ಮಂಗಳಗಿರಿಯಲ್ಲಿ ಕ್ಷುದ್ರ ಸಿದ್ದಿಗಳನ್ನು ಸಾದಿಸುವ ಒಬ್ಬ ಬ್ರಾಹ್ಮಣನಿಗೆ ವರ್ಣಾಶ್ರಮ, ಹೇಳಿದ ಸಿದ್ಧಾರೂಢರು

 ಮಂಗಳಗಿರಿಯಲ್ಲಿ ಕ್ಷುದ್ರ ಸಿದ್ದಿಗಳನ್ನು ಸಾದಿಸುವ ಒಬ್ಬ ಬ್ರಾಹ್ಮಣನಿಗೆ ವರ್ಣಾಶ್ರಮ, ಮುನಿ, ಕುಟೀಚಕಯತಿ, ಬಹೂದಕಯತಿ, ಹಂಸ, ಪರಮಹಂಸ, ಅತ್ಯಾಶ್ರಮಿ, ಅವಧೂತರ ಸ್ಥಿತಿಯನ್ನು ವಿವರಿಸಿ, ಸಿದ್ದನು ಕ್ಷುದ್ರ ಶಾಸ್ತ್ರ ಗಳನ್ನು ತ್ಯಾಗ ಮಾಡಲು ಹಚ್ಚಿದ್ದು, 



ಸಿದ್ಧನು  ಮೂರು ವರ್ಷಗಳವರೆಗೆ ಕೃಷ್ಣಾ ನದಿ ತಟಾಕದಲ್ಲಿದ್ದು ಕುರುಬರ ಜೊತೆಗೆ ಕುರಿ ಕಾಯುತ್ತಾ ಹಾಲು ಕುಡಿಯುತ್ತ ಕಾಲ ಕಳೆದನು. ಮುಂದೆ ಸಂಚಾರ ಮಾಡುತ್ತ ಮಂಗಳಗಿರಿಗೆ  ಬಂದನು. ಅಲ್ಲಿಯ  ದೇವಾಲಯ ಪ್ರವೇಶಿಸಿ ಪ್ರಸಾದ ಕೇಳಲು, ಅರ್ಚಕನು ಕೊಟ್ಟ ಪಾನಕವನ್ನು ಸೇವಿಸಿದನು. ದೇವರೇ ನಿನಗೆ ಜಯವಾಗಲಿ ನಿಮಗೆ ಯಾವ ಕೊರತೆಯಾಗದಿರಲಿ ಅಂತಾ ಅಭಯ ಹಸ್ತಗಳಿಂದ ಆಶೀರ್ವದಿಸಿದನು. ಆಗ ಪೂಜಾರಿಯು  ಸಿದ್ದನನ್ನು ಕುರಿತು, ಚದುರನೇ ನೀವು ದೇವರಿಗೆ ಆಶೀರ್ವಾದ ಮಾಡುವದು ಯೋಗ್ಯವೆ ಅಂತಾ ಪ್ರಶ್ನಿಸಿದನು. ಅದಕ್ಕೆ ಸಿದ್ಧನು, ಅರ್ಚಕನೆ, ಮೊದಲು ಬ್ರಹ್ಮ ಸಗುಣರೂಪದಿಂದ ಸಾವಯವವೆನಿಸಿ ಉತ್ಪತ್ತಿ ಸ್ಥಿತಿ ಲಯಾದಿಗಳನ್ನು ಮಾಡುವನು ಜಗತ್ತಿಗೆ ಆಧಾರ ಪರಬ್ರಹ್ಮ ಸಾಕ್ಷಾತ್ಕಾರದಿಂದ ಬ್ರಹ್ಮನೇ ತಾನೆಂಬ ನಿಜ ಪರಬ್ರಹ್ಮನಿಷ್ಠೆ ಮಹಾತ್ಮರ ಚರಣ ಸ್ಪರ್ಶವನ್ನು ಗಂಗಾಮಾತೆಯು ಇಚ್ಛೆಪಟ್ಟಂತೆ ಎಲ್ಲ ದೇವತೆಗಳು ಅಪೇಕ್ಷೆ ಪಡುವುದು ಯೋಗ್ಯವೇ ಇರುವುದು ಎಂದನು. ಅದಕ್ಕೆ ಅರ್ಚಕನು ತಲೆದೂಗಿ ಸಿದ್ಧನಿಗೆ ವಂದಿಸಿದನು.

