ಮುಳಗುವ ಹಡಗದಲ್ಲಿದ್ದ ಲಕ್ಷ್ಮಿಬಾಯಿ ಸದ್ಗುರುವನ್ನು ಪ್ರಾರ್ಥಿಸಿದ ಕೂಡಲೇ ಆತನು ದೋಣಿಯನ್ನು ತೆಗೆದುಕೊಂಡು ಬಂದು ರಕ್ಷಿದ ಕಥೆ

 🌿ಲಕ್ಷ್ಮೀಬಾಯಿಯು ಮುಳಗುತ್ತಿರುವ  ಹಡಗದಲ್ಲಿರುವಾಗ, ಸದ್ಗುರುವನ್ನು ಪ್ರಾರ್ಥಿಸಿದ ಕೂಡಲೇ ಆತನು ದೋಣಿಯನ್ನು ತೆಗೆದುಕೊಂಡು ಬಂದು ಅವಳನ್ನು ರಕ್ಷಿಸಿದ ಕಥೆ,



ಸಮುದ್ರ ತೀರದಲ್ಲಿ ಕುಂದಾಪುರವೆಂಬ ಒಂದು ನಗರವಿರುವುದು. ಅಲ್ಲಿ ಶ್ರೀಧರ ಎಂಬ ನಾಮವುಳ್ಳ  ಒಬ್ಬ ಚತುರನಾದ ಬ್ರಾಹ್ಮಣನಿರುವನು. ಆತನ ಪತ್ನಿಯಾದ ಲಕ್ಷ್ಮೀಬಾಯಿ ಎಂಬವಳು, ಸಿದ್ಧಾರೂಢ ಸದ್ಗುರುಗಳ ಚರಣಗಳಲ್ಲಿ ಬಹಳ ಶ್ರದ್ಧಾವಂತಳಾಗಿರುವಳು. ಇವಳು ಹುಬ್ಬಳ್ಳಿಯಲ್ಲಿ ತನ್ನ ತಂದೆಯ ಮನೆಯಲ್ಲಿರುವಾಗ, ಸಿದ್ಧಾರೂಢರ  ಮಠಕ್ಕೆ

ಹೋಗಿ ನಿತ್ಯ ಸದ್ಗುರು ದರ್ಶನವನ್ನು ತೆಗೆದುಕೊಳ್ಳುತ್ತಿದ್ದಳು, ಆತನ ಚರಣಗಳು ನಿತ್ಯ ಸ್ಪರ್ಶವಾಗುತ್ತಿದ್ದುದರಿಂದ ಆ ಸದ್ಗುರುನಾಥನ ಮೇಲೆ ಅವಳಿಗೆ ಅತ್ಯಂತ ಭಕ್ತಿ ಉತ್ಪನ್ನವಾಗಿತ್ತು. ಗಂಡನ ಮನೆಗೆ ಹೋಗುವ ಸಮಯದಲ್ಲಿ ಸಿದ್ಧಾಶ್ರಮಕ್ಕೆ ಬಂದು ಸದ್ಗುರುವಿಗೆ ಭೆಟ್ಟಿಯಾಗಿ, ಕಣ್ಣೊಳಗಿಂದ ದುಃಖಾಶ್ರುಗಳನ್ನು ಸುರಿಸುತ್ತ ಪ್ರಾರ್ಥಿಸುತ್ತಾಳೆ- 'ಹೇ ದಯಾಳುವಾದ ಸದ್ಗುರುತಾಯಿ, ನಿನ್ನ ಕೃಪೆಯ ಛಾಯೆಯನ್ನು ನನ್ನ ಮೇಲೆ ಹಾಕುವಂಥವಳಾಗು. ನಿನ್ನನ್ನು ಬಿಟ್ಟು ದೂರ ಹೋಗುವ ಕಾಲವು ಈಗ ಬಂದೊದಗಿದೆ. ನಿನ್ನ ದರ್ಶನವನ್ನು ನಿತ್ಯದಲ್ಲಿಯೂ ತೆಗೆದುಕೊಳ್ಳದೆ, ಆ ಊರಿನಲ್ಲಿ ನಾನು ಹ್ಯಾಗಿರಲಿ, ಎಂಬ ಇದೊಂದು ಚಿಂತೆಯು ನನಗೆ ಹತ್ತಿರುತ್ತದೆ. ಹೇ ಕೃಪಾಳುವೇ, ಇದು ನೀನು ತಿಳಿದಿರುವಿ'' ಈ ಪ್ರಕಾರ ಅವಳ

ಕರುಣಾ ವಚನವನ್ನು ಕೇಳಿ, ದಯಾಘನನಾದ ಸದ್ಗುರುರಾಜನು - 'ಹೇ ಸದ್ಭಕ್ತಳೇ ಹಾಗಾದರೆ ನೀನು ನಿನ್ನ ಇಷ್ಟದೇವನ ನಾಮಸ್ಮರಣೆಯನ್ನು ಮಾಡು, ಮತ್ತು ಸರ್ವಕಾಲ ಆತನ ಸುಗುಣ ರೂಪವನ್ನೇ ಹೃದಯದಲ್ಲಿ ಧ್ಯಾನಿಸುತ್ತಿರು. ಇದರಿಂದಲೇ ನೀನು ಸಮಾಧಾನ ಹೊಂದುವಿ. ಮತ್ತು ಆತನೇ ಸಂಕಟದಲ್ಲಿ ಬಂದು ನಿನ್ನನ್ನು ರಕ್ಷಿಸುವನು. ಈ ವಿಷಯದಲ್ಲಿ ಸರ್ವಥಾ

