ಕಾಶೀ ಕ್ಷೇತ್ರಕ್ಕೆ ಸಿದ್ಧರ ಆಗಮನ. ಕಣಾದ, ಗೌತಮ ಮತದ ನೈಯಾಯಿಕರು ನ್ಯಾಯಶಾಸ್ತ್ರದ ಅಭಿಮಾನವನ್ನು ಬಿಡಿಸಿ ಜ್ಞಾನಮಾರ್ಗ ದತ್ತ ಆಕರ್ಷಿಸಿದ್ದು.
🕉️ ಕಾಶೀ ಕ್ಷೇತ್ರಕ್ಕೆ ಆಗಮನ. ಕಣಾದ, ಗೌತಮ ಮತದ ನೈಯಾಯಿಕರು ನ್ಯಾಯಶಾಸ್ತ್ರದ ಅಭಿಮಾನವನ್ನು ಬಿಡಿಸಿ ಜ್ಞಾನಮಾರ್ಗ ದತ್ತ ಆಕರ್ಷಿಸಿದ್ದು.
ಸಿದ್ಧಾರೂಢ ಭಾರತಿಯು ಕೇದಾರ ಘಟ್ಟದಿಂದ ನಾನಾ ಪರ್ವತಗಳಲ್ಲಿ ಹಾಯ್ದು ಸಂಚಾರ ಮಾಡುತ್ತಾ, ಭೂಲೋಕದ ಕೈಲಾಸವೆಂದು ಪ್ರಸಿದ್ದಿಯಾದ ಕಾಶಿ ಕ್ಷೇತ್ರಕ್ಕೆ ಆಗಮಿಸಿದನು. ಗಂಗಾ ನದಿಯಲ್ಲಿ ಮಣಿಕರ್ಣಿಕಾ ಘಾಟದಲ್ಲಿ ಮುಂಡನ ಮಾಡಿಕೊಂಡು ಸ್ನಾನ ಮಾಡಿ ಸಂಕಲ್ಪದೊಂದಿಗೆ ಪಿಂಡ ಪ್ರಧಾನ ಮಾಡುವವರನ್ನು ಕಂಡು ಗಹಗಹಿಸಿ ನಕ್ಕನು. ಅಲ್ಲಿಂದ ಜಂಗಮವಾಡಿ ಮಠಕ್ಕೆ ಬಂದು ಅಲ್ಲಿ ನಡೆಯುತ್ತಿದ್ದ ಅಧ್ಯಯನವನ್ನು ನೋಡಿದನು. ಕಾಲಭೈರವನ ಗುಡಿಗೆ ಬಂದು ಮೂರ್ತಿದರ್ಶನ ಮಾಡಿಕೊಂಡನು. ನಂತರ ಕ್ಷೇತ್ರಾಧಿಪತಿಯಾದ ವಿಶ್ವೇಶ್ವರನ ದರ್ಶನ ನಂತರ ಅನ್ನಪೂರ್ಣೇಶ್ವರಿ ದರ್ಶನ ಪಡೆದನು. ಶ್ರೇಷ್ಠವಾದ ಸುರಾ ಭಾಂಡಲಿಂಗದರ್ಶನ ಮಾಡಿಕೊಂಡು ಸಿದ್ದರು ಹೊಳೆಯಲ್ಲಿ ಸ್ನಾನಕ್ಕೆ ಇಳಿದನು. ಅಲ್ಲಿ ಸ್ನಾನ ಮಾಡಿ ನಿತ್ಯ ಕರ್ಮ ಪೂರೈಸಿ ವಿಶ್ರಾಂತಿಗಾಗಿ ದಶಾಶ್ವಮೇಧ ಘಾಟವನ್ನು ಹತ್ತಿದನು. ಅಲ್ಲಿರುವ ದೇವಾಲಯದಲ್ಲಿ ವಿಶ್ರಮಿಸಿದನು. ಈಗ ತನ್ನ ಮನಸ್ಸಿನಲ್ಲಿ ಬ್ರಹ್ಮದೇವನು ಪೂರ್ವದಲ್ಲಿ ಇಲ್ಲಿಗೆ ಬಂದು ಹತ್ತು ಅಶ್ವಮೇಧ ಯಜ್ಞಗಳನ್ನು ಪೂರೈಸಿದ್ದರಿಂದ, ಈ ಘಾಟಕ್ಕೆ ದಶಾಶ್ವಮೇಧ ಎಂಬ ನಾಮಕರಣವಾಗಿರಬಹುದು. ಈಶನು ಮೊದಲಾಗಿ ಎಲ್ಲರಲ್ಲಿ ಉದಯಿಸುವ ವೃತ್ತಿಗೆ ನಾನೇ ಮೂಲಾಧಾರವಾಗಿದ್ದೇನೆ. ಕಾರಣ ಬ್ರಹ್ಮದೇವ ಮತ್ತು ನಾನು ಬೇರೆ ಅಲ್ಲಾ ಅಂತಾ ಕಲ್ಪನೆಯನ್ನು ಕಳೆದು ಕುಳಿತನು. ಬಳಿಕ ಮಹಾದೇವ ಶಾಸ್ತ್ರಿಗಳು ತಮ್ಮ ಮುದ್ದಿನ ಶಿಷ್ಯ ಸಮೂಹದಿಂದ ಅಲ್ಲಿಗೆ ಆಗಮಿಸಿದರು. ಎಲ್ಲರೂ ಉಚಿತಾಸನಗಳಲ್ಲಿ ಕುಳಿತುಕೊಂಡರು.
🕉️ ಕಣಾದ ಗೌತಮ ನೈಯಾಯಿಕ ಮತಗಳು ✡️
ಆಗ ಗುರುಗಳಾದ ಮಹಾದೇವ ಶಾಸ್ತ್ರಿಗಳು ತಮ್ಮ ಉಪಸ್ಥಿತರಿದ್ದ ಎಲ್ಲ ಶಿಷ್ಯರನ್ನು ಕುರಿತು '' ಹೇ ಕಂದರೇ ತರ್ಕ ಶಾಸ್ತ್ರವನ್ನು ಹೇಳುವೆ ಚಿತ್ತವಿಟ್ಟು ಕೇಳಿರಿ,” ಪರಮ ಪುರುಷನು ಮಾಡಿದ ಸೃಷ್ಟಿಯಲ್ಲಿ ದ್ರವ್ಯ, ಕರ್ಮ, ವಿಶೇಷ, ಸಾಮಾನ್ಯ, ಗುಣ, ಸಮವಾಯ ಮತ್ತು ಅಭಾವ ಹೀಗೆ ಸಪ್ತ ಪದಾರ್ಥಗಳಿವೆ. ತರ್ಕಶಾಸ್ತ್ರ ಸಾರ ಹೀಗಾಗಿದೆ.