ಬಳಿಕ ಆ ಮಂಗಳ ಗಿರಿಯಿಂದ ಸಿದ್ಧನು  ಕೆಳಗೆ ಇಳಿದು ಬರುತ್ತ ಮುಂದೆ ಹಳೆಯದಾದ ಗವಿಯನ್ನು ಪ್ರವೇಶಿಸಿದನು. ಅಲ್ಲಿ ಕ್ಷುದ್ರ ಸಿದ್ಧಿಯ ಬ್ರಾಹ್ಮಣನೋರ್ವನನ್ನು ಕಂಡನು, ಆ ಬ್ರಾಹ್ಮಣನು ಹಸನ್ಮುಖನಾಗಿ  ಕುಕ್ಕುಟ, ನಾಥಕಲ್ಪ, ಪರ್ವತಕಲ್ಪ, ಇವುಗಳ ಮೂಲಿಕಾ ರಸಗಳಿಂದ ಸ್ತಂಭನ, ವಶೀಕರಣ, ಪಾದುಕಾ, ಅಂಜನಾ ಘಟಿಕಾರಿಗಳಲ್ಲಿ ಇಹಸುಖ ನೀಡುವ ಶಾಸ್ತ್ರಗಳನ್ನು ಶ್ರದ್ಧೆಯಿಂದ ಪಠಣ ಮಾಡುತ್ತಿದ್ದನು. ಆ ವಿಪ್ರನಿಗೆ ಸಿದ್ಧನು  ನೀತಿಯನ್ನು ಹೇಳತೊಡಗಿದನು. ಹೇ ಬ್ರಾಹ್ಮಣನೆ  ನೀನು ನಡೆಸುತ್ತಿರುವ ಕರ್ತವ್ಯವೇನು? ನೀನು ಶ್ರೇಷ್ಠನಾದ ಬ್ರಾಹ್ಮಣನಿದ್ದು, ಅತಿ ಕ್ಷುದ್ರವಾದ ಶಾಸ್ತ್ರಗಳನ್ನು ಹರ್ಷದಿಂದ ಪಠಿಸಬಹುದೆ? ಕಲ್ಪವೃಕ್ಷವನ್ನು ಕಡಿದು ಹಾಕಿ ಈಚಲು ಮರವನ್ನು ಹಚ್ಚುವಂತೆ, ನೀನು ಸತ್ಕರ್ಮವನ್ನು ತ್ಯಾಗ ಮಾಡಿ ನಿರಂತರ ದುಷ್ಕರ್ಮ ಮಾಡುತ್ತಾ ನಡೆದರೆ, ಇಹಲೋಕದಲ್ಲಿ ನಿಂದೆಗೆ ಪಾತ್ರನಾಗುವಿ ಯಲ್ಲದೆ  ಪರಲೋಕದಲ್ಲಿಯೂ ಅತಿಶಯ ದುಃಖವಾಗುವದೆಂದು  ಹೇಳುವದನ್ನು ನೀನು  ಕೇಳಿಲ್ಲವೇ? ಭೂಲೋಕದಲ್ಲಿ ವೇದಗಳಲ್ಲಿ ಹೇಳಿದ ಶ್ರೌತ, ಸ್ಮಾರ್ತ ಕರ್ಮಗಳನ್ನಾಚರಿಸಿದವನು, ಪುಣ್ಯಗಳ ಫಲ ಭೋಗಿಸಲು ಸ್ವರ್ಗ ಲೋಕಾದಿಗಳಿಗೆ ಗಮನಿಸಿ, ಪುಣ್ಯ ತೀರಿದ ಕೂಡಲೇ ಅಲ್ಲಿಂದ ತಳ್ಳಲ್ಪಡುವನು. ಇಂತಹ ಸತ್ಕರ್ಮದಿಂದಲೇ ಬಳಲುವಾಗ ಹೇಯವಾದ ಕ್ಷುದ್ರವಾದ ಶಾಸ್ತ್ರಗಳಿಂದ ಹೇಗೆ ಸುಖ ಲಭಿಸಿತು? ವಿಚಾರ ಮಾಡಿ ನೋಡು? ಪರಮ ಶಿಷ್ಯನ ಅಂತಃಕರಣದಲ್ಲಿ ಮಲ, ವಿಕ್ಷೇಪ ಆವರಣಗಳು ನಾಶವಾಗಿ ಬ್ರಹ್ಮ ಸ್ವರೂಪನೆ ನೀನಿರುವಿ ಅಂತ ತತ್ವಮಸಿಯನ್ನು ಅರುಹಿ ನಿಜಸ್ಥಿತಿಯಲ್ಲಿ ಇರಿಸುವಾತ ಪರಮ ಶ್ರೋತ್ರೀಯ ಬ್ರಹ್ಮನಿಸ್ಟನೆ ಧರೆಯಲಿ ಗುರುಪದಕ್ಕೆ ಯೋಗ್ಯನೆಂಬುದನ್ನು ತಿಳಿದುಕೊ ಅಂತ ಹೇಳಿದನು.