ಸಂಶಯವನ್ನು ಹಿಡಿಯಬೇಡ,'' ಎಂದು ನುಡಿದದ್ದು ಕೇಳಿ, ಲಕ್ಷ್ಮೀಬಾಯಿಯ  ಹೃದಯದಲ್ಲಿ ಆನಂದ ತುಂಬಿತು. ಅವಳು ಪುನಃ ಸದ್ಗುರುರಾಯನ ಚರಣಗಳನ್ನು ಹಿಡಿದು - ''ಹೇ ದೀನನಾಥಾ, ನನ್ನ ಮೇಲೆ ಲೋಭವಿರಲಿ, ನಿನ್ನ ಚರಣ ದರ್ಶನಕ್ಕೆ ಬೇಗನೇ ಕರಿಸಿಕೊಳ್ಳಬೇಕು,” ಎಂದು ಅನ್ನುವಾಗ, ಆಕೆಯ ಕಣ್ಣೊಳಗಿಂದ  ನೀರು ಸುರಿಯುತ್ತಿದ್ದವು. ಅನಂತರ ಪತಿಗೃಹಕ್ಕೆ ಹೊರಟಳು. ತಾಯಿ ತಂದೆಗಳನ್ನು ಬಿಟ್ಟು ಹೋಗುತ್ತೇನೆಂದು ಆಕೆಗೆ ಚಿಂತೆಯಾಗಲಿಲ್ಲ; ಸದ್ಗುರು ತಾಯಿಯ ವಿಯೋಗವಾಗುವದೆಂಬುದರ ದೆಸೆಯಿಂದ ಅವಳು ಬಹು ಕಳವಳಗೊಳ್ಳುತ್ತಿದ್ದಳು. ಗಂಡನ ಮನೆಗೆ ಹೋಗಿ, ಲಕ್ಷ್ಮೀಬಾಯಿಯು  ಸಿದ್ಧ ಚಿಂತನ ಮಾಡುತ್ತಾ ಆತನ ರೂಪವನ್ನೇ ಹೃದಯದಲ್ಲಿ ನಿತ್ಯ ಧಾವಿಸುತ್ತಾ ಇರುತ್ತಿದ್ದಳು. ಪ್ರೇಮದಿಂದ ಪತಿ ಸೇವೆಯನ್ನು ಮಾಡುತ್ತಿದ್ದಳು.


ಹೀಗಿರುತ್ತಾ ಶಿವರಾತ್ರಿಯ ಉತ್ಸವವು ಸಮೀಪ ಬಂದಿರುವಾಗ, ಲಕ್ಷ್ಮೀಬಾಯಿಯು  ಒಂದಾನೊಂದು ದಿವಸ ಪತಿಯನ್ನು ಕುರಿತು ಅನ್ನುತ್ತಾಳೆ- 'ಹೇ ನಾಥ, ನನ್ನ ವಚನವನ್ನು ಕೇಳುವಂಥವರಾಗಿರಿ, ಶ್ರೀ ಸಿದ್ಧಾರೂಢ ಸದ್ಗುರುರಾಯರೆಂಬ ಯತಿವರ್ಯರು  ಹುಬ್ಬಳ್ಳಿಯೊಳಗೆ ಇರುತ್ತಾರೆ. ಶಿವರಾತ್ರಿ ಸಮಯದಲ್ಲಿ ಅವರ ಮಠದಲ್ಲಿ ಮಹೋತ್ಸವ ಕಾರ್ಯವು ನಡೆಯುವದು. ಆಗ ಅನೇಕ ದೇಶಗಳಿಂದ ಭಕ್ತಾ ಜನರು ಬರುವರು. ಹರಿದಾಸರು ಬಂದು ನಿತ್ಯ ಕೀರ್ತನೆ ಮಾಡುವರು. ಆಗ ಸದ್ಗುರುಗಳ ಮುಂದೆ ರಾತ್ರಿ ಹಗಲು ನಾಮ ಘೋಷವು ನಡೆಯುತ್ತಿರುವುದು. ನಿತ್ಯ ಸೂರ್ಯೋದಯ ಕಾಲದಲ್ಲಿ ವೇದಾಂತವು ಶ್ರವಣವೂ, ಮಧ್ಯಾಹ್ನದಲ್ಲಿ ಸಾವಿರಾರು ಜನರಿಗೆ ಭೋಜನವೂ ನಡೆಯುವವು, ಸಂಧ್ಯಾಕಾಲದಲ್ಲಿ ಆಗುವ ಮಹಾ ಪೂಜಾ ವೈಭವವು ವರ್ಣಿಸಲಸಾಧ್ಯವಾಗಿರುವದು. ನೀವು ಸ್ವತಃ ಹೋಗಿ ನೊಡಬೇಕು, ಮತ್ತು ಎಷ್ಟು

