ಚಿಂತಾಮಣಿ ಆಶ್ರಮದಲ್ಲಿ ಷಣ್ಮತ ಪಂಡಿತರನ್ನು ಜಯಸಿದ ಯತಿಶಿರೋಮಣಿ ಸಿದ್ಧಾರೂಢರು

✡️ ಚಿಂತಾಮಣಿ ಆಶ್ರಮದಲ್ಲಿ ಷಣ್ಮತ ಪಂಡಿತರನ್ನು ಜಯಸಿದ ಯತಿಶಿರೋಮಣಿ ಸಿದ್ಧಾರೂಢರು

 

ರಾಜನೊಂದಿಗೆ ಸಕಲ ವೈಭವ ಗೌರವದೊಂದಿಗೆ ಸಿದ್ಧನು ಚಿಂತಾಮಣಿ ಆಶ್ರಮಕ್ಕೆ ಆಗಮಿಸಲು, ಆಶ್ರಮದ ಸ್ವಾಮಿಗಳು ಸಿದ್ಧನಿಗೆ ಉಚಿತಾಸನದಲ್ಲಿ ಕುಳ್ಳಿರಿಸಿದರು. ಅಲ್ಲದೆ ಪಂಡಿತರೂ ಸಹ ಆಗಮಿಸಿ, ತಮ್ಮ ತಮ್ಮ ಆಸನಗಳಲ್ಲಿ ಅಲಂಕರಿಸಿದ್ದರು. "ನಿಮ್ಮ ನಿಮ್ಮ ಮತಗಳ ಕುರಿತು ವಾದ ಆರಂಭಿಸಿರಿ" ಅಂತಾ ಆಶ್ರಮದ ಸ್ವಾಮಿಗಳು ಕೇಳಿಕೊಂಡರು.

✡️ ಚಾರ್ವಾಕಮತ🕉️

ಷಣ್ಮತಗಳ ಪೈಕಿ ಚಾರ್ವಾಕನು ಮುಂದೆ ಬಂದನು. ''ಎಲ್ಲದರಲ್ಲಿ ತಡೆಯಿಲ್ಲದೆ ನಾನೆಂಬ ಬುದ್ದಿಯು ಯಾವುದನ್ನು ಅಪ್ಪಿಕೊಳ್ಳುವದೋ ಅದುವೇ ಆತ್ಮವು. ನಾನು ಬ್ರಾಹ್ಮಣನು, ಕ್ಷತ್ರಿಯನು, ಶೂದ್ರನು, ನಾನು ಮಗು, ನಾನು ಸುಂದರ ಸ್ತ್ರೀ, ಪರುಷ ಇತ್ಯಾದಿ ನಾನು ನಾನೆಂಬುದೇ ಆತ್ಮವು, ಸುಂದರ ವನಿತೆಯಿಂದ ಭೋಗ ಪಡೆಯುತ್ತಾ, ಪುತ್ರ ಪೌತ್ರಾದಿ ಧನ, ರಾಜ್ಯ, ಪಶು, ಅಂದವಾದ ಮನೆ, ರಥ, ರತ್ನಾಭರಣ ವಸ್ತ್ರ ಭೂಷಣಾದಿಗಳಿಂದ ಸುಖವನ್ನು ಪಡೆಯುವದೇ ಪುರುಷಾರ್ಥವಾಗಿದೆ. ಹೀಗೆ ಈ ಶರೀರ ಸುಖವನ್ನು ಭೋಗಿಸುವುದೇ ಸ್ವರ್ಗ ಸುಖವು. ಈ ಶರೀರವನ್ನು ಬಳಲಿಸುವುದೇ ನರಕವು. ಮರಣವೇ ಮುಕ್ತಿಯು ಪ್ರತ್ಯಕ್ಷವಾಗಿ ತೋರುವ ಸುಖ ದುಃಖಗಳೇ ಸ್ವರ್ಗ ನರಕಗಳು, ಉಳಿದೆಲ್ಲವು ಅಂದರೆ ದೇವರು, ಪಾಪ, ಪುಣ್ಯ, ಸ್ವರ್ಗ, ನರಕ ಇತ್ಯಾದಿಗಳು ಭ್ರಮಾತ್ಮಕಗಳಿದ್ದು ಅವೆಲ್ಲ ಸುಳ್ಳು. ಈ ದೇಹದ ವಿಲಾಸಕ್ಕಾಗಿ ಯಾವ ರೀತಿಯಿಂದಲೂ ಭೋಗ ಭಾಗ್ಯಗಳನ್ನು ಪಡೆದು ತೃಪ್ತಿಪಡುವುದೇ ಪುರುಷಾರ್ಥವಾಗಿದೆ. ಕಾರಣ ಈ ದೇಹವೇ ಆತ್ಮ ಅಂತಾ ಸಾರಿ ಸಾರಿ ಹೇಳುವೆ.

🌺 ನೈಯಾಯಿಕ ಮತ 🌷

ಅಗ ಇನ್ನೊಬ್ಬ ಪಂಡಿತನು ಮುಂದೆ ಬಂದು ಚಾರ್ವಾಕ ಮತವನ್ನು ಖಂಡಿಸುತ್ತ ತನ್ನ ವಾದವನ್ನು ಮಂಡಿಸಿದನು. “ನಾನು ಕೇಳುವೆ, ಹೇಳುವೆ, ಕೊಡತಕ್ಕೊಳ್ಳುವೆ,  ನುಡಿಯುವೆ, ರುಚಿಸುವೆ ಇವೆಲ್ಲವೂ ಇಂದ್ರಿಯಗಳ ಕೃತಿಗಳು. ಕಾರಣ ಇಂದ್ರಿಯಗಳೇ ಆತ್ಮ ಕೇಳಿರಿ'' ಅಂತಾ ಹೇಳತೊಡಗಿದನು. ನನ್ನದು ಈ ದೇಹ ಅನ್ನುವರು ನಾನು ದೇಹ ಅಂತಾ ಯಾರೂ ಅನ್ನಲಾರರು. ವಾಸ್ತವಿಕವಾಗಿ ಈ ದೇಹವು  ಜಡವಾದುದು ಕಾರಣ ಈ ಜಡದೇಹಕ್ಕೆ ಆತ್ಮ ಅಂತಾ ಹೇಗನ್ನುವಿರಿ? ಇನ್ನು ವಿಷಯಗಳಿಂದ ದೇಹಕ್ಕೆ ಸುಖವು ದೊರೆಯುವುದನ್ನು ಕಂಡು ಈ ದೇಹ ಆತ್ಮ ಅನ್ನುವುದು ಸರಿಯಲ್ಲ ಇದನ್ನು ನಾನು ವಿವರಿಸುವೆ  ಜ್ಞಾನೇಂದ್ರಿಯಗಳು ವಿಷಯಗಳಿಂದ ಸುಖವನ್ನು ಸ್ಪುರಣಗೊಳಿಸುವವು. ಕಾರಣ ಇಂದ್ರಿಯಗಳ ಯುಕ್ತ ಚೇತನವೇ ನಿಜವಾದ ಆತ್ಮ. ದೇಹ ಪೋಷಣವೇ ಪುರುಷಾರ್ಥವೆನ್ನುವದು ತಪ್ಪು. ಸರ್ವ ಜನರಿಗೆ ಗ್ರಾಹ್ಯವಾದುದೇ ಪುರುಷಾರ್ಥ ತನ್ನ ಇಚ್ಛೆಗೆ ಬಂದಂತೆ ಪುರುಷಾರ್ಥವೆನ್ನಲಿಕ್ಕಾಗದು. ಹಾಲಿನಲ್ಲಿ ಬೆಣ್ಣೆ ಇರುವುದನ್ನು ಅನುಭವದಿಂದ ತಿಳಿಯಬೇಕು. ಕಾರಣ ಏಕೇಂದ್ರಿಯ ಚೇತನವೇ ಆತ್ಮನು ಎನ್ನಬೇಕು. ಕಾರಣ ನನ್ನ ಮತ ಶ್ರೇಷ್ಠ, ನಾನು ಚಾರ್ವಾಕನನ್ನು ಜಯಿಸಿದೆನು' ಅಂತಾ ಹೇಳಿದನು. ಇದನ್ನು ಕೇಳುತ್ತಿದ್ದ ಪ್ರಾಣವೇ ಆತ್ಮನು ಎಂಬ ವಾದಿಯು ಮುಂದೆ ಬಂದು ನಗುನಗುತ್ತಾ ತನ್ನ ವಾದವನ್ನು ಆರಂಭಿಸಿದನು.

🕉️ ಪ್ರಾಣವೇ ಆತ್ಮನನ್ನುವ ಮತ '✡️

" ನಿರಂತರವಾಗಿ ಈ ದೇಹದಲ್ಲಿ ಚರಿಸುತ್ತಾ ಜಾಗ್ರತ್, ಸ್ವಪ್ನ, ಸುಷುಪ್ತಿ ಈ ಮೂರೂ ಅವಸ್ಥೆಗಳಲ್ಲಿ ಇದ್ದುಕೊಂಡು, ಈ ದೇಹವನ್ನು ಯಾವಾತನು ರಕ್ಷಣೆ ಮಾಡುತ್ತಲಿರುವನೋ ಅವನೇ ಆತ್ಮನು. ಪೂರ್ವದಲ್ಲಿ ಬ್ರಹ್ಮದೇವನು ಪ್ರಾಣೇಂದ್ರಿಯಗಳ ವಿವಾದದ ಕಾಲಕ್ಕೆ ಈ ಪ್ರಾಣಕ್ಕೆ ಶ್ರೇಷ್ಠತ್ವ ನೀಡಿರುವನು. ಪ್ರಶ್ನೋಪನಿಷತ್ತಿನ ಪ್ರಕಾರ ದೇಹೇಂದ್ರಿಯಗಳಿಗೆಲ್ಲ ಒಡೆಯನಾದ ಈ ಆತ್ಮನು ಇರುವತನಕ ಎಲ್ಲ ವ್ಯವಹಾರಗಳು ನಡೆಯುವವು. ಈ ದೇಹದಿಂದ ಪ್ರಾಣ ಹೋದ ತಕ್ಷಣ ಮರಣ ಸಂಭವಿಸುವುದಲ್ಲವೆ? ಆಗ ಈ ದಶೇಂದ್ರಿಯಗಳು ಏನೂ ಮಾಡಲಾರವು. ಇವು ನನ್ನ ಇಂದ್ರಿಯ ಅನ್ನುವರು. ಆದರೆ ನಾನೇ ಇಂದ್ರಿಯ ಅನ್ನಲಾರರು, ಕಾರಣ ಈ ಇಂದ್ರಿಯಕ್ಕೆ ಆತ್ಮತ್ವ ಇಲ್ಲ. ನಿಜಚೇತನ ಅಂತಾ ನೀನು ಹೇಳಿರುವಿ, ನಿನ್ನನ್ನು ಕೇಳುವೆ ಹೇಳು? ಎಲ್ಲರಲ್ಲಿ ಒಂದೇ ಚೇತನವಿರಬಲ್ಲುದೆ? ಒಂದೇ ಚೇತನವಿಲ್ಲದಿರೆ, ಒಡಲಲ್ಲಿ ಬೇರೆ ಬೇರೆ ಚೇತನವೇ? ಮೊದಲನೇಯದಾಗಿ ಒಂದೇ ಚೇತನವಿಲ್ಲದಡೆ ಒಂದೊಂದು ಇಂದ್ರಿಯಕ್ಕೆ ಒಂದೊಂದು ಚೇತನ ಅಂತಾ ಭಾವಿಸಿದಲ್ಲಿ ಒಂದು ಚೇತನ ಮೃತವಾಗಲು ಸಮುದಾಯಕ್ಕೆ ಹಾನಿಯಾಗುವದಲ್ಲವೆ? ಚೇತನ, ಜೀವ, ಅಜ್ಞಾನ ಕಳೆದು ಹೋಗುವವು ಇದು ಸಿದ್ಧಿಸದು. ದೇಹದ ಬೇರೆ ಬೇರೆ ಇಂದ್ರಿಯಗಳಿಗೆ ಬೇರೆ ಬೇರೆಯಾಗಿ ಹತ್ತು ಆತ್ಮಗಳಾಗುವವು, ಅವುಗಳ ಇಚ್ಛೆ ಬೇರೆ ಬೇರೆಯಾಗುವವು. ಒಂದು ಬಾಳೆಗಿಡಕ್ಕೆ ಹತ್ತು ಆನೆಗಳನ್ನು ಕಟ್ಟಲು ಅವು ತಮ್ಮ ಮನಸ್ಸಿಗೆ ಬಂದ ಕಡೆ ಜಗ್ಗಲು ಬಾಳೆಗಿಡವು ನಾಶವಾಗುವಂತೆ ಬಂಧುರವಾದ ಈ ದೇಹ ನಾಶವಾಗುವುದು. ಕಾರಣ ಇಂದ್ರಿಯಗಳಿಗೆ ಪ್ರಾಣವಾಯುವು ಸ್ಪಂದಿಸದೇ ಇದ್ದಲ್ಲಿ ಸ್ವಯಂ ಚೇತನವಿಲ್ಲ. ಕಾರಣ ನಿನ್ನ ಹತ್ತು ಇಂದ್ರಿಯಗಳು ಆತ್ಮನಲ್ಲ  ಕಾರಣ ನಾನು ಹೇಳಿದಂತೆ ಪ್ರಾಣವೇ ಆತ್ಮ" ಅಂತಾ ವಾದಿಸಿದನು. ಈ ವಾದವನ್ನು ಕೇಳಿದ ಇನ್ನೊಬ್ಬ ಪಂಡಿತನು ಮುಂದೆ ಬಂದು "ಅಯ್ಯಾ ನಿನ್ನ ಮತ ನಿಜವಲ್ಲ ನನ್ನ ಮತ ನಿಜವಾದುದು. ಉನ್ನತೋನ್ನತವಾದ ಮನಸ್ಸೇ ನಿಜವಾದ ಆತ್ಮ'" ಅಂತಾ ಹೇಳತೊಡಗಿದನು.

🕉️ ಮನವೇ ಆತ್ಮ🌷

''ಹೇ ಪ್ರಾಣವಾದಿಯೆ ಕೇಳು, ಹೊರಗಿನ ವಾಯುವಿನಂತೆ ಇರುವ ಈ ಪ್ರಾಣವು ಹೋಗಲು ಮರಣವು ಅಂತಾ ಹೇಳಿದ್ದು ಅಸತ್ಯವಾಗಿದೆ. ಈ ಅಸತ್ಯ ಹೇಗೆಂದು ವಿಮರ್ಶಿಸಲು ಈ ಗಿಡ ಬಳ್ಳಿಗಳಲ್ಲಿ ಪ್ರಾಣವಿರುವುದಿಲ್ಲ. ಆದರೆ ಅವು
ಬೆಳೆಯುವುದನ್ನು ನೋಡುತ್ತಿದ್ದೇವೆ. ಮೂರ್ಛಾಗತನಾದ ಪುರುಷನಿಗೆ ಮೃತಪಟ್ಟಿರುವನು. ಎನ್ನುವುದು ಯೋಗ್ಯವೇ ? ಯೋಗಿಯು ತನ್ನ ಯೋಗ ಸಾಧನೆಯಿಂದ ಈ ಪ್ರಾಣ ವಾಯುವನ್ನು ಶಿಖಾ ಚಕ್ರದಲ್ಲಿ ಸೇರುವಂತೆ ಕುಂಭಕ ಮಾಡಿ ಬಂಧನದಲ್ಲಿಡಲು, ಈ ಪ್ರಾಣವು ಚೈತನ್ಯವೆನಿಸುವುದಿಲ್ಲ. ಸಾಮಾನ್ಯವಾಗಿ ನಿದ್ದೆ ಮಾಡುತ್ತಿರುವ ಹೆಣ್ಣುಮಗಳ ಮೂಗಿನಲ್ಲಿಯ ನತ್ತನ್ನು ಕಳ್ಳನು ಬಿಚ್ಚಿಕೊಳ್ಳುವಾಗ ಆಕೆಗೆ ತಿಳಿಯುವುದಿಲ್ಲ ಪ್ರಾಣವಿದ್ದರೂ ಅದರ ಜ್ಞಾನಕ್ಕೆ ಬರದಿರೆ ಜಡವಲ್ಲವೆ? ಈ ಪ್ರಾಣಕ್ಕೆ ಒಡೆತನವಿತ್ತ ಈ ಇಂದ್ರಿಯಗಳ ಸಮೂಹಕ್ಕೆ ಸೇವಕತನ ಕೊಟ್ಟ ಬಗೆಯನ್ನು ವಿವರಿಸುವೆ. ಈ ಪ್ರಾಣವು ಹಾಗೂ ಇಂದ್ರಿಯಗಳು ತಾನು ಶ್ರೇಷ್ಠ ತಾನು ಶ್ರೇಷ್ಠ ಅಂತಾ ತಮ್ಮೊಳಗೆ ಜಗಳವಾಡಿ ಬ್ರಹ್ಮದೇವನಲ್ಲಿಗೆ ಬಂದು " ಹೇ  ಪರಬ್ರಹ್ಮನೇ ನಮ್ಮೊಳಗೆ ಯಾರು ಶ್ರೇಷ್ಟರು?” ಅಂತ ಕೇಳಿದಾಗ ಪ್ರಾಣವೇ ಶ್ರೇಷ್ಠ ಅಂತಾ ಹೇಳಿರುವನು. ಆದರೆ  ಕಲಹ ಮುಕ್ತಾಯ ಮಾಡಿದ ತೀರ್ಪಾಗಿದೆ ಹೊರತು ಪ್ರಾಣವು ಆತ್ಮನಲ್ಲ. ಆದರೆ  ಇಚ್ಛಾರೂಪ ಚೈತನ್ಯಯುತ ಮನಸ್ಸೇ ಆತ್ಮವಾಗಿದೆ.  ಈ ಮನಸ್ಸು ಜಡವಾದ ಪ್ರಾಣೇಂದ್ರಿಯಗಳ ಕೂಡ ಸಂಬಂಧವಾಗಲು ಎಲ್ಲಾ ಕಾರ್ಯಗಳು ನಡೆಯುವವು.
ವಿಷಯಾಸಕ್ತ ಮನಸ್ಸೇ  ಜೀವಾತ್ಮನು ನಿರ್ಮಿಷಯ ಮನವೇ ಪರಮಾತ್ಮನು. ಈ ಪ್ರಕಾರ ಜೀವಾತ್ಮ ಪರಮಾತ್ಮರೂಪ ಮನಸ್ಸೇ ಆತ್ಮನು” ಅಂತಾ ಹೇಳಿದನು. ಇದನ್ನು ಕೇಳಿದ ಬೌದ್ದನು ಮುಂದೆ ಬಂದು, ನನ್ನ ಮತವನ್ನು ಸಭಿಕರೆಲ್ಲರೂ ಕೇಳಿರಿ  ಅಂತಾ ಪೇಳತೊಡಗಿದನು.