∞ವರ್ಣಾಶ್ರಮ ಧರ್ಮಗಳ ವಿವರ∞


ಸ್ವಾರ್ಥರಹಿತನಾಗಿ, ಷೋಡಶ ಕರ್ಮದಿಗಳಿಂದ ಅಂತಃಕರಣ ಶುದ್ದಿಯಾಗಿ, ಉಚ್ಚ ನೀಚರೆಂಬ ಭಾವ ಭೇದವಿಲ್ಲದೆ ಸಮಾನ ದೃಷ್ಟಿಕೋನದಿಂದ ಷಟ್ಕರ್ಮಗಳನ್ನು ಮಾಡುತ್ತಲೂ ಮಾನವ ಮಾತ್ರರಿಗೆಲ್ಲ  ಹಾಗೂ ದೇವಾನು ದೇವತೆಗಳಿಗೆಲ್ಲ ಹವಿಸ್ಸನ್ನು ಸಲ್ಲಿಸಲು ಯಜ್ಞಯಾಗಾದಿಗಳಿಂದ ಸಕಲರ ಹಿತವನ್ನು ಬಯಸುವವನೆ  ನಿಜವಾದ ಬ್ರಾಹ್ಮಣನು, ಸರ್ವಶಾಸ್ತ್ರಗಳನ್ನು ತಿಳಿದುಕೊಂಡು ದ್ವಿಜ, ಮುನಿ, ಗುರುಗಳಲ್ಲಿ ದೈವತ್ವ ಭಾವವುಳ್ಳವನಾಗಿ ಸ್ವಾರ್ಥರಹಿತ ಧರ್ಮವನ್ನು ಸ್ಥಾಪಿಸಿ ಪ್ರಜೆಗಳನ್ನು ತನ್ನ ಮಕ್ಕಳಂತೆ ಪಾಲನ ಮಾಡುವ ಕೀರ್ತಿಶಾಲಿಯೇ  ಯೋಗ್ಯನಾದ ಕ್ಷತ್ರಿಯನು, ರಾಜ, ಬ್ರಾಹ್ಮಣರ ಸೇವಾರತನೂ, ಯಜ್ಞಯಾಗಾದಿಗಳಿಗೆಲ್ಲ ಸಾಹಿತ್ಯಗಳನ್ನು ಒದಗಿಸುವವನೂ, ಸೂಕ್ತವಾದ ಧೋರಣೆಯಿಂದ ಕ್ರಯ ವಿಕ್ರಯ ಕರ್ತವ್ಯರತ ಉತ್ತಮ ಕೆಡಕುಗಳ ಬಗ್ಗೆ ಪದಾರ್ಥಗಳ ಚಿಕಿತ್ಸೆ ಮಾಡಿ ಉತ್ತಮ ಪದಾರ್ಥಗಳ ವಿಕ್ರಯ ಮಾಡುತ್ತಾ ಧರ್ಮಾಚರಣೆಯಿಂದ ಧನಲಾಭ ಹಾಗೂ ಪುಣ್ಯ ಸಂಪಾದಿಸುವವನೆ ವೈಶ್ಯನು. ಹರ್ಷದಿಂದ ತ್ರೈವರ್ಣದವರ ಸೇವಕನಾಗಿರುತ್ತಾ ಬ್ರಾಹ್ಮಣ ಅನುಗ್ರಹ, ರಾಜನ ರಕ್ಷಣೆ, ವೈಶ್ಯನಿಗೆ ಸಹಾಯಕನು ಎಲ್ಲರಲ್ಲಿಯೂ ನಯ ವಿನಯಗಳಿಂದಲೂ ಸರ್ವದೇವತಾರ್ಚನ ಮಾಡುವವನೇ ಶೂದ್ರನು.


