ಪಂಜಾಬ ಅಲ್ಲಿ ವೈದ್ಯನಿಗೆ ವಾತಾದಿ ಮೂರು ದೋಷಗಳ ಹಾಗೂ ಅವುಗಳ ಪರಿಹಾರಕ್ಕೆ ಉಪಾಯ ಹೇಳಿದ ಆರೂಢರು
ಪಂಜಾಬ ಅಲ್ಲಿ ವೈದ್ಯನಿಗೆ ವಾತಾದಿ ಮೂರು ದೋಷಗಳ ಹಾಗೂ ಅವುಗಳ ಪರಿಹಾರಕ್ಕೆ ಉಪಾಯ ಹೇಳಿದ ಆರೂಢರು
ಹೇ ವೈದ್ಯನೇ, ಬಹುಮೆತ್ತಗೆ, ಬಹಳ ಬಿಸಿ ಅನ್ನವನ್ನು ಅತಿ ಸ್ವಲ್ಪ ಉಣ್ಣಲು, ಗಾಳಿ, ಛಳಿ, ನೀರು ಶತೃಗಳಾದಲ್ಲಿ, ಉನ್ನತವಾದ ಮನವನ್ನು ತಡೆದಲ್ಲಿ, ಉನ್ನತವಾದ ಆಶೆ, ದುಃಖ, ಭಯ, ವ್ಯಸನಗಳುಂಟಾದಲ್ಲಿ ನಿದ್ರೆ ಬಾರದಿದ್ದರೆ, ಶ್ರಮೆಗೈಯುತ್ತಲಿದ್ದರೂ ಸಂಧ್ಯಾಕಾಲದಲ್ಲಿ ಊಟ ಮಾಡಿದ್ದು ಅಜೀರ್ಣವಾದಲ್ಲಿ, ಧಾತು ಕ್ಷೀಣಿಸಿದಲ್ಲಿ ತನುವನ್ನು ಉಬ್ಬಿಸುವದೇ ವಾತದೋಷವು.
ಹಸಿವೆ, ನೀರಡಿಕೆಗಳಿಗಾಗಿ ಖಾರ, ಹುಳಿ, ಉಪ್ಪು ಬಹಳೇ ಬಿಸಿಯಾದ ಅನ್ನವನ್ನು ಸೇವಿಸಲು ಅಜೀರ್ಣವಾಗಿ ಹೊಟ್ಟೆಯಲ್ಲಿ ಸಂಕಟ, ಎದೆಯಲ್ಲಿ ಉರಿಯುವಿಕೆಯಿಂದ ತಲೆತಿರುಗುವಿಕೆಯುಂಟಾಗಲು ಪಿತ್ತದೋಷ ಅಂತಾ ಗ್ರಹಿಸಬೇಕು.
ಮಧುರ ಪದಾರ್ಥಗಳನ್ನು, ತಣಗಾದ ಅನ್ನವನ್ನು ಭೋಜನ ಮಾಡಿ, ಹಗಲು ನಿದ್ರೆ ಮಾಡುವದು, ಊಟವಾದ ಕೂಡಲೇ ಶ್ರಮದಾಯಕ ಕಾರ್ಯ ಮಾಡುವದು, ಮಿತಿಯಿಲ್ಲದೆ ನಡೆದುಕೊಳ್ಳುವುದರಿಂದ ಪ್ರಾತಃಕಾಲದಲಿ ಗುರ್ ಗುರ್ ಅಂತಾ ಕೆಮ್ಮುವುದರಿಂದ ಕಫ ದೋಷವೆಂದು ಗ್ರಹಣ ಮಾಡಬೇಕು.
