ಸಿದ್ದನು ಚಿದ್ಘನಾನಂದ ಸ್ವಾಮಿಯ ಸಮಾಧಿಯ ಹಿಂಬದಿ ಮಲಗಿದಾಗ ಮೂರ್ಖರು ಹಿಂಸೆಕೊಟ್ಟ ಕಥೆ
🌱 ಸಿದ್ದನು ಚಿದ್ಘನಾನಂದ ಸ್ವಾಮಿಯ ಸಮಾಧಿಯ ಹಿಂಬದಿ ಮಲಗಿದಾಗ ಮಾತ್ಸರ್ಯದಿಂದ ಬಂದ ಮೂರ್ಖರು ಆತನನ್ನು ಅನಾಮತ್ತಾಗಿ ಮೇಲಕ್ಕೆ ಎತ್ತಿ ಒಗೆದು ಹಿಂಸೆಕೊಟ್ಟಿದು.
ತೊರವಿಭಾವಿಯಿಂದ ತೆರಳಿದ ಸಿದ್ಧನ ಶೋಧನೆಗೆ ಊರ ತುಂಬಾ ಸುತ್ತಲಿನ
ಹೊಲಗದ್ದೆ ಪಾಳು ದೇಗುಲಗಳಲ್ಲಿ ಜನರು ನೋಡುತ್ತ ನೋಡುತ್ತ ಹತಾಶೆಗೊಂಡರು. ಗುರುಪಾದಯ್ಯನಿಂದ ಸಿದ್ಧನ ವಾರ್ತೆಯನ್ನು ಕೇಳುತ್ತಾ ಜನರೆಲ್ಲರೂ ಡುಮಗೇರಿಗೆ ಸಿದ್ಧನಲ್ಲಿ ಬಂದು ದರ್ಶನ, ಶ್ರವಣ ಮಾಡಹತ್ತಿದರು. ಈ ವಾರ್ತೆ ಪಸರಿಸಿದಂತೆಲ್ಲ ವೀರಶೈವ ಲಿಂಗಾಯತ ಆಕರ್ಷಿತರಾಗಿ ಬರತೊಡಗಿದರು. ನಿಜ ಭಕ್ತಿಯಿಂದ ನಡೆದುಕೊಳ್ಳತೊಡಗಿದರು. ಆದರೆ ಕಟ್ಟರಪಂಥಿ ಕೆಲವರಿಗೆ ಹಿಡಿಸಲಿಲ್ಲ. ಅವರ ರೋಮ ರೋಮದಲ್ಲಿ ಮಾತ್ಸರ್ಯಭಾವ ತುಂಬಿ ತುಳುಕುತ್ತಿತ್ತು. ಈ ಮಾತ್ಸರ್ಯದ ಮೂರ್ತಿಮಂತ ಒಬ್ಬ ಬಣಜಿಗನು ಜನರಿಲ್ಲದ ಸಮಯಕ್ಕೆ ಚಿದ್ಘನಾನಂದ ಸ್ವಾಮಿ ಸಮಾಧಿ ಹಿಂಬದಿಗೆ ಮಲಗಿದ್ದ ಸಿದ್ಧನನ್ನು ಕಂಡು, ನೀಚಾತ್ಮನೇ ನೀನಾರು ? ಎಂದು ಗದರಿಸಿದನು. ಅದಕ್ಕೆ ಸಿದ್ಧನು ಮೌನದಿಂದ ಇದ್ದುದನ್ನು ಕಂಡು ಕೆಂಡ ಮಂಡಲಾಕಾರನಾದ ಆ ಬಣಜಿಗನು ಸಿದ್ಧನಿಗೆ, ಎಲೆ ಲಿಂಗವಿಲ್ಲದ ಭವಿಯೇ? ಲಿಂಗಾಯತ ಭಕ್ತರು ನಿನಗೆ ನಮಿಸಬೇಕೆ? ಬಹುದೊಡ್ಡವನೆಂದು ನೀನು ಭಾವಿಸಿರುವಿಯೋ ಎನ್ನುತ್ತ ಆತನನ್ನು ಅನಾಮತ್ತಾಗಿ ಎತ್ತಿ ಚೆಲ್ಲುತ್ತಾ ಕೋಲಿನಿಂದ ಹೊಡೆಯಲು ಆರಂಭಿಸಿವದರಲ್ಲಿ ಗಡಗಡ ಶಬ್ದ ಕೇಳಿದ ಕೂಡಲೇ ಆ ಬಣಜಿಗನು ಅಡ್ಡದಾರಿಯನ್ನು ಹಿಡಿದು ಓಡಿದನು. ಎತ್ತಿ ಒಗೆದದ್ದರಿಂದ ಸಿದ್ಧನಿಗೆ ಮೊಣಕೈಗಳು ಕೆತ್ತಿ ರಕ್ತ ಸುರಿಯುತ್ತಿತ್ತು. ಅದನ್ನು ಒರೆಸಿಕೊಳ್ಳುತ್ತಾ ನಡಕ್ಕೆ ಪೆಟ್ಟು ಬಿದ್ದಿದ್ದರಿಂದ ಬಹಳೇ ನೋವು ಕಾಣಿಸಿತು. ಮಂಡೆಗಾಲಿನಿಂದ ಮೆಲ್ಲನೆ ಮಲಗಿ ಸರಿಯುತ್ತಾ ಸರಿಯುತ್ತಾ ಸಮಾಧಿ ಹತ್ತಿರ ಕೂತು ಧ್ಯಾನಸ್ಥನಾದನು.
