ ಮಾಡಿ ಅವನಿಂದ ಪಡೆದ ಪ್ರಖ್ಯಾತವಾದ ಶ್ಯಮಂತಕ  ಮಣಿಯ ಹಾರವನ್ನು ಕೊರಳಲ್ಲಿ ಧರಿಸಿದ್ದನು. ಪ್ರಕಾಶಪುಂಜದ ಶ್ಯಮಂತಕ ಮಣಿಯನ್ನು ತನಗೆ ಕೊಡಬೇಕೆಂದು ಕೃಷ್ಣನು ಕೇಳಲು ಸತ್ರಾರ್ಜಿತನು  ಅದಕ್ಕೆ ಉತ್ತರಿಸದೆ ಅಲ್ಲಿಂದ ಹೊರಟು ಹೋದನು. ಕೆಲವು ಕಾಲವಾದ ನಂತರ ಪ್ರಶೆನನು ಹಠಮಾಡಿ ನನ್ನ ಅಣ್ಣನಾದ ಸತ್ರಾರ್ಜಿತನಿಂದ ಶ್ಯಮಂತಕ ಮಣಿ ಹಾರವನ್ನು ಪಡೆದು ಕೊರಳಲ್ಲಿ ಹಾಕಿಕೊಂಡು ಬೇಟೆಯಾಡಲಿಕ್ಕೆ ಅಡವಿಗೆ ಹೋದನು, ಒಬ್ಬಂಟಿಗನಾದ ಪ್ರಶೆನನ ಮೇಲೆ ಘೋರವಾದ ಸಿಂಹವು ಘರ್ಜಿಸುತ್ತಾ ಹಾರಿ ಪ್ರಶೆನನ  ಗಂಟಲನ್ನು ಸೀಳಿ ರಕ್ತವನ್ನು ಹೀರುತ್ತಾ ಪ್ರಾಣಹರಣ ಮಾಡಿತು. ಪ್ರಕಾಶಮಾನವಾದ ಮಣಿಹಾರವನ್ನು ತೆಗೆದುಕೊಂಡು ದರ್ಪದಿಂದ ಸಾಗಿತು. ಆ ಪ್ರಕಾಶಮಾನ ಶ್ಯಮಂತಕ ಮಣಿ ಹಾರಕ್ಕೆ ಆಕರ್ಷಣೆಗೊಂಡ ಎದುರಿಗೆ ಬಂದ ಕರಡಿ ಜಾಂಬುವಂತ ಸಿಂಹವನ್ನು ಸಂಹಾರ ಮಾಡಿ ಹಾರವನ್ನು ತೆಗೆದುಕೊಂಡು ತನ್ನ ಗವಿಯನ್ನು ಸೇರಿತು.


ಶ್ಯಮಂತಕ ಮಣಿಯನ್ನು ಧರಿಸಿ ಬೇಟೆಗೆ ಹೋದ ಪ್ರಸೇನನು ಮರಳಿ ಬಾರದ್ದಕ್ಕೆ ಸತ್ರಾರ್ಜಿತನು ಬಹಳೇ  ದುಃಖಿತನಾದನು. ಹಾರದ ಮೇಲೆ ಆಸೆ ಮಾಡಿದ ಕೃಷ್ಣನೇ ತನ್ನ ತಮ್ಮನನ್ನು ಕೊಂದು ಹಾರವನ್ನು ಅಪಹರಿಸಿರುವನೆಂದು ನುಡಿಯ ತೊಡಗಿದನು. ಈ ವಾರ್ತೆಯು  ಸುತ್ತಲೂ ಪಸರಿಸಿತು. ಈ ಅಪವಾದಕ್ಕೆ ಕೃಷ್ಣನು  ನೊಂದುಕೊಂಡು ಇದನ್ನು ನಿವಾರಿಸಲು ತನ್ನ ಅನುಚರರೊಂದಿಗೆ ವನಾಂತರಕ್ಕೆ ಹೋದನು.


ಅಡವಿಯಲ್ಲಿ ಗಿಡದ ಬುಡದಲ್ಲಿ ಬಿದ್ದಿರುವುದನ್ನು ದೂರನಿಂದಲೇ  ಗಮನಿಸಿ ಅದು ಯಾರ ಶವವಿರಬಹುದು ಅಂತಾ ನೋಡಲು ತನ್ನ ಅನುಚರರನ್ನು ಮುಂದೆ ಕಳುಹಿಸಿದನು. ಇದು ಪ್ರಶೆನನ ಶವ  ಅಂತಾ ಕೂಗಲು ಕೃಷ್ಣನು  ಅಲ್ಲಿಗೆ ಧಾವಿಸಿದನು. ಆ ಶವದ ಮೇಲೆ ಹಾರ  ಕಾಣಲಿಲ್ಲ. ಆದರೆ ಅದರ ಮೇಲಿನ ಗಾಯಗಳನ್ನು ಪರೀಕ್ಷಿಸಲಾಗಿ ಸಿಂಹದ ಉಗುರಿನ ಗಾಯ ಅಂತಾ ತಿಳಿದು ಬಂದಿತಲ್ಲದೆ ನೆಲದ ಮೇಲೆ ಮೂಡಿದ ಸಿಂಹದ ಹೆಜ್ಜೆ ಕಂಡು ಬಂದವು. ಆ ಹೆಜ್ಜೆಗಳ ಗುರುತು ಪ್ರಕಾರ ಮುಂದೆ ಸಾಗಲು ಸ್ವಲ್ಪ ದೂರದಲ್ಲಿ ಸಿಂಹದ ಶವ ಕಂಡು ಬಂದಿತು. ಅದರ ಮೇಲಿನ ಗಾಯ ಕಂಡು ಕರಡಿಯ ಉಗುರಿನ ಗಾಯ ಅಂತಾ ಗುರುತಿಸಿದನು. ಕರಡಿಯ  ಹೆಜ್ಜೆಯ  ಗುರುತುಗಳ ಪ್ರಕಾರ ಮುಂದೆ ಸಾಗಲು ಒಂದು ಗವಿಯು ಕಾಣಿಸಿತು.


