ದುರ್ಬುದ್ದಿ ಅಯ್ಯನವರ ಲಿಂಗಗಳು ಮಾಯವಾದಗ, ಸಣ್ಣ ಹುಡುಗನಿಂದ ಕೊಡಿಸಿದ ಕಥೆ
🌹ನಾಲ್ಕು ಮಂದಿ ಅಯ್ಯನವರು ಗುರುವಿನ ನಿಂದಾ ಮಾಡಿದಕ್ಕೆ ಅವರ ಲಿಂಗಗಳು ಮಾಯಾವಾದವು. ಆಗ ಅವರು ಸದ್ಗುರುಗಳಿಗೆ ಶರಣು ಹೋದ ಕೂಡಲೆ ಅವರ ಲಿಂಗಗಳನ್ನು ಸಣ್ಣ ಹುಡುಗನಿಂದ ಕೊಡಿಸಿದ ಕಥೆ,
ಒಮ್ಮೆ ಶಿವರಾತ್ರಿ ಉತ್ಸವ ಕಾಲದಲ್ಲಿ, ಆ ವಿಶೇಷ ವೈಭವ ನೋಡುವದರ ಸಲುವಾಗಿ ಸಿದ್ಧಾಶ್ರಮದಲ್ಲಿ ಬಹು ಜನರ ಸಂದಣಿ ಕೂಡಿತ್ತು. ಮಠದ ಎದುರಿನ ಕೆರೆಯ ಸಮೀಪ ದಿನ್ನೆಯ ಮೇಲೆ ನಾಲ್ಕು ಮಂದಿ ಅಯ್ಯನವರು ವೃಕ್ಷ ಛಾಯೆಯೊಳಗೆ ಪರಸ್ಪರ ಮಾತಾಡುತ್ತಾ ಕುಳಿತಿದ್ದರು. ಪ್ರತಿ ಒಬ್ಬರ ವಕ್ಷಸ್ಥಳದ ಮೇಲೆ ಬೆಳ್ಳಿಯ ಲಿಂಗ ಸಂಪುಷ್ಪವು ಶೋಭಿಸುತ್ತಿದ್ದು, ಹಣೆ ಮೇಲೆ ವಿಭೂತಿ ಧಾರಣೆ ಮಾಡಿದ್ದರು. ಮೊದಲನೆಯವನನ್ನುತ್ತಾನೆ - ''ನೋಡಿರಿ, ಈ ಆರೂಢನು ನಿಜವಾಗಿ ಮಹಾ ಮೂಢನಿದ್ದಾನೆ. ಇವನು ಎಷ್ಟೋಂದು ಡೌಲು ಮಾಡುತ್ತಾನೆ! ಈತನ ಬುದ್ದಿ ಜಡವಾಗಿರುತ್ತದೆ'', ಎರಡನೆಯವನು ನುಡಿಯುತ್ತಾನೆ- “ಇವನು ಲಿಂಗವಿಲ್ಲದ ಭವಿಯಾಗಿದ್ದು, ಈ ಮೂರ್ಖ ಜನರು ಇವನನ್ನು ಕಂಡ ಕೂಡಲೇ ಕಾಲಿಗೇ ಬೀಳುತ್ತಾರೆ. ಇವರಿಗೆ ವಿವೇಕವೆಂಬುದು ಇಲ್ಲೇ ಇಲ್ಲ. ಲಿಂಗಾಯತರಿಗೆ ನಾವು ಶ್ರೇಷ್ಠ ಗುರುಗಳು. ನಾವು ಜಂಗಮರು ಪೂಜಾರ್ಹರೆಂದು ಶಾಸ್ತ್ರವು ಸ್ಪಷ್ಟವಾಗಿ ಹೇಳುತ್ತದೆ. ಹೀಗಿದ್ದು ಈ ಲಿಂಗಾಯತರು ಸಹಾ ಸಿದ್ಧನ ಕಾಲಿಗೆ ಬಿದ್ದು, ಭ್ರಷ್ಟರಾಗಿ ಹೋಗುವುದನ್ನು ನೋಡಿ ನೋಡಿ, ನನ್ನ ಜೀವಕ್ಕೆ ಬಹಳ ಕಷ್ಟವಾಗುತ್ತದೆ. ಮೂರನೆಯವನು ಅನ್ನುತ್ತಾನೆ - “ಮೊನ್ನೆ ಮೊನ್ನೆ, ನಾಲ್ಕು ಮಂದಿ ಮುಸಲ್ಮಾನರು ಇವನಿಗೆ ಚೆನ್ನಾಗಿ ಹೊಡೆದರು. ಇವನು ಏನೇನೂ ಮಾತನಾಡದೇ ಸುಮ್ಮನೇ ಕುಳಿತುಬಿಟ್ಟನು. ಇವತ್ತು ಡೌಲು ಮಾಡಿ ರಥದ ಮೇಲೆ ಕೂಡ್ರುವನು. ಇವನಿಗೆ ಅಣುಮಾತ್ರ ನಾಚಿಕೆ ಇಲ್ಲ. ಇವನಿಗೆ ಎಷ್ಟು ನಾಚಿಕೆಗೇಡು ಅನ್ನಬೇಕು. ನೀವೇ ಹೇಳಿರಿ, ಗೆಳೆಯರೇ." ಆಗ ನಾಲ್ಕನೇಯವನು ನುಡಿಯುತ್ತಾನೆ, - “ಈಗ ನಾಲ್ಕು ತಿಂಗಳ ಹಿಂದೆ ಒಂದು ದಿನ ಸಂಜೆ ಹೊತ್ತಿಗೆ, ನಾನು ಚಿದ್ಘನಾನಂದ ಸಮಾಧಿಗೆ ಹೋಗಿ, ಒಂದು ಮೋಜು ಮಾಡಿದೆ. ಸಿದ್ದನು ಕಟ್ಟೇ ಮೇಲೆ ಕುಳಿತಿದ್ದನು. ನಾನು ಮೆಲ್ಲಗೆ ಅವನ ಹಿಂದಿನಿಂದಲೇ ಬಂದು, ಎರಡೂ ಕೈಗಳಿಂದ ಅವನನ್ನು ಮೇಲಕ್ಕೆ ಎತ್ತಿ, ಭೂಮಿಗೆ ಅಪ್ಪಳಿಸಿ
