ಸಿದ್ಧಾರೂಢರ ಚರಿತ್ರೆ ಪಠಣದಿಂದ ಶ್ರೀಮಂತಗೌಡನ ಮಗಳ ರುಕ್ಮಿಣಿಯ ಭೂತವು ಬಿಟ್ಟು ಹೋದ ಕಥೆ.

 🍂ಸಿದ್ಧರ ಚರಿತ್ರೆ ಪಠಣದಿಂದ ರುಕ್ಮಿಣಿಯ ಭೂತವು ಬಿಟ್ಟು ಹೋದದ್ದು ಅವಳು ಸತ್ತಾಗ ಯತಿಯು ಬಂದು ಸದ್ಗುರು ವಿಭೂತಿಯಿಂದ ಬದುಕಿಸಿದ ಕಥೆ,



ಬಾಗಲಕೋಟೆಯೆಂಬ ನಗರದಲ್ಲಿ, ಶ್ರೀಮಂತ ಎಂಬ ಹೆಸರಿನ ಒಬ್ಬ ಗೌಡನಿರುವನು. ಆತನಿಗೆ ದ್ರವ್ಯ ಬಹಳ ಇರುವದು, ಆದರೆ ದೇವರನ್ನು ಭಜಿಸುತ್ತಿದ್ದಿಲ್ಲ. ಆತನು ರಾತ್ರಿ ಹಗಲು ದೊಡ್ಡ ವ್ಯವಹಾರದ  ಚಿಂತೆ ಮಾಡುತ್ತಿದ್ದು, ಜನರಿಂದ ಕೊಡತಕ್ಕೊಳ್ಳುವದರ ಧ್ಯಾನವೇ ಅವನಿಗೆ ಯಾವಾಗಲೂ ಇರುವದು. ಆತನ ಮಗಳು ರುಕ್ಷ್ಮಿಣಿಯಂಬವಳು ಬಹಳ ಸುಲಕ್ಷಣೆ ಮತ್ತು ಸದ್ಗುಣಮಣಿ ಇರುವಳು. ಆದರೆ ಇವಳಿಗೆ ಒಂದು ಭೂತ ಬಾಧೆ ಇರುವುದರಿಂದ ತಾಯಿ ತಂದೆಯವರಿಗೆ ಇದೊಂದು ದೊಡ್ಡ ಚಿಂತೆ ಇತ್ತು. ಒಮ್ಮೆ ಭೂತ ಬಂದು, ರುಕ್ಕಿಣಿಯು ಏನಾದರೂ ಬಡಬಡಿಸಿ, ತನಗೆ ವಿವಾಹ ಮಾಡುವದಿಲ್ಲವೆಂದು ತಂದೆ ತಾಯಿಗಳಿಗೆ ಬೈಯುತ್ತಿದ್ದಳು. ಅವಳ ಈ ಸ್ಥಿತಿಯನ್ನು ನೋಡಿ, ಶ್ರೀಮಂತನು  ಬಹಳ ಚಿಂತಾಕ್ರಾಂತನಾಗಿರುವಾಗ, ಅಕಸ್ಮಾತ್ ಅಲ್ಲಿಗೆ ಅಕ್ಕಲಕೋಟೆ ಶರಣಪ್ಪನು ಬಂದನು. ಆತನು ಸಿದ್ಧಾರೂಢರ ನಿಕಟ ಭಕ್ತನಿರುತ್ತಿದ್ದು, ಸದ್ಗುರು ಕೀರ್ತಿಯನ್ನು ಊರೂರುಗಳಲ್ಲಿ ಕೀರ್ತನೆ ಮಾಡಿ ಪಸರಿಸುತ್ತಿರುವನು. ಶ್ರೀ ಸಿದ್ದರ ಕೀರ್ತಿಯ ವಿನಃ ಜನರಿಗೆ ಮತ್ತೊಂದು ಹೇಳಲಾರನು. ರುಕ್ಮಿಣಿಯನ್ನು ನೋಡಿ, ಶರಣಪ್ಪನು ಶ್ರೀಮಂತನಿಗೆ -"ಇವಳ ದೆಶೆಯಿಂದ ನೀವು ಚಿಂತೆ ಮಾಡಬೇಡಿರಿ, ಇವಳು ಏಳು ದಿನ ತನಕ ಸಿದ್ಧ ಚರಿತ್ರವನ್ನು ಪಠಿಸಿದ್ದಾದರೆ, ಅದರಿಂದ ಸರ್ವ ಪೀಡೆಗಳು ನಿವಾರಣವಾಗುವವು. ನಿತ್ಯ ಸಿದ್ಧ ಸ್ಮರಣೆಯನ್ನು ಮಾಡಬೇಕು ಮತ್ತು ಆತನ ಪಾದೋದಕವನ್ನು ಸೇವಿಸಬೇಕು. ಈ ಪ್ರಕಾರ ಮಾಡಿದ್ದಾದರೆ ನಿಶ್ಚಯವಾಗಿ ಬಾಧಿಯು ನಿವಾರಣವಾಗುವದು,'' ಎಂದು ಅಂದದ್ದು ಕೇಳಿ, ಶ್ರೀಮಂತರು-ಬಹಳ ದ್ರವ್ಯ ಖರ್ಚು ಮಾಡಿದೆ ಅನೇಕ ಮಂತ್ರ ತಂತ್ರಗಳನ್ನು ಯೋಜಿಸಿದೆ, ಬಹಳ ದೇವರಿಗೆ ಹರಕೆ ಬೇಡಿಕೊಂಡೆ, ಆದರ ಅದೆಲ್ಲವೂ ನಿಷ್ಪಲವಾಯಿತು. ಇಷ್ಟರಿಂದ ಗುಣ ಸಿಕ್ಕದಿರುವಾಗ, ಒಂದು ಪುಸ್ತಕ ಓದಿದ ಮಾತ್ರದಿಂದ ಏನಾದೀತು ?" ಎಂದು ಅಂದದ್ದು ಕೇಳಿ ಆತನನ್ನು ಕುರಿತು ಶರಣಪ್ಪನು - "ಎಲೈ ಶ್ರೀಮಂತನೇ, ಶ್ರೀ ಸಿದ್ಧಾರೂಢರ ಮಹಿಮೇ  ನಿನಗೆ ಗೊತ್ತಿರುವುದಿಲ್ಲ. ಅದು ಅಗಾಧವಾಗಿಯೂ, ನಿರುಪಮವಾಗಿಯೂ ಇದ್ದು,  ಅದರ ಪ್ರಭಾವಕ್ಕೆ ಸೀಮೆ ಇರುವುದಿಲ್ಲ. ಇದರ ಪ್ರತೀತಿಯು  ನಮಗೆ ಪ್ರತ್ಯಕ್ಷ ಅನುಭವಕ್ಕೆ ಬಂದಿರುತ್ತದೆ. ಉಣಕಲ್ಲನಲ್ಲಿ ಇಬ್ಬರು ಸ್ತ್ರೀಯರಿಗೆ ಇದಕ್ಕೂ ವಿಶೇಷ