ದ್ರವ್ಯಗುಣ ಕರ್ಮ ಸಾಮಾನ್ಯ ವಿಶೇಷ ಸಮವಾಯಾ
ಭಾವಾಃ ಸಪ್ತ ಪದಾರ್ಥಾಃ || ತತ್ರ ದ್ರವ್ಯಾಣಿ ಪೃಥಿವ್ಯಪ್ತೆಜೋ ವಾಯ್ವಕಾಶ ಕಾಲದಿ ಗಾತ್ಮ
ಮನಾಂಸಿ ನವೈವ || ರೂಪರಸ ಗಂಧ ಸ್ಪರ್ಶ ಸಂಖ್ಯಾ ಪರಿಮಾಣ ಪೃಥಕ್ತ್ವ ಸಂಯೋಗ ವಿಭಾಗ ಪರತ್ವಾಪರತ್ವ
ಗುರುತ್ವ ದ್ರವತ್ವ ಸ್ನೇಹ ಶಬ್ದ ಬುದ್ದಿ ಸುಖ ದುಃಖೇಚ್ಛಾ
ದ್ವೇಷ ಪ್ರಯತ್ನ ಧರ್ಮಾಧರ್ಮ ಸಂಸ್ಕಾರಾಶ್ಚ
ತುರ್ವಿಂಶತಿರ್ಗುಣಾಃ|| ಉತ್ಕ್ಷೇಪಣಾಪಕ್ಷೇ
ಪಣಾಕುಂಚನ ಪ್ರಸಾರಣ ಗಮನಾನಿ ಪಂಚ
ಕರ್ಮಾಣಿ || ಪರಮ ಪರಂಚೇತಿ ದ್ವಿವಿಧಂ ಸಾಮಾನ್ಯಮ್ || ನಿತ್ಯ ದ್ರವ್ಯ ವೃತ್ತಯೋ
ವಿಶೇಷಾಸ್ತ್ವವನಂ ತಾ ಏವ| ಸಮವಾಯಸ್ತ್ವೇಕ ಏವ | ಅಭಾವಶ್ಚತುರ್ವಿಧಃ ll ಪ್ರಾಗಭಾವಃ
ಪ್ರಧ್ವಂಸಾಭಾವೋ ತ್ಯಂತಾಭಾವೋ ಅನ್ಯೋನ್ಯಾ ಭಾವಶ್ಚೇತಿ|| ತತ್ರ ಗಂಧವತೀ ಪೃಥಿವೀ |
ಸಾಧ್ವಿವಿಧಾ | ನಿತ್ಯಾ ನಿತ್ಯಾಚ। ನಿತ್ಯಾ ಪರಮಾಣು
ರೂಪಾ | ಅನಿತ್ಯಾ ಕಾರ್ಯರೂಪ | ಪುನಸ್ತ್ರಿವಿಧಾ ಶರೀರೇಂದ್ರಿಯ ವಿಷಯ ಭೇದಾತ್। ಶರೀರ ಮಸ್ಮದಾದೀ ನಾಮ್ | ಇಂದ್ರಿಯಂ ಗಂಧಗ್ರಾಹಕಂ
ಘ್ರಾಣಂ ನಾಸಾಗ್ರವರ್ತಿ | ವಿಷಯೋ ಮೃತ್ಪಾಷಾಣಾದಿಃ ||
ಪೃಥ್ವಿ, ಜಲ, ಅಗ್ನಿ, ವಾಯು, ಆಕಾಶ, ಕಾಲ ದಿಕ್ಕು, ಆತ್ಮ, ಮನ ಈ ಪ್ರಕಾರ ಒಂಬತ್ತು ತೆರನಾಗಿವೆ. ರೂಪ, ರಸ, ಗಂಧ, ಸ್ಪರ್ಶ, ಸಂಖ್ಯಾ ಪರಿಮಾಣ, ಪೃಥಕ್ತವ, ಸಂಯೋಗ ವಿಭಾಗ, ಪರಾತ್ವಾಪರತ್ವ ಗುರುತ್ವ ದ್ರವತ್ವ ಸ್ನೇಹ, ಶಬ್ದ, ಬುದ್ದಿ, ಸುಖ, ದುಃಖೇಚ್ಛಾ ದ್ವೇಷ ಪ್ರಯತ್ನ ಧರ್ಮ, ಅಧರ್ಮ ಸಂಸ್ಕಾರಗಳ ಇಪ್ಪತ್ನಾಲ್ಕು ಗುಣಗಳಾಗಿವೆ. ಉತ್ಕ್ಷೇಪಣೆ ಅಂದರೆ ಮೇಲೆ ಬಿಡುವುದು, ಕೆಳಗೆ ಬಿಡುವುದು, ಆಕುಂಚನ, ಪ್ರಸರಣ, ಗಮನ ದ್ವಿವಿಧವಾಗಿದೆ. ಅಂದರೆ ಸಾಮಾನ್ಯ ಮತ್ತು ವಿಶೇಷವಾಗಿದೆ. ಇದು ಸಮವಾಯುವು. ಇನ್ನೂ ಅಭಾವ ನಾಲ್ಕು ಪ್ರಕಾರವಿದೆ. ಅವು ಯಾವುವೆಂದರೆ ಪ್ರಾಗ್ ಭಾವ, ಪ್ರಧ್ವಂಸಾಭಾವ, ಅತ್ಯಂತಾಭಾವ, ಅನ್ಯನ್ಯೋ ಭಾವ, ನಿತ್ಯ ಅನಿತ್ಯಾ ಅಂತಾ ಎರಡು ಪ್ರಕಾರ ಪೃಥ್ವಿಯ ಗಂಧವು, ನಿತ್ಯ ಪರಮಾಣು ರೂಪ, ಅನಿತ್ಯ ಕಾರ್ಯರೂಪ ಮತ್ತೆ ಮೂರು ಪ್ರಸಾರವುಳ್ಳ ಶರೀರ, ಇಂದ್ರಿಯ, ವಿಷಯ ಭೇದ ಶರೀರವು ತಾನೇ ಎಂಬುವದು, ಇಂದ್ರಿಯ ಗಂಧ ಗ್ರಾಹಕವು ನಾಸಿಕಾಗ್ರದಲ್ಲಿ ಘ್ರಾಣವು ಪಾಷಾಣಾದಿಗಳಲ್ಲಿ ಉತ್ಕ್ಷೇಪಣಿಯು ಗಮನವಾಗಿದೆ. ಅಪಕ್ಷೇಪಣಿಯು ಆಕುಂಚನ ಪ್ರಸರಣ ಈ ಪ್ರಕಾರ ಪಂಚಕರ್ಮಗಳಾಗಿವೆ. ಪರಮ, ಪರಂಚವೆಂಬಿವು ಸಾಮಾನ್ಯವೆನಿಪವು. ನಿತ್ಯದ್ರವ್ಯ ವೃತ್ತಿಗಳಿವು ವಿಶೇಷಗಳಾಗಿವೆ. ಮತ್ತೆ ಸಮವಾಯವು ಒಂದೇಯಾಗಿದೆ. ಅಭಾವ ನಾಲ್ಕು ಪ್ರಕಾರಗಳಾಗಿದೆ. ಅವ್ಯಾವಂದರೆ ಪ್ರಾಗ್ ಭಾವ, ಪಧ್ವಂಸಾಭಾವ, ಅತ್ಯಂತಾಭಾವ, ಅನ್ನೋನ್ಯಾಭಾವ ಈ ಪ್ರಕಾರಗಳಾಗಿದೆ.