ಬಿಟ್ಟೆ. ಅವರು ಸತ್ತ ಕಪ್ಪೆಯಂತೆ ನೆಲಕ್ಕೆ ಬಿದ್ದನು. ಹೀಗೆ ಆ ಭವಿಗೆ ಯೋಗ್ಯ ಶಿಕ್ಷೆ ಮಾಡಿದೆನು". ಹೀಗೆಂದು ಖೋ ಖೋ ಖೋ, ನಕ್ಕನು. ಆಗ್ಗೆ ಆ ಪ್ರಥಮ ಅಯ್ಯನು ಅಂದದ್ದೇನೆಂದರೆ, -“ಹೀಗೆ ನಿಜವಾಗಿ ನೀನು ಬಹಳ ಕೆಟ್ಟ ಕೆಲಸ ಮಾಡಿದಿ. ಆತನಿಗೆ ಈ ಪ್ರಕಾರ ಘಾತ ಮಾಡದೆ , ಬೋಧಿಸಿ ಒಳ್ಳೆ ಮಾರ್ಗಕ್ಕೆ ತರಬೇಕಿತ್ತು. ಈ ದುಷ್ಟ ಕರ್ಮದ ಫಲವಾಗಿಯೇ ನಿನ್ನ ಹೆಂಡತಿ ಮಕ್ಕಳು ಸತ್ತು ಹೋದರು, ಮತ್ತು ನೀನು ದಿಕ್ಕಿಲ್ಲದೆ ಪಿಶಾಚಿಯಂತೆ ತಿರುಗುತ್ತಿರುವಿ. ಜಗಕ್ಕೆಲ್ಲ ನಿಂದ್ಯ ಆದಿ", ಅದಕ್ಕೆ ನಾಲ್ಕನೆಯವನು - “ಸಾಯುವವರು ಸಹಜವಾಗಿ ಸಾಯುವರು. ಅದರೊಳಗೆ ಈ ಹುಚ್ಚನ ಮಹತ್ವವೇನು. ಅವನಿಗೆ ನಾನು ತಕ್ಕ ಶಿಕ್ಷಾ ಮಾಡಿದೆ, ಇದೇ ನನ್ನ ಮನಸ್ಸಿಗೆ ಸಮಾಧಾನವು", ಅಂದನು.
ಆಗ ಎರಡನೇಯವನು ಎನ್ನುತ್ತಾನೆ - ''ನೆಡಿಯಿರಿ, ನೋಡೋಣ, ಅವನ ತಲೆಗೆ ಕಿರೀಟಾ ಹಾಕಿ ಪೂಜಾ ಮಾಡುತ್ತಾರಂತೆ.” ನಡೆಯಿರಿ, ಕೂಡಲೇ, ಆ ನಾಲ್ಕು ಮಂದಿ ಅಯ್ಯನವರು ಮಠದ ಕಡೆಗೆ ಹೊರಟರು. ದಾರಿಯಲ್ಲಿ ಹಿರೇಮಠದ ಪಟ್ಟದಪ್ಪನವರು, ಮತ್ತು ಅವರ ಕೂಡ ಇತರ ಕೆಲವು ಮಂದಿ ಅಯ್ಯನವರು ಭೆಟ್ಟಿಯಾದರು. ಪುಟ್ಟಪ್ಪನವರು ಮೊದಲನೇ ಆಯ್ಯನನ್ನು ನೋಡಿ - "ಯಾಕೋ ರುದ್ರಯ್ಯ, ನಿನ್ನ ಲಿಂಗ ಎಲ್ಲಿ ಇದೆ?'' ಅಂದರೂ. ಅದಕ್ಕಾತನು - “ ಇಲ್ಲೇ ಇದೆ ಅಲ್ಲ,” ಎಂದು ವಕ್ಷಸ್ಥಳಕ್ಕೆ ( ಕೊರಳು) ಮುಟ್ಟಿ ನೋಡಿದರೆ, ಅಲ್ಲಿ ಚೌಕವಿದ್ದಿಲ್ಲ. ಇದು ನೋಡಿ ಆಶ್ಚರ್ಯ ಪಟ್ಟು, ಮೈಮೇಲೆ ಎಲ್ಲಿ ಸವರಿ ನೋಡಿದರೂ ಕಾಣಿಸಲಿಲ್ಲ. ಅವನ ಸಂಗಡ ಇದ್ದ ಇತರ ಅಯ್ಯನವರು ಸಹಾ ತಮ್ಮ ತಮ್ಮ ವಕ್ಷ ಸ್ಥಳವನ್ನು ನೋಡುತ್ತಾರೆ - ಅವರ ಲಿಂಗದ ಚೌಕಗಳೂ ಇದ್ದಿಲ್ಲ. ಎಲ್ಲರಿಗೂ ಆಶ್ಚರ್ಯವಾಗಿ, ತಾವು ಬಂದ ದಾರಿಯಲ್ಲೆಲ್ಲಾ ಹುಡುಕುತ್ತಾ ಹೋದರು. ಆದರೆ ಬೆಳ್ಳಿ ಸಂಪುಷ್ಟಗಳು ಎಲ್ಲೆಲ್ಲಿಯೂ ಕಾಣಲಿಲ್ಲ. ಆಗ ಬಹು ಖಿನ್ನ ಮನಸ್ಸಿನಿಂದ ತಿರುಗಿ ಬಂದರು. ಆಗ್ಗೆ
