ಸಿದ್ಧಾರೂಢರು ವಿಜಯನಗರದಲ್ಲಿ ಭೈರಾಗಿಗಳಿಗೆ ಉಂಡ ಅನ್ನವು ದೇಹದಲ್ಲಿ ಜೀರ್ಣಿಸಿವ ಫಲಶೃತಿ ಹೇಳಿದ ಕಥೆ
ವಿಜಯನಗರ ಭದ್ರಚಲ ದರ್ಶನ
ಮಾರವಾಡಿಯಿಂದ ಬೀಳ್ಕೊಂಡು, ಸಿದ್ದನು ಸಂಚಾರ ಮಾಡುತ್ತಾ ವಿಜಯನಗರಕ್ಕೆ ಆಗಮನಿಸಿದನು. ಅಲ್ಲಿ ಮಹಾ ಪರಾಕ್ರಮಶಾಲಿ ಪ್ರತಾಪಸಿಂಹನ ಸಿಂಹಾಸನ ಕಂಡು ಆನಂದಭರಿತರಾಗಿ ಅಲ್ಲಿಂದ ಬಲಕ್ಕೆ ಮಾರ್ಗದಿಂದ, ಬಲಯುತವಾದ ಹೆಗ್ಗುಂಡ ಬಳಿ ಆಸೀನನಾದನು. ರಾಜನ ಅನ್ನಛತ್ರದಿಂದ ಹಿಟ್ಟು, ಅಕ್ಕಿಗಳನ್ನು ಪಡಕೊಂಡ ಹನ್ನೊಂದು ಜನ ಬೈರಾಗಿಗಳು ಅಲ್ಲಿಗೆ ಬಂದರು. ಅಗ್ನಿ ಕುಂಡದಲ್ಲಿ ಅಡುಗೆಯನ್ನು ತಯಾರಿಸಿದರು. ಎಲ್ಲ ಬೈರಾಗಿಗಳು ಸಾಲಾಗಿ ಕುಳಿತು ಸಿದ್ದನನ್ನೂ ಕರೆದರು. ಆನಂದೋತ್ಸಾಹದಿಂದ ಅವರೆಲ್ಲರೂ ಭೋಜನ ಮಾಡುತ್ತಾ ವಿನೋದಪರ ಸಂಭಾಷಣೆಯಲ್ಲಿದ್ದರು. ಈಗ ವಿನೋದ ಭಾಷಣಗಳ ಮದ್ಯ ಸಿದ್ಧನು ಅವರನ್ನು ಕುರಿತು 'ಹೇ ಬೈರಾಗಿಗಳೇ ನಾವೆಲ್ಲ ತೃಪ್ತಿಪಡುತ್ತಾ ಊಟ ಮಾಡಿದ ಅನ್ನವು ಉದರದಲ್ಲಿ ಸೇರಿದ ನಂತರ ಅಲ್ಲಿ ಏನಾಗುವುದು ಹೇಳಿರಿ'' ಅಂತಾ ಪ್ರಶ್ನಿಸಿದನು. ಅದಕ್ಕೆ ಅವರಲ್ಲಿಯ ಓರ್ವನು 'ಉದರದಲ್ಲಿ ಸೇರಿದ ಅನ್ನವು ಪಚನವಾಗಿ ಸಪ್ತ ಧಾತುಗಳಾಗುವವು. ಇದಲ್ಲದೆ ಬೇರೆ ಏನಾದರೂ ಇದ್ದಲ್ಲಿ ತಿಳಿಸೋಣವಾಗಬೇಕು ಅಂತ ಕೇಳಿಕೊಂಡನು. ಅದಕ್ಕೆ ಸಿದ್ದನು ಊಟ ಪೂರೈಸಿ ಕೈತೊಳೆದುಕೊಂಡು ನೀರು ಕುಡಿದು, ನೆರಳಲ್ಲಿ ಕೂತುಕೊಂಡು