ಗಂಧಗುಣದ ಭೂಮಿಯಲ್ಲಿ ನಿತ್ಯ ಅನಿತ್ಯ ಎರಡು ವಿಧ. ನಿತ್ಯವಾದುದು. ಪರಮಾಣು ರೂಪವಾಗಿವೆ. ಅನಿತ್ಯವಾದುದು ಕಾರ್ಯರೂಪವಾಗಿದೆ. ಮನಸ್ಸು ಮೂರು ಪ್ರಕಾರವಾಗಿದೆ. ತನು, ಇಂದ್ರಿಯ, ವಿಷಯ ಅಂತಾ ಮೂರು ಪ್ರಕಾರ ದೇಹವೇ ತಾನೆಂಬುದು, ಇಂದ್ರಿಯ ಗಂಧ ಗ್ರಾಹಕ, ನಾಸಿಕಾಗ್ರದಿ ಪ್ರಾಣ ಗ್ರಹಕವಾಗಿದೆ. ಮೃತ್ ಶಿಲಾದಿಗಳಲ್ಲಿ ವಿಷಯಗಳು.
ಈ ಪ್ರಕಾರ ಮಹಾದೇವಶಾಸ್ತ್ರಿಗಳು ತರ್ಕಶಾಸ್ತ್ರವನ್ನು ಬೋಧನೆ ಮಾಡುವಾಗ ಜಗನ್ನಾಥ ದೀಕ್ಷಿತನೆಂಬ ಶಾಸ್ತ್ರಿಯು ತನ್ನ ವಾಲಿದಳದಂತೆ ಬಹು ಶಿಷ್ಯರಿಂದ ಅಲ್ಲಿಗೆ ಬಂದು ಕೂತನು. ತನ್ನ ಶಿಷ್ಯರನ್ನು ಕುರಿತು ಹೇ ಶಿಷ್ಯಂದಿರಾ ಗೌತಮನು ಹೇಳಿದ ನ್ಯಾಯಶಾಸ್ತ್ರವನ್ನು ತಿಳಿಸುವೆ. ಏಕಾಗ್ರತೆಯಿಂದ ಕೇಳಿರಿ, ಮುಕ್ತಿಯನ್ನು ಪಡೆಯಲು ಆ ನ್ಯಾಯಶಾಸ್ತ್ರದಲ್ಲಿ ಹದಿನಾರು ಪ್ರಕಾರದ ಸಾತಿಶಯ ಪರಿಜ್ಞಾನವಿರುವುದನ್ನು ನಿಮಗೆ ತಿಳಿಯುವಂತೆ ಹೇಳುವೆ ಕೇಳಿರಿ.
ಪ್ರಮಾಣ, ಪ್ರಮೇಯ, ಸಂಶಯ, ಪ್ರಯೋಜನ, ದೃಷ್ಟಾಂತ, ಸಿದ್ದಾಂತ, ಅವಯವ, ತರ್ಕ ನಿರ್ಣಯ, ವಾದ,ಜಲ್ಪ, ವಿತ್ತಂಡ,
ಹೇತು, ಆಭಾಸ, ಛಲ, ಜಾತಿ ನಿಗ್ರಹ
ಸ್ಥಾನಾನಾಂ ತತ್ವಜ್ಞಾನಾನ್ನಿಶ್ರೇಯಸಾದಿಗಮಃ
ಇತಿ ನ್ಯಾಯಶಾಸ್ತ್ರೇ ಷೋಡಶ ಪಾದರ್ಥಾನಾ ಮುಕ್ತ
ತ್ವಾತ್ ಕಥಂ ಸಪ್ತೈವೇತ್ಯತ ಅಹ ಸರ್ವೇಷಾಮಿತಿ||
ಸರ್ವೇಷಾಂ ಸಪ್ತಸ್ವೇವಾಂತರ್ಭಾವ ಇತ್ಯರ್ಥಃ||
ಆತ್ಮ ಶರೀರೇಂದ್ರಿಯಾರ್ಥ ಬುದ್ದಿ ಮನಃ ಪ್ರವೃತ್ತಿ
ದೋಷ ಪ್ರೇತ್ಯಭಾವ ಫಲ ದುಃಖಾಪವರ್ಗಾಸ್ತು ಪ್ರಮೇಯಂll
ಇತಿ ದ್ವಾದಶ ವಿಧಂ ಪ್ರಮೇಯಂll ಪ್ರವೃತ್ತಿ ಧರ್ಮಾಧರ್ಮ
ರಾಗದ್ವೇಷ ಮೋಹದೋಷಾಃll ರಾಗಾಃ ಇಚ್ಛಾ | ದ್ವೇಷೋ
ಮನ್ಯುಃ ll ಮೋಹಃ ಶರೀರಾದೌ ಆತ್ಮತ್ವ ಭ್ರಮಃ ಪ್ರೇತ್ಯಭಾವೋ ಮರಣಂ|| ಫಲಂ ಭೋಗಃ ||
ಅಪವರ್ಗೋ ಮೊಘಃ ll ಸಚ ಸ್ವಸಮಾನಾಧಿಕರಣ
ದುಃಖ ಪ್ರಾಗಭಾವ ಸಮಕಾಲೀನ ದುಃಖ ಧ್ವಂಸಃ|
ಪ್ರಯೋಜನಂ ಸುಖ ಪ್ರಾಪ್ತಿಃ ದುಃಖ ಹಾನಿಶ್ಚ|| ದೃಷ್ಟಾಂತೊ ಮಹಾನಸಾಧಿಃ|| ಪ್ರಾಮಾಣಿಕತ್ವೇನ ಅಭ್ಯುಪಗತೋರ್ಥಃ ಸಿದ್ಧಾಂತಃ|| ನಿರ್ಣಯೋ ನಿಶ್ಚಯಃ ll
