ಸಿದ್ಧಾರೂಢರು ಓರ್ವ ಮಹಿಳೆಗೆ ದ್ರೌಪದಿ ಪತಿವೃತಾ ಧರ್ಮದ ಕಥೆ ಹೇಳಿದ್ದು
ಬಿಜಯವಾಡೆಗೆ ಬಂದಿದ್ದು🌺
ಮುಂದೆ ಸಂಚಾರ ಮಾಡುತ್ತ ಸಿದ್ದನು ಸಜ್ಜನಗಡಕ್ಕೆ ಬಂದನು. ಸಂತ ರಾಮದಾಸರು ಸ್ಥಾಪನೆ ಮಾಡಿದ ಶ್ರೀರಾಮಮೂರ್ತಿಯ ಹಾಗೂ ರಾಮದಾಸರ ಸಮಾಧಿ ದರ್ಶನ ಪಡೆದುಕೊಂಡನು. ಅಲ್ಲಿಂದ ಹೊರಟು ದಾರಿಯಲ್ಲಿ ಅನೇಕ ಕ್ಷೇತ್ರಗಳನ್ನು ನೋಡುತ್ತ ವಿಜಯವಾಡಗೆ ಬಂದು ಅಲ್ಲಿರುವ ಕೃಷ್ಣಾ ನದಿಯ ತಟಾಕದಲ್ಲಿಯ ವೃಕ್ಷದ ಕೆಳಗೆ ಆಸೀನನಾದನು. ಈಗ ಓರ್ವ ಮಹಿಳೆಯು ಅಲ್ಲಿ ಬಂದು ಸಿದ್ಧನನ್ನು ಕುರಿತು ''ಪರಮ ಪುರುಷನೇ ತಾವು ಜ್ಞಾನಿಗಳಂತೆ ಕಾಣುತ್ತಿರುವಿರಿ" ಅಂತಾ ಸಿದ್ಧನ ಪಾದಗಳಲ್ಲಿ ನಮಿಸಿ ಸಂತೋಷಭರಿತಳಾಗಿ 'ಹೇ ತಂದೆಯೇ, ನಾನು ಧನ್ಯಳಾಗುವ ಮಾರ್ಗವನ್ನು ತೋರಿಸಬೇಕು' ಅಂತ ಭಯ ಭಕ್ತಿಯಿಂದ ಪ್ರಾರ್ಥಿಸಿದಳು. ಆಗ ಸಿದ್ಧನು ಆಕೆಯನ್ನು ಕುರಿತು ಸ್ತ್ರೀಯರಲ್ಲಿ ಚಿತ್ತ ಚಾಂಚಲ್ಯತೆ ಇರುವುದರಿಂದ ಜ್ಞಾನ ಮಾರ್ಗದ ಅಧಿಕಾರಿ ಆಗಲಾರಳು. ಕಾರಣ ಸೋಮವಾರದ ಪಯೋವ್ರತವನ್ನು ಸಾಧಿಸಲು ಧನ್ಯಳಾಗುವಿ' ಅಂತ ಹೇಳಿದನು. ''ಹಾಗಾದರೆ ಪ್ರಪ್ರಥಮವಾಗಿ ಪಯೋವೃತ ಮಾಡಿ ಧನ್ಯತೆ ಪಡೆದವಳ ಚರಿತಾಮೃತ ಹೇಳಬೇಕು' ಅಂತಾ ಕೇಳಿಕೊಂಡಳು.