ಅವರ್ಣನೀಯವಾಗಿರುವದೆಂದು ತಿಳಿಯಬೇಕು. ಈ ಪ್ರಕಾರ ಏಳು ದಿನಗಳ ತನಕ ಈ ಮಹೋತ್ಸವ ಸಮಾರಂಭವು ಬಹು ವೈಭವದಿಂದ ನಡೆಯುವದು, ಏಳನೇ ದಿವಸ ರಥೋತ್ಸವವು, ಆ ದಿನ ಸದ್ಗುರುರಾಯನನ್ನು ರಥದಲ್ಲಿ ಕೂಡ್ರಿಸುವರು. ಆಗಿನ ಆ ಮಹಾ ಶೋಭೆಯನ್ನು ನೋಡಿದರೆ ಕಣ್ಣುಗಳು ಧನ್ಯವಾಗುತ್ತವೆ. ಆದ್ದರಿಂದ ಈ ಪ್ರಾಣನಾಥನೇ, ನಾನು ಪ್ರಾರ್ಥಿಸುವದೇನೆಂದರೆ, ನಾವು ಹುಬ್ಬಳ್ಳಿಗೆ  ಅವಶ್ಯಹೋಗತಕ್ಕದ್ದು. ಶಿವರಾತ್ರಿ ಉತ್ಸವ ನೋಡಿದ್ದಾದರೆ  ನನ್ನ ಮನಸ್ಸು ಸಮಾಧಾನ ಪಡುವದು". ಆಗ ಶ್ರೀಧರನು ಪತ್ನಿಯನ್ನು ಕುರಿತು - “ಎಲೆ ಕಾಂತಿಯೇ, ನೀನು ಹೇಳುವದೆಲ್ಲ ಸತ್ಯವಿರಬಹುದು. ಆದರೆ ನನ್ನ ಉದ್ಯೋಗವನ್ನು ಬಿಟ್ಟು ಹೋಗಲಿಕ್ಕೆ ಬರುವುದಿಲ್ಲ. ನನಗೆ ಗೊತ್ತಿದೆ. ಸಮೀಪದಲ್ಲಿ ಗೋಕರ್ಣ ಕ್ಷೇತ್ರವಿರುವದು. ಇಲ್ಲಿಯೂ  ಶಿವರಾತ್ರಿಯ ಉತ್ಸವವು ಅತಿ ವಿಚಿತ್ರ ರೀತಿಯಿಂದ ಆಗುವುದು. ಈ ಸ್ಥಾನವೂ ಪವಿತ್ರವಿದ್ದು, ಇಲ್ಲಾದರೂ ಅಪಾರ ಜನರು ಆ ಸಮಯ ಕೊಡುವರು,'' ಎಂದು ಹೇಳಿದ್ದನ್ನು ಕೇಳಿ, ಲಕ್ಷ್ಮೀಬಾಯಿಯು  ಅನ್ನುತ್ತಾಳೆ- ಹುಬ್ಬಳ್ಳಿಯಲ್ಲಿ ಪ್ರತ್ಯಕ್ಷ ದೇವದರ್ಶನವು. ಈ ಗುರುದೇವನು ಭಕ್ತರ ಕೂಡ ಮಾತಾಡುತ್ತಾನೆ. ಆತನ ಭಾಷಣವು ಎಷ್ಟು ಪ್ರೇಮಳವಾದದ್ದು  ಒಮ್ಮೆ ಆತನ ಮುಖ ನೋಡಿದರೆ, ಬಹು ಜನ್ಮಗಳ ತಾಪವು ಹೋಗುವುದು, ಆತನ ಪಾದವನ್ನು ಮಸ್ತಕದಿಂದ ಸ್ಪರ್ಶಿಸಿದಾಕ್ಷಣ ಹೃದಯದಲ್ಲಿ ಆನಂದವು ಪ್ರಕಟವಾಗುವದು. ಆತನ ದರ್ಶನವಾದ ಕೂಡಲೇ ಹೀಗೆ ಕಾಣಿಸುವದಿಲ್ಲ - ನನಗೆ ಸಾಕ್ಷಾತ್

ಈಶ್ವರನೇ ಭೇಟಿಯಾದನು. ಅತಿಶಯ ಆನಂದವುಂಟಾಗಿ ಆತನ ಮುಖದ ಮೇಲಿಂದ ದೃಷ್ಟಿಯು  ಏಳುವದೇ  ಇಲ್ಲವು”  ಸದ್ಗುರು ಪ್ರೇಮವು ಹೃದಯದಲ್ಲಿ ತುಂಬಿ, ಲಕ್ಷ್ಮೀಬಾಯಿಯು ಅತ್ಯುತ್ಕರ್ಷದಿಂದ ನುಡಿಯುವಾಗ, ದೇಹದಲ್ಲಿ ಅಷ್ಟಭಾವಗಳು ಉತ್ಪನ್ನವಾಗಿ, ಪ್ರೇಮಾಶ್ರುಗಳು ಸುರಿಯುತ್ತಿದ್ದವು. ಆಕೆಯ ಪ್ರೇಮೋತ್ಕರ್ಷವನ್ನು ನೋಡಿ, ಶ್ರೀಧರನ್, ಮನಸ್ಸು ಕರಗಿದಂಥವನಾಗಿ, ಅವಳನ್ನು ಕುರಿತು - “ಈ ಪ್ರಕಾರ ನಿನ್ನ ಉತ್ಕಟ ಇಚ್ಛೆ ಇರುವದಾದರೆ, ನಾವು ಹುಬ್ಬಳ್ಳಿಗೇ ಹೋಗೋಣ. ಮುಂದಿನ ಶುಕ್ರವಾರ ದಿವಸ ಬೋಟಿಯ ಮೇಲೆ ಕೂಡ್ರೋಣ.” ಎಂದು ಅಂದ ವಚನವು ಅಮೃತ ಸಮಾನವಾಗಿ ಆಕೆಯ ಕರ್ಣದಲ್ಲಿ ಪ್ರವೇಶಿಸಿತು.