ಬೆಳಗಾಯಿತು. ಸೂರ್ಯೋದಯವಾಯಿತು. ಉಜ್ಜಣ್ಣವರ ಭೀಮಪ್ಪ, ಹನ್ನೆರಡು ಮಠದ ಸ್ವಾಮಿ ಮುಂತಾದ ಭಕ್ತರು ಬಂದರು. ಸಿದ್ಧನಿಗಾದ ಗಾಯಗಳನ್ನು ಕಂಡು ತಳಮಳಗೊಂಡು ಹೇ ಸ್ವಾಮಿ, ಇದೇನು ಅನಾಹುತ ಅಂತಾ ಕೇಳಲು, ಸಿದ್ಧನು, ಪ್ರಾರಬ್ಧ ಕರ್ಮವನ್ನು ಊಟ ಮಾಡಿ ನಾಶಗೊಳಿಸಬೇಕು. ಹೀಗೆ ಉಂಡು ನಾಶವಾದರೆ ವಿದೇಹ ಮುಕ್ತಿ ಸೌಖ್ಯ ಬೇಗನೆ ದೊರೆತು ಸೌಭಾಗ್ಯ ಪ್ರಾಪ್ತಿಯಾಗುತ್ತದೆ ಅಂತಾ ನುಡಿದನು. ಅಲ್ಲಿ ಕೂಡಿದ್ದ ಲಕ್ಕುಂಡಿ ಗುರುಪಾದ, ನಾಗಪ್ಪ, ಯರಗಲ್ ಬಸಪ್ಪ, ಯತ್ತಿನಮನಿ ಬಸಯ್ಯಾ ಮುಂತಾದವರು ಹೀಗೆಯೇ ಬಿಡಲು ಈ ಗಾಯಗಳು ಹುಣ್ಣಾಗುವವು, ಔಷಧೋಪಚಾರ ಮಾಡಿಸಬೇಕು ಅಂತಾ ಆಪ್ತಾಲೋಚನೆ ಮಾಡಿ, ಸಿದ್ಧನನ್ನು ಹನ್ನೆರಡು ಮಠಕ್ಕೆ ಕರೆತಂದರು. ಕೆಲವು ದಿನಗಳವರೆಗೆ ಇಟ್ಟುಕೊಂಡು ಔಷಧೋಪಚಾರ ಸೇವೆಯ ಮಾಡುತ್ತಾ ಗುಣಪಡಿಸಿದರು. ಗುಣವಾದ ಕೂಡಲೇ ಸಿದ್ದನು ಪುನಃ ಡುಮಗೇರಿ ತನ್ನ ಸ್ಥಾನಕ್ಕೆ ಬಂದನು. ಹಗಲು ಗೋಪಾಲಕರೊಡನೆ ಚೆಂಡು, ಚಿಣಿಪಣಿ, ಗುಂಡು, ಗಿಡಮಂಗನಾಟ, ಹುಲಿಮನಿ, ಚದುರಂಗದಾಟ, ಸರಮನಿ ಆಟವನ್ನಾಡುತ್ತಾ, ಸಾಯಂಕಾಲ ಬಂದ ಭಕ್ತರಿಗೆ ಶಾಸ್ತ್ರ ಹೇಳುತ್ತಾ ಕಾಲಕ್ಷೇಪ ಮಾಡುತ್ತಿದ್ದನು. ಹೀಗೆ ದಿನದಿಂದ ದಿನಕ್ಕೆ ಸಿದ್ಧನ ಕೀರ್ತಿ ನಗರದ ತುಂಬಾ ಪಸರಿಸಿ, ಸಹಸ್ರ ಸಹಸ್ರ ಭಕ್ತರಾಕರ್ಷಣೆಯಾಗಿದ್ದನ್ನು ಕಂಡ ಕಟ್ಟಿರಪಂಥಿ ಲಿಂಗಾಯತರಲ್ಲಿ ಮತ್ಸರದ ಉರಿಯು ಪ್ರಜ್ವಲಿಸತೊಡಗಿತು. ಈ ಮಾತ್ಸರ್ಯದ ಮೂರ್ತಿಯೊಬ್ಬನು ಯಾರೂ ಇಲ್ಲದ ಸಮಯದಲ್ಲಿ ಅಲ್ಲಿಗೆ ಬಂದು ಸಿದ್ಧನನ್ನು