🙏 ದೌಪದಿಯ ವ್ರತಾಚರಣೆ ಹೇಳಿದ್ದು🌺
ಪರಮಹೃದಯಿಯಾದ ಸುಕೃತಳೇ ಕೇಳು. ಪೂರ್ವದಲ್ಲಿ ಕೋಪ, ಕಪಟ, ಸುಳ್ಳುಗಳನ್ನು ವಿಜೇತನಾದವನು ಶಾಂತಿ ಸಮುದ್ರನೂ, ಸತ್ಯಸಂಧನೂ ಶ್ರೇಷ್ಠ ಧರ್ಮ ರಾಜನು ದೇವಾನುದೇವತೆಗಳ ಸ್ವರ್ಗಕ್ಕಿಂತಲೂ ಅತಿ ವೈಭವದಿಂದ ಪ್ರಖ್ಯಾತಿಯಾದ ಹಸ್ತಿನಾವತಿಯಲ್ಲಿದ್ದು ಪ್ರಜಾಪಾಲನೆ ಮಾಡುತ್ತಿದ್ದನು. ಪರಮ ರಾಜಸುಯಾಗ ಪೂರೈಸಿ ಸಮಾಪ್ತಿ ಕಾಲಕ್ಕೆ ಶ್ರೀಕೃಷ್ಣನನ್ನು ಕುರಿತು ಚಂದ್ರವದನೆ, ಕಮಲನಯನೆ, ಇಂದ್ರ ಬಾಣದಂತಹ ಹುಬ್ಬುಗಳಿಂದಲೂ, ದರ್ಪಣದ ಹೊಳಪಿನ ಕಪೋಲಗಳುಳ್ಳವಳೂ, ಸುವಾಸನೆಯ ಸಂಪಗಿ ಹೂವಿನಂತಹ ನಾಶಕವುಳ್ಳವಳೂ, ಭ್ರಮರಗಳಂತೆ ಕಪ್ಪಾದ ಸುಳಿ ಮುಂಗುರುಳುಳ್ಳವಳೂ, ತೊಂಡಿ ಹಣ್ಣಿನಂತೆ ಕೆಂದುಟಿಯುಳ್ಳವಳೂ, ಲಲಿತ ಕಂಬುಗ್ರೀವ, ಬಂಗಾರದ ಕೊಡಗಳಂತಹ ಕುಚವುಳ್ಳ, ಮರಿಯಾನೆ ಸೊಂಡಿಲ ತೆರೆ ಬಾಳದೊಡೆ, ಕೆಂಬಣ್ಣದ ಮೈಬಣ್ಣವುಳ್ಳ ಕೋಗಿಲೆಯ ಮಧುರ ಧ್ವನಿಯ ಸ್ವರವುಳ್ಳವಳೂ, ಮದಗಜಗಮನೆ, ಸಿಂಹಕಟಿಯುಳ್ಳ, ತೆಳುವಾದ ಉದರ, ತಳಿರದಂತೆ ಮೃದುವಾದ ಪಾದ, ದಾಳಿಂಬರ ಹಣ್ಣಿನಂತಹ ದಂತಪಂಕ್ತಿಯುಳ್ಳ ಝಗಝಗಿಸುವ ಪೀತಾಂಬರಧಾರಿ, ಹಸಿರು ಕುಪ್ಪಸ ತೊಟ್ಟವಳು, ನವರತ್ನಖಚಿತ ವಜ್ರ ವೈಡೂರ್ಯ ಆಭರಣಧಾರಿ, ಕಡೆಗಣ್ಣಿಗೆ ಕಾಡಿಗೆ ಹಚ್ಚಿಕೊಂಡು ಜಡಿಗೆ ಕೇದಗಿ ಹೆಣೆದುಕೊಂಡು, ಜರಿಗೊಂಡೆ ಜೋತು ಬಿಟ್ಟು ನಾಗರತ್ನ ಹಾಕಿಕೊಂಡು, ಹಣೆಯಲ್ಲಿ ಪರಿಮಳದ ಕಸ್ತೂರಿ ತಿಲಕವನ್ನಿಟ್ಟುಕೊಂಡು, ಕಪೋಲಗಳಿಗೆ ಅರಿಶಿನ ಹಚ್ಚಿಕೊಂಡು, ವಜ್ರದ ಮುಕುತಿಯ ನ್ನಿಟ್ಟುಕೊಂಡು, ಮುಂಗೈಗಳಿಗೆ ಗಂಧ ಲೇಪನದೊಂದಿಗೆ ಮುತೈದೆಯರ ಲಕ್ಷಣ, ರಾಜವೈಭವದ ಗಾಂಭೀರ್ಯದಿಂದ ಇದ್ದ ದ್ರೌಪದಿಯು ಉರುತರ ಭಯ ಭಕ್ತಿಯಿಂದ ಫಲ ಪುಷ್ಪಗಳನ್ನರ್ಪಿಸಿ ಕರಜೋಡಿಸಿ “ನನಗೆ ಆತ್ಮವಿದ್ಯೆಯನ್ನು ಬೋಧಿಸು' ಅಂತಾ ಪ್ರಾರ್ಥಿಸಿದಳು.
ಆಗ ಶ್ರೀ ಹರಿಯು 'ಹೇ ದ್ರೌಪದಿ ಲೌಕಿಕ ಸ್ತ್ರೀಯರಿಗೆ ಬ್ರಹ್ಮ ವಿದ್ಯೆಯನ್ನು ಹೇಳಬಾರದು. ಚಿತ್ತಚಂಚಲವುಳ್ಳವರಾಗಿದ್ದರಿಂದ ಸ್ತ್ರೀಯರು ಅನಧಿಕಾರಿಗಳು, ಗಾರ್ಗಿ, ಮೈತ್ರೇಯ ಮುಂತಾದವರ ಉದಾಹರಣೆಯೊಂದಿಗೆ ನೀನು ಆಗ್ರಹ ಮಾಡಬಹುದು. ಆದರೆ ಅವರು ಮಾತ್ರ ಯೋಗ್ಯತೆಯುಳ್ಳವರು. ನೀನು ಪತಿವ್ರತೆಯು ನೀನು ಧನ್ಯಳೇ ಇರುವಿ, ಆದರೂ ಸೋಮವಾರದ ಪಯೋವೃತವನ್ನು ಆಚರಿಸು ಎಂದು ಉಪದೇಶ ಮಾಡಿದನು. ಅದರಂತೆ ಆಚರಣೆ ಮಾಡಿದ ದ್ರೌಪದಿಯು ಸದ್ಗತಿಯನ್ನು ಪಡೆದ ಪ್ರಥಮ ಮಹಿಳೆ ಅಂತಾ ಸಿದ್ಧನು ಹೇಳಿದನು.
ಆ ಸ್ತ್ರೀಯು ಪುನಃ ಪ್ರಶ್ನಿಸುತ್ತ '' ಸ್ವಾಮಿ ಪಾಂಚಾಲಿಯು ಐದು ಜನ ಪುರುಷರೊಂದಿಗೆ ಸಂಸಾರ ಮಾಡಿದ ಸತಿಯಾಗಿರುವಳು. ಕಾರಣ ಪಾತಿವ್ರತ್ಯಶೀಲ ಅದೆಂತು ಉಳಿಯುವುದು ತಿಳಿಸಿರಿ' ಅಂತ ಕೇಳಿದಳು. ಆಗ ಸಿದ್ದನು "ಹೇ ಸಾದ್ವಿಯೇ ನಿನ್ನ ಪ್ರಶ್ನೆಯು ಉಚಿತವಾಗಿದೆ. ನಿನ್ನ ಮನಸ್ಸಿನಲ್ಲಿಯ ಸಂಶಯಗಳು ನಿವಾರಣೆಯಾಗ ಬೇಕಾದರೆ ದ್ರೌಪದಿಯ ಕುರಿತು ಆಕೆಯ ಜನಿಸಿದ ರಾಜವಂಶ ಹಾಗೂ ಕುರುವಂಶ ಪಾಂಡುವಂಶದ ಬಗ್ಗೆ ಆಳವಾಗಿ ತಿಳಿದುಕೊಳ್ಳಲೇಬೇಕು. ಅಘಟಿತ ಘಟನಾ ಸಾಮರ್ಥ್ಯ ಪರಮಾತ್ಮನ ಲೀಲೆಗಳನ್ನು ಜಗತ್ತಿನ ಜನರಿಗೆ ಆದರ್ಶತೆಗಳನ್ನು ತಿಳಿಸಿ ಹೇಳುವೆ. ನಿನ್ನ ಪ್ರಶ್ನೆಯಿಂದ ದೊರೆತ ಉತ್ತರಗಳು ಜಗತ್ತಿನ ಜನರ ಮನಸ್ಸಿನ ಒಡಮೂಡುವ ಸಂಶಯಗಳ ನಿವಾರಣೆಗೆ ಕಾರಣವಾಗಬಲ್ಲವು'' ಅಂತಾ ಹೇಳತೊಡಗಿದರು.