ಅನಂತರ ಎಲ್ಲಾ ಸಿದ್ಧಮಾಡಿಕೊಂಡು, ಆಗ ಬೋಟಿಯಲ್ಲಿ ಕುಳಿತರು. ಆ ಸಮಯದಲ್ಲಿ ಲಕ್ಷ್ಮೀಬಾಯಿಯ ಹೃದಯದೊಳಗಿನ ಉಲ್ಲಾಸ ಹೆಚ್ಚುತ್ತಾ ನಡೆಯಿತು. ಅವಳು ಹಗಲು ರಾತ್ರಿ ಸಿದ್ಧ ನಾಮವನ್ನು ಜಪಿಸುತ್ತಿದ್ದು, ಸರ್ವತ್ರ ಆ ಸದ್ಗುರುವೆ ಅವಳಿಗೆ ಭಾಸಿಸುತ್ತಿದ್ದನು. ಸಮುದ್ರದಲ್ಲಿ ತೆರೆಗಳು ಬರುವುದನ್ನು ನೋಡಿ ಲಕ್ಷ್ಮೀಬಾಯಿಯು - ಇವು ಸಿದ್ಧ ಪ್ರೇಮದಿಂದ ಉಕ್ಕುತ್ತವೆ' ಅನ್ನುವಳು. ಆಗ ಬೋಟಿಯ ಯಂತ್ರಘೋಷವನ್ನು ಕೇಳಿ - "ಸದ್ಗುರು ಪೂಜಾ

ಕಾಲದಲ್ಲಿ ಭಕ್ತರು ಗರ್ಜಿಸುತ್ತಾರೆ,'' ಎಂದು ನುಡಿಯುವಳು. ನಾವೆಯೊಳಗೆ ಸಾವಿರಾರು ಜನರನ್ನು ನೋಡಿ - ಇವರೆಲ್ಲಾ ಶ್ರೀ ಸಿದ್ಧಾರೂಢ ಉತ್ಸವಕ್ಕೆ ಹೋಗುವವರು,” ಎಂದು ಮಾತಾಡುವಳು. ಈ ಪ್ರಕಾರ ಪ್ರೇಮವನ್ನು ಚಿತ್ತದಲ್ಲಿ ಧರಿಸಿ, ಲಕ್ಷ್ಮೀಬಾಯಿಯು  ದೇಹ ವಿಸ್ಕೃತಿಯನ್ನು ಹೊಂದುವಳು. 'ಅತೀ ವೇಗದಿಂದ ಹಡಗವು  ನಡೆಯುತ್ತಿರುವಾಗ, ಎದುರಿನಿಂದ ಮತ್ತೊಂದು ಉಗಿ ಹಡಗವು ಬರುತ್ತಿದ್ದು, ಅಕಸ್ಮಾತ್ತಾಗಿ, ಅವು ಒಂದಕ್ಕೊಂದು ಬಡೆದು ಮಹಾ ಭಯಂಕರವಾದ ಗುಡುಗಿನಂಥ ಶಬ್ದವಾಯಿತು. ಲಕ್ಷ್ಮೀಬಾಯಿಯು  ಇದ್ದ ಹಡಗವು  ಒಡೆದು, ತೂಗಾಡಲಿಕ್ಕೆ ಆರಂಭಿಸಿತು. ಜನರೆಲ್ಲಾ ಭಯದಿಂದ ಥರಥರನೇ ನಡುಗುತ್ತ - “ಈ ನಾವೆಯು ಮುಳುಗಿತು," ಎಂದು ಕೂಗಲಿಕ್ಕೆ ಆರಂಭಿಸಿದರು. ಹುಚ್ಚು ಹಿಡಿದವರಂತೆ ಎಲ್ಲರೂ ಅತ್ತಿತ್ತ ಓಡಾಡುತ್ತಿದ್ದರು.  ಮಕ್ಕಳು  ಮರಿ ಕಟ್ಟಿಕೊಂಡು ಸರ್ವರು ಮತ್ತೊಂದು ಹಡಗದ ಮೇಲೆ ಓಡುತ್ತಿದ್ದರು. ಬಡೆದ  ಸಪ್ಪಳ ಕೇಳಿದಾಕ್ಷಣ, ಶ್ರೀಧರನು ಅತ್ಯಂತ ಗಾಬರಿಯಾಗಿ, ತನ್ನ ಪ್ರಿಯಕಾಂತೆಯನ್ನು ಮರೆತು ಬಿಟ್ಟು ಮತ್ತೊಂದು ನಾವೆಗೆ  ಓಡಿದನು. ಅಲ್ಲಿ ಒಬ್ಬ ಮಿತ್ರನು ಶ್ರೀಧರನನ್ನು  ನೋಡಿ - "ಸ್ತ್ರೀಯನ್ನು ಬಿಟ್ಟು ಯಾಕೆ ಬಂದಿ ?” ಎಂದು ಕೇಳಿದ್ದಕ್ಕೆ ಆತನು, - 'ನನ್ನ ಜೀವವೇ ಹೋಗುವ ಕಾಲದಲ್ಲಿ ಅವಳ ಕಡೆ ಎಲ್ಲಿ ನೋಡುತ್ತೇನೆ? ನಾನು ಈ ಹೊತ್ತು ಬದುಕಿದರೆ ಮತ್ತೊಬ್ಬ ಸ್ತ್ರೀ ಸಹಜವಾಗಿ ಬರುವಳು. ನಾನು ಸತ್ತರೆ, ಅವಳು ಬದುಕಿಯಾದರೂ ಏನು ಉಪಯೋಗ? ಎಂದು ಉತ್ತರ ಕೊಟ್ಟನು.