ಸಚ ಪ್ರಮಾಣ ಫಲಮ್|| ತತ್ವ ಬುಬುತ್ಸೋಃ ಕಥಾವಾದಃ||
ಉಭಯ ಸಾಧನವತೀ ವಿಜಿಗೀಷು ಕಥಾಜಲ್ಪಃ ll ಸ್ವಪಕ್ಷ ಸ್ಥಾಪನ ಹೀನಾ ವಿತಂಡಾ || ಕಥಾನಾಮ ನಾನಾ
ವಕ್ತೃಕಃ ಪೂರ್ವೋತ್ತರ ಪಕ್ಷ ಪ್ರತಿಪಾದಕ ವಾಕ್ಯಸಂದರ್ಭ|
ಅಭಿಪ್ರಾಯಾಂತರೇಣ ಪ್ರಯುಕ್ತ ಸ್ಮಾರ್ಥಾಂತರಂ ಪ್ರಕಲ್ಪ್ಯದೂಷಣಂ ಛಲಮ್ ಅಸದುತ್ತರಂ ಜಾತಿಃ|
ಸಾಧರ್ಮ್ಯ ವೈಧರ್ಮ್ಯ ಉತ್ಕರ್ಷಾ ಪಕರ್ಷವರ್ಣ್ಯವರ್ಣ
ವಿಕಲ್ಪ ಸಾಧ್ಯ ಪ್ರಾಪ್ತ ಪ್ರಾಪ್ತಿ ಪ್ರಸಂಗ ಪ್ರತಿ ದೃಷ್ಟಾಂತಾನು
ತ್ಪತ್ತಿ ಸಂಶಯ ಪ್ರಕರಣ ಹೇತ್ವರ್ಥಾಪತ್ಯ ವಿಶೇಷೋಪಪತ್ತ್ಯುಪಲ್ಥ್ಯನುಪಲಬ್ಬಿ ನಿತ್ಯಾನಿತ್ಯ ಕಾರ್ಯಾಕಾರ್ಯ ಸಮಾಜಾತಯಃll ವಾದಿನೋಪ
ಜಯ ಹೇತುರ್ನಿಗ್ರಹ ಸ್ಥಾನಮ್|| ಪ್ರತಿಜ್ಞಾಹಾನಿಃ ಪ್ರತಿಜ್ಞಾನಂತರಂ ಪ್ರತಿಜ್ಞಾ ವಿರೋಧಃ ಪ್ರತಿಜ್ಞಾ ಸಂನ್ಯಾಸಃ ಹೇತ್ವಂತರಂ ಅರ್ಥಾಂತರಂ ನಿರರ್ಥಕಂ
ಅವಿಜ್ಞಾತಾರ್ಥಂ ಅಪಾರ್ಥಕಂ ಅಪ್ರಾಪ್ತಕಾಲಂ ನ್ಯೂನಂ
ಅಧಿಕಂ ಪುನರುಕ್ತಿಂ ಅನನುಭಾಷಣಂ ಅಜ್ಞಾನಂ
ಅಪ್ರತಿಭಾ ವಿಕ್ಷೇಪಃ ಮತಾನುಜ್ಞಾಪರ್ಯನು ಯೋಜ್ಯೋಪೇಕ್ಷಣಂ ನಿರನು ಯೋಜ್ಯಾನುಯೋಗಃ
ಅಪಸಿದ್ಧಾಂತಃ ಹೇತ್ವಾಭಾಸಾಶ್ಚ ನಿಗ್ರಹಸ್ಥಾನಾನಿ||
ಶೇಷಲ ಸುಗಮಂ||
ಪ್ರಮಾಣ, ಪ್ರಮೇಯ, ಸಂಶಯ, ಪ್ರಯೋಜನ, ತರ್ಕ, ನಿರ್ಣಯ, ಅವ ಯವ, ಜಲ್ಪ (ಹೇಳುವಿಕೆ) ವಿತ್ತಂಡ, ಛಲ, ಜಾತಿ ನಿಗ್ರಹ, ಸಿದ್ದಾಂತ, ವಾದ, ದೃಷ್ಟಾಂತ, ಹೇತು ಆಭಾಸ ಈ ಹದಿನಾರು ಪದಾರ್ಥಗಳಲ್ಲಿ ಆತ್ಮ, ಶರೀರ, ಇಂದ್ರಿಯ, ಬುದ್ಧಿ, ಮನಸ್ಸು ಪ್ರವೃತ್ತಿದೋಷ ಫಲವನ್ನು ತಿಳಿಯಬೇಕು. ಮನಸ್ಸು ಇಂದ್ರಿಯಗಳಲ್ಲಿ ಹರಿದಾಡುತ್ತಾ ದುಃಖಕ್ಕೆ ಕಾರಣವಾಗುವುದು. ಇದೆ ಪ್ರಮೇಯವೆನಿಸು ವಧು, ಪ್ರವೃತ್ತಿ ಹನ್ನೆರಡು ಭಾಗವಾಗಿರುವುದು, ಧರ್ಮ, ಅಧರ್ಮ, ರಾಗ-ದ್ವೇಷ, ಮೋಹದೋಷ ಕ್ರೋದೇಚ್ಚಾ ಬೇಗನೇ ದೇಹಾದಿಗಳಲ್ಲಿ ಮನವು ಪ್ರವೇಶಿಸಲು ಆತ್ಮಭ್ರಾಂತಿಯಾಗುವದು ಪ್ರೇತಭಾವನೆ ಮರಣವೆನಿಸುವುದು.