"ದ್ವಾಪರಯುಗದಲ್ಲಿ ಪ್ರಜೆಗಳನ್ನು ಮಕ್ಕಳಂತೆ ಪಾಲನೆ ಮಾಡುತ್ತ ವೈಭವದಿಂದ ಮೆರಯುತ್ತ ಕೀರ್ತಿಶಾಲಿ ಕುಂತಿ ಭೋಜರಾಜನಿಗೆ ವಿದ್ಯಾ ವಿನಯ ಸಂಪನ್ನ ಚತುರಮತಿ ಕುಂತೀಯೆಂಬ ಕನ್ಯಾ ಇದ್ದಳು. ಒಂದಾನೊಂದು ದಿನ ಅರಮನೆಗೆ ದುರ್ವಾಸಮುನಿಗಳು ಆಗಮಿಸಿದಾಗ, ಆದರಾತಿಥ್ಯದಿಂದ ಪಾದಪೂಜೆ ಮಾಡಿ ಪಡ್ರಸಾನ್ನದಿಂದ ತೃಪ್ತಿಗೊಳಿಸಿ, ಹಂಸತೂಲಿಕ ತಲ್ಪದಲ್ಲಿ ಮಲಗಿಸಿ ಅವರ ಸೇವೆಯನ್ನು ಮಾಡುತ್ತಾ ಕುಂತಿಯು ಕುಳಿತುಕೊಂಡು, ತನಗೆ ಧರ್ಮಶಾಸ್ತ್ರವನ್ನು ತಿಳಿಸಬೇಕೆಂದು ಕೇಳಿಕೊಂಡ ಪ್ರಕಾರ ತಿಳಿಸುತ್ತಿದ್ದರು. ಕೆಲಕಾಲ ಅಲ್ಲಿಯೇ ವಾಸ ಮಾಡಿದ್ದ ಮುನಿಗಳು ಕುಂತಿಯ ಸೇವೆಗಳಿಗೆ ಪ್ರಸನ್ನರಾಗಿ ಮಂತ್ರೋಚ್ಚಾರಣೆಯಿಂದ ಆರು ಜನರು ಪುತ್ರರು ಉದಯಿಸಲಿ ಅಂತಾ ಆಶೀರ್ವಾದ ಮಾಡಿ ಅಲ್ಲಿಂದ ತೆರಳಿದರು.
ಕೆಲ ದಿವಸಗಳ ನಂತರ ನದಿಸ್ಥಾನಕ್ಕೆ ಕುಂತಿಯು ಹೋದಾಗ ಸಣ್ಣ ಹುಡುಗಿಯರು ಆಟವಾಡುವುದನ್ನು ಕಂಡು ಮುನಿಯು ನೀಡಿದ ಆರು ಮಂತ್ರಗಳಲ್ಲಿ ಒಂದನ್ನು ಉಚ್ಚರಿಸಲು ಮಗು ಜನಿಸುವುದು ಹೇಗೆ ನೋಡಬೇಕೆಂಬ ಕುತೂಹಲದಿಂದ ನದಿಯಲ್ಲಿ ಸ್ನಾನ ಮಾಡಿ ಸೂರ್ಯನಾರಾಯಣನ ಮಂತ್ರೋಚ್ಚಾರಣೆ ಮಾಡುತ್ತಿರುವಲ್ಲಿಯೇ ಭಗವಾನ್ ಸೂರ್ಯನು ನರರೂಪದಿಂದ ಬಂದು ಕುಂತಿಗೆ ಗರ್ಭದಾನ ಮಾಡಿದನು. ಆಗ ಎಚ್ಚರಗೊಂಡು '' ಸ್ವಾಮಿ ಲಗ್ನವಿಲ್ಲದಲೆ ಕನ್ಯೆಯಾದ ನನಗೆ ಗರ್ಭಧಾರಣವಾಯಿತು. ಶಿವ ಶಿವಾ ನನ್ನ ಗತಿ ಹೇಗೆ' ಅಂತಾ ಎನಲು '' ಕರ್ಣಾ'' ಅಂತಾ ಕರೆ, ಮಗು ಗರ್ಭದಿಂದ ಹೊರಬರುಲು ನೀನು ಮೊದಲಿನಂತೆ ಆಗುವಿ ಅಂತ ಹೇಳಿ ಸೂರ್ಯನು ಅಂತರ್ಧಾನನಾದನು. ಆಗ ಕುಂತಿಯು ಕರ್ಣಾ ಹೊರಗೆ ಬಾ ಅಂತ ಕರೆದ ಕೂಡಲೇ ಆಕೆಯ ಕರ್ಣದಿಂದ ಶಿಶುವು ಹೊರಬರಲು ವಟಪತ್ರದಲ್ಲಿರಿಸಿ ನದಿಯಲ್ಲಿ ಬಿಟ್ಟು ಸ್ನಾನ ಮಾಡಿ ಅರಮನೆಗೆ ಮರಳಿದಳು.