ಹೇಳಲಾರಂಭಿಸಿದನು. ''ಹೇ ಬೈರಾಗಿಗಳೇ ನಿತ್ಯವೂ ಭೋಜನ ಮಾಡಿದ ಅನ್ನವು ಉದರದಲ್ಲಿ ಸೇರಿ ಅಲ್ಲಿ ಜಠರಾಗ್ನಿಯಿಂದ ಪಚನಕ್ರಿಯೆ ಗಳಿಂದ ಉಂಟಾದ ತಾಮಸ ಅಂಶವು ಮಲವಾಗಿ ಹೊರ ಹೋಗುವುದು. ಅನ್ನದ ರಾಜಸ ಅಂಶಗಳಿಂದ ಸಪ್ತಧಾತುಗಳಾಗಿ ದೇಹದ ಸ್ಥಿತಿಗೆ ಕಾರಣವಾಗುವುದು. ಅನ್ನದ ಸತ್ವಭರಿತ ಅಂಶವು ಮನಸಾದಿ ಕರಣಗಳಾಗಿ ಶಾಂತಿಯನ್ನೀಯುವದು. ಹೇ ಭೈರಾಗಿ ಗಳೇ ಕೇಳಿ, ಶ್ರೇಷ್ಟತರ ಸಾತ್ವಿಕ ಆಹಾರವನ್ನು ಸೇವಿಸುವಾಗ ಪರಮಾತ್ಮನ ಧ್ಯಾನ ಮಾಡುತ್ತಿರಲು ಶುದ್ಧ ಮನಸ್ಸು ಉತ್ಪತ್ತಿಯಾಗಿ ಹರ್ಷವಾಗುವದು ಅಲ್ಲದೆ ಬ್ರಹ್ಮವಿದ್ಯೆ ಯನ್ನು ಅರಿಯುವ ಭಾವವು ಉದಯಿಸಿ ಸದ್ಗುರು ಮುಖದಿಂದ ಬೋಧ ಪಡೆದು ಧನ್ಯತೆ ಪಡೆಯುವನು. ಅನ್ನ ನೀಡುವ ಧಾರ್ಮಿಕನಿಗೂ ಶ್ರೇಷ್ಟವಾದ ಸದ್ಗತಿಯು ದೊರೆಯುವದು. ಇದಕ್ಕೆ ಭಿನ್ನವಾದಲ್ಲಿ ಭ್ರಷ್ಟನಾದವನು ಅನ್ನ ಕೊಟ್ಟವರನ್ನು ನರಕಕ್ಕೆ ತಳ್ಳುವನು' ಮುಂತಾಗಿ ಸಿದ್ದನು ಹೇಳುತ್ತಿದ್ದುದನ್ನು ಕೇಳಿ ಭೈರಾಗಿಗಳೆಲ್ಲರೂ ಮಹದಾನಂದದಿಂದ ತಲೆದೂಗಿದರು. ಆ ದಿನ ಅವರೆಲ್ಲರೂ ಅಲ್ಲಿಯೇ ಉಳಿದುಕೊಂಡು, ಮನಸ್ಸಿನಲ್ಲಿ ಮೂಡಿಬಂದ ಅನೇಕ ಸಂಶಯಗಳನ್ನು ಪ್ರಶ್ನೋತ್ತರಗಳಿಂದ ಸಿದ್ಧನಿಂದ ನಿವಾರಣೆ ಮಾಡಿಕೊಂಡರು. ಆ ದಿನ ರಾತ್ರಿ ಅಲ್ಲಿಯೇ ಅವರೆಲ್ಲರೂ ನಿದ್ರೆ ಮಾಡಿದರು. ಮಾರನೇ ದಿನ ಬೆಳಿಗ್ಗೆ ಸಿದ್ಧನಿಗೆ ವಂದಿಸಿ ಬೈರಾಗಿಗಳು ತಮ್ಮ ದಾರಿಗೆ ಪಯಣಿಸಿದರು.