ಪುಟ್ಟದಪ್ಪನವರಂದರು, “ನೀವು ಇಷ್ಟ ಲಿಂಗಗಳನ್ನು ಕಳೆದುಕೊಂಡಿರಿ. ಈಗ ನೀವು ಪ್ರಾಣವನ್ನೇ ತ್ಯಜಿಸಬೇಕಾಗುತ್ತದೆ." ಇದನ್ನು ಕೇಳಿ ಅವರು ಅತ್ಯಂತ ವಿಮನಸ್ಕರಾದರು. ರುದ್ರಯ್ಯನಂದನು, - ''ಇದೇ ಈಗ ನಮ್ಮೆಲ್ಲರ ವಕ್ಷಸ್ಥಳದ ಮೇಲೆ ನಾನು ಲಿಂಗಗಳನ್ನು ನೋಡಿದ್ದೆನು. ಅಷ್ಟರೊಳಗೆ ಏನಾದವನ್ನಬೇಕು ?" ಅದಕ್ಕೆ ಪಟ್ಟದಪ್ಪನವರಂದರು - “ನಿಮಗೆ ಹೀಗೆ
ಯಾಕಾಯಿತು ? ಶಿವನಿಂದೆಯಾಗಲಿ ಸಾಧುನಿಂದೆಯಾಗಲಿ ಘಟಿಸಿದ್ದಾದರೆ, ಇಂಥಾ ದೂಷಿತ ಸ್ಥಿತಿ ಪ್ರಾಪ್ತವಾಗುವದು", ಅದಕ್ಕೆ ರುದ್ರಯ್ಯನಂದನು - “ನೀವು ಅನ್ನುವದು ಸತ್ಯವಾಗಿದೆ. ನಮ್ಮಿಂದ ದುರ್ದರವಾದ ಅಪರಾಧ ಘಟಿಸಿದ್ದು ನಿಜವು. ವ್ಯರ್ಥವಾಗಿ ಈಗ ಯಾಕೆ ಹೇಳಲಿ'', ಆಗ ಪಟ್ಟದಪ್ಪನವರಂದರು - “ನಡೆದ ಸಂಗತಿಯನ್ನು ಗುಪ್ತ ಮಾಡಿ ಉಪಯೋಗವಿಲ್ಲ, ಹೇಳು ಅದಕ್ಕೇನಾದರೂ ಉಪಶಮನ ಮಾಡೋಣ. ಶಿವದೂಷಣ ಮಹತ್ ಪಾಪವು''. ಆಗ್ಗೆ ರುದ್ರಯ್ಯನು, ನಾಲ್ಕೂ ಮಂದಿ ಕೂಡಿ, ಮಾಡಿದ ಸಂಭಾಷಣವನ್ನು ಸವಿಸ್ತಾರವಾಗಿ ನಿವೇದಿಸಿದನು. ಇತರ ಅಯ್ಯನವರು ಚಿತ್ತದಲ್ಲಿ ಅನುತಾಪ ಹೊಂದಿ ಏನು ಮಾತಾಡಲಾರದೆ, ಸುಮ್ಮನೆ ತಲೆ ಬಗ್ಗಿಸಿ ನಿಂತರು. ಆಗ್ಗೆ ಪಟ್ಟದಪ್ಪನವರು - ''ನೀವು ಮಹಾತ್ಮರಾದ ಸಿದ್ಧಾರೂಢ ಸ್ವಾಮಿಯವರ ನಿಂದಾ ಆಡಿದಿರಿ. ಆತನ ಕ್ಷೋಭದಿಂದ ಈ ಸ್ಥಿತಿ ಬಂದೊದಗಿತು, ಒಳ್ಳೇದು, ಈಗ ಅವರಿಗೆ ಶರಣು ಹೋಗಿ ದಯಾಳುವಾದ ಆ ಸದ್ಗುರುವಿಗೆ ಕ್ಷಮಾ ಬೇಡಿದ್ದಾದರೆ ನಿಮಗೆ ಕಲ್ಯಾಣವಾಗುವದು. ಇಲ್ಲದಿದ್ದರೆ ನೀವು ಮಹಾ ವಿಪತ್ತಿಗೆ ಗುರಿಯಾಗುವಿರಿ, ಇದು ನಿಶ್ಚಯವೆಂದು ತಿಳಿಯಿರಿ'', ಅಂದರು. ಈ ವಚನವನ್ನು ಕೇಳಿ, ಮೂರು ಮಂದಿ ಅಯ್ಯನವರು ಪಟ್ಟದಪ್ಪನವರ ಹಿಂದೆ ಸ್ವಾಮಿಯವರ ಕಡೆಗೆ ಹೋಗಲಿಕ್ಕೆ ಹೊರಟರು. ಸಿದ್ಧರಿಗೆ ಘಾತ ಮಾಡಿದ ಆ ನಾಲ್ಕನೆಯವನು ಹಿಂದುಳಿದನು.