ಸುಖ ಪ್ರಾಪ್ತಿಯ ನಂತರ ದುಃಖ ನಿವೃತ್ತಿಯನ್ನು ಛಲದಿಂದ ಮಾಡಿಕೊಳ್ಳುವುದೇ ಪ್ರಯೋಜನ, ಸುಲಭದಿಂದ ಪಡೆದುಕೊಳ್ಳುವುದೇ ದೃಷ್ಟಾಂತ, ಹಲವು ಪ್ರಮಾಣಗಳಿಂದ ತಿಳಿಯುವುದೇ ಸಿದ್ಧಾಂತ ಪ್ರಮಾಣದಿಂದ ನಿಶ್ಚಯ ಮಾಡುವದೇ ನಿರ್ಣಯ. ತತ್ವಜ್ಞಾನಿಗಳು ಪ್ರಶ್ನೋತ್ತರ ಮಾಡುವದೇ ವಾದವು. ಪರಸ್ಪರ ಗೆಲುವ ಅಪೇಕ್ಷೆಯೇ ಜಲ್ಪ (ಹೇಳುವಿಕೆ)ವಾಗಿದೆ. ತನ್ನ ಮತವೇ ಶ್ರೇಷ್ಠವೆಂದು ಪರಮತ ಖಂಡನೆ ಮಾಡುವದೇ ವಿತ್ತಂಡವು. ಅನೇಕ ವಕ್ತಾರರ ಪೂರ್ವಪಕ್ಷ ಉತ್ತರ ಪಕ್ಷಗಳನ್ನು ಹೇಳುವ ವಾಕ್ಯ ಸಮುದಾಯವೇ ಕಥೆಯೆನಿಸುವದು, ಒಂದು ಭಾವದಿಂದ ಮತ್ತೊಂದನ್ನು ಬಿಟ್ಟು ಬೇರೆ ತರದ ಅರ್ಥವನ್ನು ಕಲ್ಪನಾ ಮಾಡಿ ದೂಷಣೆ ಮಾಡುವದೇ ಛಲವು, ಪ್ರಸಂಗಕ್ಕೆ ವ್ಯಾಘಾತವನ್ನು ತನ್ನಲ್ಲಿ ತಂದುಕೊಳ್ಳುವದೇ ಜಾತಿಯೆನಿಪುದು. ಇರುವ ಸಾಧರ್ಮ ಉಪಲಭ್ಧಿ ಪ್ರಕರಣ ಸಂಶಯ ಪ್ರಾಪ್ತಿ ಪ್ರತಿ ದೃಷ್ಟಾಂತ, ವರ್ಣ್ಯ , ಅವರ್ಣ್ಯ ವೈಧರ್ಮ ವಿಕಲ್ಪ, ನಿತ್ಯಾ, ಅನಿತ್ಯ, ಕಾರ್ಯ , ಅಕಾರ್ಯ ಎಂದು ಈ ಪ್ರಕಾರ ಜಾತಿಗಳಿರುವವು. ವಾದದಲ್ಲಿ ವಾದಿಯ ಅಪಜಯಕ್ಕೆ ಕಾರಣ ನಿಗ್ರಹ ಸ್ಥಾನವು, ಪ್ರತಿಜ್ಞಾ ಹಾನಿಯು, ಪ್ರತಿಜ್ಞಾನಂತರ ಪ್ರತಿಜ್ಞಾವಿರೋಧ, ಪ್ರತಿಜ್ಞಾಸಂನ್ಯಾಸ ಹೇತ್ಪಂತರವು ಅರ್ಥಾಂತರ
ನಿರರ್ಥಕವು ಅವಿಜ್ಞಾತಾರ್ಥವು ಅಪಾರ್ಥವಾಗುವದು.
ಅಪ್ರಾಪ್ತ ಕಾಲವು ನ್ಯೂನತೆ ಅಧಿಕವಾಗುವುದು, ಪುನರಪಿ ಹೇಳಲು ಅನನುಭಾಷಣ, ಅಜ್ಞಾನ, ಅಪ್ರತಿಭಾ ವಿಕ್ಷೇಪವಾಗಿದೆ. ಮತಾನುಜ್ಞಾಪಾಪರ್ಯನು ಯೋಜ್ಯೇಪೇಕ್ಷಣವು ನಿರನುಯೋಜ್ಯಾನುಯೋಗವು ಅಪಸಿದ್ಧಾಂತ ಹೇತ್ಪಾಭಾಸವಾಗಿ ನಿಗ್ರಹಸ್ಥಾನವಾಗಿದೆ.
ಈ ಪ್ರಕಾರ ಜಗನ್ನಾಥ ಶಾಸ್ತ್ರಿಯು ಶಿಷ್ಯರಿಗೆ ಹೇಳುವ ಮಹಾದೇವ ಶಾಸ್ತ್ರಿಯು ಮುಂದೆ ಬಂದು ಹೇ ಜಗನ್ನಾಥ ಶಾಸ್ತ್ರಿಗಳೇ, ನೀವು ವಿವರಿಸಿದ ಪದಾರ್ಥಗಳು ಏಳು ಅಂತ ಹೇಳಲು ಅದಕ್ಕೆ ಜಗನ್ನಾಥ ಶಾಸ್ತ್ರಿಗಳು ಹೇ ಮಹಾದೇವ ಶಾಸ್ತ್ರಿಗಳೆ, ನೀವು ಹೇಳುತ್ತಿರುವುದು ಹೊಸ ನ್ಯಾಯಶಾಸ್ತ್ರವು. ಪುರಾತನ ಮತದ ಜನಕರು ಹದಿನಾರು ಪದಾರ್ಥಗಳಿರುವವೆಂದು ಹೇಳಿದ್ದು ನಿಮಗೆ ಗೊತ್ತಿಲ್ಲವೆ ಅಂತಾ ಪ್ರಶ್ನಿಸಿದನು. ಆಗ ಮಹದೇವ ಸ್ವಾಮಿಯು ಮರು ಸವಾಲು ಹಾಕುತ್ತಾ ಅಯ್ಯಾ ಜಗನ್ನಾಥ ಶಾಸ್ತ್ರಿಯೇ, ನೀನು ನೂರೆಂಟು ಕಲ್ಪನೆ ಮಾಡಿದರೂ ಅವೆಲ್ಲವೂ ಏಳರಲ್ಲಿಯೇ ಅಂತರ್ಗತವಾಗಿದೆ ಅಂತಾ ಪ್ರತಿಪಾದಿಸಿದನು.
