ಗೋಕರ್ಣದಿಂದ ಹೊರಟ ಸಿದ್ಧರಿಂದ ಉಜ್ಜಯಿನಿ ಮಹಾಕಾಳಿ , ಮಥುರಾ ದರ್ಶನ
ಗೋಕರ್ಣದಿಂದ ಹೊರಟ ಸಿದ್ಧರಿಂದ ಉಜ್ಜಯಿನಿ, ಮಥುರಾ ದರ್ಶನ
ನಂತರ ಗೋಕರ್ಣ ಕ್ಷೇತ್ರದಿಂದ ಹೊರಟ ಸಿದ್ಧನು ಉಳವಿಗೆ ಬಂದು, ಆ ಕ್ಷೇತ್ರ ದರ್ಶನವಾದ ನಂತರ ಕಾಡು, ಅಡವಿಗಳಲ್ಲಿ ಸಂಚರಿಸುತ್ತಾ ಹುಬ್ಬಳ್ಳಿ ಮುಖಾಂತರ ಪಂಢರಪುರಕ್ಕೆ ಆಗಮಿಸಿದನು. ಅಲ್ಲಿ ಪಂಢರಿನಾಥನ ದರ್ಶನ ಪಡೆದು ಕಲ್ಯಾಣ ಪಟ್ಟಣಕ್ಕೆ ಬಂದು ಅಲ್ಲಿ ದೇವಸ್ಥಾನಗಳನ್ನು ನೋಡುತ್ತಾ ನಾಶಿಕಕ್ಕೆ ಬಂದನು. ಗೋದಾವರಿ ತೀರ್ಥದಲ್ಲಿ ಸ್ನಾನ ಮಾಡಿ, ಭಿಕ್ಷೆ ಬೇಡಿ ಭೋಜನ ಮಾಡಿದನು. ಪಂಚವಳಿಯ ಗುಪ್ತವಾದ ಗುಹೆಯಲ್ಲಿರುವ ನಾರಾಯಣನ ದರ್ಶನ ಮಾಡುತ್ತಾ ಮುಂದೆ ಸಾಗಿ ತ್ರ್ಯ0ಬಕೇಶ್ವರ ಮೂರ್ತಿಯ ದರ್ಶನ ಮಾಡಿ ಅಲ್ಲಿಂದ ಮುಂದೆ ನಡೆದನು. ಠಾಕುರಜಿ ಮೂರ್ತಿಯ ದರ್ಶನ ಪಡೆದು ಸಂಚರಿಸುತ್ತಾ ದ್ವಾರಕಾ ಪಟ್ಟಣಕ್ಕೆ ಬಂದನು. ಅಲ್ಲಿ ಗೋಮತಿ ತೀರ್ಥದಲ್ಲಿ ಸ್ನಾನ ಮಾಡಿ ಸಂಚರಿಸುತ್ತಾ ಶ್ರೀ ವಿಷ್ಣುಪಾದ ಹಾಗೂ ಸುಂದರನೂ ಆಕರ್ಷಣೀಯನಾದ ದ್ವಾರಕಾನಾಥನ ದರ್ಶನ ಪಡೆದು ಆನಂದದಿಂದ ಆ ದೇವಾಲಯದ ಹೊರಗಡೆ ಬಂದ ಕೂಡಲೇ ವೈಷ್ಣವ ಯತಿಯು ಭೆಟ್ಟಿಯಾದನು. ಸಿದ್ಧನಿಗೆ ಆತನು ಮಾತನಾಡಿಸುತ್ತಾ, “ನೀವು ಈ ಜಗತ್ತನ್ನು ಮಾಯಾ ಕಾರ್ಯಗಳೆಂದು ಹೇಳುವಿರಲ್ಲವೆ?” ಮಾಡಿದ ಪ್ರಶ್ನೆಗೆ ಸಿದ್ದನು ಹೌದು ಅಂತಾ ಉತ್ತರಿಸಿದನು. ಪುನಃ ಆ ವೈಷ್ಣವ ಯತಿಯು ಸಿದ್ದನನ್ನು ಕುರಿತು ಹಾಗಾದರೆ ತೋರತಕ್ಕ ಈ ಪ್ರಪಂಚವು ವ್ಯಾವಹಾರಿಕವೋ ಅಥವಾ ಬ್ರಾಂತಿಭಾಸಿಕ ತೋರಿಕೆಯೋ ಎಂದು ಪ್ರಶ್ನಿಸಲು, ಸಿದ್ಧನು ಉತ್ತರಿಸುತ್ತಾ ಸ್ವಪ್ನದಂತೆ ಆಭಾಸ. ಇದಕ್ಕೆ ಆಧಾರ ಕೇಳಿದರೆ ಬ್ರಹ್ಮನೇ ''ಆಧಾರ” ಅಂತಾ ಹೇಳಿದನು. ಆಗ ಆ ಯತಿಯು ತನ್ನ ಪ್ರಶ್ನೆಗಳನ್ನು ಮುಂದುವರೆಸುತ್ತ “ಬ್ರಹ್ಮನ ಆಧಾರದಲ್ಲಿ ತೋರುತ್ತಿರುವುದರಿಂದ ಬ್ರಹ್ಮಜ್ಞಾನಿಗೆ ಸ್ವಪ್ನವು ತೋರಬಾರದು. ಮುಮುಕ್ಷುವಿಗೆ ತತ್ ತ್ವಂ ಪದಗಳ ಸಾರದ ಆತ್ಮಜ್ಞಾನವಾಗಲು ಅವನಿಗೆ ಸ್ವಪ್ನವು ತೋರಬಾರದು ಅಂತಾ ಕಂಡು ಬರುವದು. ಇದಕ್ಕೆ ನಿಮ್ಮ ಅಭಿಪ್ರಾಯವೇನು” ಅಂತಾ ಕೇಳಿದನು.
ಈ ಪ್ರಶ್ನೆಗೆ ಸಂತಸಭರಿತನಾಗಿ ಸಿದ್ಧನು ಉತ್ತರಿಸುತ್ತಾ ಅಯ್ಯಾ ಯತಿಯೇ ಚಿತ್ತವಿಟ್ಟು ಕೇಳು ಜಾಗ್ರತ್ ಅವಸ್ಥೆಯಲ್ಲಿ ನೇತ್ರಗಳಲ್ಲಿದ್ದುಕೊಂಡು ಈ ದೇಹದ ಅಖಂಡ ಚೇತನದಾಶ್ರಯದಲ್ಲಿಯ ವಿಶ್ವಜೀವನು ತೋರತಕ್ಕ ಸರ್ವ ಜಗತ್ತನ್ನು ಕಾಣುತ್ತಾ, ಕೇಳುತ್ತಾ ಆತನ ಚಿತ್ತದಲ್ಲಿ ನಾನಾತರದ ಸಂಸ್ಕಾರಗಳನ್ನು ಪಡೆಯುವನು. ನಂತರ ಕಂಠದಲ್ಲಿರುವ ಸೂಕ್ಷ್ಮ ಶರೀರದಲ್ಲಿ ಅವೆಲ್ಲ ಸಂಸ್ಕಾರಗಳು ಅಳವಡಿಸಲ್ಪಡುವವು. ರಾಜಸಗುಣದಿಂದಿರುವ ತೈಜಸ ಜೀವನದಲ್ಲಿ ಅವೆಲ್ಲವು ಹೊಂದಿಕೊಳ್ಳಲು ಅದೇ ಸ್ವಪ್ನವಾಗುವದು. ಸುಪ್ತಿಯನ್ನು ಅರಿಯುವ ಪ್ರಾಜ್ಞನಾಮಕ ಜೀವ ಚೇತನದಲ್ಲಿ ಮತ್ತೆ ಅಡಗುವಿಕೆ ಮತ್ತೆ ತೋರುವದೇ ಸ್ವಪ್ನವು. ಇದಕ್ಕೆ ಆಶ್ರಯ ಪ್ರಾಜ್ಞಜೀವ ಅಂತಾ ಹೇಳಲು ಯತಿಯು ಒಪ್ಪಿಕೊಂಡು ತಲೆದೂಗಿದನು.