ಭೂತ ಬಾಧೆ ಇರುವಾಗ, ಸಿದ್ಧನಾಮ  ಮತ್ತು ಕೀರ್ತಿಯ  ಶ್ರವಣ ಮಾಡಿದಾಕ್ಷಣವೇ ಭೂತಗಳು ನಿಃಶೇಷವಾಗಿ ಬಿಟ್ಟು ಹೋದವು. ಸದ್ಭಾವದಿಂದೊಡಗೂಡಿ ಏಳು ದಿನ ಸದ್ಗುರು ನಾಮವನ್ನು ಜಪಿಸುತ್ತಿದ್ದು, ಆತನ ಕೀರ್ತಿಯನ್ನು ಶ್ರವಣಮಾಡುವದರಿಂದ, ಎಂಥಾ ಕಠಿಣ ಭೂತವಾದರೂ ಬಿಟ್ಟು ಹೋಗುವದು. "ಎಂದು ಹೇಳಿದ್ದನ್ನು ಕೇಳಿ, ಶ್ರೀಮಂತನು - “ಹಾಗಾದರೆ ರುಕ್ಕಿಣಿಯು ಚರಿತ್ರವನ್ನು ಓದಲಿ, ಪಾದೋದಕಕ್ಕೆ ಹ್ಯಾಗೆ ಮಾಡಲಿ ? ವ್ಯವಹಾರದ್ದಶೆಯಿಂದ ಸಿದ್ಧಾರೂಢ ಸ್ಥಾನಕ್ಕೆ ಹೋಗಿ ಅವರ ದರ್ಶನ ಮಾಡಿಕೊಳ್ಳಲಿಕ್ಕೆ ನನಗೆ ವೇಳ್ಯ  ಸಿಗುವದಿಲ್ಲ. ಹಾಗಾದರೆ ಹುಬ್ಬಳ್ಳಿಗೆ ಒಬ್ಬ ಮನುಷ್ಯನನ್ನು ಕಳುಹಿಸಿ ಪಾದೋದಕವನ್ನು ತರಿಸುವೆನು,'' ಎಂದು ಹೇಳಿದನು. ಶರಣಪ್ಪನು ಒಂದು ಚರಿತ್ರವನ್ನು ರುಕ್ಕಿಣಿಯ ಕೈಯಲ್ಲಿ ಕೊಟ್ಟು ಸಿದ್ಧನಾಮದ ಘೋಷಣೆ ಮಾಡಿದನು. ಅದನ್ನು ಕೇಳಿದ ಕೂಡಲೇ ಅವಳಿಗೆ ದೇಹದ ಮೇಲೆ ಸ್ಮೃತಿ ಬಂದು, ತನ್ನ ತಂದೆಯನ್ನು ಕುರಿತು, - ''ಈ ಭಜನವು ನನಗೆ ಬಹಳ ಸುಖಕರವಾಗಿ ಕಾಣಿಸುತ್ತದೆ. ಅದನ್ನು ಕೇಳಿ ನನಗೆ ಬಹಳ ಸಂತೋಷವಾಗಿದೆ. ಅದನ್ನೆ  ನಾನು ಸರ್ವದಾ ಮಾಡುತ್ತಿರುವೆನು,” ಎಂದು ಅಂದಳು. ಆಮೇಲೆ ಶರಣಪ್ಪನು ರುಕ್ಕಿಣಿಗೆ - ''ನೀನು ಇದೇ ನಾಮದಿಂದ ನಿತ್ಯಭಜನೆ ಮಾಡುತ್ತಿರು, ಇದರಿಂದ ನಿನಗಿರುವ ಎಲ್ಲಾ ಬಾಧೆಯು ಹೋಗುವುದು ಮತ್ತು ತಿರುಗಿ ಬರಲಾರದು,'' ಎಂದು ಹೇಳಿ ಅವಳ ಕಿವಿಯಲ್ಲಿ ಆ ನಾಮ ಮಂತ್ರವನ್ನು ಉಪದೇಶಿಸಿದನು, ಮತ್ತು ಚರಿತ್ರ ಪಠಣವನ್ನು ಮಾಡಲಿಕ್ಕೂ ಹೇಳಿದನು. ಇದರಿಂದ ಇವಳ ಮನಸ್ಸಿಗೆ ಆನಂದವಾಗಿ, -“ಇದೇ ಪ್ರಕಾರ ನಾನು ನಡೆಯುವೆನು,'' ಎಂದು ಹೇಳಿದಳು. ಶರಣಪ್ಪನು ಹೀಗೆ ಅವಳಿಗೆ ಉಪದೇಶವನ್ನು ಮಾಡಿ, ಅಲ್ಲಿಂದ ಹೊರಟು ಹೋದನು. 


ಶ್ರೀಮಂತನು ಸದ್ಗುರು ಪಾದ ತೀರ್ಥಕ್ಕೋಸ್ಕರ ಹುಬ್ಬಳ್ಳಿಗೆ  ಒಬ್ಬ ಮನುಷ್ಯನನ್ನು ಕಳುಹಿಸಿದನು. ತೀರ್ಥವು ಬರುತ್ತಲೇ ಅದನ್ನು ರುಕ್ಮಿಣಿಗೆ ಕೊಟ್ಟನು, ಅದರ ಸೇವನೆಯಿಂದ ಅವಳ ಮನಸ್ಸು ಪೂರ್ಣ ಸ್ವಸ್ಥವಾಗಿ ಚರಿತ್ರ ಪಠಣವನ್ನೂ ನಿತ್ಯ ಸಪ್ರೇಮ ನಾಮಸ್ಮರಣೆಯನ್ನು ಆರಂಭಿಸಿದಳು. ಇದರಿಂದ ಭೂತವು ಸ್ಥಾನ ಬಿಟ್ಟು ಹೋಯಿತು. ಪುನಃ ಅವಳ ಕಡೆಗೆ ಬರಲೇ ಇಲ್ಲ. ಪೂರ್ವದಲ್ಲಿ ಅನುದಿನ ರುಕ್ಮಿಣಿಗೆ ಭೂತ ಸಂಚಾರವಾಗುತ್ತಿತ್ತು. ಈಗ ಏಳು ದಿನಗಳ ತನಕ ಅದರ ವರ್ತಮಾನವೇ ಇದ್ದಿಲ್ಲ. ಶ್ರೀಮಂತನಿಗಾದರೂ ಬಹು ಆನಂದವಾಗಿ, -“ಆಹಾ, ಚರಿತ್ರ ಪಠಣವು ಸುಖಕರವಾಯಿತು. ಈಗ ಸರ್ವರಲ್ಲಿಯೂ ಅಭೇದ ಭಾವನೆಯಿಂದ ವರ್ತಿಸುವ ಆ ಸದ್ಗುರು ಸಿದ್ದಾರೂಢರ ಪಾದದರ್ಶನ ಪಡೆದುಕೊಳ್ಳಬೇಕು. ನನಗೆ ಅವರ ಮೇಲೆ ಶ್ರದ್ಧೆ ಇರಲಿಲ್ಲ. ಆದರೂ ನಮ್ಮ ಆಪತ್ತನ್ನು ಪರಿಹಾರ ಮಾಡಿದರು. ಈಗ ರುಕ್ಮಿಣಿಯನ್ನು ಕರೆದುಕೊಂಡು ಆತನ ಪಾದಕ್ಕೆ ಶರಣು ಹೋಗಬೇಕು,'' ಎಂದು ನುಡಿದನು. ಚರಿತ್ರ ಪಠಣವು ಮುಗಿಯಿತು. ಆದರೆ ಆ ಕಾಲಕರ್ಮ ವಶವಾಗಿ ಏನು ಆಯಿತೆಂದರೆ - ಮಧ್ಯಾಹ್ನ ಕಾಲದಲ್ಲಿ ರುಕ್ಮಿಣಿಯು ಅಶ್ವತ್ಥದ ಕಟ್ಟೆಯ ಮೇಲೆ ಕುಳಿತಿದ್ದಳು. ಆ ಕಟ್ಟೆಯು ಉನ್ನತವಾಗಿದ್ದು, ಅಲ್ಲಿಂದ ರುಕ್ಮಿಣಿಯು ಕೆಳಗೆ ಇಳಿಯುತ್ತಿರುವಾಗ ಅಕಸ್ಮಾತ್ತಾಗಿ ಮಸ್ತಕ ಭ್ರಮಣವಾಗಿ ಕಲ್ಲಿಗೆ ಅಪ್ಪಳಿಸಿದಂತೆ ಬಿದ್ದಳು. ತಲೆಯು ಕಲ್ಲಿಗೆ ಬಡೆದು, ದರದರನೆ ರಕ್ತ ಹರಿಯಿತು. ಆಗ ತಂದೆಯು ಓಡಿ ಬಂದು ನೋಡುವಾಗ ಅವಳ ಪ್ರಾಣವು ಹೋಗಿತ್ತು. ಇದನ್ನು ನೋಡಿ ಬಹು ದುಃಖದಿಂದ ಆತನು, “ಹೇ ಸಿದ್ದಾರೂಢನೇ, ಏನು ಮಾಡಿದಿ  ನಿನ್ನ ಕೃಪೆಯಿಂದ ಭೂತವು ದೂರವಾಯಿತು. ಆದರೆ ಕೂಡಲೇ ನನ್ನ ಮಗುವೂ ಹೋಯಿತು. ಇದು ನಿನ್ನ ಕೀರ್ತಿಗೆ ಒಳ್ಳೇದಲ್ಲ, ನಿನ್ನ ಮೇಲೆ ನನ್ನ ಶ್ರದ್ಧೆ ಇರಲಿಲ್ಲ. ಆದರೂ ನಮ್ಮ ಆಪತ್ತನ್ನು ಪರಿಹರಿಸಿದಿ. ಈಗ ನನ್ನ ಪ್ರಿಯ ಪುತ್ರಿಯು  ಸಾಯುವದರಿಂದ ನಿನ್ನ ಕೀರ್ತಿ ಬಾಧೆಯು ಬಂತು. ನಿನ್ನ ನಾಮವನ್ನು ಜಪಿಸುತ್ತ ನಿನ್ನ  ಚರಿತ್ರವನ್ನು ಪಠಿಸುತ್ತ ಇದ್ದು, ಅದು ಮುಗಿದ ಕೂಡಲೇ ಹುಡುಗಿಯು  ತೀರಿಸಿಕೊಂಡಳು. 