ಮಠದ ಹೊರಗೆ ಭವ್ಯವಾದ ಹಂದರವು ನಿಂದಿರಿಸಿತ್ತು. ಅದರೊಳಗೆ ದಿವ್ಯವಾದ ಮಂಟಪವು ಶೋಭಿಸುತ್ತಿತ್ತು.
ಅದನ್ನು ನೋಡಿದ ಆ ಮೂರು ಮಂದಿ ಅಯ್ಯನವರು ಅತ್ಯಾಶ್ಚರ್ಯಭರಿತರಾದರು. ಅದರ ಮಧ್ಯದಲ್ಲಿ ದಿವ್ಯತೇಜದಿಂದ ದೇದೀಪ್ಯಮಾನವಾದ ಸಿಂಹಾಸನದ ಮೇಲೆ ಸುಖಾಸೀನರಾಗಿದ್ದ ಸಿದ್ಧ ದಯಾಘನರನ್ನು ನೋಡಿದರು. ಸದ್ಗುರುಗಳ ಮಸ್ತಕದ ಮೇಲೆ ಕಿರೀಟ, ಕಂಠದೊಳಗೆ ಮನೋಹರವಾದ ವೈಜಯಂತಿ ಮಾಲೆಯು ಶೋಭಿಸುತ್ತಿದ್ದವು. ದಿವ್ಯ ಪೀತಾಂಬರವನ್ನು ಮೈಮೇಲೆ ಹೊತ್ತಿದ್ದು, ಅದರ ಮೇಲೆ ಸುಂದರವಾದ ಪುಷ್ಪಹಾರವು ಒಪ್ಪುತ್ತಿತ್ತು. ಮುಖದ ಮೇಲೆ ದಿವ್ಯತೇಜದಿಂದ, ಇದು ಶಾಂತಿಯಿಂದಲೇ ಎರೆದಿರುವುದೋ ಎಂಬಂತೆ ಕಾಣಿಸುತ್ತಾ, ಆ ರೂಪ ನೋಡಿದ ಮಾತ್ರದಿಂದ ಚಿತ್ತವು ಶಾಂತವಾಗಿ
ಕೂಡಲೇ ಆನಂದವು ಉಕ್ಕಿ ಬರುವುದು. ಸೂರ್ಯ ಕಿರಣಗಳು ಹೇಗೆ ತೇಜವನ್ನು ಸರ್ವತ್ರ ಹರಡುತ್ತವೆಯೋ ಹಾಗೆಯೇ ಆ ಮುಖದಿಂದ ಶಾಂತಿಕಿರಣಗಳು ಸುಖವನ್ನು ಪಸರಿಸುತ್ತ, ಭಕ್ತ ಜನರ ಚಿತ್ತವೃತ್ತಿಗಳನ್ನೆಲ್ಲಾ ಶಮನಮಾಡಿ ಅಲ್ಲಿ ಆನಂದವನ್ನು ತುಂಬುವವು. ದುಷ್ಪವೃತ್ತಿಗಳಿಗೆ ಸ್ಥಾನವಿಲ್ಲದಂತಾಗಿ, ಅವು ಅಡವಿ ಪಾಲಾಗಿ ಹೋಗುವವು. ಅವುಗಳ ಸ್ಥಾನದಲ್ಲಿ ಅನುತಾಪವು ಪ್ರಾಪ್ತವಾಗಿ, ಚಿತ್ತವನ್ನು ನಿರ್ಮಲ ಮಾಡುವದು. ಆ ಮೂರು ಮಂದಿ ಅಯ್ಯನವರು ಆ ನೋಟವನ್ನು ನೋಡುತ್ತಾರೆ. ದಿವ್ಯತೇಜದಿಂದ ಮಂಡಿತರಾದ ಸಿದ್ದಾರೂಢ ಮೂರ್ತಿಯನ್ನು ಕಣ್ಣು ಹಳಚದೆ ನೋಡಿ ನೋಡಿ, ಅವರ ವೃತ್ತಿ ಅಲ್ಲೇ ಸ್ಥಿರವಾಗುವಂಥಾದ್ದಾಯಿತು. ಹೇಗೆ ಘೋರ ಅಂಧಕಾರವು ದಿಕ್ಕುಗಳಿಗೆಲ್ಲ ಮುಸುಕಿರುವಾಗ, ಅಕಸ್ಮಾತ್ತಾಗಿ ವಿದ್ಯುಲ್ಲತೆಯು ಝಳಕಿಸಿತೆಂದರೆ, ಕ್ಷಣಮಾತ್ರ ಸೃಷ್ಟಿ ಇದ್ದಕ್ಕಿದ್ದಂತೆ ಕಾಣಿಸುವದೋ, ಅದರಂತೆಯೇ ಅವರ ಚಿತ್ತದಲ್ಲಿ ಆಯಿತು. ಘನವಾದ ಅಜ್ಞಾನ ತಮಸ್ಸಿನಿಂದ ಮುಸುಕಿದ ಅವರ ಚಿತ್ತದಲ್ಲಿ ಗುರುಕೃಪೆಯಿಂದ ಚಿಜ್ಯೋತಿ ಪ್ರಗಟವಾಗಿ ಸ್ವರೂಪಾನಂದವು ಪ್ರಕಟವಾಯಿತು. ಮತ್ತು ಅವಿದ್ಯೆಯು ನಷ್ಟವಾಯಿತು. ಸಿದ್ಧ ಮೂರ್ತಿಯ ದರ್ಶನವಾದ ಕೂಡಲೇ, ಮದ ಮತ್ಸರಾದಿ ದುರ್ಗುಣಗಳು ಓಡಿಹೋದವು, ಮತ್ತು ಸಿದ್ಧ ಚರಣಗಳಲ್ಲಿ ಮನಸ್ಸು ರಮಿಸುವಂಥಾದ್ದಾಗಿ,