✡️ ರೋಗದ ಉತ್ಪತ್ತಿಯ ಲಕ್ಷಣ:🕉️
ಹೇ ವೈದ್ಯನೇ, ಇನ್ನು ರೋಗ ಉತ್ಪತ್ತಿಯಾಗುವ ಬಗ್ಗೆ ಹೇಳುವೆ, ಚಿತ್ತವಿಟ್ಟು ಕೇಳು. ಹಿಂದೆ ಮಾಡಿದ ಕರ್ಮಕ್ಕನುಗುಣವಾಗಿ ಕರ್ಮಫಲ ಭೋಗಿಸಲು ಜೀವನು ಮನಸ್ಸಿಗೆ ಅಧೀನನಾಗುವನು. ಅದರಂತೆ ದಶೇಂದ್ರಿಯಗಳು ಮನಸ್ಸಿನ ಆಧೀನವಾಗಿರುವುದರಿಂದ ದಶೇಂದ್ರಿಯ ಮುಖಾಂತರ ಸುಖ ದುಃಖ ರೂಪ ಫಲವನ್ನು ಉಣ್ಣುತ್ತಾನೆ. ಅನ್ನ ನೀರುಗಳಿಂದ ಶರೀರದಲ್ಲಿ ರಕ್ತವಾಗಿ ಅದರಿಂತ ರೇತಸ್ಸು ಉತ್ಪತ್ತಿಯಾಗುತ್ತದೆ. ಸತಿ ಪತಿಗಳ ಸಂಗಮದಲ್ಲಿ ರೇತಸ್ಸು ಮುಟ್ಟಿನಲ್ಲಿ ಸೇರಿ ರೋಗದಿಂದಲೇ ಸತಿಯ ಗರ್ಭದಲ್ಲಿ ಪಿಂಡ ನಿರ್ಮಾಣವಾಗುತ್ತದೆ. ವಾತಾದಿ ದೋಷ ಸಹಿತ ಜೀವದೊಂದಿಗೆ ಶಿಶುವು ಜನಿಸುವದು. ಪೂರ್ವದ ಮನಸ್ಸಿನ ವಿಕಾರತೆಯ ಸಂಸ್ಕಾರದೊಂದಿಗೆ ಜನಿಸುವ ಮಗುವು ಅದೇ ಕರ್ಮಫಲವನ್ನು ಉಣ್ಣಬೇಕಾಗುತ್ತದೆ. ವಿಚಾರ ಮಾಡಲಾಗಿ ಅನ್ನ, ಜಲ, ಸ್ತ್ರೀ, ಹವೆ ಇವೆಲ್ಲವು ರೋಗದ ಉತ್ಪತ್ತಿಗೆ ಕಾರಣವು. ಆ ಕರ್ಮನಾಶಕ್ಕಾಗಿ ಪರಶಿವನನ್ನು ಯಾವಾಗಲೂ ಧ್ಯಾನ ಮಾಡಬೇಕು. ವಿಷಯಗಳ ಸೆಳೆತಕ್ಕೆ ಹೋಗುವ ಮನಸ್ಸನ್ನು ನಿರೋಧ ಮಾಡಬೇಕು. ಮಿತಾಹಾರದಿಂದ ಇದ್ದು, ಜನರಲ್ಲಿ ವೈರತ್ವವನ್ನು ತ್ಯಾಗ ಮಾಡಿ, ಶುದ್ದ ಆಚರಣೆಯಲ್ಲಿ ನಿರತನಾಗಬೇಕು, ತರುಣಿ ಮೊದಲಾದ ವಿಷಯಗಳಲ್ಲಿ ಅತಿ ಆತುರತೆಯಿಂದ ರಮಿಸುವದರಿಂದ ಬಹುತರ ಜ್ವರ, ವಾಂತಿ, ಭ್ರಾಂತಿ, ಅತಿಸಾರ, ಕಾಯಿಲೆ, ಮೂಲವ್ಯಾಧಿ, ಕುಷ್ಠರೋಗ, ಬಾಣಂತಿ ಬೇನೆ, ಅಜೀರ್ಣ, ಕ್ಷಯ, ಮೇಹ, ಧಾತು, ಕ್ಷಯಾದಿ ರೋಗಗಳು ಹುಟ್ಟುವವು.