ಬಾಲ್ಯದಲ್ಲಿ ಗುರುಕುಲವಾಸದಲ್ಲಿದ್ದು, ವೇದಾಧ್ಯಯನ, ಸಂಧ್ಯಾಕರ್ಮಗಳನ್ನು ತಿಳಿದುಕೊಳ್ಳುತ್ತಾ ಗಾಯತ್ರಿ ಮಂತ್ರೋಚ್ಚಾರಣೆಯಿಂದ  ಸದ್ಗುರುವಿನ ಸೇವಾನಿರತ ಭಿಕ್ಷಾನ್ನದಿಂದ ಭೋಜನ ಮಾಡುವಾತನೇ ಬ್ರಹ್ಮಚಾರಿಯು. ಗುರುಕುಲವಾಸದಲ್ಲಿ ಸಕಲ ವಿದ್ಯಾ ಪಾರಂಗತನಾಗಿ ಗುರುದಕ್ಷಿಣೆ ನೀಡಿ ಅಲ್ಲಿಂದ ತನ್ನ ಸ್ವಗೃಹಕ್ಕೆ ಬಂದು ಪಿತೃಋಣವಿಮೋಚನೆಗಾಗಿ ಗೃಹಸ್ಥಾಶ್ರಮ ಸ್ವೀಕರಿಸಬೇಕು. ಸುಗುಣವತಿಯಾದ ಕನ್ಯೆಯ  ಕೂಡ ವಿವಾಹ ಮಾಡಿಕೊಂಡು ಗುರುಗಳ ತಂದೆ ತಾಯಿಗಳ ಸೇವೆ ಮಾಡಬೇಕು. ವೇದಾಧ್ಯಯನದಂತೆ ಯಜ್ಞ ಯಾಗಾದಿಗಳಿಂದ ಅಗ್ನಿಹೋತ್ರದಿಕಗಳಿಂದ ದೈವಾರ್ಚನೆ ಮಾಡುತ್ತಲೂ ಅತಿಥಿ ಅಭ್ಯಾಗತರಿಗೆ  ತೃಪ್ತಿಗೊಳಿಸುತ್ತಿರಬೇಕು. ರುತುಧರ್ಮವನ್ನರಿತು ಸಂತಾನ ಪ್ರಾಪ್ತಿಗಾಗಿ ರುತುಧರ್ಮದ ಪ್ರಕಾರ ಪತ್ನಿಗೆ ಗರ್ಭದಾನ ಮಾಡಬೇಕು. ಪುತ್ರ ಸಂತಾನ ಪಡೆದು ಪಿತೃಋಣವನ್ನು ತೀರಿಸಬೇಕು. ಏಕಪತ್ನಿ ವ್ರತಸ್ಥನಾಗಿ ಸಜ್ಜನ ಸಂಗದಿಂದಲೂ  ಎಲ್ಲರಲ್ಲಿಯೂ ಸವಿನುಡಿಯಿಂದ ಸರಳತೆಯಿಂದಲೂ , ದಯಾ, ಶಾಂತಿ, ಕ್ಷಮೆ, ವರವಿವೇಕ, ಸುಶೀಲತೆ, ಕಾಮದಿಗಳನ್ನು ಜಯಿಸಿ, ಸತ್ಕೀರ್ತಿಯುತನಾಗಬೇಕು. ಹರಿಹರರಲ್ಲಿ ಅಭೇದದಿಂದಲೂ ಭೂತದಯೆ ಇತ್ಯಾದಿಗಳಿಂದ ಕೂಡಿದವನೇ ನಿಜವಾದ ಗೃಹಸ್ಥನು. ಪರಮ ಪಾತಿವ್ರತ್ಯ ಧರ್ಮದಿಂದಿರುವಳೇ ನಿಜವಾದ ಗೃಹಿಣಿಯು, ತನ್ನ ಸಲುವಾಗಿ ಆಸೆ ಇಲ್ಲದವನೇ ನಿಜವಾದ ಶ್ರೇಷ್ಠಮಂತ್ರಿ, ಹರುಷದಿಂದ ತಂದೆ ತಾಯಿಗಳ ಸೇವೆ ಮಾಡುವವನೇ  ಧಾರ್ಮಿಕನು.  ದೇವರನ್ನು ದೃಢ ಭಕ್ತಿಯಿಂದ ಸತತವಾಗಿ ಭಜಿಸುವವನೇ ಭಕ್ತನು. ಹೊಟ್ಟೆಗಾಗಿ ಆಶೆ ಮಾಡಿದೆ  ನಿರ್ಭಯದಿಂದಿರುವಾತನೇ ಶೂರನು, ಬಡವರಿಗೆ ತೊಂದರೆ ಕೊಡದೆ ವ್ಯವಹಾರ ಮಾಡುವಾಗ ಅವರ ಆಭರಣಗಳ ಆಸೆಯನ್ನು ಮಾಡದವನೇ ಧನಿಕನು. 