🕉️ ಬೌದ್ದ ಮತ ✡️

 “ನನ್ನ ಮನಸ್ಸು ದುಃಖದಲ್ಲಿರುವುದು. ಈ ವಾಕ್ಯದಲ್ಲಿ ತಿಳಿದುಕೊಳ್ಳುವವನು ಬೇರೆ,  ತಿಳಿಯಲ್ಪಡುವದು ಬೇರ ಕಾರಣ ಅದು ಜಡವಾಗಿದೆ. ಜಡತ್ವ ಕೂಡಿದ ಮನಸ್ಸು ಆತ್ಮನಲ್ಲ, ಬೆಲ್ಲದಲ್ಲಿಯ ರುಚಿಯನ್ನು ಬೇರ್ಪಡಿಸಲು
ಬೆಲ್ಲವುಳಿಯುವದೇ? ಅದರಂತೆ ಸುತ್ತಲೂ ಸುಳಿದಾಡುವ ಸ್ವಭಾವದ ಮನಸ್ಸು ನಿರ್ವಿಷಯವಾಗಲು, ನಮ್ಮ ಬುದ್ಧಿಯಲ್ಲಿ ಲೀನವಾಗಲು ಮುಕ್ತಿ ಹೇಗಾಗುವುದು.
ಬಡಿಗನಿಗೆ ಉಳಿ ಬಾಚಿಗಳು ಸಾಧನಗಳಾದಂತೆ ಬುದ್ದಿಗೆ ಸಾಧನವು ಮನಸ್ಸು ಆದರೆ ಅದು ಆತ್ಮನಲ್ಲ. ಮನಸ್ಸಿಗೆ ಒಡೆಯ ವಿಜ್ಞಾನವು ಮೊದಲಿರುವ ವಿಜ್ಞಾನ ನಾಶವಾಗಲು, ಇನ್ನೊಂದು ವಿಜ್ಞಾನವು ಉದಯಿಸುವುದು. ಈ ಕ್ಷಣಿಕವಾದ ವಿಜ್ಞಾನವು ಗಾಳಿಯಲ್ಲಿಟ್ಟ, ಮೇಲಿಂದ ಮೇಲೆ ಆರುತ್ತಿರುವ ದೀಪದಂತೆ ಇರುವದು. ವಿಜ್ಞಾನಧಾರೆಗೆ ಪ್ರವೃತ್ತಿಯೇ
ಮೂಲಾಧಾರವಾಗಿದೆ. ಈ ಪ್ರವೃತ್ತಿ ಕ್ಷಣ ಕ್ಷಣಕ್ಕೆ ಉದಯಿಸುವದು ಹಾಗೂ ನಶಿಸುವುದು ಕೊನೆಗೆ ಕ್ಷಣಿಕ ವಿಜ್ಞಾನಧಾರೆಯು ನಾಶವಾಗಿ ಉಳಿಯುವುದೇ ಮುಕ್ತಿಯು ಇದೇ ನಮ್ಮ ಮತವಾಗಿದೆ. ಸೂರ್ಯನಂತೆ ಪ್ರಕಾಶಮಾನವಾದ ಬುದ್ಧಿಯೇ ಆತ್ಮನು
ಕಾರಣ ಹೀನವಾದ ಮನವು ಆತ್ಮನಲ್ಲ ಅಂತಾ" ಬೌದ್ಧಮತವಾದಿಯು ಪೇಳಿದನು. 

🕉️ ಜಡಚೇತನಾತ್ಮಕ ಆನಂದಮಯಕೋಶವೇ ಆತ್ಮ 🕉️

ಇನ್ನೊಬ್ಬ ಮತವಾದಿಯು ಮುಂದೆ ಬಂದು "ಹೇ ಬೌದ್ಧಮತವಾದಿಯೇ ನಿನ್ನ ಮತ ನಿಜವಾದುದಲ್ಲ. ಇದು ಸುಬುದ್ದಿ ಇದು ಜಡ ಬುದ್ದಿ ಅಂತಾ ಅರಿಯತಕ್ಕವನು ಬೇರೆ ಇರುವನು ಆತನು ನಿರಂತರವಾಗಿ ಸ್ವಯಂ ಪ್ರಕಾಶಮಾನವಾಗಿ ಬೆಳಗುವಾತನೇ ಆತ್ಮನು'' ಅಂತಾ ವಿವರಿಸತೊಡಗಿದನು.

"ದೀಪದ ಬೆಳಕು ದರ್ಪಣದ ಮೇಲೆ ಬೀಳಲು ಅದರಂತೆ ಆಕಾರವಾಗಿ ಬೆಳಗುವಂತೆ, ಬೇರೆ ಇರುವ ಸ್ವಯಂ ಪ್ರಕಾಶಮಾನ ಆತ್ಮನು ಬುದ್ಧಿಯ ದರ್ಪಣದಲ್ಲಿ ಪ್ರತಿಬಿಂಬಿತನಾಗುವನು ವಿನಹಃ ಬುದ್ಧಿಯು ಆತ್ಮನಲ್ಲ, ನನ್ನ ಬುದ್ಧಿ ಮಂದವಾಗಿದೆಯೆನ್ನಲು ಬುದ್ದಿ ಬೇರೆ ಹಾಗೂ ನಾನು ಬೇರೆಯಾಗಿದ್ದರಿಂದ ಮಮಕಾರ ಬರುವುದು. ಕಾರಣ ಬುದ್ದಿ ಆತ್ಮನಲ್ಲ. ನೀನು ಹೇಳಿದ ಆತ್ಮ ಅಂದರೆ ಬುದ್ಧಿಗೆ ಹುಟ್ಟು ಸಾವುಗಳು ಕ್ಷಣ ಕ್ಷಣಕ್ಕೆ ಬರುವುದು ಅಂತಾ ಹೇಳಿದ್ದಕ್ಕೆ ವಿರೋಧ ಹೇಗೆಂದರೆ ಹಿಂದೆ ಅನುಭವಿಸಿದ್ದನ್ನು ಈಗ ಪೇಳುವರು, ಹಿಂದಿನ ಅನುಭವವನ್ನೇ ಸ್ಮರಣೆಗೆ ತಂದು ಕೊಂಡು ಕ್ಷಣಕ್ಷಣಕ್ಕೆ ಲಯಿಪನು ಆತ್ಮನಲ್ಲ. ಪೂರ್ವ ಸ್ಮರಣೆಯು ನಾಶವಾದರೆ ಸಾರ್ವಭೌಮನು ಮಾತಾ, ಪಿತ, ಸತಿ, ಮಕ್ಕಳು ಮೋಕ್ಷ ಸಾಧನೆ ಇವೆಲ್ಲವುಗಳನ್ನು ತಿಳಿಯದೆ ಇದ್ದರೆ ಸರ್ವರಲ್ಲಿ ಅವ್ಯವಸ್ಥೆ ತೋರುವುದು ಕಾರಣ ಇಂತಹ ನಿನ್ನ ಮತವು ಅಪಹಾಸ್ಯಕಾರಕವಾಗಿದೆ. ಕೇಳು ನನ್ನ  ಮತವನ್ನು, ಹೃದಯ ಗರ್ಭದಲ್ಲಿರುವ ಆತ್ಮನನ್ನು ಜಡ, ಚೇತನ ರೂಪದಿಂದಿರುವನೆಂದರೆ ನಿದ್ರೆಯಿಂದ ಎಚ್ಚರವಾದ ಕೂಡಲೇ  ಜಡತ್ವವನ್ನು ಹೊಂದಿ ನನಗೇನು ತಿಳಿಯಲಿಲ್ಲ ನಾನು ಮಲಗಿದ್ದೆ ಎನ್ನುವುದು ಜಡವು. ಅದನ್ನು ತಿಳಿಯುವುದು ಚೇತನ, ಸುಷುಪ್ತಿಯು ಜಡವಾಗಿರುವುದು, ಸುಷುಪ್ತಿಯಲ್ಲಿದ್ದೆನೆನ್ನುವುದು ಚೇತನವಾಗಿದೆ. ನಿದ್ರೆಯಲ್ಲಿ ಆನಂದವನ್ನು ಅನುಭವಿಸುವುದೇ ಆನಂದಮಯಕೋಶ. ಇದುವೇ ನಿಜವಾದ ಆತ್ಮವು. ಸ್ವಪ್ನ, ಜಾಗ್ರತ್ ಸುಷುಪ್ತಿ ಅವಸ್ಥೆಗಳನ್ನು ಅರಿಯುವ ಜ್ಞಾನವು ವ್ಯಾಪಕವಾದ ಆಕಾಶದಂತೆ ಪ್ರಕಾಶಮಾನವಾಗಿದೆ. ಕಾರಣ ಆನಂದಮಯಕೋಶವೇ ಆತ್ಮವು" ಅಂತಾ ಹೇಳಿದನು.

🕉️ ಶೂನ್ಯಮತ ✡️

ಕೂಡಲೇ ಶೂನ್ಯವಾದಿಯು ಮುಂದೆ ಬಂದು “ಅಯ್ಯಾ ಆನಂದಮಯ ಕೋಶವಾದಿಯೇ ಕೇಳು ಆಕಾಶದಂತೆ ಪ್ರಭೆ ಅಥವಾ ಹೀನಪ್ರಭೆಯುಳ್ಳವ ಆತ್ಮ ಅಂತಾ ಎರಡು ಪ್ರಕಾರ ಹೇಳುವದು ಸರಿಯಲ್ಲ ಕಾರಣ ಅಂಶವೇ ಆತ್ಮನಾಗಬೇಕಾದೀತು. ಸಾಂಶದಿ ಆತ್ಮನೆಂದರೆ ಶರೀರದಂತೆ ಉತ್ಪತ್ತಿ ಲಯಗಳು ಒಪ್ಪಬೇಕಾಗುತ್ತದೆ. ಹುಟ್ಟು ಸಾವು ಇರುವವನು ಆತ್ಮನಲ್ಲ. ಕಾರಣ ಈ ವಾದವು ಮಿಥ್ಯಾವಾದವಾಗಿದೆ. ಆದಿ ಅಂತ್ಯಗಳಿಲ್ಲದಿರುವುದೇ ಆತ್ಮನು. ಭಾವಶೂನ್ಯತೆಯ ಸದ್ರೂಪವೇ ಆತ್ಮನು ಅಂತಾ ಹೇಳಿದನು.