🕉️ ರೋಗ ಪರಿಹಾರಕ್ಕೆ ಉಪಾಯ :✡️
ಹೇ ವೈದ್ಯನೇ, ರೋಗ ಪರಿಹಾರೋಪಾಯ ಹೇಳುವೆ. ಭೂಮಂಡಲದಲ್ಲಿ ಉದ್ಬಿಜ, ಖನಿಜ, ಪ್ರಾಣಿಜ ಈ ಮೂರರಿಂದ ಔಷಧವನ್ನು ತಯಾರಿಸುವರು. ಪಾಷಾಣ, ರಸ, ಧಾತುಗಳೆಂಬ ಮೂರು ಪ್ರಕಾರದ ಖನಿಜಗಳಲ್ಲಿ ಸಿಂಧೂರ, ಮಂಡೂರ (ಕಬ್ಬಿಣದ ಕಿಟ್ಟ), ತಾಮ್ರ, ಭಸ್ಮ ಮೊದಲಾದವುಗಳನ್ನು ತಯಾರಿಸುವರು. ಉದ್ಬಿಜ ದಿಂದ ಅಂದರೆ ಜಾಜಿಕಾಯಿ, ಬಳ್ಳಿ (ಗಡ್ಡೆ) ಮೂಲಿಕೆ, (ಬೇರು) ಪತ್ರ, ಪುಷ್ಪಗಳಿಂದ ಚೂರ್ಣ, ಕಾಷಾಯ, ಲೇಹ ಮೊದಲಾದ ಮಾತ್ರೆಗಳನ್ನು ತಯಾರಿಸುವರು. ಚರಕಮುನಿಗಳ ಸಂಪ್ರದಾಯಕ್ಕನುಗುಣವಾಗಿ ವೈದ್ಯರು ಪಕ್ಷಿ, ಮೃಗ, ಜಲಚರ, ಮುಂತಾದ ಪ್ರಾಣಿಗಳ ರಕ್ತ, ನೆಣ, ಮಾಂಸ, ಅಸ್ತಿಗಳನ್ನು ಮೂಲಿಕೆ, ಬೆಲ್ಲ, ಹಣ್ಣುಗಳಲ್ಲಿ ಇರಿಸುತ ಲೇಹಾದಿ ಮಾತ್ರೆಗಳನ್ನು ತಯಾರಿಸುವರು. ರೋಗಿಯ ಅಂಗಾಲು,
ನಡ, ತಲೆ, ಎದೆ ಮೊದಲಾದ ಅವಯವಗಳನ್ನು ಪರೀಕ್ಷಿಸಿ ರೋಗದ ಬಗ್ಗೆ ಗುರ್ತೈಸ ಬೇಕು. ಅನ್ನದ ರಸ, ಉದರದಲ್ಲಿ ಸೇರಿ ಏಳು ದಿನಗಳಿಗೆ ಒಂದೊಂದು ಪ್ರಕಾರದ ರೂಪಾಂತರವಾಗಿ ರಕ್ತಾದಿ ಧಾತುಗಳಾಗುವವು. ಇವೆಲ್ಲವುಗಳನ್ನು ಬಲ್ಲ ವೈದ್ಯನು ಆಯಾ ಧಾತುಗಳಲ್ಲಿ ಉತ್ಪತ್ತಿಯಾದ ರೋಗವನ್ನು ಗುರ್ತಿಸಿ, ರಕ್ತರೋಗಕ್ಕೆ ಏಳು ದಿವಸ, ಮಾಂಸರೋಗಕ್ಕೆ ಹದಿನಾಲ್ಕು ದಿವಸ ಹೀಗೆ ಏಳೇಳು ದಿವಸಗಳ ಲೆಕ್ಕದ ಪ್ರಕಾರ ನಾಲ್ವತ್ತೊಂಭತ್ತು ದಿವಸ ಪರ್ಯಂತರ ಔಷಧವನ್ನು ಕೊಡಬೇಕು. ಹೀಗೆ ಏಳು ಪ್ರಕಾರದ ರೋಗಗಳೇ ಮುಖ್ಯ. ಅವುಗಳಿಂದ ಉತ್ಪತ್ತಿಯಾದ ರೋಗಗಳು ಬಹು ವಿಧವಾಗಿರುವವು. ರೋಗಿಯ ಅನುಭವದಿಂದ ಆಪ್ತನಾಗಿ ಗುಪ್ತರೋಗಗಳನ್ನು ತಿಳಿದುಕೊಳ್ಳುತ್ತಾ ಆ ರೋಗ ಪರಿಹಾರಕ್ಕೆ ನಿರ್ಧರಿಸಲ್ಪಟ್ಟ ಭಸ್ಮ, ಮಾತ್ರೆಗಳನ್ನು ಕೊಡಬೇಕು.