ಅನಾಮತ್ತಾಗಿ ಎತ್ತಿಕೊಂಡು ಹಾಳುಬಾವಿಯಲ್ಲಿ ಹಾಕಿ ಹೋದನು. ಇದು ಯಾರಿಗೂ ಗೊತ್ತಾಗಿದ್ದರಿಂದ ಅಲ್ಲಿ ಭಕ್ತರು ಬಂದು ಬಹಳ ಪರಿಶ್ರಮದಿಂದ ಸಿದ್ಧನನ್ನು ಹೊರತೆಗೆದರು. ಹಾಳುಭಾವಿಯಲ್ಲಿ ನಟ್ಟ ಮುಳ್ಳುಗಳನ್ನು ತೆಗೆದರು. ತಲೆಗೆ ಬಿದ್ದ ಪೆಟ್ಟಿನಿಂದ ರಕ್ತ ಸೋರುತ್ತಿತ್ತು. ಅದನ್ನು ಒರೆಸಿ ಔಷಧೋಪಚಾರ ಮಾಡಿದರು.
ಹೀಗೆ ಕೆಲ ದಿನಗಳು ಗತಿಸಿದ ನಂತರ ಇಬ್ಬರು ಬಂದು ಸಿದ್ಧನನ್ನು ದರದರನೆ ಎಳೆದುಕೊಂಡು ಹೋಗಿ ಹಾಳು ದೇವಾಲಯಕ್ಕೆ ಬಂದರು. ಆತನನ್ನು ಕುರಿತು, ಎಲಾ ಹೀನ ಭವಿಯೇ ಗೌಪ್ಯವಾಗಿರುವ ಪರಮ ಶಿವಮಂತ್ರವನ್ನು ಧ್ಯಾನ ಮಾಡಲು ಶೈವರು ಮಾತ್ರ ಅಧಿಕಾರಿಗಳು, ಉಳಿದವರು ಭವಿಗಳಾಗಿದ್ದರಿಂದ ಅವರು ನುಡಿಯಲಿಕ್ಕೆ ಅಧಿಕಾರಿಗಳಲ್ಲ. ವಸ್ತುಸ್ಥಿತಿ ಹೀಗಿದ್ದರೂ ನೀನು ಹೊಲೆ, ಮಾದಿಗ, ಬೇಡರಿಗೆಲ್ಲ ಶಿವಮಂತ್ರವನ್ನು ಬೋಧಿಸಿ ಅವರಿಂದ ಓಂ ನಮಃ ಶಿವಾಯ ಅಂತಾ ನುಡಿಯಲು ಹಚ್ಚಿರುವಿ. ನಿನಗೆ ನಿನ್ನ ಜೀವ ಬೇಡವಾಗಿದೆಯೋ ? ಹೇಳು ಮೌನದಿಂದ ಯಾಕೆ ಇರುವಿ, ಇನ್ನು ಮುಂದೆಯಾದರೂ ನನ್ನ ಬಾಯಿಯಿಂದ ಓಂ ನಮಃ ಶಿವಾಯ ಅಂತಾ ನಡೆಯುವುದಿಲ್ಲವೆಂದು ನಿನ್ನ ಗುರುವಿನ ಆಣೆ ಮಾಡಿ ಹೇಳಿದಲ್ಲಿ ಬಂಧನದಿಂದ ಮುಕ್ತರನ್ನಾಗಿ ಮಾಡುವೆವು ಅಂತಾ ಹೇಳಿದರು. ಅದಕ್ಕೆ ಸಿದ್ಧನು ಮೌನಧಾರಣ ಮಾಡಿದನು. ನಿಷ್ಕರುಣೆಯಿಂದ ಮನಬಂದಂತೆ ಸಿದ್ಧನನ್ನು ಹೊಡೆಯಬೇಕೆಂದು ಸಿದ್ಧರಾಗುತ್ತಲೇ ಹೊರಗೆ ಭಕ್ತರ ಶಬ್ದ ಕೇಳಿಸಿತು. ಕೂಡಲೇ ಗುಡಿಯ ಬಾಗಿಲನ್ನು ಭದ್ರವಾಗಿ ಮುಚ್ಚಿ ಆ ಈರ್ವರು