ಇತ್ತ ಆ ಹಡಗವು  ಮುಳುಗಲಿಕ್ಕೆ ಹತ್ತಿ, ತೂಗುತ್ತ ಸಾವಕಾಶವಾಗಿ ನೀರೊಳಗೆ ಇಳಿಯಿತು. ಲಕ್ಷ್ಮೀಬಾಯಿಯು ನೋಡುವಾಗ, ಪತಿಯು ಎಲ್ಲಿಯೂ ಕಾಣಿಸಲಿಲ್ಲ. ಜನರೆಲ್ಲರೂ ಓಡುವರು. ಒಬ್ಬರ ಮೇಲೊಬ್ಬರು ಬೀಳುವರು.

ಮತ್ತೊಂದು ನಾವೆಯ ಮೇಲೆ ಹೋಗಲಿಕ್ಕೆ ಲಕ್ಷ್ಮೀಬಾಯಿಗೆ  ಎಲ್ಲಿಯೂ ದಾರಿ ಸಿಗದಂತಾಯಿತು. ಸಿದ್ಧನಾಮವನ್ನು

ಮುಖದಿಂದ ಉಚ್ಚರಿಸುತ್ತಾ, ಎಲ್ಲಾ ಕಡೆಗಳಲ್ಲಿಯೂ ಗಂಡನನ್ನು ಹುಡುಕುತ್ತಾ ಇರುವಾಗ, ಅಕಸ್ಮಾತ್ತಾಗಿ ಲಕ್ಷ್ಮೀಬಾಯಿಯು ಒಂದು ಸಣ್ಣ ಮಗುವು ತನ್ನ ಸಮೀಪವೇ ಬಿದ್ದಿರುವದನ್ನು ಕಂಡು. ಅದನ್ನು ಯಾರೋ ಬಿಟ್ಟು ಹೋಗಿರುವರಂದು ತಿಳಿದು, ಬಹು ದಯೆಯುಳ್ಳವಳಾಗಿ ಆ ಕೂಸನ್ನು ಎತ್ತಿಕೊಂಡಳು. ತನ್ನ ಮರಣದ ಭಯವನ್ನಾದರೂ ಹಿಡಿಯದೆ, 

ದಯಾಪರಳಾದ ಲಕ್ಷ್ಮೀಬಾಯಿಯು  ಆ ಕೂಸನ್ನು ಎತ್ತಿಕೊಳ್ಳುತ್ತಿರುವಾಗ, ಸುತ್ತಮುತ್ತಲೆಲ್ಲಾ ಜಲಮಯವಾಯಿತು. ನಾವೆಯು ನೀರೊಳಗೆ ಮುಳುಗಿತು. ಅದರ ಮೇಲಿದ್ದ ಇತರ ಜನರೆಲ್ಲಾ ಮತ್ತೊಂದು ಹಡಗದ ಮೇಲೆ ಹೋಗಿದ್ದು, ಲಕ್ಷ್ಮೀಬಾಯಿಯು ಒಬ್ಬಳೇ ಉಳಿದಳು. ಇಷ್ಟರಲ್ಲಿ ಮತ್ತೊಂದು ನಾವೆಗೆ ಹತ್ತಲಿಕ್ಕೆ ಇದ್ದಂಥಾ ನಿಚ್ಚಣಿಕೆಯು ಸಹಾ ಆಕಸ್ಮಾತ್ ಕಡಕೊಂಡು ಬಿತ್ತು. ಲಕ್ಷ್ಮೀಬಾಯಿಗೆ  ತಪ್ಪಿಸಿಕೊಂಡು ಹೋಗಲಿಕ್ಕೆ ಉಪಾಯವಿಲ್ಲದೆ,  ಮುಳುಗುವ ಹಡಗದ ಮೇಲೆ ಸಿಕ್ಕಿಬಿದ್ದಳು.

ಆಕೆಯ ಸುತ್ತಲೂ ನೀರು ಏರುತ್ತ ಟೊಂಕ, ನಾಭೀತನಕ ಬಂತು. ಆಗ ಲಕ್ಷ್ಮೀಬಾಯಿ ಕೂಸನ್ನು ಎತ್ತಿ ಹಿಡಿದು,

ಸದ್ಗುರುವಿಗೆ ಕೂಗಿ ಕರೆಯುತ್ತಾಳೆ- 'ಹೇ ಸದ್ಗುರುನಾಥನೇ, ದಯಾನಿಧಿಯೇ, ನನ್ನನ್ನು ಯಾಕೆ ಈ ಸಮುದ್ರದೊಳಗೆ ಬಿಟ್ಟಿರುವಿ. ನಾನು ನೀರೊಳಗೆ ಉಳಿದೆನು. ಎಲ್ಲಿಯೂ ತಪ್ಪಿಸಿಕೊಂಡು ಹೋಗಲಿಕ್ಕೆ ದಾರಿಯಲ್ಲಿ. ನನ್ನ ಪತಿಯಾದರೂ ಸಮೀಪದಲ್ಲಿಲ್ಲ. ಈ ಸಮಯದಲ್ಲಿ ಎಲ್ಲಿ ಹೋದನೆಂತಲೂ ತಿಳಿಯಲಾರೆ, ಮತ್ತೊಂದು ಹಡಗವಾದರೂ ದೂರವಾಯಿತು.