ಹೇ ಬ್ರಾಹ್ಮಣೋತ್ತಮನೇ, ಇನ್ನು ಮುನಿ, ಕುಟೀಚಕಯತಿ, ಬಹೂದಕಯತಿ, ಹಂಸ, ಪರಮಹಂಸ, ಅತ್ಯಾಶ್ರಮಿ, ಅವಧೂತ ಇವರೆಲ್ಲರ ಬಗ್ಗೆ ಸವಿಸ್ತಾರವಾಗಿ ಹೇಳುವೆ, ಏಕಾಗ್ರ ಚಿತ್ತದಿಂದ ಕೇಳು ಅಂತ ಸಿದ್ಧನು  ಮುಂದೆ ಹೇಳತೊಡಗಿದನು. 


ಹೇ ಬ್ರಾಹ್ಮಣನೇ  ಕೇಳು, ಗೃಹಸ್ಥ ಧರ್ಮವನ್ನು ಪೂರ್ಣಗೊಳಿಸಿ, ವೈರಾಗ್ಯ ಸಂಪನ್ನನಾಗಿ, ಮನೆತನದ ಎಲ್ಲ ಭಾರವನ್ನು ತನ್ನ ನಿಜವಾದ ಪುತ್ರರಿಗೆ ಒಪ್ಪಿಸಿ, ತನ್ನ ಧರ್ಮಪತ್ನಿಯ  ಪರವಾನಿಗೆ  ಪಡೆದು ಸರ್ವಸಂಗ ಪರಿತ್ಯಾಗ ಮಾಡಿ  ತಪಸ್ಸನ್ನಾಚರಿಸಲು ಉತ್ತರಾಯಣ ಶುಕ್ಲಪಕ್ಷ, ಶುಭಾ ನಕ್ಷತ್ರ, ಶುಭ ತಿಥಿ, ಶುಭಲಗ್ನ, ಶುಭಮುಹೂರ್ತದಲ್ಲಿ ಹೊರಟು ಸಂಚಾರ ಮಾಡುತ್ತಾ ಪುಣ್ಯಸ್ಥಳದ ಅರಣ್ಯಕ್ಕೆ ಆಗಮಿಸಬೇಕು. ಸಂಸ್ಕಾರ ಪೂರ್ವಕ ಜಟಾ ಯಜ್ಞೋಪವೀತಧಾರಣೆ ಮಾಡುತ್ತಾ ಬಿದಿರಿನ ಬೆತ್ತ ಕೃಷ್ಣಾಜಿನದೊಂದಿಗೆ ನಾರು  ಬಟ್ಟೆಯನ್ನುಟ್ಟು ಕೊರಳಲ್ಲಿ ರುದ್ರಾಕ್ಷಿ ಮಾಲಾ, ಹಣೆಯಲ್ಲಿ ವಿಭೂತಿಧಾರಣೆ, ಮೂರು ಸಲ ಸ್ನಾನ ಮಾಡುತ್ತಾ ಶಿವಾರ್ಚನೆ, ಅಷ್ಟಾಂಗ ಯೋಗಾನು ಸಂಧಾನ, ಪಂಚ ಮಹಾಯಜ್ಞಗಳನ್ನು ಮಾಡುತ್ತಾ ಶಾಂಭವಿವೃತ , ಕೃಛ್ರಚಾಂದ್ರಾಯಣ ಉಪವಾಸ ಮಾಡುತ್ತ ನೀರು, ಫಲ, ಕಂದಮೂಲ ಸೇವಿಸುತ್ತ ಬೆಳೆದ ಗಡ್ಡ, ಮೀಸೆ, ಉಗುರುಗಳನ್ನು ಕತ್ತರಿಸದೆ  ಗ್ರಾಮ ಪಟ್ಟಣಗಳಿಗೆ ಹೋಗದೆ, ಯಾರಿಗೂ ಏನನ್ನೂ ಬೇಡದೆ, ತಾವಾಗಿ ತಿಳಿದುಕೊಟ್ಟರೂ ಅವನ್ನು ಸ್ವೀಕಾರ ಮಾಡದೆ, ಗಾಳಿ, ಮಳೆ, ಬಿಸಿಲುಗಳ ಸಹನೆಯಿಂದ ತಾನು ಪಂಚಾಗ್ನಿ ಮಧ್ಯದಲ್ಲಿ ಕುಳಿತು ಶಿವನಧ್ಯಾನದಿಂದ ಇದ್ದುಕೊಂಡು ದೇಹವನ್ನು ಕ್ಷೀಣಿಸುತ್ತ ಕ್ರಮವತ್ ತಪಸ್ಸಾಚರಿಸುವವನೇ ಮುನಿಯೆನಿಸಿ ಕೊಳ್ಳುವನು. ಔದುಂಬರ, ಪಾರ್ಣಮ ವೈಯಿಪಾಸಕ ಮತ್ತು ಪ್ರಕ್ಷಾಳಿಕ ಅಂತಾ ನಾಲ್ಕು