ಪೂರ್ವಸ್ಥಾನಕ್ಕೆ ತಿರುಗಿ ಬರಲಾರದಂತಾಯಿತು. ಆ ಅಯ್ಯನವರ ಚಿತ್ತವು ಅನುತಾಪವನ್ನು ಹೊಂದಿ, ಯಾವಾಗ ಸಿದ್ಧರ ಚರಣಗಳಿಗೆ ಬೀಳುವೆವು ಎಂದನ್ನುವರು. ಆಗ ಪಟ್ಟದಪ್ಪನವರು ಈ ಮೂರು ಮಂದಿ ಅಯ್ಯನವರನ್ನು ಬೆನ್ನ ಹಿಂದೆ ಕರಕೊಂಡು ಸಿದ್ದರ ಸಮೀಪ ಹೋದರು. ಆಗ ಸದ್ಗುರುಗಳು ಪಟ್ಟದಪ್ಪನವರನ್ನು ಕಂಡು, ಬಹು ಅದರಿಂದ ಕೂಡ್ರಲಿಕ್ಕೆ ಹೇಳಿದರು. ಅವರು ಸಿದ್ಧರಿಗೆ ನಮಸ್ಕರಿಸಿ ಕುಳಿತುಕೊಂಡರು. ಮತ್ತು ಈ ಅಯ್ಯನವರೂ ಸಿದ್ಧಾರೂಢರ ಚರಣಕ್ಕೆ ಬಿದ್ದರು. ಆಗ ಪಟ್ಟದಪ್ಪನವರು- ''ಹೇ ಸಿದ್ದರಾಯರೇ, ಈ ಮೂರು ಮಂದಿ ಅಯ್ಯನವರು ನಿಮಗೆ ಶರಣಾಗತರಾಗಿದ್ದಾರೆ. ಇವರ ಅಪರಾಧವನ್ನು ಕ್ಷಮಿಸಬೇಕು.” ಎಂದು ಅವರ ವೃತ್ತಾಂತವನ್ನೆಲ್ಲಾ ನಿರೂಪಿಸಿದರು. ಆಗ ಪಟ್ಟದಪ್ಪನವರನ್ನು ಕುರಿತು ಸದ್ಗುರುಗಳು ಅನ್ನುತ್ತಾರೆ- “ಹೇ ಸ್ವಾಮೀ, ನಿಮಗೆ ಇವರು ತಮ್ಮ ಅಪರಾಧವನ್ನು ಹೇಳಿದ ಕೂಡಲೇ ಕ್ಷಮಾ ಮಾಡಿದಂತಾಯಿತು. ಈಗ ಅವರು ಮನಸ್ಸಿನಲ್ಲಿ ಶುದ್ಧರಾಗಿರುತ್ತಾರೆ'', ಅನಂತರ ಮಹಾತ್ಮರು ತಮ್ಮ ಹಿಂದೆ ಕೈಹಾಕಿ,ಅಲ್ಲಿಂದ ನಾಲ್ಕು ಲಿಂಗ ಸಂಪುಷ್ಟಗಳನ್ನು ದಾರ ಸಮೇತವಾಗಿ ತಗೆದದ್ದನ್ನು ನೋಡಿ, ಅವರೆಲ್ಲರು ಅತ್ಯಾಶ್ಚರ್ಯಭರಿತರಾದರು. ಅವನ್ನು ಮುಂದೆ ಹಿಡಿದು ಸಿದ್ಧರಂದರು - “ಅಯ್ಯನವರೇ, ಇವು ನಿಮ್ಮವೋ ಏನು, ಚನ್ನಾಗಿ ನೋಡಿಕೊಳ್ಳಿರಿ. ಒಬ್ಬ ಹುಡುಗನಿಗೆ ಇವು ದಾರಿಯಲ್ಲಿ ಸಿಕ್ಕಿದ್ದವು. ಅವನು ಇಲ್ಲಿ ತಂದುಕೊಟ್ಟನು'', ಎನ್ನುವ ಆ ವಚನವನ್ನು ಕೇಳಿ ಆ ಮೂರು ಮಂದಿ ಅಯ್ಯನವರು ತಮ್ಮ ಸಂಪುಷ್ಟಗಳನ್ನು ಆರಿಸಿ ತಗೆದುಕೊಂಡು, ಬಹಳ ಆನಂದಭರಿತರಾಗಿ, ಸಿದ್ದಾರೂಢರಿಗೆ ನಮಸ್ಕರಿಸಿ, ತಮ್ಮ ಕೊರಳಿಗೆ ಹಾಕಿಕೊಂಡರು . ನಾಲ್ಕನೇದೊಂದು ಸಂಪುಷ್ಟ ಉಳಿಯಿತು. ಪಟ್ಟದಪ್ಪನವರು ಸಿದ್ಧರನ್ನು