ಮುಂದೆ ಕುರುವಂಶದ ಪಾಂಡುರಾಜನ ಕೂಡ ಕುಂತಿ ವಿವಾಹವಾದಳು. ಕೆಲಕಾಲ ದಾಂಪತ್ಯ ಜೀವನ ಸಾಗಿತ್ತು. ಒಂದಾನೊಂದು ದಿನ ಪಾಂಡುರಾಜನು ಅರಣ್ಯಕ್ಕೆ ಬೇಟೆಯಾಡಲಿಕ್ಕೆ ಹೋದಾಗ, ಅಲ್ಲಿ ಮುನಿ ದಂಪತಿಗಳು ಮೃಗರೂಪ ಧರಿಸಿ ಮೈಥುನದಲ್ಲಿ ನಿರತರಾಗಿದ್ದನ್ನು ಕಂಡು ಅವುಗಳ ಮೇಲೆ ಬಿಟ್ಟ ಬಾಣದಿಂದ ಚೀರುತ್ತ ನರರೂಪಧರಿಸಿ ಆ ಮುನಿ ದಂಪತಿಗಳು ಹೇ ರಾಜನ್ , ನೀನು ನಿನ್ನ ಸತಿಯ ಕೂಡ ಮೈಥುನ ಮಾಡುವಾಗ ನಿನಗೆ ಮರಣ ಬರಲಿ ಅಂತ ಶಾಪ ನೀಡುತ್ತ ಪ್ರಾಣ ಬಿಟ್ಟರು. ಈ ವಾರ್ತೆಯನ್ನು ಭೀಷ್ಮ ಪಿತಾಮಹನಿಗೆ ತಿಳಿಸಿ ಅವರಿಂದ ಅಪ್ಪಣೆ ಪಡೆದ ಪಾಂಡು ರಾಜನು ತನ್ನ ಇಬ್ಬರೂ ಪತ್ನಿ ಸಮೇತ ಅಡವಿಯಲ್ಲಿ ಋಷಿಗಳ ಆಶ್ರಮಕ್ಕೆ ಸೇವೆಗಾಗಿ ಬಂದನು. ಒಂದು ದಿನ ಕುಂತಿಯು ತನ್ನ ಪತಿಯನ್ನು ಕುರಿತು ಹೇ ಪತಿದೇವಾ, ನನಗೆ ದೂರ್ವಾಸ ಮುನಿಗಳು ನೀಡಿದ ಮಂತ್ರೋಚ್ಚಾರಣೆಯಿಂದ ಪುತ್ರರು ಉದಯಿಸುವರು. ನಿಮ್ಮ ಅಪ್ಪಣೆಯಾದಲ್ಲಿ ಪುತ್ರರನ್ನು ಪಡೆಯುವೆ ಅಂತ ಕೇಳಲು ಅದಕ್ಕೆ ಸಮ್ಮತಿಸಿದನು. ಕುಂತಿಯು ಯಮರಾಯನ ಮಂತ್ರೋಚ್ಚಾರಣೆ ಮಾಡಿ ಧರ್ಮನನ್ನೂ, ವಾಯು ದೇವನ ಮಂತ್ರೋಚ್ಚಾರಣೆದಿಂದ ಭೀಮನನ್ನು, ಇಂದ್ರನ ಮಂತ್ರೋಚ್ಚಾರಣೆಯಿಂದ ಅರ್ಜುನನನ್ನು ಪಡೆದಳು. ಸವತಿಯಾದ ಮಾದ್ರಿಗೆ ಉಳಿದ ಮಂತ್ರವನ್ನು ತಿಳಿಸಿದಳು. ಆ ಪ್ರಕಾರ ಅಶ್ವಿನಿಕುಮಾರರಿಂದ ನಕುಲ, ಸಹದೇವ ಜನಿಸಿದರು. ಕಾಮಾಂಧನಾಗಿ ಚಿಕ್ಕ ಹೆಂಡತಿ ಮಾದ್ರಿಯ ಕೂಡ ರತಿಕ್ರೀಡೆ ಮಾಡುತ್ತಲೇ ಪಾಂಡುರಾಜನು ಸ್ವರ್ಗವಾಸಿಯಾದನು. ಐದು ಜನ ಪುತ್ರರೊಂದಿಗೆ ಕುಂತಿ, ಮಾದ್ರಿ ಇವರು ಹಸ್ತಿನಾಪುರಕ್ಕೆ ಆಗಮಿಸಿದರು.
ಹೇ ಸಾದ್ವಿಯೇ ಕೇಳು, ಪಾಂಚಾಲ ದೇಶದಲ್ಲಿ ದ್ರುಪದ ರಾಜನು ರಾಜ್ಯವಾಳುತ್ತಿದ್ದನು. ಆತನಿಗೆ ಸಂತಾನವಿದ್ದಿಲ್ಲ. ಪುತ್ರಕಾಮೇಷ್ಟಿ ಯಜ್ಞವನ್ನು ಮಾಡಿದನು. ಯಮ, ವಾಯು, ಇಂದ್ರ ಮತ್ತು ಅಶ್ವಿನಿ ಕುಮಾರರೀರ್ವರ ಪತ್ನಿ ಸಮೇತ ಮೂರ್ತಿಗಳನ್ನು ಹೋಮ ಕುಂಡದ ಮುಂದೆ ಸ್ಥಾಪನೆ ಮಾಡಿದನು. ವೈಭವದಿಂದ ಮಾಡಿದ ಯಜ್ಞಕ್ಕೆ ಪ್ರಸನ್ನನಾದ ಯಜ್ಞೇಶ್ವರನು ದೃಪದರಾಜನನ್ನು ಕುರಿತು, ನಿನ್ನ ಅಭಿಷ್ಟೆ ಏನು ಅಂತಾ ಕೇಳಿದನು. ಅದಕ್ಕೆ ದ್ರುಪದ ದಂಪತಿಗಳು, ಹೇ ಯಜ್ಞೆಶ್ವರನೇ ಪುತ್ರರತ್ನ ಮತ್ತು ಪಂಚಕನ್ನೆಯರನ್ನು ದಯಪಾಲಿಸಬೇಕು ಅಂತಾ ಬೇಡಿಕೊಂಡರು, ಆಗ ಯಳ್ಳೇಶ್ವರನು, ಹೇ ರಾಜನ ನೀನು ಸ್ಥಾಪಿಸಿದ ಮೂರ್ತಿಗಳ ಐವರ ಪತ್ನಿಗಳ ಅಂಶಗಳಿಂದ ಓರ್ವ ಪುತ್ರಿಯು ಹಾಗೂ ನಿನ್ನ ಅಂಶದಿಂದ ಓರ್ವ ಪುತ್ರ ಜನಿಸುವರು ಅಂತ ಆಶೀರ್ವದಿಸಿ ಅಂತರ್ಧಾನನಾದನು. ಬಳಿಕ ಯಜ್ಞದ ಪ್ರಸಾದವನ್ನು ದಂಪತಿಗಳು ಸ್ವೀಕರಿಸಿದರು.