ಪ್ರಕಾರದ ಮುನಿಗಳಿರುವರು. 


ಗೃಹಸ್ಥ, ವಾನಪ್ರಸ್ಥ, ಬ್ರಹ್ಮಚಾರಿ, ಸನ್ಯಾಸಿ ಇವರು ದೃಢತರ ವೈರಾಗ್ಯವನ್ನು ಧರಿಸಿ ಅತ್ಯಾಶ್ರಮವನ್ನು ಕೈಕೊಳ್ಳಬೇಕು. ಶಿಖಾ, ಯಜ್ಞೋಪವೀತ,  ಕಾಷಾಯ ಕಮಂಡಲ, ತ್ರಿಪುಂಡ್ರ, ಪಾದುಕೆಗಳಿಂದ ಭೂಷಿತ, ಗಾಯತ್ರಿ ಅಥವಾ ಪಂಚಾಕ್ಷರಿ ಮಂತ್ರ ಜಪಿಸುತ್ತ ಭಕ್ತಿಯಿಂದ ಪೂಜೆ ಮಾಡಿ, ಭಿಕ್ಷಾನ್ನದಿಂದ ಜೀವಿಸಿರುವವನೇ ಕುಟೀಚಕಯತಿ ಎಂದು ಕರೆಯಲ್ಪಡುವನು.


ಏಕಶಿಖಾ ಯಜ್ಞೋಪವಿತ ಧರಿಸಿ, ಗೋವಿನ ಕೇಶದ ಹಗ್ಗದ ಹುರಿಯಿಂದ ಮೂರು ಬಿದಿರುಗಳ ದಂಡಗಳನ್ನು ಕಟ್ಟಲ್ಪಟ್ಟು, ಕೈಯಲ್ಲಿ ಮಣ್ಣಿನ ಪಾತ್ರೆಯನ್ನು ಹಿಡಿದು, ಕೌಪೀನ ಧರಿಸಿದ,  ಕೃಷ್ಣಾಜಿನ, ಪಾದುಕೆ, ರುದ್ರಾಕ್ಷಿ ಮಾಲಾ ಭೂಷಿತ, ಭಸ್ಮ ಸ್ನಾನ ಮಾಡುವ ವೇದಾಧ್ಯಯನವನ್ನು ತೊರೆದು, ಯೋಗದಂಡವುಳ್ಳವನಾಗಿ ಹರನ ಪೂಜಾಧ್ಯಾನಗಳನ್ನು ತ್ರಿಕಾಲ ಮಾಡುತ್ತಾ, ಪ್ರಣವ ಹಾಗೂ ಸಾವಿತ್ರಿ ಜಪ ಮಾಡುತ್ತಾ ಬಂಧು, ಬಳಗ, ಪುತ್ರರ ಗೃಹಕ್ಕೆ ಹೋಗದೆ  ಇತರೆ ಏಳು ಜನರ ಮನೆಗಳಿಂದ ಮಾತ್ರ ತಂದ ಅನ್ನವನ್ನು ಉಂಡ ವೈರಾಗ್ಯಶಾಲಿಯೇ  ಬಹೂದಕಯತಿ ಎಂದು ಕರೆಯಲ್ಪಡುವನು.