ಈ ಕಲಂಕವು ಯಾರಿಗೆ ಹತ್ತುವದು ? ನೀನು ಒಂದು ವೇಳೆ ಈಗ ಸುಮ್ಮನೆ ಇದ್ದು, ನನ್ನ ಈ ಮಗಳನ್ನು ಸಾಯಲಿಕ್ಕೆ ಬಿಟ್ಟರೆ, ನಿನ್ನ ಭಕ್ತಿ ಮಾಡುತ್ತಲೇ ಸಾಯುತ್ತಾರೆ, ಎಂದು ಜನರು ಅನ್ನುವರು. ಆದ್ದರಿಂದ ಹೇ ದಯಾಳುವೇ, ಬೇಗನೇ ಓಡಿ ಬಂದು, ನಿನ್ನ ಬಿರುದನ್ನು ರಕ್ಷಿಸು. ನಿನ್ನನ್ನು ಕುರಿತು, ಶರಣು ಬಂದಿದ್ದ ಈ ಮಗಳನ್ನು ಕಾಲನ ಕೈಯಲ್ಲಿ ಕೊಡಬೇಡ'', ಎಂದು ದೀರ್ಘಸ್ವರದಿಂದ ಶ್ರೀಮಂತರು ಅರಳುತ್ತಿರುವಾಗ ಅಲ್ಲಿ ಒಬ್ಬ ಸಾಧುವು  ಪ್ರಾಪ್ತನಾದನು. ಆತನ ಶಾಂತವಾದ ಮುಖವನ್ನು ನೋಡಿದಾಕ್ಷಣ, ಶ್ರೀಮಂತನು ಸ್ತಬ್ದನಾದನು. ಆ ಸಾಧುವಿನ ಮಸ್ತಕಕ್ಕೆ ಒಂದು ಕೆಂಪು