ಜಗನ್ನಾಥ ಶಾಸ್ತ್ರಿಯು ದ್ರವತೀತಿ ದ್ರವ್ಯಃ ಎಂದು ದ್ರವಿಸಲು ದ್ರವ್ಯವೆಂಬ ನಾಮ ಬಂದಿದೆ ಅನ್ನುಲು ಮಹಾದೇವಶಾಸ್ತ್ರಿಯು ನಾನು ಹಾಗೆ ಹೇಳುವುದು ಸರಿಯಲ್ಲ. ಗುಣಾನಾಮಾಶ್ರಯೋ ದ್ರವ್ಯಃ ಗುಣಗಳ ಆಶ್ರಯವನ್ನು ಬಿಡದಿರುವುದೇ ದ್ರವವು ಅಂತಾ ನುಡಿಯಲು ಇಷ್ಟಕ್ಕೆ ಮುಗಿಯದೇ ಪರಸ್ಪರರ ವಾದ ವಿವಾದಗಳು ವಿಕೋಪದ ಹಂತಕ್ಕೆ ತಲುಪಿದವು.
ಇವರ ವಾದ ವಿವಾದಗಳನ್ನು ನಿರೀಕ್ಷಿಸುತ್ತಿದ್ದ ಸಿದ್ಧನು ತನ್ನಲ್ಲಿ ತಾನು ಆಲೋಚಿಸುತ್ತಾ ಈ ಇಬ್ಬರು ಶಾಸ್ತ್ರಿಗಳು ತಮ್ಮ ತಮ್ಮಲ್ಲಿ ವಾದ ವಿವಾದ ಮಾಡುತ್ತಾ ಕೆಡುವ ವಸ್ತುವಿನ ಕಡೆ ವಿಚಾರದಿಂದ ಮುಂದುವರೆದರೆ ಮುಂದೆ ಇವರ ಗತಿಯೇನು? ಕೊನೆಗೆ ಕೆಡದ ವಸ್ತು ಇವರಿಗೆ ಲಭ್ಯವಾಗುವ ಬಗೆ ಹೇಗೆ ಅಂತಾ ವಿಚಾರಿಸತೊಡಗಿದನು, ಈ ವಿತ್ತಂಡ ವಾದಕ್ಕೆ ಕಾರಣವಾದ ಕೆಡುವ ವಸ್ತುವಿನಿಂದ ಪರಾವರ್ತನೆ ಗೊಳಿಸಿ ಈ ಶಾಸ್ತ್ರಿಗಳ ಲಕ್ಷ್ಯವನ್ನು ನಿಜವಾದ ವಾಸ್ತುವಿನತ್ತ ಆಕರ್ಷಿಸಬೇಕೆಂದು ನಿರ್ಧರಿಸಿ ಸಿದ್ದಭಾರತಿಯು ಅವರನ್ನು ಕುರಿತು, ಹೇ ಶಾಸ್ತ್ರಿಗಳೇ, ಗುಣ ಮತ್ತು ದ್ರವ್ಯಾದಿಗಳನ್ನು ಅರಿತುಕೊಳ್ಳುವಾಗ ಅವುಗಳೇ ನೀವಾಗಿರುವಿರೋ ಅಥವಾ ಅರಿಯುವವರಾದ ನೀವು ಅವುಗಳಿಂದ ಬೇರೆ ಆಗಿರುವರೋ? ನೀವು ಈ ಪ್ರಶ್ನೆಗಳನ್ನು ತಿಳಿದುಕೊಂಡು ಹೇಳಿದರೆ ಅದು ಹೇಗೆ ಉಚಿತವು? ಆ ವಸ್ತುಗಳು ಜಡವಿದ್ದು, ದೃಶ್ಯವಿದ್ದು ನಾಶವಾಗುವವು. ನಾಶವಾಗತಕ್ಕ ವಸ್ತುಗಳು ನೀವಾಗಲಾರಿರಿ. ನಾಶವಾಗದ ನಿತ್ಯ ನಿರವಯವ ಆತ್ಮ ಚೈತನ್ಯವೇ ನೀವಿದ್ದು ಅವುಗಳಿಗೆ ಭಿನ್ನರಾಗಿರುವಿರಿ.
ಅಜಡ ಚೈತನ್ಯ ವಸ್ತುವಾದ ಆತ್ಮವು ಬ್ರಹ್ಮ ಚೈತನ್ಯಕ್ಕೆ ಭೇದವೋ? ಅಭೇದವೋ? ವಿಮರ್ಶಿಸಿರಿ. ಭೇದವೆಂದಲ್ಲಿ ಏಕಮೇವಾದ್ವಿತೀಯಂ ಎಂಬ ಶೃತಿ ವಾಕ್ಯಕ್ಕೆ ವಿರೋಧವಾಗುವದು. ಕಾರಣ ಬ್ರಹ್ಮಕ್ಕೆ ಮತ್ತು ತನಗೆ ಅಭೇದವೆಂದೇ ತಿಳಿಯಬೇಕು ಮತ್ತು ಈ ಅಭೇದವು ನಿರಂತರವಾಗಿ ಇರುವದೋ ಅಥವಾ ಅರಿಯುವ ಕಾಲದಲ್ಲಿ ತೋರುವದೋ ಹೇಗೆಂದು ಅನುಮಾನ ಉಂಟಾಗುವುದು. ಅರಿಯುವ ಕಾಲದಲ್ಲಿ ಭೇದವಿದೆ ಎಂದರೆ ಅದಕ್ಕೆ ಸ್ವಾತಂತ್ರ್ಯ ಅಸ್ತಿತ್ವ ಇಲ್ಲವೆಂದಾಗುತ್ತದೆ. ಕಾರಣ ಅಭೇದವು ನಿರಂತರವಾಗಿ ಇರುವುದೆಂದು ನಿಶ್ಚಯಿಸಬೇಕು. ಅಭೇದ ಜ್ಞಾನವು ಮುಕ್ತಿದಾಯಕವಾಗಿದೆ.