🕉️ ಪ್ರಭಾಕರಮತ ✡️

ನೈಯಾಯಿಕ ವಾದಿಗಳಲ್ಲಿ ಪ್ರಭಾಕರನು ಇದನ್ನು ಖಂಡಿಸಿದನು 'ಶೂನ್ಯವು  ಆತ್ಮನಲ್ಲ, ಹೇ ಶೂನ್ಯವಾದಿಯೇ ನೀನು ಶೂನ್ಯವನ್ನು ಅನುಭವಿಸಿ ಹೇಳಿದಿಯೋ?  ಅಥವಾ ಅನನುಭವದಿಂದ ಹೇಳಿದಿಯೋ? ನೀನು ಅನುಭವಿಸಲಿಲ್ಲವೆಂದರೆ ಶೂನ್ಯವೇ  ಇಲ್ಲದಂತಾಯಿತು. ಇಲ್ಲದಂತಾಯಿತು ಮತ್ತು ಅನುಭವಿಸಿ ಹೇಳಿರುವೆ  ಅಂತಾ ನುಡಿಯಲು, ನೀನು ಯಾವುದರಿಂದ ಶೂನ್ಯವನ್ನು ಅನುಭವಿಸಿರುವಿಯೋ ಅದೇ ಅತ್ಮ ನಿಜವೆಂದು ಸಿದ್ಧವಾಗುವುದು ಮತ್ತು ಆ ಶೂನ್ಯಕ್ಕೆ ನೀನು ಬೇರೆಯಾಗಿರುವಿ ಅಂತಾ ಬೆಳಕಿಗೆ ಬರುವದು. ಆತ್ಮಕ್ಕೆ ಮನದ ಸಂಯೋಗವಾಗಲು ಜ್ಞಾನವು ಉದಯಿಸುವುದು. ಜ್ಞಾನದ ಈ ಗುಣದಿಂದ ಆತ್ಮನು ತಾನು ಚೇತನನೆನಿಸುವನು ಒಳ್ಳೇದು ಕೆಟ್ಟದ್ದು, ಪ್ರಯತ್ನ, ಜಡ, ಸುಖ, ದುಃಖ ದ್ವೇಷದ ಇಚ್ಚೆ, ದಾನ, ಧರ್ಮಾಧರ್ಮ ತಾವು ಮಾಡದೇ ಇರುವದು ಆತ್ಮನ ಸ್ವಭಾವಜನ್ಯ ಗುಣಗಳು. ಈ ಪ್ರಕಾರ ಇರಲು ಆನಂದಮಯ ಕೋಶವೇ ಆತ್ಮ. ವಿಚಾರ ಮಾಡಲು ವಿಜ್ಞಾನಮಯಕೋಶದಲ್ಲಿಯ ಬುದ್ದಿಯು ಆತ್ಮನ ಜ್ಞಾನಗುಣವಾಗಿದೆ. ಆನಂದಮಯ ಕೋಶದಲ್ಲಿ ಅಡಗಿರುವ ಚೇತನ ಜಡವಾಗಿರುವ ಆತ್ಮನು ಚೇತನಯುಕ್ತನಾಗಿರುವನು. ಇದು ಸತ್ಯವು ಆನಂದಮಯಕೋಶವೇ ನಿತ್ಯಜ್ಞಾನ ಸ್ವರೂಪ ಜೀವನು. ಹೀಗೆ ಸಿದ್ಧಿಯಾಗುವುದು. ಬುದ್ದಿಯು ಆತ್ಮನ ಗುಣವಾಗಿದೆ ಆನಂದಮಯಕೋಶವೇ ನಿಜವಾದ ಆತ್ಮನು' ಅಂತಾ ವಾದಿಸಿದರು.

ಈ ಪ್ರಕಾರ ಷಣ್ಮತವಾದಿಗಳು ಮಾಡಿದ ವಾದ ವಿವಾದಗಳನ್ನು ಅರಿತುಕೊಂಡ ರಾಜನು ಶಾಂತನಾಗದೆ 'ಹೇ ಷಣ್ಮತವಾದಿಗಳೇ ನಿಮ್ಮ ನಿಮ್ಮ ಮತಗಳ ವಾದಗಳಿಂದ ಅತ್ಯಂತ ದುಃಖ ನಿವೃತ್ತಿ ಪರಮಾನಂದ ಪ್ರಾಪ್ತಿಯ ಸಾಧನೆಗಳು ತೋರಲಿಲ್ಲ. ಇವುಗಳಿಂದ ಯಾವುದೇ ಪ್ರಯೋಜನವಾಗಲಾರದು' ಅಂತಾ ತನ್ನ ವ್ಯವಹಾರಿಕವಾದ ಪ್ರತಿಕ್ರಿಯೆಯನ್ನು ತೋರ್ಪಡಿಸಿದನು.