ವಸ್ತ್ರವು ಸುತ್ತಿದ್ದು, ಮೈಮೇಲೆ ಕ್ಯಾವಿ ಬಣ್ಣದ ಶ್ಯಾಲು  ಹೊತ್ತಿದ್ದನು. ಆತನ ಕಂಠದಲ್ಲಿ ರುದ್ರಾಕ್ಷಿ ಮಾಲೆಯೂ ವಾಮ ಹಸ್ತದಲ್ಲಿ ಕಮಂಡಲವೂ ಶೋಭಿಸುತ್ತಿದ್ದವು. ಈ ಪ್ರಕಾರವಿರುವ ಆ ದಿವ್ಯ ಸನ್ಯಾಸಿಯು  ಬಂದು ಶ್ರೀಮಂತನನ್ನು ಕುರಿತು, -ಈ ಕನ್ನೆಗೆ ಏನಾಯಿತು ! ನೀನು ಯಾಕೆ ವಿಲಾಪ ಮಾಡುತ್ತಿ? " ಎಂದು ಕೇಳಲು ಶ್ರೀಮಂತನು, -ಹೇ ಯತಿವರ್ಯ ನನ್ನ ದುಃಖವನ್ನು ನಿನಗೇನು ಹೇಳಲಿ ! ಸಿದ್ಧ ಭಕ್ತಿ ಗೆ ಹತ್ತಿದ ಕೂಡಲೇ, ನನ್ನ ಸಂಸಾರವೆಲ್ಲ  ದುಃಖಮಯವಾಗಿ ಹೋಯಿತು. ಒಬ್ಬ ಸಾಧು ವಚನದ ಮೇಲೆ ವಿಶ್ವಾಸವಿಟ್ಟು, ಈ ಹುಡುಗಿಯು  ಏಳು ದಿನಗಳಿಂದ ಸಿದ್ದ ಚರಿತ್ರ ಪಾರಾಯಣ ಮಾಡುತ್ತ ಇರುವಾಗ್ಗೆ ಇವಳ ಪ್ರಾಣವೇ ಹೋಯಿತು ಎಂದು ಅಂದ  ಕಠೋರ ವಚನಗಳನ್ನು ಕೇಳಿ, ಆ ಸಾಧುವು ತನ್ನ ಕಿವಿಯ ಮೇಲೆ ಕೈ ಇಟ್ಟು, - " ಶಿವ ಶಿವಾ, ಶ್ರೀ ಸಿದ್ಧಾರೂಢರ ಮೇಲೆ ದುರ್ಧರವಾದ ಅಪವಾದವು ಬರುವಂಥಾದ್ದಾಯಿತಲ್ಲ. ಕಾಲಕರ್ಮ ವಶದಿಂದ ಈಕೆಗೆ ಮೃತ್ಯು ಬಂದಿದ್ದು, ಸದ್ಗುರುವಿನ ಮೇಲೆ ನಿಮಿತ್ಯ ಬಂತು, ಆತನ ಮೇಲೆ ನೀನು ದೋಷ ಹೊರಿಸಿ ನಿನ್ನ ಹಿತವನ್ನು ಕಳೆದುಕೊಳ್ಳವಿ  ಆದರೆ ನನ್ನನ್ನು ಇಲ್ಲಿಗೆ ಕಳುಹಿಸಿರುವದರಿಂದ ಆತನು ಎಷ್ಟು ದಯಾಳನಿದ್ದಾನೆಂದು ನೀನೇ ನೋಡಿಕೋ, ಹೇಳುತ್ತೇನೆ ಕೇಳು. ಭಕ್ತರ ಮೇಲೆ ಸಿದ್ದನಾಥನಿಗೆ ವಿಶೇಷ ದಯೆ ಇರುವದು, ನಿನ್ನೆ  ದಿವಸ ಆತನಿಗೆ ಭೇಟಿಯಾದಾಗ ಆತನು ಹೇಳಿದ್ದು ಕೇಳಿ ನನಗೆ ಆಶ್ಚರ್ಯವಾಯಿತು. ನನ್ನನ್ನು ಕುರಿತು - "ಬಾರಪ್ಪಾ ಯತಿರಾಯಾ, ನಾಳೆ ನೀನು ಒಬ್ಬಾಕೆಯ ಮರಣವನ್ನು ನೋಡುವಿ. ಅವಳ ಮುಖದಲ್ಲಿ ಈ ವಿಭೂತಿಯನ್ನು ಹಾಕಿ ಅವಳನ್ನು ಬದುಕಿಸು.” ಎಂದು ಆ ಸದ್ಗುರುನಾಥನಂದನು. ಆ ಸಮಯದಲ್ಲಿ ಅದನ್ನು ನಾನು ಕೇಳಿ ಚಕಿತನಾದೆ. ಆದರೆ ಆ ಮಾತು ಈಗ ನಿಜವಾಯಿತು. ಆ ಸಿದ್ದ ಸಮರ್ಥನು  ಸರ್ವಜ್ಞನಿರುವನು. ಆತನ ಕೃಪೆಯಿಂದ ಸತ್ತವಳು ಈಗ ಬದುಕುವಳು ," ಎಂದು ಹೇಳಿ ಆ ಯತಿಯು  ತನ್ನ ಬಟವೆಯೊಳಗಿಂದ ವಿಭೂತಿಯನ್ನು ತೆಗೆದು ಬಲಗೈಯಲ್ಲಿ ಹಿಡಿದು, ಆ ಮೃತ್ಯುಹೊಂದಿದವಳನ್ನು ಕುರಿತು ಮಾತಾಡುತ್ತಾನೇ  - ಶ್ರೀ ಸದ್ಗುರು ಸಿದ್ಧಾರೂಢರ  ಪ್ರಸಾದ ವಿಭೂತಿಯನ್ನು ಸತ್ಯವಾಗಿ ಆತನ ಆಜ್ಞೆಯಿಂದ ನಿನ್ನ ಮುಖದಲ್ಲಿ ಹಾಕುತ್ತೇನೆ. ತ್ವರೆಯಿಂದ ಏಳು,” ಎಂದು ಅನ್ನುತ್ತ ರುಕ್ಮಿಣಿಯ ಬಾಯಿಯೊಳಗೆ ವಿಭೂತಿಯನ್ನು ಹಾಕಿ ಸಿದ್ಧನಾಮ ಗರ್ಜನೆಯನ್ನು ಮಾಡಿದನು. ರುಕ್ಮಿಣಿಯ ಈ ಭಯಂಕರವಾದ ಮರಣವಾರ್ತೆಯನ್ನು ಕೇಳಿ ಅಸಂಖ್ಯಾತ ಜನರು  ಕೂಡಿದ್ದರು. ಅವರೆಲ್ಲರೂ ಈಗ ಅವಳನ್ನು ನೋಡುತ್ತಿರುವಾಗ ಅದ್ಭುತವಾದ ಚಮತ್ಕಾರವಾಯಿತು. ಯತಿವರನು ಆಕೆಯ ಬಾಯಿಯೊಳಗೆ ವಿಭೂತಿ ಹಾಕಿ ನಾಮಗರ್ಜನೆ ಮಾಡಿದಾಕ್ಷಣ, ರುಕ್ಮಿಣಿಯು ಕಣ್ಣು ತೆರೆದು ನೋಡುವಂಥವಳಾದಳು. ಶ್ರೀಮಂಥನಿಗೆ ಅತ್ಯಂತ ಹರ್ಷವಾಯಿತು. ಆತನು ಓಡಿ ಬಂದು, ಯತಿಯ ಚರಣಗಳನ್ನು ಹಿಡಿದನು. ರುಕ್ಮಿಣಿಯು ಆಗ ಎದ್ದು ಕುಳಿತಳು. ಇದನ್ನು ನೋಡಿ ಸರ್ವ ಜನರ ಮನಸ್ಸಿಗೆ ಆನಂದವಾಯಿತು. ಕೂಡಲೇ ಯತಿಯು ಅದೃಶ್ಯನಾದನು. ಇದನ್ನು ನೋಡಿ ಎಲ್ಲರೂ ಆಶ್ಚರ್ಯಪಟ್ಟು - “ಈತನು ಸದ್ಗುರುವೇ ಮತ್ತೊಬ್ಬನಲ್ಲ,”. ಎಂದು ಹೇಳುತ್ತ ಸಿದ್ಧನಾಮದಿಂದ ಗರ್ಜಿಸುವವರಾದರು ರುಕ್ಮಿಣಿಯ ತಾಯಿಯ ಮನೆಯಲ್ಲಿ ಇದ್ದಿಲ್ಲ, ಆದರೆ ಈಗ ಓಡಿ ಬಂದು, ಪುತ್ರಿಯನ್ನು ಅಪ್ಪಿಕೊಂಡು ಬಹು ಪ್ರೇಮದಿಂದ ಅಳುತ್ತಿರುವಳು. ರುಕ್ಮಿಣಿಯು ಸಶಕ್ತಳಾದ ಕೂಡಲೇ ಅವರೆಲ್ಲರೂ ಹುಬ್ಬಳ್ಳಿ ಗೆ ಹೋಗಿ ಅವಳನ್ನು ಬದುಕಿಸಿದ ಸಿದ್ಧಾರೂಢರ ದರ್ಶನವಾಗಬೇಕೆಂಬ ಹೇತುವಿನಿಂದ ಹೊರಟರು. ಸಿದ್ಧಾಶ್ರಮಕ್ಕೆ ಬಂದು, ಸಿದ್ಧಾರೂಢರಿಗೆ ನಮಸ್ಕಾರ ಮಾಡಿದ ಕೂಡಲೇ, ಅವರು ಶ್ರೀಮಂತನಿಗೆ ಕೇಳುತ್ತಾರೆ - " ರುಕ್ಮಿಣಿಯ ಪ್ರಕೃತಿಯು  ಈಗ ಹ್ಯಾಗಿದೆ ?” ಸಿದ್ದರಾಯರ ವಚನವನ್ನು