🕉️ ಔಷಧ ಕೊಡುವ ವಿಧಾನ :✡️
ಹೇ ವೈದ್ಯನೇ, ಔಷಧ ಕೊಡುವ ಬಗೆಯನ್ನು ತಿಳಿದುಕೊ, ಮೇಲೆ ಹೇಳಿದ ಪ್ರಕಾರ ರೋಗಿಯ ರೋಗವನ್ನು ಗುರ್ತಿಸಬೇಕು. ತನ್ನ ತಪಸ್ಸಿನಿಂದ ರೋಗದ ಅರ್ಧ ಭಾಗವನ್ನು ಹಾಗೂ ಉಳಿದರ್ಧ ಭಾಗವನ್ನು ಔಷಧದಿಂದ ಕಳೆಯಬೇಕು. ವೈದ್ಯನು ಔಷಧ ಕೊಡುವಾಗ ಪರಶಿವನನ್ನು ಸ್ಮರಣೆ ಮಾಡುತ್ತಾ ಸ್ವಲ್ಪ ಔಷಧವನ್ನು ಭೂಮಿಗೆ ಸಲ್ಲಿಸಿ ಸ್ವಲ್ಪ ತಾನು ಸೇವಿಸಿ ಬಳಿಕ ರೋಗಿಗೆ ಔಷಧ ಕೊಡಬೇಕು. ಈ ಪ್ರಕಾರ ಔಷಧೋಪಚಾರದಿಂದ ರೋಗ ಪರಿಹಾರವಾಗುವದು ಅಂತಾ ಸಿದ್ದ ಬಾಲಕನು ಗಂಭೀರವದನನಾಗಿ ವೈದ್ಯಶಾಸ್ತ್ರವನ್ನು ವಿವರಿಸಿದನು. ಏಕಾಗ್ರತೆಯಿಂದ ಕೇಳಿದ ಆ ವೈದ್ಯನು ಅದಕ್ಕೆ ತಲೆದೂಗಿ ಆನಂದಭರಿತನಾಗಿ ದೀರ್ಘದಂಡ ವಂದನೆಗಳನ್ನು ಅರ್ಪಿಸುತ್ತಾ, ನಾನು ತಮ್ಮ ಮುಖವಾಣಿಯಿಂದ ಕೇಳಿ ಧನ್ಯನಾದೆನು. ನಿಮಗೆ ಅನಂತ ಅನಂತ ಕೃತಜ್ಞತೆಗಳನ್ನು ಅರ್ಪಿಸುವೆ ಅಂತಾ ನತಮಸ್ತಕನಾದನು. ಈತನು ಸಾಕ್ಷಾತ್ ಇಂದುಧರನಿವನು ಅಂತಾ ಉದ್ಗರಿಸುತ್ತಾ ಸಿದ್ಧನನ್ನು ಬೀಳ್ಕೊಟ್ಟನು.
ಪ್ರಾಪ್ತವಾಗುವುದು
👇👇👇👇👇👇👇👇👇👇👇👇👇👇