🌷 ಷಣ್ಮತಗಳ ಪರಾಭವ🕉️

ಆಗ ಸಿದ್ದಾರೂಢ ಭಾರತಿಯು ತನ್ನ ಗುರುಗಳನ್ನು ಹೃತ್ಕಮಲದಲ್ಲಿ ಧ್ಯಾನ ಮಾಡುತ್ತಾ ಸರ್ವ ಪ್ರಜರನ್ನು ಮಕ್ಕಳಂತೆ ಪಾಲನೆ ಮಾಡಿ ಪ್ರಜಾವಾತ್ಸಲ್ಯ ಪರಿಪೂರ್ಣ ಉತ್ತಮ ಅಧಿಕಾರಿಯಾದ ರಾಜನಿಗೆ ಹೇಳತೊಡಗಿದನು. "ಹೇ ರಾಜನ್ ಆರು ಜನ ಕುರುಡರು ದೊಡ್ಡದಾದ ಆನೆಯನ್ನು ಮುಟ್ಟುತ್ತಾ, ತಮ್ಮ ತಮ್ಮ ಮನದಲ್ಲಿ ನಾನಾ ರೀತಿಯಾಗಿ ಆಲೋಚಿಸುತ್ತ, ಆನೆಯ ಕಾಲನ್ನು ಹಿಡಿದ ಅಂಧನು ಆನೆಯು ಕಂಬದಂತೆ, ಸೊಂಡಿಲನ್ನು ಹಿಡಿದ ಕುರುಡನು ಆನೆಯು ಕಹಳೆಯಂತೆ, ಹೊಟ್ಟೆಯನ್ನು ಹಿಡಿದವನು ನಗಾರಿಯಂತೆ, ಕಿವಿಯನ್ನು ಹಿಡಿದ ಕುರುಡನು ಆನೆಯು ಮರದಂತೆ, ಒನಿಕೆಯಂತೆ, ಬಾಲ ಹಿಡಿದು ಕಸಬರಿಗೆಯಂತೆ ಈ ಪ್ರಕಾರ ಆನೆಯ ವರ್ಣನೆ ಮಾಡಿದಲ್ಲಿ ಕಣ್ಣುಗಳಿಂದ ನೋಡಿದವನು ಇದಕ್ಕೆ ಒಪ್ಪಬಹುದೆ? ಈ ಪ್ರಕಾರ ಷಣ್ಮತವಾದಗಳಿವೆ. ಜ್ಞಾನ ಶೂನ್ಯರು ತಮ್ಮಲ್ಲಿ ಆತ್ಮನು ವ್ಯಾಪಿಸಿರುವುದನ್ನು ತಿಳಿದುಕೊಳ್ಳದೆ ಏಕದೇಶೀವಾದ, ಮಮಕಾರವೆನಿಪ ಹೀನಕೋಶಗಳನ್ನೇ ಒಬ್ಬೊಬ್ಬರು ಆತ್ಮನು ಅಂತಾ ಅನ್ನುತ್ತಿರುವರು. ಹೇ ರಾಜನೇ ಪರಬ್ರಹ್ಮಜ್ಞಾನರೂಪದ ಮಹಾತ್ಮನು  ದಿವ್ಯಜ್ಞಾನಿಯುಳ್ಳವನು ಇದಕ್ಕೆ ಒಪ್ಪಲಾರನು. ಚೇತನವೇ  ಆತ್ಮನೆನಲು ಕಡು ಸುಷುಪ್ತಿಯಲ್ಲಿ ನಾನು ಮಲಗಿದ್ದೆ, ಸುಖವನ್ನು ನಾನರಿಯೆನೆಂದು ಅನುಭವದ ಸ್ಮರಣೆಯನ್ನು ಅರಿತುಕೊಂಡೇ ಹೇಳವೇನು, ಇದರಿಂದ ಜಡವು ಆತ್ಮನಲ್ಲ. ಇದನ್ನು ತಿಳಿದುಕೊಳ್ಳದೆ ವಾದ ಮಾಡುವರು. ಇನ್ನು ತನ್ನಿಂದ ಯಾವ ವಸ್ತುವು ಆರಿಸಿಕೊಳ್ಳುವುದೋ ಅದು ಮೊದಲಿಗೆ ಜಡವಿರುವದು. ಅದರಂತೆ ಅಸತ್ಯವಾದ ಪಂಚಕೋಶಗಳನ್ನು ಅರಿಯುವ ಆತ್ಮನು ಬೇರೆಯಾಗಿದ್ದಾನೆ. ಕಾರಣ ಪಂಚಕೋಶವು ಜಡವಾಗಿದೆ ಮತ್ತು ಅನಿತ್ಯವಾಗಿದೆ. ಈ ಪ್ರಕಾರವಿದ್ದರೂ ಇವುಗಳಿಗೆ ಆತ್ಮನೆಂದರೆ ಮೋಕ್ಷಸಾಧನೆಯ ಮಾರ್ಗಗಳೆಲ್ಲ ವ್ಯರ್ಥವಾಗುವವು. ಕಾರಣ ಅಂತರಂಗವನ್ನು ಅರಿತುಕೊಳ್ಳದೇ ವೇದಾಂತದಲ್ಲಿ ವಿಶ್ವಾಸವಿಲ್ಲದೆ ಭ್ರಾಂತಿಯಿಂದ ಕೋಶಗಳನ್ನೇ ತಾವು ಆತ್ಮನೆನ್ನುತ್ತಿರುವರು. ಸೂರ್ಯನಾರಾಯಣನಿಗೆ ಕಾರ್ಮೋಡಗಳ ಆವರಣವಾದಂತೆ ಆತ್ಮನಿಗೆ ಈ ಐದು ಪಂಚಕೋಶಗಳು ಮುಸುಕಿವೆ. ಹೇ ರಾಜನೇ, ಜೀವನಿಗೆ ಈ ಕೋಶಗಳು ಮುಸುಗಿದಂತೆ ಈಶನಿಗೂ ಆತನ ಕೋಶಗಳು ಮುಸುಕಾಗಿವೆ. 