ಸಂಸಾರವನ್ನು ತ್ಯಾಗ ಮಾಡಿ, ಯಜ್ಞೋಪವೀತ  ಹಾಗೂ ಕೌಪೀನಧಾರಿ, ಕಮಂಡಲಧಾರಿ, ರುದ್ರಾಕ್ಷಿಮಾಲಾ ಹಾಕಿಕೊಂಡು ಪ್ರಣವ, ಸಾವಿತ್ರಿ, ಹಂಸ ಜಪಾದಿಗಳನ್ನು ತ್ರಿಕಾಲದಲ್ಲಿ ಮಾಡುತ್ತಾ, ಸದ್ಗುರು ವಂದನೆ ಮಾಡುತ್ತಾ, ದಿನಕ್ಕೊಂದು ಸಲ ಭಿಕ್ಷೆ ಬೇಡಿದ್ದರಲ್ಲಿ ಎಂಟು ತುತ್ತು ಮಾತ್ರ ಸೇವಿಸಿ, ಉಳಿದದ್ದನ್ನು ಅಂಗವಿಕಲರಿಗೆ ಕೊಟ್ಟು ತೃಪ್ತಿ ಪಡುತ್ತಾ, ನಿಜವಾದ ಮೋಕ್ಷಾಪೇಕ್ಷೆಯುಳ್ಳವನೇ ಹಂಸಯತಿ ಎನಿಸುವನು.


ಯಜ್ಞೋಪವೀತ, ಶಿಖಾ, ಕಮಂಡಲ, ತ್ರಿದಂಡಧಾರಿ ಅಗ್ನಿಸ್ನಾನ ಮತ್ತು ಮಾನಸಿಕ ಸ್ನಾನ ಹಾಗೂ ಭಸ್ಮಸ್ನಾನ ಮಾಡಿ ಕೊರಳಲ್ಲಿ ರುದ್ರಾಕ್ಷಿ ಮಾಲೆ ಧರಿಸಿ ಭಿಕ್ಷಾನ್ನದಲ್ಲಿ ಮಿತಿಯಿಂದ ಸ್ವೀಕರಿಸುತ್ತಾ ಹಂಸ, ಪ್ರಣವ ಮಂತ್ರಗಳ ನೂರೆಂಟು ಜಪ ಮಾಡುತ್ತಾ, ಪ್ರಾಣಾಯಾಮ ದೊಂದಿಗೆ ಇಷ್ಟ ದೈವತ  ಆರಾಧನೆ, ಧ್ಯಾನ ಮಾಡುತ್ತಾ, ಪರತರ ಆತ್ಮ ಜ್ಞಾನ ಸಂಪಾದನೆಯಲ್ಲಿ ದೃಢಚಿತ್ತವುಳ್ಳವನಾಗಿ ನಿರಂತರ ಶುಚಿತ್ವ ಆಚರಣೆಯಿಂದ ಇರುವ ವೈರಾಗ್ಯಶಾಲಿ ಶಿವಯೋಗಿಯೇ  ಪರಮಹಂಸ ಎನಿಸುವನು. 


ಮೇಲೆ ಹೇಳಿದ ನಾಲ್ಕು ಆಶ್ರಮಗಳು ಪ್ರಕಾರ ಆಚರಣೆಯಿಂದ ಅಂತಃಕರಣ ಪರಿಶುದ್ಧವಾಗಿರುವದು. ಸಾಧನ ಚತುಷ್ಟಯ ಸಂಪನ್ನತೆಯುಳ್ಳವನಾಗಿ ಪರಮ ಗುರೂಪದೇಶದಿಂದ ವರವೇದಾಂತ ಸಿದ್ಧಾಂತದ  ಕಡೆ ಗಮನ ನೀಡಿವನು. ಜೀವ ಬ್ರಹ್ಮರೈಕ್ಯತೆಯ ಜ್ಞಾನದಿಂದ ಪರಿಪೂರ್ಣ, ಚಿತ್ ಸುಖ, ನಿರವಯವ ನಿಜ ನಿತ್ಯ ಸದ್ರೂಪ ಪರಮ ಶುದ್ಧವಾದ ಅದ್ವೈತ  ಸಿದ್ಧಿಯಿಂದ ದೊರೆತ ಜ್ಞಾನಕ್ಕೆ ಸರಿ ಸಾಟಿಯಾದ ಮತ್ತೊಂದು ಇಲ್ಲ ಅಂತ ಶೃತಿ ಗುರುಸ್ವಾನುಭವಗಳಿಂದ ಅರಿತುಕೊಳ್ಳುವನು. ಆಯಾ ಆಶ್ರಮದ  ಮೋಹವನ್ನು ತ್ಯಜಿಸಿ  ವಿಧಿನಿಷೇಧಗಳಿಂದ ತ್ರೈಗುಣ್ಯ  ಪದದಲ್ಲಿ ಆನಂದಪಟ್ಟು  ಸರ್ವರಿಗೂ ಪೂಜ್ಯನಾಗಿ, ಯಾವಾಗಲೂ ಆನಂದದ ಉನ್ಮಾದದಲ್ಲಿ ಉಳಿದುಕೊಂಡು ಸತ್ಯವಾದ ದೃಢವಾದ ಅಪರೋಕ್ಷ ಜ್ಞಾನದಲ್ಲಿ ಮೆರೆಯುತ ಕೃತ ಕೃತ್ಯತೆಯಿಂದ ಇರುವಾತನೆ ಅವಧೂತನೆನಿಸುವನು. ಈತನು ಜೀವನ್ಮುಕ್ತನೆಂದೂ ಪರಮ ಭಗವತ್ ಭಕ್ತನೆಂದೂ , ಸ್ಥಿತಪ್ರಜ್ಞನೆಂದೂ, ಜ್ಞಾನ ಘನನೆಂದೂ ಆರೂಢನೆಂದೂ ಅತ್ಯಾಶ್ರಮಿಯೆಂದೂ ಕರೆಯುವರು.