ಸಿದ್ಧನು ಮುಂದುವರೆದು, ಹೇ ಭೇದವಾದಿಗಳಾದ ಶಾಸ್ತ್ರಿಗಳೇ, ಕರ್ಮಾದಿಗಳು
ನಿಮಗೆ ಮುಕ್ತಿಯನ್ನು ಕೊಡುತ್ತವೆಯೋ ಒಂದು ವೇಳೆ ಇದಕ್ಕೆ ಸಮ್ಮತಿಸಿದಲ್ಲಿ ಶೃತಿಸಾರವಾದ ಜ್ಞಾನಾದೇವತು ಕೈವಲ್ಯಂ ಎಂಬ ವಾಕ್ಯದಲ್ಲಿಯ ''ಏವ'' ಪದವು ಜ್ಞಾನಕ್ಕೆ ಪ್ರಾಶಸ್ತ್ಯ ನೀಡಿದೆ. ಇದಲ್ಲದೆ ತತ್ ಪದದಿಂದ ಜಡ ಸಾಧನಗಳನ್ನು ನೇತಿಗಳೆದಿದೆ ಮತ್ತು ಜ್ಞಾನದಿಂದಲೇ ಕೈವಲ್ಯ ಪ್ರಾಪ್ತಿ ಅಂತಾ ಹೇಳಿದೆ. ಈ ಎಲ್ಲ ಅಂಶಗಳನ್ನು ಲಕ್ಷ್ಯದಲ್ಲಿ ತಂದುಕೊಂಡು ಕರ್ಮ ಜಾಲದಲ್ಲಿ ಸಿಲುಕಿ ಹಂಬಲಿಸದೆ ಮುಕ್ತಿಗಾಗಿ ಜ್ಞಾನವನ್ನೇ ನಂಬಬೇಕು ಅಂತಾ ತಿಳಿಸಿ ಹೇಳಿದನು.
ಸಿದ್ಧಭಾರತಿಯ ಬೋಧಾಮೃತ ಪಾನ ಮಾಡಿದ ಆ ಶಾಸ್ತ್ರಿಗಳು ತಮ್ಮಲ್ಲಿ ತಾವು ತಲೆದೂಗಿ ಈತನು ಶಾಂತ ತಪೋಮೂರ್ತಿ ಇರುವನು, ವಿಶ್ವೇಶ್ವರನ ಕೃಪಾಪಾತ್ರ ಶ್ರೋತ್ರೀಯ ಬ್ರಹ್ಮನಿಷ್ಠ ಅನುಭವಿ ಇರುವನು. ಭ್ರಾಂತಿಯುಳ್ಳವರಾದ ನಮ್ಮಲ್ಲಿ ಶಾಬ್ದಿಕ ಜ್ಞಾನವಿದೆ ಅನುಭವಜನ್ಯ ಜ್ಞಾನವಿಲ್ಲ. ಇವನೆದುರಿಗೆ ನಿಮ್ಮ ವಾದ ತರ್ಕಶಾಸ್ತ್ರಗಳೆಲ್ಲ ವ್ಯರ್ಥವಾಗಿವೆ ಅಂತಾ ಭಾವನೆಯುಳ್ಳವರಾಗಿ ಹೇ ಸಾಧುವರ್ಯಾ ತಾವು ಹೇಳಿದ ಮುಕ್ತಿ ಮಾರ್ಗವು ಸತ್ಯವಾಗಿದೆ ಅಂತಾ ತಮ್ಮ ಶಿಷ್ಯ ಗಣಂಗಳೊಂದಿಗೆ ಸಿದ್ದನ ಪಾದಾರವಿಂದಗಳಲ್ಲಿ ನತಮಸ್ತಕರಾಗಿ ಪ್ರಣಾಮಗಳನ್ನರ್ಪಿಸಿದರು. ಆಗ ಸಿದ್ಧನು ಹೇ ಶಾಸ್ತ್ರಿಗಳೇ ಮುಕ್ತಿದಾಯಕ ಕಾಶಿಕ್ಷೇತ್ರ ಮಂತ್ರೋಪದೇಶ ಮನೋಹರ ಸ್ಥಾನವಾಗಿದೆ. ವಾದ ತರ್ಕಗಳಿಂದ ಬೇರೆ ಬೇರೆ ಭಾವನೆಗಳನ್ನು ಮಾಡಿಕೊಂಡು ಗರ್ವಿಷ್ಟರಾಗುವುದನ್ನು ಬಿಟ್ಟುಕೊಟ್ಟು ಅಮೃತ ಸಮಾನ ತತ್ವಜ್ಞಾನವನ್ನು ಜ್ಞಾನಿಗಳಿಂದ ಬೋಧನೆ ಪಡೆದು ಮೋಕ್ಷ ಸಾಮ್ರಾಜ್ಯಕ್ಕೆ ಅಧಿಪತಿಗಳಾಗಬೇಕು. ನೀವು ತರ್ಕಶಾಸ್ತ್ರದ ಗರ್ವಭಾವವನ್ನು ತೊರೆದು ನಿಜವಾದ ಮೋಕ್ಷ ಸಾಧನೆಯಲ್ಲಿ ತೊಡಗಬೇಕು ಅಂತ ಉಪದೇಶಿಸಿದನು. ಅದಕ್ಕೆ ಸಹಮತದಿಂದ ಪುನಃ ನಮಿಸಿ ಶಾಸ್ತ್ರಿಗಳು ತಮ್ಮ ಶಿಷ್ಯರೊಂದಿಗೆ ಅಲ್ಲಿಂದ ತೆರಳಿದರು. ಅವರ ಪೈಕಿ ಮೂವರು ಮರಳಿ ಸಿದ್ಧನಲ್ಲಿಗೆ ಬಂದರು. ಹೇ ಸ್ವಾಮಿ ನೀವು ಬೋಧಿಸಿದ ಬ್ರಹ್ಮೋಪದೇಶಕ್ಕೆ ನಮಗೆ ಸಮ್ಮತಿಯಿಲ್ಲ. ಅಪ್ರತ್ಯಕ್ಷವಾಗಿಹ ಶೃತಿಯ ವಾಕ್ಯವು ನನಗೆ ಸಮಾಧಾನ ತಂದುಕೊಟ್ಟಿಲ್ಲ ಅಂತಾ ಪ್ರಶ್ನಿಸಿದರು.