ತನ್ನ ಸೇವಕರೆಲ್ಲರನ್ನು ಗವಿಯ ಹೊರಗಡೆ  ನಿಲ್ಲಿಸಿ, ಕೃಷ್ಣನು  ಒಬ್ಬನೇ ನಿರ್ಭಯದಿಂದ ಗವಿಯ ಒಳಗೆ ಹೋದನು. ಕರಡಿಯು ಮಣಿಯನ್ನು ಕೊರಳಲ್ಲಿ ಹಾಕಿಕೊಂಡು ಅದರ ಪ್ರಕಾಶದಲ್ಲಿ ಆನಂದದಿಂದ ಮಲಗಿದ್ದನ್ನು ಕಂಡನು. ಆಗ ಮೋಹಕ ಗೀತವನ್ನು ಕೃಷ್ಣನು  ಹಾಡತೊಡಗಿದಾಗ ಎಚ್ಚರಗೊಂಡ ಜಾಂಬವಂತನು ನೀನಾರು ಅಂತಾ  ಕೋಪದಿಂದ ನುಡಿಯಿತು. ಅದಕ್ಕೆ ಕೃಷ್ಣನು  ಸ್ವಚ್ಛ ಹೃದಯದ ಕೃಷ್ಣ ನಾನಿರುವೆ . ನಿನ್ನಲ್ಲಿಹ ಶ್ಯಮಂತಕ ಮಣಿಯನ್ನು ತೆಗೆದುಕೊಂಡು ಹೋಗಲು ಇಲ್ಲಿಗೆ  ಬಂದಿರುವೆ. ಅದನ್ನು ಕಾಣಿಕೆ ರೂಪದಿಂದ ನನಗೆ ಕೊಡು ಅಂತ ಕೇಳಲು ಜಾಂಬವಂತನು ಹೇ ಮಂದ ಮಾನವನೇ, ಇಂದ್ರಾದಿ ದೇವತೆಗಳಿಗೆ ನನ್ನ ವಸ್ತುವು ದೊರೆಯದಿದ್ದಾಗ ನೀನು ಬೇಡಲು ಬಂದಿರುವಿ, ಛೇ ನಡೆ ಎಂದು ಹೀಯಾಳಿಸಿತು. ಅದಕ್ಕೆ ಕೃಷ್ಣನು, ಹೇ ಕರಡಿ ಆ ಮಣಿಯನ್ನು ತೆಗೆದುಕೊಂಡು ಹೋಗುವೆ ಅಂತ ನುಡಿಯಲು ಕೊಪವೇರಿದ ಜಾಂಬವಂತ ರೋಷದಿಂದ ಭಾಪು  ನರನೇ  ಅಂತಾ ರೌದ್ರಾ ವೇಷದಿಂದ ಗುದ್ದಿದನು. ಆಗ ಕೃಷ್ಣನಿಗೂ ಕೋಪವೇರಿತು. ಹಲ್ಲು ಕಚ್ಚುತ್ತ ತಾಳು ನಿನ್ನ ಬಲವನ್ನು ಮುರಿದು ಗರ್ವಭಂಗ ಮಾಡುವೆನು ಅಂತ ಕರಡಿಯನ್ನು ಗುದ್ದತೊಡಗಿಧನು. ಈ ಪ್ರಕಾರ ಪರಸ್ಪರರು  ಮುಷ್ಟಿಯುದ್ಧದಲ್ಲಿ ತೊಡಗಿದರು. ಕೃಷ್ಣನ ಹೊಡೆತಕ್ಕೆ ಸಹಿಸಿಕೊಳ್ಳಲಾಗದೆ  ಶಕ್ತಿಗುಂದಿದ  ಜಾಂಬವಂತನು ಒದರುತ್ತಾ ಈ ಅರಣ್ಯದಲ್ಲಿ ಸಾಮಾನ್ಯ ನರನು ನನ್ನನ್ನು ಗೆಲೆಯುವದೆಂದರೆ ಈತನು ನನ್ನ ಒಡೆಯನಾದ ಶ್ರೀರಾಮಚಂದ್ರ ಇರುವುದು ಸತ್ಯ. ಹೇ ಕರುಣಾಮಯಿ ಪ್ರಭು ಶ್ರೀರಾಮ ಜಯ ಶ್ರೀರಾಮ ಅಂತ ನುಡಿಯುವುದನ್ನು ಕಂಡು ಕೃಷ್ಣನು  ಶ್ರೀರಾಮನ ರೂಪವನ್ನು ತೋರಿಸಿದ ಕೂಡಲೇ ಅಹಂಕಾರದ  ತಮಸ್ಸು ನಾಶವಾಗಿ ಚಕಿತನಾದ ಜಾಂಬವಂತನಿಗೆ  ಹಿಂದಿನ ಅರಿವು ಗೋಚರಿಸಿತು.ಆಗ  ಜಾಂಬವಂತನು ರಾಮಾವತಾರದಲ್ಲಿ ನಾನು ಯುದ್ಧಕ್ಕೆ ಕರೆಯಲು ಕೃಷ್ಣಾವತಾರದಲ್ಲಿ ಯುದ್ಧ ಮಾಡುತ್ತಾ ರಾಮರೂಪ ತೋರುವೆ ಅಂತ ಹೇಳಿದ  ಪ್ರಕಾರ ಈ ಯುಗದಲ್ಲಿ ಪ್ರಭುವೆ ಹೀಗೆ  ಯುದ್ಧ ಮಾಡಿ ನನ್ನ ಇಚ್ಛೆಯನ್ನು ನೀನು ಪೂರೈಸಿದಿ ಅಂತ ಹರ್ಷದಿಂದ ನಮಿಸಿದನು. ತನ್ನ ಏಕೈಕ ಮಗಳಾದ ಜಾಂಬುವತಿಯನ್ನು ಶ್ರೀಕೃಷ್ಣನಿಗೆ ಧಾರೆ ಎರೆದು ಶ್ಯಮಂತಕ ಮಣಿಯನ್ನು ಕಾಣಿಕೆಯಾಗಿ ಕೊಟ್ಟು ಜಾಂಬವಂತನು ಶ್ರೀಕೃಷ್ಣನ ಪಾದಪದ್ಮಗಳಲ್ಲಿ  ತನ್ನ ಪ್ರಾಣಪಕ್ಷಿಯನ್ನರ್ಪಿಸಿದನು.