ಕುರಿತು - “ನಾನು ಹೋಗಿ ಅ ನಾಲ್ಕನೇ ಅಯ್ಯನನ್ನು ಕರೆದುಕೊಂಡು ಬರುವೆನು", ಎಂದು ಹೊರಟರು.
ಇತ್ತ ಹಿಂದುಳಿದ ಆ ನಾಲ್ಕನೆ ಅಯ್ಯನು, ಬಾಕಿ ಮೂರು ಮಂದಿ ಅಯ್ಯನವರು ಸಿದ್ದರ ಕಡೆಗೆ ಹೋಗುವಾಗ ತಾನು ಹೋಗಿ ಕ್ಷಮಾ ಬೇಡಲಿಕ್ಕೆ ನಾಚಿಕೆಪಟ್ಟು ಅಲ್ಲೇ ನಿಂತಿದ್ದನು. ಆ ಸಮಯದಲ್ಲಿ ಅಲ್ಲಿದ್ದ ಇತರ ಅಯ್ಯನವರು ಅವನಿಗೆ ಬಿರುನುಡಿಗಳಿಂದ ದೂಷಿಸುವದನ್ನು ಕೇಳಿ ಆತನು ಸಿಟ್ಟಿಗೆದ್ದು, ಅವರಲ್ಲಿ ಒಬ್ಬನಿಗೆ ಹೊಡೆದನು. ಆಗ ಅವರೆಲ್ಲರೂ
ಕೂಡಿ ಆ ಸಿಟ್ಟಿನ ಅಯ್ಯನಿಗೆ ಹೊಡೆಯಲಾರಂಭಿಸಿದರು. ಇತರ ಜನರು ಕೂಡಿ, ಆ ಅಯ್ಯನ ಸುದ್ದಿ ಕೇಳಿ, ಎಲ್ಲರೂ ಅವನನ್ನು ಹೊಡೆಯತೊಡಗಿದರು. ಕೆಲವರು ಅವನನ್ನು ನೆಲಕ್ಕೆ ಹಾಕಿ ತುಳಿದು, ಕೆಲವರು ಅವನ ಮೇಲೆ ಕಲ್ಲು ಒಗೆದು, ಅವನಿಗೆ ಅರ್ಧ ಜೀವ ಮಾಡಿ ಹಾಕುವಂಥವರಾದರು. ಅಷ್ಟರೊಳಗೆ ಆತನನ್ನು ಹುಡುಕುತ್ತ ಪಟ್ಟದಪ್ಪನವರು ಆ ಸ್ಥಾನಕ್ಕೆ ಪ್ರಾಪ್ತರಾಗಿ, ನೋಡುತ್ತ ನಿಂತಿರುವ ಜನರನ್ನು ಅತ್ತಿತ್ತ ಸೇರಿಸಿ, ಆ ಅಯ್ಯನ ಅವಸ್ಥೆ ನೋಡಿ ಏನು ಸಂಗತಿಯೆಂದು ನಿಂತಿರುವವರ ಹತ್ತಿರ ವೃತ್ತಾಂತವನ್ನು ಕೇಳಿ ತಿಳಿದುಕೊಂಡರು. ಆಗ ಆ ಅಯ್ಯನ ಮೇಲೆ ಬಹು ಅಂತಃಕರಣವುಳ್ಳವರಾಗಿ, ಆತನಿಗೆ ಕೈಯಿಂದ ಹಿಡಿದು ಎಬ್ಬಿಸಿ ನಿಂದಿರಿಸಿದರು. ಅಯ್ಯನ ಅಭಿಮಾನವೆಲ್ಲಾ ಹೋಗಿ, ಆತನಿಗೆ ಮಹಾ ಅನುತಾಪ ಹುಟ್ಟಿ, ಕಣ್ಣೊಳಗಿಂದ ನೀರು ಸುರಿಸುವಂಥವನಾಗಿ ಪಟ್ಟದಪ್ಪನವರ ಪಾದಕ್ಕೆ ಬಿದ್ದು ಅಂದನು, - “ನನ್ನ ಅಪರಾಧಗಳು ಸಂಖ್ಯೆ ಇಲ್ಲದಷ್ಟಾದವು. ಈಗ ನನ್ನನ್ನು ಸಿದ್ಧಾರೂಢರು ಇರುವಲ್ಲಿ ಕರೆದುಕೊಂಡು ಹೋಗಿರಿ. ನಾನು ಅವರ ಪಾದಕ್ಕೆ ಬಿದ್ದು, ನನ್ನ ಅಪರಾಧಗಳನ್ನು ಕ್ಷಮಿಸಬೇಕಾಗಿ ಪ್ರಾರ್ಥಿಸುವೆನು. ಆತನು ದಯಾಸಾಗರನಿದ್ದಾನೆ, ನನ್ನನ್ನು ತಾರಿಸೆಂದು ಬೇಡಿಕೊಳ್ಳುವೆನು", ಪಟ್ಟದಪ್ಪನವರು ಆತನ ಅನುತಾಪವನ್ನು ಕಂಡು, ಈತನ ಅಭಿಮಾನವೆಲ್ಲಾ ಝಾಡಿಸಿಕೊಂಡು ಹೋಗಿದೆ,