ನಂತರ ವೈಷ್ಣವನೊಬ್ಬನು ದೇವಾಲಯಕ್ಕೆ ಬಂದು ದೇವರ ದರ್ಶನ ಪಡೆದನು. ಆ ದಿನ ಆತನು ಮಾಡಿದ ಉಪವಾಸ ವ್ರತ ಮುಕ್ತಾಯವಾಗಿದ್ದರಿಂದ ಪಾರಣಿಯ ಊಟಕ್ಕೆ ಪುಣ್ಯಪ್ರಾಪ್ತಿಗಾಗಿ ಅತಿಥಿಗಳನ್ನು ಕರೆಯಬೇಕೆಂಬ ರೂಢಿಯಂತೆ ಮಹಾ ಮಹಿಮನಾದ ಸಿದ್ಧನನ್ನು ಗುರ್ತೈಸಿ, ಆತನನ್ನು ಆದರದಿಂದ ತನ್ನ ಮನೆಗೆ ಕರೆದುಕೊಂಡು ಹೋಗಿ ಪೂಜಾ ಮಾಡಿ ಭಯ ಭಕ್ತಿಯಿಂದ ಭೋಜನ ಮಾಡಿಸಿದನು.
ಮೃಷ್ಟಾನ್ನ ಭೋಜನದಿಂದ ತೃಪ್ತನಾದ ಸಿದ್ಧನು ಆ ಬ್ರಾಹ್ಮಣ ಪರಿವಾರಕ್ಕೆ ಸಕಲ ಸೌಭಾಗ್ಯಗಳನ್ನು ಪರಮಾತ್ಮನು ದಯಪಾಲಿಸಲಿ ಅಂತಾ ಶುಭಾಶೀರ್ವಾದ ಮಾಡಲು ಆ ಬ್ರಾಹ್ಮಣನು ಕೃತಜ್ಞತಾಪೂರ್ವಕ ವಂದನೆಗಳನ್ನು ಸಲ್ಲಿಸಿ ಸಿದ್ಧನಿಗೆ ಬೀಳ್ಕೊಟ್ಟನು.
ಅಲ್ಲಿಂದ ಹೊರಟ ಸಿದ್ದನು ಉಜ್ಜಯಿನಿಗೆ ಬಂದನು. ಅಲ್ಲಿಯ ಕಾಳಿಕಾ ದೇವಾಲಯವನ್ನು ಪ್ರವೇಶಿಸಿದನು ಕಾಳಿಕಾದೇವಿಯ ಮೂರ್ತಿಯನ್ನು ನೋಡುತ್ತಾ ನನ್ನ ಪರಮ ಚೈತನ್ಯಾಂಶ ಶಕ್ತಿಯಾಗಿರುವ ಈ ದೇವಿ ಈ ಪೀಠದಲ್ಲಿ ಕಾಳಿಕಾನಾಮದಿಂದ ಆಸೀನಳಾಗಿರುವಳು ಅಂತಾ ನಮಸ್ಕರಿಸಿದನು. ಅಲ್ಲಿಂದ ಮುಂದೆ ಸಾಗಿ ಓಂಕಾರೇಶ್ವರಕ್ಕೆ ಆಗಮಿಸಿದನು. ದೂರಗಾಮಿ ದೃಷ್ಟಿಯಿಂದ ಕರುಣಾರಸಭರಿತ ಮುನಿಗಳು ಲೋಕೋದ್ಧಾರಕ್ಕಾಗಿ ಮಾನವ ಮಾತ್ರನಲ್ಲಿ ಭಕ್ತಿಯನ್ನು ಜಾಗೃತಿ ಮಾಡುವ ಸಲುವಾಗಿಯೇ ಯುಕ್ತಿಯಿಂದ ಕೋಟಿ ಲಿಂಗಗಳ ಪ್ರತಿಷ್ಠಾಪನೆ ಮಾಡಿರಬಹುದಲ್ಲವೇ ಅಂತಾ ಭಾವನೆಯಿಂದ ಪ್ರಕಾಶಮಾನವಾದ ಆ ಸರೋವರ ನೋಡುತ್ತಲಿದ್ದನು. ಅಲ್ಲಿಂದ ಬ್ರಹ್ಮಪುರಿಗೆ ಬಂದು “ನಿಬಾನಿ' ಎನಿಸುವ ಕಡಲಿನ ಆಖಾಡದಲ್ಲಿ ಸಾಧುಗಳ ದರ್ಶನ ಪಡೆದನು. ರುದ್ರಪುರಿಗೆ ನಡೆದು ಓಂಕಾರೇಶನ ಮೂರ್ತಿಯ ದರ್ಶನ ಪಡೆದು ಕೆಳಗಿನ ಸರೋವರಕ್ಕೆ ಆಗಮಿಸಿದನು. ಆ ಸರೋವರದಲ್ಲಿಯ ಮೀನುಗಳಿಗೆ ಜನರು ಅನ್ನವನ್ನು ಹಾಕುತ್ತಿರುವದನ್ನು ಕಂಡು, ಪರಮಾತ್ಮನು ತಾನಾಗಿ ಹುಟ್ಟಿಸಿದ ಪ್ರಾಣಿಗಳಿಗೆ ಅನ್ನ ಕೊಡುವ ವ್ಯವಸ್ಥೆ ಮಾಡಿರುವ ಕಾರಣ ನಾನೇಕೆ ಅನ್ನಕ್ಕಾಗಿ ಪ್ರಯತ್ನ ಮಾಡಬೇಕು ಎಂಬ ಭಾವನೆಯಿಂದ ಸ್ವಸ್ಥಚಿತ್ತನಾಗಿ ಕುಳಿತು ಧ್ಯಾನಸ್ಥನಾದನು. ಅದೇ ಸಮಯಕ್ಕೆ ಸಂತೋಷಭರಿತನಾಗಿ ಮೀನುಗಳಿಗೆ ಯಥೇಚ್ಛವಾಗಿ ಓರ್ವನು ಅನ್ನವನ್ನು ಹಾಕುತ್ತಿರುವಾಗ ಎದುರಿಗೆ ಕೂತ ಸಿದ್ಧನನ್ನು ನೋಡಿದನು.
ಮಹಾಮಹಿಮನ ಸ್ಥಿತಿಯನ್ನು ಗಮನಿಸಿ ಅವನಲ್ಲಿ ಆಕರ್ಷಿತನಾಗಿ ತನ್ನ ಮನದೊಳಗೆ ಸಿದ್ದನ ಕುರಿತು "ಹಿಂದಕ್ಕೆ ಸರೋವರದಲ್ಲಿ ಮಚ್ಚಾವತಾರದಿಂದ ಅವತರಿಸಿದ ಹರಿಯೇ ಈತನು'' ನರರೂಪದಿಂದ ಬಂದಿರುವನು. ಈತನಿಗೆ ನಾನು ತಂದ ಫಲ ಪಕ್ವಾನ್ನಗಳ್ನು ಅರ್ಪಿಸಬೇಕು ಎಂದು ಅನ್ನುತ್ತಾ ಸಿದ್ಧನಲ್ಲಿಗೆ ಧಾವಿಸಿ ಬಂದನು. ನಯವಿನಯದಿಂದ ಸಿದ್ದನಲ್ಲಿ ಪ್ರಾರ್ಥಿಸುತ್ತಾ ಈ ಪಕ್ಷಾನ್ನ ಫಲ ಸ್ವೀಕರಿಸಬೇಕೆಂದು ಕೇಳಿಕೊಂಡನು. ಆಗ ಸಿದ್ಧನು ತನ್ನಲ್ಲಿ ಹೇ ಪರಶಿವನೇ, ಸೋಮಶೇಖರನೇ, ನಿನ್ನ ಮಹಿಮೆಗಳನ್ನು ತಾಮಸರಿಗೆ ಹೇಗೆ ತಿಳಿಯಬೇಕು. ಸಕಾಮಿಗಳು ಕರ್ತವ್ಯ ಅಂತಾ ವ್ಯರ್ಥವಾಗಿ ಕೆಡುವರು. ನಿನ್ನ ಧ್ಯಾನವನ್ನು ನಿಷ್ಕಾಮನೆಯಿಂದ ಮಾಡಿದರೆ ತಾನಾಗಿಯೇ ಫಲ ದೊರೆಯುವದು ಅಂತಾ ಅಂದುಕೊಳ್ಳುತ್ತಾ ಎದುರಿಗಿದ್ದ ಪಕ್ವಾನ್ನ ಮತ್ತು ಫಲಗಳನ್ನು ತನ್ನ ಹಸಿವೆಗೆ ನೀಗುವಷ್ಟು, ತೃಪ್ತಿಯಿಂದ ಸೇವಿಸಿದನು. ಉಳಿದ ಅನ್ನವನ್ನು ಮೀನುಗಳಿಗೆ ಹಾಕು ಅಂತಾ ಆತನಿಗೆ ಹೇಳಿದನು. ಸಿದ್ದನು ಭೋಜನ ಸ್ವೀಕರಿಸಿದ್ದಕ್ಕೆ ಆನಂದೋಲ್ಲಾಸಗಳಿಂದ ಆತನು ಸಿದ್ಧನ ಚರಣಾರವಿಂದಗಳಲ್ಲಿ ಶಿರವನ್ನಿಟ್ಟು ವಂದನೆಗಳನ್ನು ಸಲ್ಲಿಸಲು ಆತನಿಗೆ ಸಿದ್ಧನು ಶುಭಾಶೀರ್ವಾದ ಮಾಡಿ ಅಲ್ಲಿಂದ ಮುoದೆ
ಸಾಗಿದನು.
ಸಂಚರಿಸುತ್ತ ಮಥುರಾಪುರಗೆ ಆಗಮಿಸಿ ಆತ್ಮಾರಾಮನೇ ಬಹಿರಂಗವಾಗಿರುವನೆಂದು ಅಲ್ಲಿಯ ಶ್ರೀರಾಮ ಮೂರ್ತಿಯ ದರ್ಶನ ಪಡೆದ ಸಿದ್ದನು ಮುಂದೆ ಸಾಗಿ ರಾಧಾಕೃಷ್ಣ ಮೂರ್ತಿಯ ದರ್ಶನ ಪಡೆದನು. ನಂತರ ಮುರಲೀಧರ ದರ್ಶನ ಮಾಡಿ ಗೋಕುಲಕ್ಕೆ ಬಂದು ವೃಂದಾವನಕ್ಕೆ ಆಗಮಿಸಿದನು. ದ್ವಾಪರ ಯುಗದಲ್ಲಿ ಚಿಕ್ಕ ಗೋಪಾಲಿಕೆಯರ ಕೂಡ ಪ್ರೇಮ ಭಕ್ತಿರಸ ಸಾಗರೋಪಾದಿಯಲ್ಲಿ ಉಕ್ಕುವಂತೆ ಶ್ರೀಕೃಷ್ಣನು ಮಾಡಿದ ರಾಸಕ್ರೀಡೆಯ ಸ್ಥಾನವನ್ನು ಕಂಡು ಸಿದ್ದನು ಹರ್ಷಪಟ್ಟನು.
ಪ್ರಾಪ್ತವಾಗುವುದು
👇👇👇👇👇👇👇👇👇👇👇👇👇👇
ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
ಎಲ್ಲಾ ಕಥೆಗಳ ಲಿಂಕಗಳು
👉ಸಿದ್ಧಾರೂಢ ಭಾಗವತ ಕಥಾ ಸಂಗ್ರಹ 👉🛃
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ
1)WhatsApp shareಗಾಗಿ click ಮಾಡಿ📲☎️
2)Facebook shareಗಾಗಿ👉
3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚
«««««ಓಂ ನಮಃ ಶಿವಾಯ »»»»»»»