ಈಗ ನಾನೇನು ಮಾಡಲಿ, ಈ ಕೂಸನ್ನು ಬದುಕಿಸಲಿಕ್ಕೆ ನೋಡಿ ನಾನು ಅಕಸ್ಮಾತ್ತಾಗಿ ಹಿಂದುಳಿದೆ. ನಿನ್ನ ಹೊರತು

 ನನಗೆ ಯಾರು ರಕ್ಷಕರಿರುವರು ? ನೀನೇ ನೋಡು, ನನ್ನ ದೆಶೆಯಿಂದ ನೀನು ಬೇಸತ್ತಿರುವಿಯಾದರೆ, ಈ ಮಗುವಿನ ಭಕ್ತ ಮೇಲೆಯಾದರು ಕೃಪೆ ಇರಲಿ, ಹೇ ದಯಾಳನೇ, ಬೇಗನೇ ಬಂದು, ಇಂಥ ಸಮಯದಲ್ಲಿ ನಮ್ಮನ್ನು ರಕ್ಷಿಸು ರಕ್ಷಿಸು "ಈ ಪ್ರಕಾರ ಕರುಣಾವಚನವನ್ನು ಕೇಳಿ, ತತ್ಕಾಲ ಆ ಸಿದ್ಧ ದಯಾಘನನು ಪ್ರಾಪ್ತನಾಗುವಂಥವನಾದನು.  ಒಂದು ಸಣ್ಣ ದೋಣಿಯಲ್ಲಿ ಕುಳಿತುಕೊಂಡು ಬೇಗನೇ ಅವಳ ಹತ್ತಿರ ಬಂದನು. ಆತನ ಕೈಯಲ್ಲಿ ಲಕ್ಷ್ಮೀಬಾಯಿಯು ಆ ಕೂಸನ್ನು ಕೊಟ್ಟಳು. ಅದನ್ನು ತೆಗೆದುಕೊಂಡು ದೋಣಿಯಲ್ಲಿ ಮಲಗಿಸಿ, ಆಮೇಲೆ ಸದ್ಗುರುವು  ಲಕ್ಷ್ಮೀಬಾಯಿಯ ಕೈ ಹಿಡಿದು ಅವಳನ್ನು ಬೇಗನೇ ಎತ್ತಿಕೊಂಡು ದೋಣಿಯೊಳಗೆ ಕೂಡ್ರಿಸಿದನು. ಈ ದೋಣಿ ಬರುವುದನ್ನು ನೋಡಿ ಉಗಿ ಹಡಗವು ನಿಂತಿತು. ಆಗ ಲಕ್ಷ್ಮೀಬಾಯಿಯು ಕೂಸನ್ನು ತೆಗೆದುಕೊಂಡು ಅದರ ಮೇಲೆ ಹತ್ತಿದಳು. ಆಗ ಏನು ಚಮತ್ಕಾರ ಆಯಿತೆಂದರೆ, ದೋಣಿಯೂ ಅದರಲ್ಲಿದ್ದ ಸದ್ಗುರುನಾಥನೂ ಅದೃಶ್ಯರಾದರು. ಇದನ್ನು ನೋಡಿ, ಎಲ್ಲರೂ ಬಹು ಆಶ್ಚರ್ಯಪಟ್ಟರು. ಯಾರಿಗೂ ಆತನ ಮಾಯಾ ತಿಳಿಯಲಾಗದು. ಆಗ ಆ ಕೂಸಿನ ತಾಯಿಯು ಬಂದು ಲಕ್ಷ್ಮೀಬಾಯಿಯು ಕಾಲಿಗೆ ಬಿದ್ದು - “ನೀನು ಸಾಕ್ಷಾತ್ ದೇವಿಯೇ, ನನ್ನ ಕೂಸನ್ನು ರಕ್ಷಿಸಲಿಕ್ಕೆ ಪ್ರಾಪ್ತಳಾದಿ!” ಎಂದು ಹೇಳಿದ ಕೂಡಲೇ ಲಕ್ಷ್ಮೀಬಾಯಿಯು ಕೂಸನ್ನು ತಾಯಿಯ  ಕೈಯಲ್ಲಿ ಕೊಟ್ಟು, ತನ್ನ ಪತಿಯನ್ನು ಹುಡುಕಲಿಕ್ಕೆ ಆರಂಭಿಸಿದಳು. ಶ್ರೀಧರನು