ಎಂದು ತಿಳಿದು, ಅಯ್ಯನನ್ನು ಕುರಿತು ಅನ್ನುತ್ತಾರೆ - "ಸಿದ್ಧಾರೂಢರ ಸಮೀಪ ಹೋಗೋಣ ಆತನು ದೀನರಿಗೆ ಕೃಪಾದಾನಿ ಇರುತ್ತಾನೆ'. ಆಮೇಲೆ ಅಶಕ್ತನಾದ ಆ ಅಯ್ಯನಿಗೆ ಇಬ್ಬರು ರಟ್ಟೆಯನ್ನು ಹಿಡಿದುಕೊಂಡು, ಹಂದರದೊಳಗೆ ಸಿದ್ಧಾರೂಢರು ಕುಳಿತಿರುವಲ್ಲಿ ಕರೆದುಕೊಂಡು ಹೋಗಿ, ಅವರ ಪಾದಕ್ಕೆ ಹಾಕಿದರು. ಆಗ ಪಟ್ಟದಪ್ಪನವರು ಆ ಅಯ್ಯನ ವೃತ್ತಾಂತವನ್ನೆಲ್ಲ ಸ್ವಾಮಿಯವರಿಗೆ ನಿರೂಪಿಸಿದರು. ಅದನ್ನು ಕೇಳಿ ಸಿದ್ದರು ಆತನ ಮೇಲೆ ಅತ್ಯಂತ ಕೃಪಾಭರಿತರಾಗಿ, ಆ ಅಯ್ಯನಿಗೆ ಕೈ ಹಿಡಿದು ತನ್ನ ಸಮೀಪ ಕೂಡ್ರಿಸಿಕೊಂಡರು. ಆಗ ಪಟ್ಟದಪ್ಪನವರನ್ನು ಕುರಿತು ಸಿದ್ಧರು - “ನಮ್ಮ ದಯಾ ಕಾರ್ಯಕ್ಕೆ
ಈತನು ಉತ್ತಮ ಪಾತ್ರನಿರುವನು. ಈತನಿಗೆ ಆರೋಗ್ಯವಾದದ್ದನ್ನು ನೋಡಿ, ನನಗೆ ಬಹಳ ಆನಂದವಾಯಿತು. ಸ್ಥೂಲದೇಹಕ್ಕೆ ರೋಗಗಳು ಹ್ಯಾಗೆ ಪೀಡಿಸುವವೊ, ಹಾಗೆ ಸೂಕ್ಷ್ಮ ದೇಹಕ್ಕೆ ದುಃಸ್ವಭಾವಗಳೇ ರೋಗಗಳಾಗಿದ್ದು ಪೀಡಿಸುತ್ತಿರುವವು. ರೋಗಿಯ ಮೇಲೆ ಎಲ್ಲರೂ ದಯಾವಂತರಿರುತ್ತಾರೆ. ಹಾಗೆಯೇ ಸಾಧುಗಳು ದುಷ್ಟರನ್ನು ಸಹಾ ರೋಗಿಗಳೆಂದು ಭಾವಿಸಿ, ಅವರ ಮೇಲೆ ದಯಾಭರಿತರಾಗಿರುತ್ತಾರೆ. ಆದ್ದರಿಂದ ಇತರರಿಗಿಂತಲೂ ದುರ್ಜನರನ್ನು ಅಧಿಕ ದಯೆಯಿಂದ
ನಡಿಸತಕ್ಕದ್ದಾಗಿರುತ್ತದೆ. ಈಗ ಈ ಅಯ್ಯನು ಎಲ್ಲಾ ರೋಗವನ್ನು ಕಳಕೊಂಡ ಚಿತ್ತಾರೋಗ್ಯವನ್ನು ಪ್ರಾಪ್ತ
ಮಾಡಿಕೊಂಡಿರುವನು,” ಎಂದು ಸಿದ್ದರಂದದ್ದು ಕೇಳಿ, ಆನಂದ ಭರಿತನಾಗಿ ಅಯ್ಯನು ಸಿದ್ಧಸ್ತುತಿಯನ್ನು ಮಾಡಲಾರಂಬಿಸಿ, ಅನ್ನುತ್ತಾನೆ - '' ಹೇ ಸಿದ್ದಾರೂಢನೇ, ದಯಾವಂತನೇ, ನಿನ್ನ ದರ್ಶನದಿಂದ ನಾನು ಆನಂದವನ್ನು ಹೊಂದಿದೆ, ಮತ್ತು ನನ್ನ ಹೃದಯದಲ್ಲಿ ಶಾಂತಿಯು ಉದಯವಾಗುವಂಥಾದ್ದಾಯಿತು. ಕೃಪಾಳುವಾದ ನೀನು ದಯೆ ತೋರಿಸದಿದ್ದರೆ, ನಾನು ವ್ಯರ್ಥವಾಗಿ ನರಕದ ಪಥವನ್ನು ಹಿಡಿದು ಹೋಗುತ್ತಿದ್ದೆ. ನಿನ್ನನ್ನು ನಾನು ಥಳಿಸುತ್ತಿರುವಾಗ ನೀನು ನನ್ನನ್ನು ಉದ್ಧರಿಸಿದಿ, ಈಗ ನಿನ್ನ ಭಕ್ತರ ಪೈಕಿ ಒಬ್ಬನನ್ನಾಗಿ ನನ್ನನ್ನು ಗುಣಿಸು. ನಿನ್ನ ಚರಣಗಳಲ್ಲಿ ನಾನೊಬ್ಬ ದೀನನಿರುತ್ತೇನೆ. ನನ್ನನ್ನು ತ್ವರೆಯಿಂದ ಈ ಭವನದಿಯ ಪರತೀರಕ್ಕೆ ಕರಕೊಳ್ಳುವಂಥವನಾಗು. ದೇವನೇ, ನಾನು ನಿನ್ನ ದಾಸನಿದ್ದೇನೆ. ಈ ಕೃಪಾದಾನವನ್ನು ನನಗೆ ದಯಪಾಲಿಸು', ಹೀಗಂದಿದ್ದು ಕೇಳಿ ಸಿದ್ದರು, ಆತನ ಲಿಂಗಸಂಪುಷ್ಟವನ್ನು ತೆಗೆದು, ತಾವೇ ಆತನ ಕೊರಳಿಗೆ ಹಾಕಿ, ಬಹು ಪ್ರೇಮದಿಂದ ಆತನನ್ನು ಆಶೀರ್ವದಿಸಿದರು. ಆತನು ಮನಸ್ಸಿನಲ್ಲಿ ಪೂರ್ಣ ಶಾಂತಿಯನ್ನು ಹೊಂದಿದನು.
|| ಶ್ಲೋಕ || ಅಪಿಚೇತ್ ಸುದುರಾಚಾರೋ ಭಜತೇ ಮಾಮನನ್ಯಭಾಕ್| ಸಾಧುರೇವಸ ಮಂತವ್ಯಃ ಸಮ್ಯಗ್ವ್ಯವಸಿ ತೋಹಿ ಸಃ || ಟೀಕಾ||
ಶ್ರೀಮದ್ ಭಗವದ್ಗೀತೆಯೊಳಗೆ ಶ್ರೀ ಕೃಷ್ಣನು ಅರ್ಜುನನಿಗೆ ಹೇಳುತ್ತಾನೆ - ಒಂದು ವೇಳೆ, ಮಹಾ ದುರಾಚಾರಿ ಇದ್ದಂಥವನು ಸಹಾ, ನನ್ನನ್ನು ಅನನ್ಯಭಾವದಿಂದ ಭಜಿಸಿದನೆಂದರೆ, ಅವನು ಸಾಧು ಎಂತಲೇ ತಿಳಿದುಕೊಳ್ಳಬೇಕು. ಗೀತೆಯೊಳಗಿನ ಈ ಭಗವದ್ವಚನವು ಸಿದ್ಧ ಚರಣಗಳಲ್ಲಿ ಸತ್ಯವಾಯಿತು. ಶಿಲೆಯನ್ನು ಸಹಾ ಉದ್ಧಾರ ಮಾಡುವ ಶಕ್ತಿಯುಳ್ಳಂಥಾ
ಆ ಚರಣಗಳಿಗೆ ಯಾವುದು ತಾನೇ ಅಸಾಧ್ಯವು.
👇👇👇👇👇👇👇👇👇👇👇👇👇👇
ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
👉ಗುರುನಾಥಾರೂಢರ ಪವಿತ್ರ ಚರಿತ್ರೆ...
ಎಲ್ಲಾ ಕಥೆಗಳ ಲಿಂಕಗಳು
👉ಎಲ್ಲಾ150 ಕಥೆಗಳ ಲಿಂಕಗಳಿಗಾಗಿ ಒತ್ತಿ 👉🛃
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ
1)WhatsApp shareಗಾಗಿ click ಮಾಡಿ📲☎️
2)Facebook shareಗಾಗಿ👉
3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚
«««««ಓಂ ನಮಃ ಶಿವಾಯ »»»»»»»