ಓಡಿದರು. ಆ ಹಾಳು ದೇವಾಲಯಕ್ಕೆ ಯಾರೂ ಬರುತ್ತಿರಲಿಲ್ಲ. ಮಾರನೇ ದಿನ ಮಧ್ಯರಾತ್ರಿಯಲ್ಲಿ ಪರಮೇಶ್ವರನು ಜಂಗಮರೂಪದಿಂದ ಗುಡಿಯಲ್ಲಿ ಪ್ರಕಟಗೊಂಡು, ಸಿದ್ಧನನ್ನು ಅಪ್ಪಿಕೊಳ್ಳುತ್ತಾ ಹೇ ಕಂದರೆ, ನೀನು ನನ್ನ ಅಂಶದಿಂದ ಈ ಧರೆಯಲ್ಲಿ ಅವತರಿಸಿರುವಿ. ನಿಜ ವೈರಾಗ್ಯದಿಂದ ನಿನ್ನ ಕರ್ತವ್ಯ ಮಾಡುತ್ತಿರುವಿ. ನಿನಗೆ ನೋವಾಗಿದೆ ಅಂತಾ ಅವನ ದೇಹದ ಮೇಲೆ ಕೈಯಾಡಿಸಿ ಅಂತರ್ಧಾನನಾದನು.
ಶರೀರ ನೋವು ಅಡಗಿದ್ದರಿಂದ ಸಿದ್ಧನು ಹರ್ಷಚಿತ್ತವುಳ್ಳವನಾಗಿ ಸಮಾಧಿಸ್ಥನಾದನು. ಮೂರು ದಿನಗಳು ಕಳೆದ ನಂತರ ಯಾವನೋ ಒಬ್ಬನು ಆ ದೇವಾಲಯದ ಬಾಗಿಲನ್ನು ತೆರೆದು ಸಿದ್ಧನನ್ನು ಹೊರಗೆ ಕರೆತಂದು ಭಕ್ತಿಪೂರ್ವಕ ಉಪಚಾರ ಮಾಡಿದ ನಂತರ ಡುಮಗೇಧಿಯಲ್ಲಿಯ ತನ್ನ ಸ್ಥಾನಕ್ಕೆ ಮರಳಿದನು. ಇಂತಹ ಮಹಾಮಹಿಮನ ರಕ್ಷಣೆಯ ಭಾರವು ಜಗದೀಶನ ಮೇಲಿದ್ದುದು ಮಾನವರಿಗೆ ಹೇಗೆ ತಿಳಿಯಬೇಕು ಅಂತಾ ಜನರು ಅಲ್ಲಲ್ಲಿ ಮಾತನಾಡುತ್ತಿದ್ದರು. ದಿನ ದಿನಕ್ಕೆ ಈ ಲೀಲಾ ವಿನೋದಗಳ ವಾರ್ತೆ ಊರಿನ ತುಂಬಾ ವ್ಯಾಪಕವಾಗಿ ಹರಡತೊಡಗಿತು. ಈ ಪ್ರಚಾರದಿಂದ ಕೆಲ ಮೂರ್ಖರು ಸಿದ್ದನಿಗೆ ಚಿತ್ರಹಿಂಸೆ ಕೊಡಬಹುದೆಂದು ಸುಜನರು ಚಿಂತಾಕ್ರಾಂತರಾದರು. ಸಿದ್ಧನನ್ನು ಕಾಯಲು ರಾತ್ರಿ ಹಗಲು ಭಕ್ತರು ಬರಹೋಗತೊಡಗಿದರು. ಸಿದ್ಧನ ದರ್ಶನದಿಂದ ಆತನಿಂದ ಹೊರಹೊಮ್ಮುವ ಅಮೃತವಚನಗಳಿಂದ ತಾವು ಧನ್ಯರಾದೆವೆಂದು ಹರ್ಷೋಲ್ಲಾಸದಿಂದ ಮಾತನಾಡತೊಡಗಿದರು. ಸಾತಪ್ಪ ಬೀಳಗಿ, ಶಾಂತಪ್ಪ ಬೋಗಾರ, ಕೋಟೆಪ್ಪನವರ ವೀರಯ್ಯಾ, ಕಿತ್ತೂರ ಸಿದ್ದಪ್ಪ, ಶಾಂತವೀರಪ್ಪ, ಬ್ಯಾಳಿ ಚನ್ನಪ್ಪ, ಗುಗ್ಗರಿ ರಾಚಪ್ಪ, ಗುಡ್ಡದ ಶಿವಪ್ಪ, ಜಾಲಿಬಡ್ಡಿ ವೀರಪ್ಪ, ಶಿರಗುಪ್ಪಿ ಹೊಂಬಪ್ಪ, ಉಪ್ಪಿನ ಸಿದ್ದಪ್ಪ, ದಿವಟೆ ತಿಪ್ಪಣ್ಣ ಮುಂತಾದವರು ಪ್ರತಿನಿತ್ಯ ಬರುತ್ತಾ ನಮಿಸುತ್ತಾ ಭಜನೆ ಮಾಡುತ್ತಾ ಸಿದ್ಧನ ದರ್ಶನ ಶಾಸ್ತ್ರ ಶ್ರವಣ ಮಾಡಿ ಹೋಗುತ್ತಿದ್ದರು. ಹೀಗೆ ಪ್ರತಿನಿತ್ಯ ಭಕ್ತರ ಸಂಖ್ಯೆ ಬೆಳೆಯತೊಡಗಿತು. ಭಕ್ತರು ಕರಸೇವ ಮಾಡಿ ಚಿದ್ಘನಾನಂದ ಸಮಾಧಿಯ ಸುತ್ತಲಿನ ಮುಳ್ಳು, ಕಳ್ಳಿ, ಕಂಟಿ ಕಡಿದು ಸ್ವಚ್ಛಗೊಳಿಸಿದರು. ಅಲ್ಲಲ್ಲಿ ಹೂವಿನ ಗಿಡಗಳನ್ನು ಹಚ್ಚಿದರು. ಶಿರಗುಪ್ಪಿ ಹೊಂಬಣ್ಣನು ನೀರಿಗಾಗಿ ಬಾವಿ ತೆಗೆಸಿದನು. ನಾಗಪ್ಪನು ಸಿದ್ಧಾಶ್ರಮದ ಛಪ್ಪರ ಹಾಕಿಸಿದನು. ಹೀಗೆಯೇ ಭಕ್ತರೆಲ್ಲರೂ ಭಕ್ತಿ, ಸೇವೆಯಿಂದ ಆಶ್ರಮವನ್ನು ಸುಸಜ್ಜಿತಗೊಳಿಸಿದರು. ಹರ್ಷದಿಂದ ಅಲ್ಲಿಯೇ ಅಡುಗೆ ಮಾಡಿ ಅಲ್ಲಿಕೇರಿಯ ಅನ್ನ ಸಂತರ್ಪಣೆ ನಡೆಯುತ್ತಿದ್ದ ಸಿದ್ಧಾಶ್ರಮದ ಸೊಬಗು ಆಕರ್ಷಣೀಯವಾಗಿತ್ತು. ಇದಕ್ಕೆ ಮಾತ್ಸರ್ಯವುಳ್ಳವರು ಸಭೆಯನ್ನು ಕರೆದು ಲಿಂಗವಿಲ್ಲದ ಭವಿಯ ಮಠಕ್ಕೆ ಯಾರು ಹೋಗಬಾರದೆಂದು ಸಿದ್ದನಿಗೆ ತಲೆಬಾಗಿ ಯಾರೂ ನಮಸ್ಕರಿಸಬಾರದೆಂದೂ ನಿರ್ಣಯವನ್ನು ಮಾಡಿದರು. ಈ ನಿರ್ಣಯ ಉಲ್ಲಂಘನೆ ಮಾಡಿ ಸಿದ್ಧಾಶ್ರಮಕ್ಕೆ ಹೋಗುವವರೆಲ್ಲರೂ ಯೋಗ್ಯ ಪ್ರಾಯಶ್ಚಿತ್ತಕ್ಕೆ ಒಳಗಾಗುವರು ಅಂತ ಸಾರಿ ಸಾರಿ ಹೇಳಿದರು. ಇದು ಲಿಂಗಾಯತ ಸಮಾಜದ ಕಟ್ಟಳೆಯಾಗಿತು. ಮನೆ ಮನೆಗೆ ಹೋಗಿ ಈ ಕಟ್ಟಳೆಯನ್ನು ಮೀರಬಾರದು ಅಂತಾ ತಾಕೀತು ಮಾಡಿದರು.