ಮುಂದೆ ದ್ರುಪದ ರಾಣಿಯು ಗರ್ಭಿಣಿಯಾಗಿ ಪುತ್ರರತ್ನನಿಗೆ ಜನ್ಮ ನೀಡಿದಳು. ಎರಡನೇ ಗರ್ಭದಿಂದ ಕನ್ಯಾರತ್ನಕ್ಕೆ ಜನ್ಮ ನೀಡಿದಳು. ದೃಷ್ಟದ್ಯುಮ್ನ ಮತ್ತು ಪ್ರೌಪದಿ ಅಂತ ನಾಮಕರಣ ಮಾಡಿದರು. ಬೆಳೆದು ನಿಂತ ದ್ರೌಪದಿಗಾಗಿ ದ್ರುಪದ ರಾಜನು ಸ್ವಯಂವರವನ್ನು ಏರ್ಪಡಿಸಿದನು. ಅನೇಕ ದೇಶಗಳ ರಾಜಕುಮಾರರು ಸ್ವಯಂವರದಲ್ಲಿ ಭಾಗವಹಿಸಿದ್ದರು. ಮತ್ಸ್ಯಯಂತ್ರ ಭೇದಿಸಲು ಸಾಧ್ಯವಾಗದಾಯಿತು. ಬ್ರಾಹ್ಮಣ ವೇಷಧಾರಿ ಗಳಾದ ಪಾಂಡವರು ಸಹ ಉಪಸ್ಥಿತರಿದ್ದರು. ಅದರಲ್ಲಿ ಅರ್ಜುನನು ಮುಂದೆ ಬರಲು ಕ್ಷತ್ರಿಯರೆಲ್ಲರೂ ಗಹಗಹಿಸಿ ನಕ್ಕರು. ಆದರೆ ಸ್ವಯಂವರ ಇದ್ದುದರಿಂದ ದ್ರುಪದನು ವ್ಯಂಗೊಕ್ತಿಗಳಿಗೆ ಅವಕಾಶ ನೀಡಲಿಲ್ಲ. ರಾಜಕುಮಾರರು ಒಬ್ಬನೂ ಸಮರ್ಥನಾಗದೇ ಇದ್ದಲ್ಲಿ ಬ್ರಾಹ್ಮಣನು ಮುಂದೆ ಬಂದರೆ ತಪ್ಪೇನಿದೆ ಅಂತಾ ಹೇಳಿದನು. ನಂತರ ಬ್ರಾಹ್ಮಣ ವೇಷಧಾರಿ ಅರ್ಜುನನು ಲೀಲಾಜಾಲದಿಂದ ಧನುಸ್ಸನ್ನು ಎತ್ತಿ ಠೇ0ಕಾರ ಮಾಡುತ್ತಾ ತೈಲದಲ್ಲಿಯ ನೆರಳನ್ನು ನೋಡುತ್ತಾ ಮತ್ರ್ಯಯಂತ್ರವನ್ನು ಭೇದಿಸಿದನು . ದ್ರೌಪದಿಯು ವರಮಾಲೆಯನ್ನು ಅರ್ಜುನನಿಗೆ ಹಾಕಿದಳು. ಕಿವುಡಿಯಾದ ಕುಂತಿಗೆ ಹೆಣ್ಣನ್ನು ಗೆದ್ದುಕೊಂಡು ಬಂದದ್ದನ್ನು ಹಣ್ಣು ಅಂತಾ ತಿಳಿದು ಐದು ಜನ ಹಂಚಿಕೊಳ್ಳಿರಿ ಅಂತ ಹೇಳಿದ್ದಕ್ಕೆ ದ್ರೌಪದಿಯು ಪಂಚಪಾಂಡವರ ಜೊತೆಗೆ ವಿವಾಹವಾದಳು. ಒಂದೊಂದು ವರ್ಷ ಒಬ್ಬರ ಕಡೆ ಇರಬೇಕೆಂಬ ವಿಧಾನದ ಪ್ರಕಾರ ದ್ರೌಪದಿಯು ಧರ್ಮರಾಜನ ಬಳಿ ಹೋದಾಗ ಶ್ಯಾಮಲೆಯಂತೆ, ಭೀಮನ ಬಳಿ ಇದ್ದಾಗ ಅಂಜನೆಯಂತೆ, ಅರ್ಜುನ ಹತ್ತಿರ ಶಚಿಯಂತೆ, ನಕುಲ ಸಹದೇವರ ಜೊತೆ ಅಶ್ವಿನಿ ಕುಮಾರರ ಪತ್ನಿಯರಂತೆ ಅಂಶೀಭೂತಳಾಗಿ ಅವರವರ ಆಜ್ಞೆಯ ಪ್ರಕಾರ ದಾಂಪತ್ಯ ಜೀವನ ಸಾಗಿಸುತ್ತಿದ್ದಳು. ಈ ಪ್ರಕಾರ ಇರುವಾಗ ದೌಪದಿಯ ಪಾತಿವ್ರತ್ಯ ಅದೆಂತು ಕೆಡುವದು? ಮಹಾನ್ ಪತಿವ್ರತೆಯಾದ ದ್ರೌಪದಿಯ ಸರಸ ಕಥಾಮೃತ ಪಾನ ಮಾಡಲು ಪಾಪ ನಾಶವಾಗುವದು. ಶ್ರೇಷ್ಠವಾದ ಪಾತಿವ್ರತ್ಯ ಧರ್ಮದ ಪ್ರಭಾವದಿಂದ ದ್ರೌಪದಿಯು ಕಾಮಾದಿ ಅರಿಷಡ್ವರ್ಗಗಳನ್ನು ಜಯಿಸಿದ್ದಳು. ಇವು ಮನ್ಮಥನಿಗೆ ಮೊರೆಹೋಗಲು ದ್ರೌಪದಿಯ ಹೃದಯಕ್ಕೆ ಪುಷ್ಟ ಬಾಣವನ್ನು ಬಿಟ್ಟನು. ದ್ರೌಪದಿಯು ತನ್ನ ಪತಿ ಧ್ಯಾನದಲ್ಲಿ ಲೀನಳಾದಳು. ಮನ್ಮಥನು ಅವಳ ಸಮೀಪ ಹೋಗಿ ಚೀರತೊಡಗಿದನು. ಅವನ ರಭಸಕ್ಕೆ ಕಣ್ತೆರೆದು ಛೀ ಪಾಪಿಯೇ ಪಾತಿವ್ರತ್ಯ ಭಂಗಕ್ಕಾಗಿ ತಡವರಿಸುವ ಲಜ್ಜೆಗೇಡಿ, ಹರಸ ಉರಿನೇತ್ರದಿಂದ ಭಸ್ಮವಾಗಿ ಪುನಃ ತನುವನ್ನು ಪಡೆದುಕೊಂಡು ನಿನ್ನ ಕಾಯಕ ಬಿಡದಿರುವುದರಿಂದ, ಈ ಸುಂದರ ಕಾಯ ಉರಿಯಲಿ ನೀನು ಅನಂಗನಾಗಿ ಅಂತ ಶಾಪ ನೀಡಿದಳು. ಇದಕ್ಕೆಲ್ಲಾ ಆಕೆಯು ಪಾತಿವ್ರತ್ಯ ಕಾರಣವೆಂಬುದನ್ನು ತಿಳಿದುಕೊ ಸಾದ್ವಿ ಅಂತಾ ಸಿದ್ಧನು ದ್ರೌಪದಿ ಬಗ್ಗೆ ಉಂಟಾದ ಸಂದೇಹಗಳನ್ನು ನಿವಾರಣೆ ಮಾಡಿದನು. ಆಗ ಆ ಸ್ತ್ರೀಯು ಸ್ವಾಮೀ ಧನ್ಯನಾದೆ. ತಾವು ಹೇಳಿದ ಪಯೋವೃತ ಆಚರಣೆ ಮಾಡುವಲ್ಲಿ ನನಗೆ ಆಶೀರ್ವದಿಸು ಅಂತಾ ನಮಿಸಿದಳು. ಆಗ ಸಿದ್ಧನು ಹರ್ಷದಿಂದ ಆಶೀರ್ವದಿಸಿದನು. ನಂತರ ಆ ಮಹಿಳೆಯು ಅಲ್ಲಿಂದ ತೆರಳಿದಳು.
👇👇👇👇👇👇👇👇👇👇👇👇👇👇
ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
ಎಲ್ಲಾ ಕಥೆಗಳ ಲಿಂಕಗಳು
👉ಸಿದ್ಧಾರೂಢ ಭಾಗವತ ಕಥಾ ಸಂಗ್ರಹ 👉🛃
ಈ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ
1)WhatsApp shareಗಾಗಿ click ಮಾಡಿ📲☎️
2)Facebook shareಗಾಗಿ👉
3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚
«««««ಓಂ ನಮಃ ಶಿವಾಯ »»»»»»»