ಕೇಳಿ, ಶ್ರೀಮಂತರು ತಾನು ಹೇಳುವ ಮೊದಲೇ  ಈ ವರ್ತಮಾನವು ಇವರಿಗೆ ಹ್ಯಾಗೆ ತಿಳಿಯಿತು, ಎಂದು ಚಿಂತಿಸಿ ಆಶ್ಚರ್ಯಪಟ್ಟನು. ಆಮೇಲೆ ಹಣ್ಣು ಕಾಯಿ ಕಾಣಿಕೆ ಮುಂತಾದ್ದನ್ನು ಸದ್ಗುರುಗಳಿಗೆ ಅರ್ಪಿಸಿ, ರುಕ್ಮಿಣಿಯು ಅವರ ಚರಣಗಳಿಗೆ ಬಹು ಪ್ರೇಮದಿಂದ ಬಿದ್ದಳು. ಶ್ರೀಮಂತನೂ ಸಮೂಲವಾಗಿ ಅವಳ ವೃತ್ತಾಂತವನ್ನು ಸಿದ್ಧಾರೂಢರಿಗೆ ನಿವೇದಿಸಿ, -“ಹೇ ಕೃಪಾಳುವಾದ ಸಿದ್ಧನಾಥನೇ, ನೀನೇ ರುಕ್ಮಿಣಿಯನ್ನು ಬದುಕಿಸಿದವನಾದಿ. ಮತ್ತು ನಿನ್ನ ಭಕ್ತಿಯನ್ನು ನಮ್ಮಲ್ಲಿ ಉತ್ಪನ್ನ ಮಾಡಿಸಿ, ನಮ್ಮನ್ನಾದರೂ ಉದ್ಧರಿಸುವವನಾದಿ,” ಎಂದು ಹೇಳಿದರು. ಸರ್ವರು ಇದನ್ನು ಕೇಳಿ ಜಯಜಯಕಾರ ಮಾಡಿ, ಸಿದ್ಧ ನಾಮವನ್ನು ಗರ್ಜಿಸುತ್ತಿದ್ದರು. ಅನಂತರ ಸದ್ಗುರು ಆಜ್ಞೆಯನ್ನು ಪಡೆದುಕೊಂಡು ಎಲ್ಲರೂ ಸ್ವಸ್ಥಾನಕ್ಕೆ ಹೋದರು.

👇👇👇👇👇👇👇👇👇👇👇👇👇👇

ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜನ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ, ಬೇರೆಯರಿಗೂ share ಮಾಡಿ, ಅವರಿಗೂ help ಮಾಡಿ ಅಜ್ಜನ ಕೃಪೆಗೆ ಪಾತ್ರರಾಗಿರಿ

ಈ link ಒತ್ತಿ 👉 📖 👈 ಒತ್ತಿ

ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ

👉ಚನಮಲ್ಲಪ್ಪನು ಸಿದ್ಧರನ್ನು ರಕ್ಷಿಸಲಿಕ್ಕೆ ಹಾವನ್ನು ಹಿಡಿದು, ಹಾವು ಕಡಿದಾಗ ಸದ್ಗುರುಗಳು ರಕ್ಷಿಸಿದ ಕಥೆ

ಎಲ್ಲಾ  ಕಥೆಗಳ ಲಿಂಕಗಳು 

👉ಕಥಾ ಸಂಗ್ರಹ 👉🛃

ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 

1)WhatsApp shareಗಾಗಿ click ಮಾಡಿ📲☎️

2)Facebook shareಗಾಗಿ👉

3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚



«««««ಓಂ ನಮಃ ಶಿವಾಯ »»»»»»»

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