ಆಗ ಸಿದ್ಧನು ಅವರನ್ನು ಕುರಿತು ನಿಮಗೆ ಸಮಾಧಾನವಾಗದ ಮನಸ್ಸಿನ ಅಭಾವವಾಗಿದ್ದಲ್ಲಿ ನಿಮ್ಮ ಮನವು ಶೂನ್ಯವಾಗಿ ನಿಮ್ಮನ್ನು ಹಾಳುಗೆಡವುದು. ಭಯವನ್ನು ಹೇಳುವುದು. ಇದು ನಮ್ಮ ಮನಸ್ಸೇ? ಅಥವಾ ಇದು ನಿಮ್ಮ ಜ್ಞಾನವೆ? ಅದು ಮನಸ್ಸೆಂದು ಹೇಳಿದರೆ ಲೀನವಾದ ಮನಸ್ಸು ಹೇಗೆ ಹೇಳುವುದು. ಹೇಗೆ ವಿರೋಧಾಭಾಸದ ನಿಮ್ಮ ನುಡಿ ಎಂತಹದ್ದು? ಜ್ಞಾನವೇ ಹೇಳುವುದು ನಿಜವೆಂದರೆ ಜ್ಞಾನದಲ್ಲಿ ಮನಸ್ಸಿಲ್ಲದಿರದೇ ಈ ಪ್ರಕಾರ ನಿಮ್ಮ ಹೀನ ಪ್ರಶ್ನೆಯಾಗಿದೆ. ನಿರಂತರವಾಗಿ ತರ್ಕ ನ್ಯಾಯಗಳ ಬಹುವಿಧದಿ ಅಧ್ಯಯನ ಮಾಡಿದ ಜ್ಞಾನಿಯು ಬ್ರಹ್ಮರಾಕ್ಷಸನಾಗುವನು. ಆಯುಷ್ಯಪರ್ಯಂತರ ಕಷ್ಟಪಡುತ್ತಾ ಪರರನ್ನು ಗೆಲ್ಲುತ್ತಾ ತಾನು ಶ್ರೇಷ್ಠ ಪಂಡಿತನೆನಿಸಿಕೊಳ್ಳಬೇಕು ಅಂತಾ ಗರ್ವಭರಿತನಾಗುವನು, ವಾದದಲ್ಲಿ ನಾನು ಸೋತಲ್ಲಿ ತಾಪಗೊಳ್ಳುವನು. ಕೂಡಲೇ ಗೆದ್ದರೆ ವಾದಿಗೆ ಕಡುತರ ಕಷ್ಟಕರ ತಾಪಗೊಡುವನು. ಹೀಗೆ ಕೊಡುತ್ತಲಿರುವ ತಾಪವು ಹೆಚ್ಚುತ್ತಾ ಪಾಪದ ಬರುತ್ತದೆ. ಈ ಪಾಪವು ಅತಿಯಾಗಲು ದೇವರ ಶಾಪದಿಂದ ಈತನಿಗೆ ಬ್ರಹ್ಮರಾಕ್ಷಸ ಜನ್ಮವು ಬರುವದೇ ಸತ್ಯವೆಂತಾ ಸಿದ್ಧನು ನುಡಿಯಲು ಆ ಮೂವರು ಹೇ ಸಾಧುವರ್ಯ ನಾವು ಪಾಪಿಗಳಾಗಿದ್ದೇವೆ. ಈ ಪಾಪದ ಪರಿಹಾರೋಪಾಯವನ್ನು ತಿಳಿಸಬೇಕು ಅಂತಾ ಪ್ರಾರ್ಥಿಸಿದರು.
ಪಶ್ಚಾತ್ತಾಪದಿಂದ ಪ್ರಾರ್ಥಿಸಿದ ಅವರನ್ನು ಹಿಡಿದೆತ್ತಿ ತತ್ವಂಮಸಿ ಮಹಾವಾಕ್ಯವನ್ನು ಬೋಧಿಸಿದನು. ಬೋಧಾಮೃತಪಾನ ಮಾಡಿದ ಆ ಮೂವರು ಧನ್ಯರಾದೆವು ಅಂತ ಸಿದ್ದನಿಗೆ ವಂದಿಸಿ ಅಲ್ಲಿಂದ ತೆರಳಿದರು.
ಬಳಿಕ ಅಲ್ಲಿಂದ ಸಿದ್ದನು ಹೊರಟು ಬಸವನದುರ್ಗ, ನಾರದ ಚೌಕಿ, ಚೌಷಷ್ಟಿ, ಲೋಟಾರ್ಕ, ಹಳೆಯ ಪಾಂಡೇಶಾದಿ ಘಾಟಗಳನ್ನು ನೋಡುತ್ತಾ ಹರಿಶ್ಚಂದ್ರ ಘಾಟಕ್ಕೆ ಬಂದನು. ಅಲ್ಲಿ ರುದ್ರಭೂಮಿಯನ್ನು ನಿರೀಕ್ಷಣೆ ಮಾಡುತ್ತಾ ನಂಗಾ ಘಾಟಕ್ಕೆ ಬಂದು ವಿಶ್ರಮಿಸಿದನು.
ಪ್ರಾಪ್ತವಾಗುವುದು
👇👇👇👇👇👇👇👇👇👇👇👇👇👇
ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
👉ಕಾಶಿಯಲ್ಲಿ ನಂಗಾ ಘಾಟದಲ್ಲಿ ಭೈರಾಗಿ ಜೊತೆ ವೇದಾಂತ
ಎಲ್ಲಾ ಕಥೆಗಳ ಲಿಂಕಗಳು
👉ಸಿದ್ಧಾರೂಢ ಭಾಗವತ ಕಥಾ ಸಂಗ್ರಹ 👉🛃
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ
1)WhatsApp shareಗಾಗಿ click ಮಾಡಿ📲☎️
2)Facebook shareಗಾಗಿ👉
3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚
«««««ಓಂ ನಮಃ ಶಿವಾಯ »»»»»»»