ಜಾಂಬವತಿಯನ್ನು ಕರೆದುಕೊಂಡು ಶ್ರೀ ಕೃಷ್ಣನು ತನ್ನ ಸೇವಕರೊಂದಿಗೆ ದ್ವಾರಕಾ ನಗರಿಗೆ ಮರಳಿದನು. ರಾಜ್ಯ ಸಭೆ ಸೇರಿತು. ಸತ್ರಾರ್ಜಿತನನ್ನು ಬರಮಾಡಿಕೊಂಡನು. ಈಗ ಕೃಷ್ಣನು  ತನಗೆ ವಿನಾಕಾರಣ ಬಂದ ಅಪವಾದ ನಿವಾರಿಸಲು ಜರುಗಿದ ವೃತ್ತಾಂತವನ್ನು ಹೇಳುತ್ತಾ ಶ್ಯಮಂತಕಮಣಿಯನ್ನು ಸತ್ರಾಜಿತನಿಗೆ ಕೊಟ್ಟನು. ಸಾರಾಸಾರ ವಿಚಾರವಿಲ್ಲದೆ ವಿವೇಕಶೂನ್ಯನಾಗಿ ತಾನು ಅಪರಾಧ ಮಾಡಿ, ನಿಮಗೆ ಅಪವಾದವನ್ನು ಕೊಟ್ಟೆ. ಅಪರಾಧಕ್ಕೆ ಕ್ಷಮಾದಾನ ಮಾಡಿ ನನ್ನನ್ನು ರಕ್ಷಿಸು ಅಂತಾ ಸತ್ರಾರ್ಜಿತನು ಅಂಗಲಾಚಿ ಬೇಡಿಕೊಂಡನು. ಅದಕ್ಕೆ ಕೃಷ್ಣನು ತಥಾಸ್ತು ಅಂತ ಸಮ್ಮತಿಸಿದನು. ಪುನಃ ಸತ್ರಾರ್ಜಿತನು  ಕೃಷ್ಣನನ್ನು ಕುರಿತು, ಹೇ ಭಗವಾನ್ ಶ್ರೀಕೃಷ್ಣ ಇದರಿಂದ ನನ್ನ ತಾಪವು ಶಮನವಾಗಲಿಲ್ಲ. ನನ್ನ ಪುತ್ರಿಯಾದ ಸತ್ಯಭಾಮೆಯನ್ನು ಲಗ್ನವಾಗಬೇಕು ಅಂತ ಪ್ರಾರ್ಥಿಸಿದನು. ಕೂಡಲೇ ವೈಭವದಿಂದ ಮಂಗಳಕಾರ್ಯ ಜರುಗಿ ಸತ್ರಾರ್ಜಿತನು  ತನ್ನ ಕುಮಾರಿ ಸತ್ಯಭಾಮೆಯ ಧಾರೆ ಎರೆದು ಕೃಷ್ಣನಿಗೆ ಶ್ಯಮಂತಕ ಮಣಿಯನ್ನು ಉಡುಗೊರೆಯಾಗಿ ಕೊಟ್ಟನು. ಅಯ್ಯಾ ಗುರುಪಾದಯ್ಯ ಜಂಗಮನೇ  ಈ ಪ್ರಕಾರ ವಿನಾಕಾರಣ ಶ್ಯಮಂತಕ ಮಣಿ ಚೋರನೆಂದು ಅಪವಾದಕ್ಕೆ ಗುರಿಯಾದ ಶ್ರೀಕೃಷ್ಣನು ಅಪವಾದದಿಂದ ಮುಕ್ತನಾಗಿದ್ದುದಲ್ಲದೆ ಎರಡು ಹೆಣ್ಣುಗಳು ಗಂಟು ಬಿದ್ದವು. ಆದರೆ ಇಂತಹ ಪರಿಸ್ಥಿತಿಗೆ ಬಾರದೆ ಎರಡು ಹೊಡೆತ ಮಾತ್ರ ಬಿದ್ದವು. ಕಾರಣ ನಾನೇ ಧನ್ಯನು ಅಂತ ಸಿದ್ಧನು  ಗಹಗಹಿಸಿ ನಗುತ್ತಾ ತನ್ನ ಸ್ಥಾನಕ್ಕೆ ತೆರಳಿದನು. ಶ್ಯಮಂತಕ ಮಣಿಯ ಕಥೆಯನ್ನು ಶ್ರೀಗಳ ಮುಖದಿಂದ ಕೇಳಿದ ಗುರುಪಾದಯ್ಯನು  ಪುರದಲ್ಲಿ ಜನರಿಗೆ ಹೇಳುತ್ತಾ ಆನಂದಭರಿತನಾದನು. 



ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
ಎಲ್ಲಾ  ಕಥೆಗಳ ಲಿಂಕಗಳು 
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 
2)Facebook shareಗಾಗಿ👉


«««««ಓಂ ನಮಃ ಶಿವಾಯ »»»»»»»

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