ಜೀವನ ದೃಷ್ಟಿಗೆ ಜಡವಾದ ಭ್ರಾಂತಿದಾಯಕ ಕೋಶಗಳು ಆವರಣವಾದಂತೆ, ಆದಿ ದೇವನ ಸತ್ಯರೂಪಕ್ಕೆ ಆದಿದೇವನ ಕೋಶಗಳು ಆದಿ ದೇವನ ದೃಷ್ಟಿಗೆ ಆವರಿಸಲಾರವು. ಪರಮ ಸಾಕ್ಷಿಕ ಸರ್ವವ್ಯಾಪಕ ನಿತ್ಯ ಮಾಯಾತೀತನು ಆವರಣ ರಹಿತನು ತಾನು ಈ ಪ್ರಕಾರ ಇರಲಿಕ್ಕೆ ಕೆಲವರು ತತ್‌ಪದದ ಲಕ್ಷ್ಯವನ್ನು ತೊರೆದು ಹರುಷಮಯ ಕೋಶಯುತ ಅಂತಾ ತತ್ ಪದ ವಾಕ್ಯಕ್ಕೆ ಪರಮನು ಎಂದು ಪರಶಿವನ, ಹಿರಣ್ಯಗರ್ಭನ, ಹರಿಯ, ಶಕ್ತಿಯ, ಕವಿಯ, ಅಗ್ನಿಯ ಮೊದಲಾದ ಮೂರ್ತಿಗಳ ಕುರಿತು ಉಪಾಸನೆ ಮಾಡುವ ಉಪಾಸಕರು ನಿಜಮುಕ್ತಿಯ ಬಗ್ಗೆ ತಿಳಿದುಕೊಳ್ಳದೆ,  ಸಕಾಮ ಕರ್ಮಗಳನ್ನು ಮಾಡುತ್ತಾ ಅದರ ಫಲರೂಪ ಅನೇಕ ಜನ್ಮಗಳನ್ನು ಹೊಂದುತ್ತಲಿರುವರು. ಮೋಸಗೊಳಿಸುವ ಈ ಫಲಗಳೇ ಸಹಜ ಮುಕ್ತಿಯೆನ್ನುತ ಸುಖದ ಭ್ರಮೆಯಿಂದ ಕಷ್ಟಪಡುವರು. ದೋಷರಹಿತ ಬ್ರಹ್ಮವಿದ್ಯೆಯಲ್ಲಿ ನಿಜವಾದ ಮುಕ್ತಿಯಿದೆಯಲ್ಲದೆ ಬೇರೆ ಸಾಧನಗಳನ್ನು ಯಾಕೆ ತೊಂದರೆಯಿಂದ ಮಾಡಬೇಕು. ಹೇ ರಾಜನೇ ಚಿತ್ತವಿಟ್ಟು ಕೇಳು ಅತ್ಯಂತ ದುಃಖ ನಿವೃತ್ತಿ ಪರಮಾನಂದ ಪ್ರಾಪ್ತಿಯೇ ನಿಜವಾದ ಮುಕ್ತಿಯು ಎಂದು ತಿಳಿದುಕೊ. ತಾನು ಚಿತ್ತದಲ್ಲಿ ಕೋಶಗಳನ್ನು ಅರಿಯುತ್ತ ಒಂದೊಂದನ್ನೇ ಬೇರ್ಪಡಿಸುತ್ತ ಮುಂದೆ ಸಾಗಲು ಉಳಿಯುವುದೇ ತನ್ನ ನಿಜವಾದ ಸ್ವರೂಪ. ಈ ಪ್ರಕಾರ ಹೇಳುತ್ತಿರುವ ಸಿದ್ದ ಬಾಲಕನ ನುಡಿಗಳನ್ನು ಭಕ್ತಿಯಿಂದ ಕೇಳಿದವರೆಲ್ಲರೂ ಈ ಬಾಲಕನು ಪರಶಿವನವತಾರಿಯು, ನರನಲ್ಲ ಅಂತಾ ನುಡಿದರು. ಆಶ್ರಮದ ಸ್ವಾಮಿಗಳಾದ ಶಾಂತಸ್ವಾಮಿಯು ಅತೀವ ಹರ್ಷದಿಂದ ಸಿದ್ದ ಬಾಲಕನನ್ನು ಕುರಿತು 'ಹೇ ಕಂದನೇ ನೀನು ವೇದಾಂತಕೇಸರಿ' ಅಂತಾ ನಮಸ್ಕರಿಸಿದರು.
ಆಗ ರಾಜಾಜ್ಞೆಯಂತೆ ಬೇಗನೆ ಸಭೆಯನ್ನು ಮುಕ್ತಾಯಗೊಳಿಸುತ್ತ ಸಿದ್ಧನ ವರ್ಣನೆ ಮಾಡುತ್ತಾ ಎಲ್ಲರೂ ನಡೆದರು.

ಪ್ರಾಪ್ತವಾಗುವುದು

👇👇👇👇👇👇👇👇👇👇👇👇👇👇

ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜನ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ, ಬೇರೆಯರಿಗೂ share ಮಾಡಿ, ಅವರಿಗೂ help ಮಾಡಿ ಅಜ್ಜನ ಕೃಪೆಗೆ ಪಾತ್ರರಾಗಿರಿ

ಈ link ಒತ್ತಿ 👉 📖 👈 ಒತ್ತಿ


ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
👉ಸಾದುಚಕ್ರವರ್ತಿ ಸಿದ್ಧರಿಂದ ಆನೆಗೊಂದಿ ಅರಸನಿಗೆ ಜ್ಞಾನೋಪದೇಶ
ಎಲ್ಲಾ  ಕಥೆಗಳ ಲಿಂಕಗಳು 
👉ಸಿದ್ಧಾರೂಢ ಭಾಗವತ ಕಥಾ ಸಂಗ್ರಹ 👉🛃
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 
1)WhatsApp shareಗಾಗಿ click ಮಾಡಿ📲☎️
2)Facebook shareಗಾಗಿ👉
3)

«««««ಓಂ ನಮಃ ಶಿವಾಯ »»»»»»»

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