ಕಾರಣ ಹೇ ಬ್ರಾಹ್ಮಣನೆ, ನೀನು ನಿಜವಾದ ಬ್ರಾಹ್ಮಣನಿದ್ದರೆ  ಈ ಕ್ಷುದ್ರ ಶಾಸ್ತ್ರಗಳನ್ನು ತ್ಯಾಗ ಮಾಡು. ವೇದ ಸಮ್ಮತವಾದ ಈ ಮೇಲ್ಕಾಣಿಸಿದ ಪ್ರಕಾರ ನೀನು ಆಚರಿಸಿದಲ್ಲಿ ಧನ್ಯತೆ ಪಡೆದು ಜಗತ್ತಿನಲ್ಲಿ ಪೂಜನೀಯನಾಗುವಿ "ಅಂತಾ ಸಿದ್ಧನು  ನುಡಿಯಲು ಪಶ್ಚಾತ್ತಾಪಪಟ್ಟ ಆ ವಿಪ್ರನು" ಹೇ ತಂದೆಯೇ, ಈವರೆಗೂ ನನಗೆ ತಮ್ಮಂತೆ ಯಾರೂ ಶಾಸ್ತ್ರಗಳನ್ನು ಹೇಳಲಿಲ್ಲ. ಅಕಟಕಟಾ ನನ್ನ ಜನ್ಮ ವ್ಯರ್ಥ ವಾಯಿತು ಅಂತಾ ದುಃಖದಿಂದ ಸಿದ್ದನ ಚರಣ ಕಮಲಗಳಲ್ಲಿ ಹೊರಳಾಡುತ್ತಾ ನನ್ನ ಕಡು ಪಾಪಗಳನ್ನು ನಾಶವಾಗುವಂತೆ ಅನುಗ್ರಹಿಸು ಅಂತಾ ಕೇಳಿಕೊಂಡನು. ಆಗ ಸಿದ್ಧನು  '' ಹೇ ವಿಪ್ರಾ, ಪರಿಶುದ್ಧ ಮನಸ್ಸಿನಿಂದ ಒಂದು ಅಕ್ಷರಕ್ಕೆ ಎರಡು ಸಾವಿರದಂತೆ ಹನ್ನೆರಡು ಸಾವಿರ ಗಾಯತ್ರಿ ಮಂತ್ರ ಜಪ ಮಾಡು ನಿನ್ನ ಜನ್ಮ ಕರ್ಮದ ಪಾಪಗಳೆಲ್ಲ ನಾಶವಾಗುವವು'' ಅಂತಾ ಹೇಳಿದರು. ಕೂಡಲೇ ಆ ವಿಪ್ರನು  ತನ್ನ ಶಾಸ್ತ್ರ ಗ್ರಂಥಗಳನೆಲ್ಲ ನೀರಲ್ಲಿ ಹಾಕಿದನು. ಪರಮ ಭಕ್ತಿಯಿಂದ ವಂದಿಸಲು '' ಧನ್ಯನಾಗು '' ಅಂತಾ ಹರಿಸಿದ ಕೂಡಲೇ ಆ ವಿಪ್ರನು ತನ್ನ ಊರಿಗೆ ಪಯಣ ಮಾಡಿದನು.


ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
ಎಲ್ಲಾ  ಕಥೆಗಳ ಲಿಂಕಗಳು 
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 
2)Facebook shareಗಾಗಿ👉


«««««ಓಂ ನಮಃ ಶಿವಾಯ »»»»»»»

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