🕉️ ಭದ್ರಾಚಲಕ್ಕೆ ಆಗಮನ 🕉️
ಸಿದ್ಧನು ಆ ಸ್ಥಾನದಿಂದ ಸಂಚಾರ ಮಾಡುತ್ತಾ ಮಾಡುತ್ತಾ ಭದ್ರಾಚಲಕ್ಕೆ ಆಗಮಿಸಿದನು. ಅಲ್ಲಿ ಸಜ್ಜನರಾದ ರಾಮದಾಸರು ಜೀರ್ಣೋದ್ಧಾರ ಮಾಡಿದ ರಾಮ ದೇವಾಲಯಗಳನ್ನು ಕಂಡು 'ಈಶನ ಮಹಿಮೆ' ಅಂತಾ ಉದ್ಗರಿಸಿ ಸಿದ್ದನು, ಗೋದಾವರಿ ನದಿ ತೀರದಲ್ಲಿ ರಾಮದಾಸರು ಕಟ್ಟಿಸಿದ ಕಟ್ಟೆಯ ಮೇಲೆ ಕುಳಿತು ಸುತ್ತಲೂ ನಿರೀಕ್ಷಣೆ ಮಾಡುತ್ತಿದ್ದನು. ಆ ಸಮಯಕ್ಕೆ ಬ್ರಾಹ್ಮಣ ವಿಪ್ರರು ಆಗಮಿಸುತ್ತಾ ಸಿದ್ಧನನ್ನು ಕುರಿತು 'ತಾವು ಯಾರು? ಎಲ್ಲಿಂದ ಬರೋಣವಾಯಿತು, ತಮ್ಮ ಸ್ಥಿತಿಗತಿಗಳೇನು' ಮುಂತಾಗಿ ಕೇಳಿದರು. ಅದಕ್ಕೆ ಸಿದ್ದನು ಉತ್ತರಿಸುತ್ತ ''ನಾವು ನಿಸ್ಸಂಗ ದೇಶದವರು. ಅಧಿಷ್ಠಾನವೇ ನಮ್ಮ ಸ್ಥಿತಿ, ನಿರ್ಗತಿಯೇ ಗತಿ, ದೇಶ, ಕಾಲ, ವಸ್ತು ಪರಿಚ್ಛಿನ್ನರಹಿತನಾದ ಆತ್ಮನಿಗೆ ಯಾವ ದೇಶವೆಂದು ಹೇಳಬೇಕು. ಆಕಾಶದಂತೆ ವ್ಯಾಪಕನಾದ ಆತ್ಮನಿಗೆ ಗಮನಾಗಮನ ಎಲ್ಲಿ?" ಅಂತ ಸಹಜವಾಗಿ ನುಡಿದನು. ಅದನ್ನು ಕೇಳಿ ಸುಮ್ಮನಾದರು. ಪುನಃ ಸಿದ್ದನು ಅವರನ್ನು ಕುರಿತು ''ಹೇ ಬ್ರಾಹ್ಮಣೋತ್ತಮರೆ, ನಿಮ್ಮ ಚಿತ್ತಶುದ್ಧವಿರುವುದರಿಂದ ಈ ಸಿದ್ಧಾಂತದಲ್ಲಿ ನೀವು ತಾದಾತ್ಮ್ಯತೆ ಹೊಂದಿ ಆನಂದ ಶಾಲಿಗಳಾಗಿ ಮೌನರಾಗಿದ್ದೀರಿ ಅಂತಾ ಭಾವಿಸುತ್ತೇನೆ' ಎಂದು ನುಡಿಯಲು ಅದಕ್ಕೆ ಸಮ್ಮತಿಸುತ್ತ 'ತಾವು ಸರ್ವರಂತರಾಳದಲ್ಲಿಯ ಹೃದಯವನ್ನು ಗುರುತಿಸಿದ ಮಹಾಮಹಿಮರು ನೀವು” ಅನ್ನುತ್ತ ವಂದನೆಗಳನ್ನು ಸಲ್ಲಿಸಿ ಅಲ್ಲಿಂದ ತೆರಳಿದರು.
👇👇👇👇👇👇👇👇👇👇👇👇👇👇
ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
ಎಲ್ಲಾ ಕಥೆಗಳ ಲಿಂಕಗಳು
👉ಸಿದ್ಧಾರೂಢ ಭಾಗವತ ಕಥಾ ಸಂಗ್ರಹ 👉🛃
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ
1)WhatsApp shareಗಾಗಿ click ಮಾಡಿ📲☎️
2)Facebook shareಗಾಗಿ👉
3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚
«««««ಓಂ ನಮಃ ಶಿವಾಯ »»»»»»»