ಮನಸ್ಸಿನಲ್ಲಿ ಬಹಳ ನಾಚಿಕೆಯಿಂದ ಎಲ್ಲಿಯೋ ಅಡಗಿ ಕುಳಿತಿದ್ದನು. ಆಮೇಲೆ ಒಬ್ಬರು ಅವನನ್ನು ಹಿಡಿದುಕೊಂಡು ಬಂದರು. ಪತಿಯನ್ನು ನೋಡಿದಾಕ್ಷಣ, ಲಕ್ಷ್ಮೀಬಾಯಿಯು  ಬಹು ದೀನಭಾವದಿಂದ ಆತನ ಚರಣಗಳನ್ನು ಹಿಡಿದು, - “ನೋಡಿರಿ, ಸದ್ಗುರುನಾಥನು ಓಡಿಬಂದು ನನ್ನನ್ನು ರಕ್ಷಿಸಿದನು. ಅವನು ಅನಾಥರ ದಶೆಯಿಂದ ಬಹಳ ದಯಾಳು ಇದ್ದಾನೆ. ನಿಮ್ಮನ್ನಾದರೂ ಆತನೇ  ರಕ್ಷಿಸಿರುವನು,” ಎಂದು ಸದ್ಗದಿತಳಾಗಿ ನುಡಿದಳು. ಆಕೆಯ ಪ್ರಮಾನಂದವನ್ನು ನೋಡಿ, ಸರ್ವರ  ಅಂತಃಕರಣವು ದ್ರವಿಸಿ, ಅಲ್ಲಿರುವ ಪ್ರೇಮಳ ಜನರೆಲ್ಲರಿಗೂ ನೇತ್ರಗಳಿಂದ ಭಾಷ್ಪಗಳು ಸುರಿಯುತ್ತಿದ್ದವು.


ಅನಂತರ ಅವಳು ತನ್ನ ಪತಿಯನ್ನು ಕುರಿತು ಎಲ್ಲಾ ವೃತ್ತಾಂತವನ್ನು ಹೇಳಿದಳು. ಆದರೆ ಅವನಿಗೆ ಏನೇನೂ ದೂಷಣ ಕೊಡಲಿಲ್ಲ. ಇದನ್ನೆಲ್ಲಾ ಕೇಳಿ, ಶ್ರೀಧರನು - “ದೈವಯೋಗದಿಂದ ನಿನಗೆ ಭೆಟ್ಟಿಯಾಗಿ ನನ್ನ ಧನ್ಯ ಭಾವವನ್ನು ಹೊಂದಿದೆನು. ನಿನ್ನ ಸಂಕಟ ಕಾಲದಲ್ಲಿ ದುಷ್ಪಮತಿಯಾದ ನಾನು ನಿನ್ನನ್ನು ಬಿಟ್ಟು ಹೋಗಿದ್ದೆನು  ,'' ಎಂದು ನೋಡಿದನು. ಪತಿಯ ವಚನವನ್ನು ಕೇಳಿ ಲಕ್ಷ್ಮೀಬಾಯಿಯು ಅವನನ್ನು ಸಂತೈಸಿ- ''ನೀವು ಬದುಕಿದಿರೆಂದು  ನನಗೆ ಬಹಳ ಆನಂದವಾಯಿತು. ಆ ಸದ್ಗುರುವೇ ನಿಮಗಾದರೂ ಪ್ರಾಪ್ತರಾದರೆಂಬುದರಲ್ಲಿ ನನಗೇನೂ ಸಂಶಯ ತೋರುವದಿಲ್ಲ. ನನಗೂ ಆತನೇ ಇಲ್ಲಿವರೆಗೆ ತಂದು, ಆಮೇಲೆ ಅದೃಶ್ಯನಾದನು. ಆತನ ಮಾಯಾ ನಮಗೆ ತಿಳಿಯದು'' ಅಂದಳು. ಹಡಗದಿಂದ ಗೋವೆ

