ಗುಡಗಂಟಿ ಗ್ರಾಮದ ಸದ್ಗುರು ಶ್ರೀ ಗಜದಂಡ ಸ್ವಾಮಿಗಳ ಆಶ್ರಮ ಸೇರಿದ ಸಿದ್ಧಾರೂಢ
🕉️ ಗುಡಗಂಟಿ ಗ್ರಾಮದ ಸದ್ಗುರು ಶ್ರೀ ಗಜದಂಡ ಸ್ವಾಮಿಗಳ ಆಶ್ರಮ ಸೇರಿದ ಸಿದ್ಧಾರೂಢ 🍁
ಶ್ರೀಶೈಲದಿಂದ ಸಿದ್ದನು ಹೊರಟು ರಾಯಚೋಟಿಗೆ ಆಗಮಿಸಿ ಅಲ್ಲಿ ವೀರಭದ್ರನ ದರ್ಶನ ಪಡೆದನು. ಮುಂದೆ ನವನಂದಿ ಮುಂತಾದ ಕ್ಷೇತ್ರಗಳಿಗೆ ಹೋಗಿ ಕಾಡಿನಲ್ಲಿ ಸಂಚರಿಸುವಾಗ ಸುಖ ದುಃಖಗಳ ಕಡೆಗೆ ಗಮನ ಕೊಡದೇ ಗುರುವಿನ ಶೋಧನೆಯ ಚಿಂತನೆ ಮಾಡುತ್ತಾ ಸುರಪುರಕ್ಕೆ ಬಂದನು.
ಗುರುವು ಬ್ರಹ್ಮವೇತ್ತನೂ, ವೇದವೇದಾಂತ ಪಾರಂಗತನೂ ಇದ್ದು ಉಪನಿಷದರ್ಥವನ್ನು ಮುಮುಕ್ಷುಗಳಿಗೆ ಸ್ಪಷ್ಟವಾಗಿ ತಿಳಿಸಬಲ್ಲವನಾಗಬೇಕು, ಎಂದು ಹೀಗೆ ಮನಸ್ಸಿನಲ್ಲಿ ಅಂದುಕೊಳ್ಳುತ್ತ, ಸಿದ್ಧನು ಪ್ರಾಪ್ತವಾದ ಶರೀರ ದುಃಖಗಳನ್ನು ಮನಸ್ಸಿಗೆ ಹತ್ತಗೊಡದೆ, ಅನ್ನದಿಗಳ ಉಪವಾಸದಿಂದ ದೇಹವನ್ನು ದಂಡಿಸುತ್ತಿರುವನು. ಇದರಿಂದ ಸರ್ವ ವಾಸನಾ ಸತ್ಯಾಗವಾಗಿ ಚಿತ್ತ ಶುದ್ದಿಯು ಸಹಜವಾಗಿ ಘಟಿಸಿತು. ಹೃದಯದಲ್ಲಿ ಸದ್ಗುರುವನ್ನು ಅಖಂಡವಾಗಿ ಧ್ಯಾನಿಸುತ್ತ, ಕ್ಷೇತ್ರಗಳನ್ನು ನೋಡುತ್ತ ನೋಡುತ್ತ ಹೋಗುತ್ತಿರುವಾಗ ಯಾವ ಸದ್ಗುರುವಿನ ಕೃಪೆಯಿಂದ ಸರ್ವಮಾಯಾ ನಿರಸನವಾಗುವದೋ ಮತ್ತು ಸತ್ಯವಾದ ಬ್ರಹ್ಮವು ಪ್ರಕಾಶಿಸುವುದೋ, ಆತನ ದರ್ಶನದ್ದೆಶೆಯಿಂದ ಮನಸ್ಸಿನಲ್ಲಿ ಬಹು ತಳಮಳಿಸುತ್ತಿದ್ದನು. ಬಹು ತಾಪದಿಂದ ಸಿದ್ದನೆನ್ನುತ್ತಾನೆ, “ಸದ್ಗುರು ಯಾಕೆ ದರ್ಶನ ತೋರುವುದಿಲ್ಲ. ಹೇ, ಸದ್ಗುರುನಾಥಾ, ಈ ಬಾಲಕನ ಮೇಲೆ ಕೃಪಾಮಾಡಿ, ನಿನ್ನ ಸಗುಣ ರೂಪವನ್ನು ಕಣ್ಣಿಗೆ ತೋರಿಸುವವನಾಗು." ಹೀಗೆ ಕಳವಳಿಸಿ, ಮೂರ್ಛೆ ಬಂದು ಭೂಮಿಗೆ ಬಿದ್ದುನು. ಆಗ ಅಂತರದಲ್ಲಿ ಸದ್ಗುರುವು ಬಂದು ತನ್ನನ್ನು ಆಲಂಗಿಸಿ - “ಬಾಳಾ ನೀನು ಧೈರ್ಯವನ್ನು ಬಿಡಬೇಡ'' ಎಂದು ಆಶ್ವಾಸನೆ ಕೊಟ್ಟಂತೆ ಆಯಿತು. ಸಿದ್ದನು ಕಣ್ಣು ತೆರೆದು ನೋಡಲು, ಯಾರೊಬ್ಬರನ್ನೂ ಕಾಣದೆ, ಮರಳಿ ಭೂಮಿಗೆ ಬಿದ್ದು, “ಹೇ ದಯಾಳು ಗುರುಮಾತೆಯೇ, ನನ್ನ ಅಂತಸ್ತನ್ನು ಎಷ್ಟೆಂದು ನೋಡುವಿ; ನಿನ್ನ ಮುದ್ದು ಮಗುವಾದ ನನ್ನ ಕಣ್ಣಿಗೆ ತಪ್ಪಿಸಿ ಎಲ್ಲಿ ಅಡಗಿದ್ದಿ, ತೀವ್ರವಾಗಿ ಬಂದು ನನಗೆ ದರ್ಶನವನ್ನು ಕೊಡು. ನಿನ್ನ ಚರಣಗಳನ್ನು ಕಾಣುವ ಆಶೆಯಿಂದ ಹಗಲು ರಾತ್ರಿ ನಾನು ವ್ಯಾಕುಲ ಚಿತ್ತನಾಗಿದ್ದೇನೆ. ಅನೇಕ ದೇಶಗಳನ್ನು ನಿನ್ನ ದಶೆಯಿಂದ ಸಂಚರಿಸಿದೆನು. ಇನ್ನಾದರೂ ನನ್ನ ಮೇಲೆ ದಯೆಯುಳ್ಳವನಾಗಿ ಬೇಗನೇ ಬಂದು ದರ್ಶನ ಕೊಡುವಂಥವನಾಗು. ನನ್ನ ಮಾಯಾಭಾಸವನ್ನು ನಿರಸನ ಮಾಡಿ ಬ್ರಹ್ಮಪಂಥವನ್ನು ತೋರಿಸು, ನಿನ್ನ ಹೊರ್ತು ಅನ್ಯ ರಕ್ಷಕನಿಲ್ಲವು, ಎಂದು ನಿನಗೇನೇ ಶರಣು ಬಂದಿರುವೆನು. ನೀನು ನನ್ನನ್ನು ಬಿಟ್ಟು ಹಾಕಿದಿಯೆಂದರೆ, ಹೇ ಸದ್ಗುರುನಾಥನೇ, ಮತ್ಯಾರು ನನ್ನನ್ನು ಈ ಭವದಿಂದ ರಕ್ಷಿಸುವರು ? ನೀನು ಇಲ್ಲಿ ನನಗೆ ದರ್ಶನ ಕೊಡದಿದ್ದರೆ, ನಾನು ಇಲ್ಲಿಂದ ಮುಂದೆ ಹೋಗಲೊಲ್ಲೆನು. ನಿನ್ನ ಮೇಲೆಯೆ ಚಿತ್ತವನ್ನು ಇಟ್ಟು, ನಾನು ನಿಶ್ಚಯವಾಗಿ ಪ್ರಾಣವನ್ನು ತ್ಯಜಿಸುವೆನು,” ಎಂದು ಈ ಪ್ರಕಾರ ಸಿದ್ಧನು ಅನ್ನುತ್ತಿರುವಾಗ, ಎರಡೂ ನೇತ್ರಗಳಿಂದ ದಳದಳನೇ ನೀರು ಸುರಿಯಹತ್ತಿದವು. ಸಿದ್ಧನು ಕಣ್ಣುಮುಚ್ಚಿಕೊಂಡು ಶಾಂತ ಇರಲು, ಆ ದಯಾಳನು ಅವನ ಕರುಣಾವಚನವನ್ನು ಕೇಳಿ ಧಾವಿಸಿ ಬಂದನು. ಒಬ್ಬ ವೃದ್ಧ ಸಾಧುವೇಷವನ್ನು ತೊಟ್ಟು, ಸಿದ್ಧನ ಸಮೀಪ ಬಂದು ನಿಂತು, ಆ ದೀನದಯಾಳುವಾದ ಸದ್ಗುರುನಾಥನು, ಆತನ ಕೈಹಿಡಿದು ಎಬ್ಬಿಸಿ, ''ಹೇ ಬಾಳಾ, ನೀನು ಯಾವಾತನಿರುವಿ?" ಎಂದು ಕೇಳಿದನು. ಅದನ್ನು ಕೇಳಿ ಸಿದ್ಧನು ಕಣ್ಣು ತೆರೆದು ವೃದ್ದರನ್ನು ಕಂಡು, “ಹೇ ತಾತಾ, ಆ ಸದ್ಗುರುರಾಜನು ಎಷ್ಟು ಹುಡುಕಿದರೂ ನನಗೆ ಸಿಗಲಿಲ್ಲ. ಹೇ ದೀನಬಂಧುವೇ, ನಿನಗೆ ನಾನು ಶರಣು ಬಂದಿರುತ್ತೇನೆ, ಶೀಘ್ರವಾಗಿ ಆತನನ್ನು ನನಗೆ ತೋರಿಸುವವನಾಗು. ಇಲ್ಲದಿದ್ದರೆ ನನ್ನ ಪ್ರಾಣ ಹೋಗುವದು,'' ಎಂದು ಅಂದನು. ಇದನ್ನು ಕೇಳಿದ ಸದ್ಗುರುನಾಥನು ಸದ್ಗದಿತನಾಗಿ, "ಎಲೈ ಬಾಲಕನೇ, ನೀನು ಧನ್ಯನು. ಧನ್ಯನು. ನೀನೇ ಸದ್ಗುರುನಾಥನನ್ನು ವಶಮಾಡಿಕೊಂಡಿ. ಲೋಕದಲ್ಲಿ ಜನರು ವಿಷಯಗಳನ್ನು ಇಚ್ಚಿಸುತ್ತಿರುವಾಗ ನೀನು ಸದ್ಗುರುನಾಥನನ್ನು ಶೋಧಿಸುತ್ತಿ, ಆತನು ನಿನಗೆ ಶೀಘ್ರವಾಗಿ ಭೆಟ್ಟಿಯಾಗುವನು. ಹಾಗಾದರೆ ನೀನು ಈಗಲೇ ಗುಡಗಂಟೆಯಲ್ಲಿರುವ ಅಮರ ಗುಂಡ ಮಲ್ಲಿಕಾರ್ಜುನ ಕ್ಷೇತ್ರಸ್ಥ ಕಟ್ಟಿ ಮಠದ ಪಟ್ಟದ ಸ್ವಾಮಿಗಳಲ್ಲಿಗೆ ಹೋಗು. ಗಜದಂಡವೆಂಬ ನಾಮಾಭಿದಾನವುಳ್ಳ ಅವರು ವೇದಗಳ ಕರ್ಮ ಉಪಾಸನಾ ಜ್ಞಾನ ಇವೇ ಮೂರು ಕಾಂಡಗಳನ್ನು ವಿಧವತ್ ಅಧೀತರಾಗಿರುವರು. ಅವರ ವಿದ್ಯಾ ಮತ್ತು ಜ್ಞಾನವು ಸರ್ವೋತ್ಕೃಷ್ಟವಾಗಿರುವುದೆಂದು ಜನರೆನ್ನುವರು. ಅವರ ಶುಶ್ರೂಷಣೆ ಮಾಡಿದ್ದಾದರೆ ನೀನು ನಿಶ್ಚಯವಾಗಿ ಆತ್ಮ ಜ್ಞಾನವನ್ನು ಹೊಂದುವಿ. ಆ ಸ್ಥಾನವು ಇಲ್ಲೇ ಸಮೀಪವಿದೆ. ಇಗೋ ಆ ಗುಡ್ಡದ ಕೆಳಗಿರುವದು," ಎಂದು ಬೆರಳು ತೋರಿಸಿ, ಆ ವೃದ್ಧರೂಪದಿಂದ ಬಂದ ಗುರುನಾಥನು ಅದೃಶ್ಯನಾದನು. ಸಿದ್ಧನಿಗಾದರೋ ನಡದದ್ದೆಲ್ಲ ಕನಸಿನ ತರ ಭಾಸಿಸಿತು. ಸಿದ್ದನು ಅನ್ನುತ್ತಾನೆ - “ನನಗೆ ಭೆಟ್ಟಿಯಾದವನು ಸದ್ಗುರುನಾಥನೇ ಇರುವನು. ಆದರೆ ಮಾಯಾಮೋಹದಿಂದ ನನಗೆ ತಿಳಿಯದೆ ಹೋಯಿತು. ನಮನ ಸಹಾ ಮಾಡದೆ ಹೋದೆನು. ಆದರೂ ಇದೇ ಗುರು ಆಜ್ಞೆಯೆಂದು ಮನ್ನಿಸಿ, ಆಸ್ಥಾನಕ್ಕೆ ನಾನು ಹೋಗಿ ಗಜದಂಡ ಗುರುಗಳಿಗೆ ಬೆಟ್ಟಿಯಾಗಿ ಸೇವೆಯ ಯಾಚನೆ ಮಾಡಬೇಕು. ಹೀಗೆಂದುಕೊಂಡು
ಅಲ್ಲಿಂದ ಮೂರು ದಿನಗಳವರೆಗೆ ಅಹೋರಾತ್ರಿ ನಡೆಯುತ್ತಾ, ನಡೆಯುತ್ತಾ ಪರಿಶುದ್ದ ಮನದಿಂದ ಗುರುಸ್ಮರಣೆ ಮಾಡುತ್ತಾ ಗುಡಗಂಟಿ ಗ್ರಾಮ ತಲುಪಿದನು. ಗ್ರಾಮದಲ್ಲಿ ಹೂ ಹಣ್ಣು ಊದಿನಕಡ್ಡಿ ಮುಂತಾದವುಗಳನ್ನು ತೆಗೆದುಕೊಂಡು ಶ್ರೀಗಳ ಮಠಕ್ಕೆ ಆಗಮಿಸಿದನು. ಅಲ್ಲಿ ಶಿಷ್ಯ ವೃಂದದಿಂದ ಸುತ್ತುವರೆದಿದ್ದ ಅಜಾನುಬಾಹು ಸದ್ಗುರು ಶ್ರೀ ಗಜದಂಡ ಸ್ವಾಮಿಗಳನ್ನು ಕಂಡನು ಲಿಂಗಪೂಜೆಯಾದ ತರುವಾಯ ಗಜದಂಡಸ್ವಾಮಿಗಳು ಹೊರಗೆ ಬಂದರು. ಫಲ, ಪುಷ್ಪಗಳನ್ನು ಅರ್ಪಿಸುತ್ತಾ, ಕೂಡಲೇ ಸಿದ್ಧನು ನೆಲಕ್ಕೆ ಬಿದ್ದು ಸಾಷ್ಟಾಂಗ ನಮಸ್ಕಾರ ಮಾಡಿ, ಎದ್ದು ನಿಂತು ಅಂಜಲಿಬದ್ಧನಾಗಿ, ಅತ್ಯಂತ ದೈನ್ಯಭಾವದಿಂದ ಪ್ರಾರ್ಥಿಸುತ್ತಾನೆ- ''ಹೇ ಸದ್ಗುರುವೇ, ನೀವು ಬ್ರಹ್ಮಾನಂದ ಮೂರ್ತಿಯು, ಸರ್ವರಿಗೂ ಸುಖದಾಯಕನಾಗಿದ್ದಿ, ನೀನು ಅಖಂಡ ಜ್ಞಾನರೂಪನಾಗಿದ್ದು ದ್ವಂದ್ವಾತೀತನಿರುವಿ. ನಿನ್ನ ರೂಪವು ಆಕಾಶದಂತೆ ಪೂರ್ಣವೂ ಸರ್ವವ್ಯಾಪಿಯೂ ಆಗಿದ್ದು ನಿನ್ನಲ್ಲಿ ಪ್ರಪಂಚವು ಅತ್ಯಂತ ಲೋಪವಾಗಿರುವದು. ನೀನು ಏಕರೂಪನಾಗಿ ಅಖಂಡ ಸಚ್ಚಿತ್ ಸ್ವರೂಪನಾಗಿದ್ದಿ: ಅಂತಃಕರಣದಲ್ಲಿ ಸಾಕ್ಷಿಯಾಗಿದ್ದು, ಸರ್ವ ಭೂತಗಳಲ್ಲಿ ನೀನು ಅಂತರ್ಯಾಮಿಯಾಗಿರುತ್ತಿ. ನೀನು ಮನಬುದ್ದಿಗೆ ಅತೀತನಾಗಿದ್ದು ತ್ರಿಗುಣಗಳು ನಿನಗೆ ಹತ್ತುವುದಿಲ್ಲ. ಈ ಪ್ರಕಾರ, ಹೇ ಸದ್ಗುರುನಾಥಾ, ನಿನ್ನ ಸ್ವರೂಪ ಇದ್ದರೂ, ನೀನು ಈಗ ಸಗುಣರೂಪವನ್ನು ತೊಟ್ಟು, ಜೀವರಿಗೆ ಜ್ಞಾನದಾತನಾಗಿ ಅವರ ಉದ್ದಾರವನ್ನು ಮಾಡುವಿ. ನಾನು ಮಾಯೆಯಿಂದ ಬಹಳ ಕಾಡಿಸಿಕೊಂಡು ನಿನಗೀಗ ಶರಣು ಬಂದಿರುವೆನು. ನಿನ್ನಿಂದ ಉದ್ದಾರನಾಗದಿದ್ದರೆ, ನಾನು ಸಂಸಾರದಲ್ಲಿ ಬಿದ್ದು ವ್ಯರ್ಥವಾಗಿ ನಾಶವಾಗುತ್ತೇನೆ. ಆದ್ದರಿಂದ, ನನ್ನ ಪ್ರಪಂಚಭ್ರಾಂತಿ ಸಮೂಳ ಹೋಗಿ, ನಾನು ಉದ್ಧಾರವಾಗುವಂತೆ ಉಪಾಯವನ್ನು ಮಾಡುವವನಾಗು.” ಈ ಪ್ರಕಾರ ಕರುಣಾವಚನದಿಂದ ಯುಕ್ತವಾದ ಪ್ರಾರ್ಥನೆಯನ್ನು ಕೇಳಿ, ಗುರುಗಳು ಕಳವಳಗೊಂಡರೂ, ಸಿದ್ದನ ಶ್ರದ್ಧಾಭಕ್ತಿಗಳನ್ನು ಪರೀಕ್ಷಿಸುವ ದೆಶೆಯಿಂದ. ಕಂದನೇ, ನೀನಾರು? ಯಾರ ಮಗನು? ಇಲ್ಲಿಗೆ ಬಂದ ಕಾರಣವೇನು?' ಇತ್ಯಾದಿ ಕೇಳಿದರು.
ಆಗ ಸಿದ್ದನು “ನಾನು ಬಿದರೀಕೊಟೆಯಿಂದ ಬಂದಿರುವೆ. ಗುರುಶಾಂತಪ್ಪನು ನನ್ನ ತಂದೆ. ನನ್ನ ಹೆಸರು ಸಿದ್ದ. ಗುರುವರನೇ ಅತ್ಯಂತ ದುಃಖ ನಿವೃತ್ತಿ ಪರಮಾನಂದ ಪ್ರಾಪ್ತಿಗಾಗಿ ತಮ್ಮಲ್ಲಿಗೆ ಬಂದಿರುವೆ' ಅಂತಾ ಉತ್ತರಿಸಿದನು. ಆಗ ಶ್ರೀಗಳು ತಮ್ಮ ಮನಸ್ಸಿನಲ್ಲಿ ಈತನ ಅಧಿಕಾರ ಲಕ್ಷಣಗಳನ್ನು ಪರೀಕ್ಷಿಸಬೇಕು ಅಂತಾ ಆತನಿಗೆ ''ಹೇ ಕಂದನೇ ಮೊದಲಿಗೆ ನೀನು ಆಶ್ರಮದ ಸೇವೆ ಮಾಡು ''ಅಂತಾ ಆದೇಶಿಸಿದರು.
ಆಶ್ರಮವಾಸಿಗಳು ಸಿದ್ದನಿಗೆ ಕಸ ತೆಗೆಯುವ, ವಸ್ತ್ರಗಳನ್ನು ತೊಳೆಯುವ, ಕುದುರೆಯ ಚಾಕರಿ ಮಾಡುವ ಇತ್ಯಾದಿ ಹೀನ ಸೇವೆಯಲ್ಲಿ ತೊಡಗಿಸಿದರು.
ಆಶ್ರಮದ ಯಾವುದೇ ಸೇವೆಯನ್ನು ಸಿದ್ದನು ಹರ್ಷದಿಂದ ಮಾಡತೊಡಗಿದವು.ಶರೀರಕ್ಕಾಗುವ ತೊಂದರೆ ಲೆಕ್ಕಿಸದೆ ಹಸಿವು ನೀರಡಿಕೆಗಳ ಕಡೆ ಲಕ್ಷ್ಯ ಹಾಕದೇ, ಸಿದ್ಧನು ದೈನ್ಯ ಭಾವದಿಂದ ಅತೀವ ಶ್ರದ್ಧಾ ಭಕ್ತಿಗಳಿಂದ ಸೇವಾ ನಿರತನಾಗಿದ್ದನು. ಸ್ಥಾನ ಸೇವೆಗಳಲ್ಲಿ ಅಮಿತಾನಂದದಿಂದ ನಿರತನಾದ ಸಿದ್ದನ ನಡತೆಯನ್ನು ನಿರೀಕ್ಷಣೆ ಮಾಡಿ ಈತನು ಮೋಕ್ಷಾಪೇಕ್ಷೆಯ ಅಧಿಕಾರಿ ಅಂತಾ ಗುರುಗಳು ನಿರ್ಣಯಕ್ಕೆ ಬಂದರು. ಸಿದ್ದನನ್ನು ತಮ್ಮ ಸಮೀಪಕ್ಕೆ ಕರೆಯಿಸಿ "ಸಿದ್ದಾ ನೀನು ಇನ್ನು ಮುಂದೆ ಈಗ ಮಾಡುತ್ತಿರುವ ಸೇವೆಯನ್ನು ಬಿಡು. ಪ್ರತಿನಿತ್ಯ ಶಾಸ್ತ್ರ ಶ್ರವಣ ಮಾಡು. ಆಮೇಲೆ ಮನನ, ನಿಧಿಧ್ಯಾಸನದಲ್ಲಿ ಕಾಲ ಕಳೆ ಅಂತಾ ಅಪ್ಪಣೆ ಮಾಡಿದರು. ಅದಕ್ಕೆ ಶಿರಸಾವಹಿಸಿ ಸಿದ್ದನು ಗುರುಗಳ ಆಜ್ಞೆಯ ಪ್ರಕಾರ ನಡೆದುಕೊಳ್ಳತೊಡಗಿದನು.
ಪ್ರಾಪ್ತವಾಗುವುದು
👇👇👇👇👇👇👇👇👇👇👇👇👇👇
ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ👉ಸುರಪುರದ ರಾಜಸಭೆಯ ಪಂಡಿತ ಸುಬ್ಬಯ್ಯಶಾಸ್ತ್ರಿಯ ವಿದ್ಯಾಗರ್ವಭಂಗ ಮಾಡಿದ ಸಿದ್ಧಬಾಲಕ ,
ಎಲ್ಲಾ ಕಥೆಗಳ ಲಿಂಕಗಳು
👉ಸಿದ್ಧಾರೂಢ ಭಾಗವತ ಕಥಾ ಸಂಗ್ರಹ ಒತ್ತಿ 👉🛃
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ
1)WhatsApp shareಗಾಗಿ click ಮಾಡಿ📲☎️
2)Facebook shareಗಾಗಿ👉
3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಲು 👉📚
«««««ಓಂ ನಮಃ ಶಿವಾಯ »»»»»»»