ಸಿದ್ಧನಿಗೆ ಹೊಡೆದದ್ದು 🌺
ಆದರೆ ಕಠೋರವಾದ ಕಟ್ಟಳೆಗೆ ಲಕ್ಷ್ಯಕೊಡದೆ ಲಿಂಗಾಯತ ಭಕ್ತರು ನಿರಂತರವೂ ಸಿದ್ಧಾಶ್ರಮಕ್ಕೆ ಬಂದು ಆತನ ಸ್ನಾನಸೇವೆ, ಅಂಗಸೇವೆ, ಓಂ ನಮಃ ಶಿವಾಯ ಶಿವಮಂತ್ರದ ಭಜನೆ, ಶಾಸ್ತ್ರ, ಶ್ರವಣದಲ್ಲಿ ತಲ್ಲೀನರಾಗಿ ಹರ್ಷದಿಂದ ಕಾಲಕಳೆಯುತ್ತಿದ್ದರು. ದಿನದಿಂದ ದಿನಕ್ಕೆ ಕಟ್ಟಳೆಯನ್ನು ಮುರಿವವರ ಸಂಖ್ಯೆ ಬೃಹತ್ತಾಗಿದ್ದರಿಂದ ಕಟ್ಟರಪಂಥಿ ಲಿಂಗಾಯತರಿಗೆ ಸಹನೆಯಾಗದಂತಾಗಿ, ಅವರ ಕೋಪದ ರೋಷ ಹೆಚ್ಚಾಗತೊಡಗಿತು. ನಾವೇನಾದರೂ ಉಪಾಯ ಕಂಡು ಹಿಡಿಯಬೇಕೆಂದು ಸಿಡಿಮಿಡಿ ಗೊಂಡ ಕೆಲವರು ರಹಸ್ಯವಾಗಿ ಷಡ್ಯಂತ್ರ ರಚನೆ ಮಾಡತೊಡಗಿದರು. ಒಂದಾನೊಂದು ದಿನ ರಾತ್ರಿ ಮೂರು ಗಂಟೆ ಸಮಯಕ್ಕೆ ಹೆಂಡ ಕುಡುಕ ಹಂದ್ರಯ್ಯನು ಬಂದು ಸಿದ್ಧನನ್ನು ಜುಲುಮೆಯಿಂದ ಎಚ್ಚರಗೊಳಿಸಿ ಕುಳ್ಳಿರಿಸಿದನು. ಸಿದ್ಧನ ಬೋಳ ತಲೆಯ ಮೇಲೆ ತನ್ನ ಮಚ್ಚಿ(ಪಾದುಕೆ )ಯನ್ನು ಇಡುತ್ತಾ, ಎಲ್ಲಾ, ಮೂರ್ಖ ತಲೆಯ ಮೇಲಿನ ಮಚ್ಚಿಯನ್ನು ಕೆಳಗೆ ಬೀಳಿಸಿದರೆ ನಿನಗೆ ಹೊಡೆಯುತ್ತೇನೆ ಅಂತ ಗದರಿಸುತ್ತಾ ಯಮನಂತೆ ಸಿದ್ದನೆದುರಿಗೆ ನಿಂತನು. ಸ್ವಲ್ಪ ಸಮಯದಲ್ಲಿ ಸಿದ್ದನ ತಲೆಯ ಮೇಲಿಟ್ಟ ಮಚ್ಚಿ ಕೆಳಗೆ ಬಿದ್ದುದನ್ನು ಕಂಡ ಆ ಕುಡುಕನ ಕೋಪವು ನೆತ್ತಿಗೇರಿತು. ಹೇ ಕಾಪಥಿಕನೇ ಮೂರ್ಖಾ ನಿನ್ನ ರೂಪದ ಅಂದಗೆಡಿಸುವೆ ಅಂತಾ ಬೈಗುಳ ಸುರಿಮಳೆಯಿಂದ ಕೋಲಿನಿಂದ ಮನಬಂದಂತೆ ಬಡಿಯತೊಡಗಿದನು. ಆ ಹೊಡೆತಕ್ಕೆ ಸಹಿಸಲಾರದೆ ಸಿದ್ಧನು ಶಿವನೇ ನಿನಗೆ ಅರ್ಪಿತವಾಗಲಿ ಅಂತ ಶಿವಸ್ಮರಣೆ ಮಾಡತೊಡಗಿದನು. ಕ್ರೋಧಿತ ಕುಡುಕ ಜಂಗಮನು ಹೊಡೆಯುತ್ತಾ ಬೈಯ್ಯುತ್ತಾ ನೀನು ಸಾಧುವಾಗಿರುವೆ. ಒಂದು ವೇಳೆ ಭೇದರಹಿತ ಸಾಧುವಾಗಿದ್ದರೆ ಹೆಂಡವನ್ನು ಯಾಕೆ ಕುಡಿಯುವುದಿಲ್ಲ, ಸಾಧುವಾಗುವ ವಿಧಾನ ತೋರಿಸುವೆ ಅಂತಾ ಮೇಲಿಂದ ಮೇಲೆ ಹೊಡೆಯ ತೊಡಗಿದನು.
ಅರುಣೋದಯವಾಗುವುದನ್ನು ಕಂಡು ಸಿದ್ಧನು ಆ ಕುಡುಕನನ್ನು ಕುರಿತು, ಅಯ್ಯಾ ಜಂಗಮನೇ, ನೀನು ನನಗೆ ನಿಜವಾದ ಗುರುವಾಗಿರುವಿ. ಬಹಳೇ ಉಪಕಾರ ಮಾಡಿರುವಿ. ನಿನಗೆ ಯಾವ ತೊಂದರೆಯಾಗಬಾರದು. ಈಗ ಭಕ್ತರ ಸಮೂಹವು ಬರುವ ಸಮಯವಾಗಿದೆ. ಕಾರಣ ನಿನ್ನ ಜೀವ ರಕ್ಷಣೆ ಮಾಡಿಕೊಳ್ಳುವ ಸಲುವಾಗಿ ಕೂಡಲೇ ಇಲ್ಲಿಂದ ತಡವಿಲ್ಲದೆ ಪಲಾಯನ ಮಾಡು. ಇಲ್ಲದಿದ್ದಲ್ಲಿ ಭಕ್ತರು ನಿನಗೆ ಜೀವಂತ ಬಿಡಲು ಸಾಧ್ಯವೇ ಇಲ್ಲ. ನಿನ್ನ ಹಿತವನ್ನು ಬಯಸಿ ಸಲಹೆ ಮಾಡಿದ್ದೇನೆ ಅಂತಾ ಅನ್ನುವುದನ್ನು ಕೇಳುತ್ತಲೇ ಹಂದ್ರಯ್ಯನು ಓಡಿದನು. ಬೆಳಗಾಯಿತು. ಭಕ್ತರು ಬರತೊಡಗಿದರು. ಸಮೀಪಕ್ಕೆ ಹೋಗಿ ನಮಸ್ಕರಿಸುವಾಗ ಸಿದ್ಧನು ಮೈಮೇಲಿನ ಬಾಸಾಳ ಕಂಡು ತಳಮಳಗೊಳ್ಳುತ್ತಾ, ಅಪ್ಪಾ ಇದೇನಿದು, ಎಂತಹ ಬಾಸಾಳಗಳು ಮೈತುಂಬಾ ಹಸಿರಾಗಿದೆ. ನಿನಗೆ ಯಾರು ಹೊಡೆದರು. ಹೇಳು ಇಂತಹ ಅವಸ್ಥೆಗೆ ತಂದ ಆ ಕಟುಕರು ಯಾರು? ಅಂತ ಅವರೆಲ್ಲರ ಕಣ್ಣುಗಳಿಂದ ದುಃಖಾಶ್ರುಗಳು ಉದುರುತೊಡಗಿದವು. ಆಗ ಸಿದ್ಧನು ಅವರೆಲ್ಲರನ್ನು ಕುರಿತು ಕರ್ಮವೆಂಬ ಪ್ರಾರಬ್ಬ ಪರಿಚಾರಕರು ಹೊಡೆದನು. ಅವನ ಪ್ರೇರಣೆಯಂತೆ ನೀವು ಪ್ರೀತಿಯಿಂದ ಸೇವೆ ಮಾಡುತ್ತಿರುವಿರಿ. ಒಬ್ಬ ಬಾಲಕನಿಗೆ ಹುಣ್ಣಾದಾಗ ತಂದೆಯು ಅದನ್ನು ತೊಳೆಯುವಾಗ ಮಗುವಿಗೆ ಬಹಳ ಬಾಧೆಯಾಗುತ್ತದೆ . ಬೈಯುತ್ತಾ ಹೊಡೆಯುತ್ತಾ ತಂದೆಯು ಔಷಧ ಹಚ್ಚುತ್ತಾನೇ. ಆಗ ತಾಯಿಯು ಬಂದು ಕಂದನನ್ನು ಎತ್ತಿಕೊಂಡು ಅವರಿಗೆ ಹೊಡೆಯೋಣ ಅಂತ ರಮಿಸುತ್ತಾ ಮೊಲೆ ಕುಡಿಸಿ ಶಾಂತ ಮಾಡುತ್ತಾಳೆ. ಇದರಂತೆ ಈ ಉದಾಹರಣೆಯ ತಂದೆಯಂತೆ ಪ್ರಾರಬ್ದ ಪರಿಚಾರಕನು ಹೊಡೆದರು. ತಾಯಿಯಂತೆ ನೀವು ನನ್ನ ಉಪಚಾರ ಮಾಡುವಿರಿ. ಕಾರಣ ಈರ್ವರ ವರ್ತನೆ ನನಗೆ ಸಮಾನವಾದುದು ಅಂತಾ ಹೇಳಿದನು. ಹೊಡೆದವನ ಮೇಲೆ ಕೋಪಗೊಳ್ಳದೆ ಆತನಿಗೆ ಹಿತವನ್ನೇ ಬಯಸಿದ ಈತನು ಮಹಾತ್ಮನು. ಈತನ ಸಹನಶೀಲತೆ ರಾಗ, ದ್ವೇಷರಹಿತ ಸ್ಥಿತಿಯನ್ನು ಕಂಡು ಭಕ್ತರ ಸಮೂಹವು ಸಖೇದಾಶ್ಚರ್ಯರಾಗಿ ಔಷಧ ಹಚ್ಚಿ ಉಪಚಾರ ಮಾಡತೊಡಗಿದರು. ಸೇವೆ ಮಾಡುವಾಗ ಹೊಡೆತದ ಬಾಸಾಳುಗಳ ಮೇಲೆ ಕೈಯಾಡಿಸಲು ಬಾಧೆಯಾಗುತ್ತಿತ್ತು. ಚಿತ್ರಹಿಂಸೆಕೊಟ್ಟ ಕಟುಕನಿಗೆ ಶಿಕ್ಷೆಯ ಬಗ್ಗೆ ಮಾತನಾಡಿದ ಸಿದ್ಧನು ಪ್ರಾರಬ್ಧ ಕರ್ಮದ ಮೇಲೆ ಹಾಕುತ್ತಿದ್ದುದು ಅವರ್ಣನೀಯವಾಗಿತ್ತು. ನಂತರ ಶಾಸ್ತ್ರ ಶ್ರವಣ, ಪ್ರಸಾದ ಸ್ವೀಕರಿಸಿ ಸದ್ಗುರುವಿನಲ್ಲಿ ಅಗಾಧ ಭಕ್ತಿ ನಮನಗಳನ್ನು ಸಲ್ಲಿಸಿ ಭಕ್ತರು ತಮ್ಮ ತಮ್ಮ ಮನೆಗಳಿಗೆ ಮರಳಿದರು.
👇👇👇👇👇👇👇👇👇👇👇👇👇👇
ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
👉ಶೀಗಿ ಹುಣ್ಣಿವೆಯ ದಿನ ಒಬ್ಬ ಒಕ್ಕಲಿಗನು ಸಿದ್ಧನ ತಲೆಯ ಮೇಲೆ ಬೆಂಕಿಯನ್ನಿಟ್ಟಿದ್ದರಿಂದ ಆ ಒಕ್ಕಲಿಗನ ವಂಶವು ನಾಶವಾದದ್ದು
ಎಲ್ಲಾ ಕಥೆಗಳ ಲಿಂಕಗಳು
👉ಸಿದ್ಧಾರೂಢ ಭಾಗವತ ಕಥಾ ಸಂಗ್ರಹ 👉🛃
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ
1)WhatsApp shareಗಾಗಿ click ಮಾಡಿ📲☎️
2)Facebook shareಗಾಗಿ👉
3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚
«««««ಓಂ ನಮಃ ಶಿವಾಯ »»»»»»»