ಪ್ರಾಂತದಲ್ಲಿ ಇಳಿದು, ಆ ದಂಪತಿಗಳು ಗಾಡಿ ಹತ್ತಿ ಹುಬ್ಬಳ್ಳಿಗೆ ಬಂದು ಶ್ರೀ ಸಿದ್ಧಾರೂಢರನ್ನು ಭೆಟ್ಟಿಯಾಗುವಾಗ, ಹೃದಯದಲ್ಲಿ ಹಿಡಿಸಲಾರದಂಥಾ ಪ್ರೇಮವು ಉಕ್ಕಿ ಉಕ್ಕಿ ಬಂತು. ಸದ್ಗುರುಗಳನ್ನು ನೋಡಿ ಲಕ್ಷ್ಮೀಬಾಯಿಗೆ ಪ್ರೇಮವು ಸಾವರಿಸಿಕೊಳ್ಳಲಾಗದೆ, ದಾರಿಯಲ್ಲಿ ನಡೆದ ವೃತ್ತಾಂತ ಅವರಿಗೆ ನಿವೇದಿಸುತ್ತಿರುವಾಗ, ಕಣ್ಣೊಳಗಿಂದ ನೀರು ಸುರಿಸುತ್ತಿದ್ದಳು. ಸದ್ಗುರುನಾಥನು ಎಲ್ಲಾ ವೃತ್ತಾಂತವನ್ನು ಕೇಳಿ - ಲಕ್ಷ್ಮೀಬಾಯಿಯೇ, ನೀನು ಧನ್ಯ ಧನ್ಯಳು. ಆ ದಯಾಘನನ ಸ್ಮರಣೆ ಮಾಡಿದ ಕೂಡಲೇ ಆತನು ಬಂದು ನಿನಗೆ ಪ್ರಾಪ್ತನಾದನು. ಅಂತರ್ಯಾಮಿಯಾಗಿರುವ ಆ ಸದ್ಗುರುನಾಥನು ನಿನ್ನ ಸಂಕಟದಲ್ಲಿ ಒದಗಿದನು,” ಎಂದೂ ಆ ಕೃಪಾವಂತನು ನುಡಿದದ್ದು ಕೇಳಿ, ಅವಳು ಸಮಾಧಾನ ಹೊಂದಿದಳು. ಆಗ ಸದ್ಗುರುಗಳನ್ನು ಕುರಿತು ಲಕ್ಷ್ಮೀಬಾಯಿಯು- “ಹೇ ಸದ್ಗುರುನಾಥನೇ, ಈಗ ತಿರುಗಿ ಇಲ್ಲಿಂದ ಹೋಗಬಾರದೆಂದು ಅನಿಸುವದು. ನೀನು ಕೃಪಾ ಮಾಡಿದಿಯೆಂದರೆ, ನಾವು ತಿರುಗಿ ಊರಿಗೆ ಹೋಗುವುದಿಲ್ಲ,” ಎಂದು ಹೇಳಿದ್ದನ್ನು ಕೇಳಿ ಸಿದ್ಧರಾಯರು - “ಉತ್ಸವ ಕಾರ್ಯ ತೀರಿದ ಬಳಿಕ, ನೀವು ನಿಮ್ಮೂರಿಗೆ ಹೋಗಿ, ನಿರ್ಭಯರಾಗಿ ಅಲ್ಲೇ ಇರ್ರಿ, ನಾಮಸ್ಮರಣೆ ಮಾಡುವದರಿಂದ ಯಾವ ಆನಂದ ಉತ್ಪನ್ನವಾಗುವದೋ ಅದು ಸ್ಥಾನಬೇದವಾಗುವದರಿಂದ ಕಡಿಮೆಯಾಗುವುದಿಲ್ಲ. ಅಂಥಾ ಪವಿತ್ರವಾದ ಸುಖವನ್ನು ಭೋಗಿಸುತ್ತಿದ್ದರೆ, ನಿಮಗೆ ಸರ್ವ ರೀತಿಯಿಂದ ಕಲ್ಯಾಣವಾಗುವದು," ಎಂದು ಅಂದ ಸದ್ಗುರು ವಚನವನ್ನು ಕೇಳಿ ಲಕ್ಷ್ಮೀಬಾಯಿಯ  ಮನಸ್ಸು ಶಾಂತಿಯನ್ನು ಹೊಂದಿತು. ಶಿವರಾತ್ರಿಯ ಉತ್ಸವ ಮುಗಿದ ಬಳಿಕ, ಆ ದಂಪತಿಗಳು ಗುರ್ವಾಜ್ಞೆಯನ್ನು ಪಡೆದು ತಮ್ಮೂರ ಕಡೆಗೆ ತಿರುಗಿದರು. ತಮ್ಮ ಊರಿಗೆ ಹೋಗಿ ಇಬ್ಬರೂ ಸದ್ಭಾವವನ್ನು ಹಿಡಿದು

ಶ್ರೀ ಸದ್ಗುರು ಚಿಂತನ ಮಾಡುತ್ತಿರುವಾಗ, ಆತನು ಸಮೀಪವೇ ಇದ್ದಾನೆಂಬಂತೆ ಕಾಣಿಸುತ್ತಿತ್ತು. ಇಂಥಾ ದಯಾಳುವಾದ ಆ ಸದ್ಗುರುವು ಭಕ್ತರಿಗೆ ಒಂದು ನೌಕೆ ಆಗಿರುತ್ತಾನೆ, ಯಾಕೆಂದರೆ ಆತನ ಆಶ್ರಯವನ್ನು ಹೊಂದಿ ಅವರು ಸುಖದಿಂದ ಭವಸಾಗರವನ್ನು ದಾಟುವರು.

👇👇👇👇👇👇👇👇👇👇👇👇👇👇

ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜನ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ, ಬೇರೆಯರಿಗೂ share ಮಾಡಿ, ಅವರಿಗೂ help ಮಾಡಿ ಅಜ್ಜನ ಕೃಪೆಗೆ ಪಾತ್ರರಾಗಿರಿ

ಈ link ಒತ್ತಿ 👉 📖 👈 ಒತ್ತಿ

ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ

👉ಸದ್ಗುರುಗಳು ಕಾಲಾ ನೋಡಲು ಶಿವ ಪಾರ್ವತಿ ಬಂದಿದ್ದು ಕಾಲಾ ಪ್ರಸಾದದಿಂದ ಶರಣಾಗತನ ಕುಷ್ಠವನ್ನು ಪರಿಹರಿಸಿ ಮತ್ತು ಅಶುದ್ದ ನೀರು ಶುದ್ಧ ಮಾಡಿ ಶಿಷ್ಯರಿಗೆ ಕುಡಿಸಿದ ಕಥೆ,

ಎಲ್ಲಾ  ಕಥೆಗಳ ಲಿಂಕಗಳು 

👉ಕಥಾ ಸಂಗ್ರಹ 👉🛃

ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 

1)WhatsApp shareಗಾಗಿ click ಮಾಡಿ📲☎️

2)Facebook shareಗಾಗಿ👉

3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚



«««««ಓಂ ನಮಃ ಶಿವಾಯ »»»»»»»


Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