ಬಿಜಾಪೂರದಲ್ಲಿ ವಾಸ್ತವ್ಯ

 ಬಿಜಾಪೂರದಲ್ಲಿ ವಾಸ್ತವ್ಯ 🌺🌺



ಸಿದ್ಧನು ಕೆಲವು ದಿನ ಬಿಜಾಪುರದಲ್ಲಿ ವಾಸ ಮಾಡಿದನು. ಒಂದಾನೊಂದು ದಿನ ಬಯಲಲ್ಲಿ ನಿಂತಾಗ ಅವರೆದುರಿಗೆ ಇದ್ದ ಕಟುಕನ ಆಳುಗಳು ಹಲ್ಲು ಗಿರಚುತ್ತಾ ಚೂರಿಯನ್ನು ಮಸೆಯುತ್ತಿದ್ದರು.  ಮತ್ತೊಂದಡೆ ಗೋವುಗಳ ರುಂಡಗಳನ್ನು ಕತ್ತರಿಸುತ್ತಿದ್ದಾಗ  ಅಂಭಾ ಅಂತಾ ಗೋಗರಿಯುತ್ತಿದ್ದವು. ಎಡಬದಿಗಳಲ್ಲಿ ರಕ್ತದ ಹತ್ತು ಕುಂಡಗಳು ತುಂಬಿ ಹರಿಯುತ್ತಿದ್ದವು. ಸುತ್ತಲೂ ಹೊಲಸು ತುಂಬಿತ್ತು. ನಿಂತ ಸಿದ್ದನ ಕರಪಿಡಿದು ದರ ದರನೆ ಎಳೆದುಕೊಂಡು ಹೋಗಿ ಶಗಣಿ ಬರಿಯಲಿಕ್ಕೆ ಹಚ್ಚಿದರು. ನಾಲ್ಕೈದು ಬುಟ್ಟಿ ಸೆಗಣಿ ತಿಪ್ಪೆಗೆ ಹಾಕಿ ಅವರ ಕಣ್ಣುಗಳನ್ನು ತಪ್ಪಿಸಿ ಸಿದ್ಧನು ಬೇರೆ ದಾರಿಯಿಂದ ಹೊರಟನು. ಊರಲ್ಲಿ ಭಿಕ್ಷೆಗಾಗಿ ಅಲೆದಾಡಿದನು. ಒಂದು ಮನೆಯ ಎದುರಿಗೆ ನಿಲ್ಲಲು ಆ ಮನೆಯವನು ರೊಟ್ಟಿ ಬೇಕೇ ಅಂತಾ ಕೇಳಲು ಸಿದ್ಧನು ಹೌದು ಅಂತ ಹೇಳಿದ, ಕೂಡಲೇ ಅವನಿಂದ ಕಸ ತೆಗೆಯಲು ಹಚ್ಚಿದನು. ಆ ಮನೆಯವನು ಅರ್ಧ ರೊಟ್ಟಿ ಕೊಟ್ಟು ಒಳಗೆ ಹೋದನು. ಅಲ್ಲಿಂದ ಸಿದ್ದನು ಹೊರಟು ತಾಸ ಭಾವಿಯತ್ತ ಸಾಗಿದನು. ಅಲ್ಲಿ ವಾಸ ಮಾಡುತ್ತಿರುವಾಗ ಒಂದು ದಿನ ಹೈದರಸಾಬ ಬಂದು ಈತನು ಹುಚ್ಚನಿಹನು. ನಮ್ಮ ಊರಿನಲ್ಲಿ ಉರುಸು ಉತ್ಸವದಲ್ಲಿ ದೀವಟಿಗೆ ಹಿಡಿಯಲು ಅನುಕೂಲ ಆಗುವದು ಅಂತಾ ಭಾವಿಸಿ, ಹೇ ಹುಚ್ಚನೇ, ನೀನು ಊಟ ಮಾಡಿರುವಿಯಾ  ಅಂತಾ  ಕೇಳಿದನು, ಇಲ್ಲಾ ಅಂತಾ ಹೇಳಲು ಹೈದರಸಾಬನು ಆತನನ್ನು ತನ್ನ ಮನೆಗೆ ಕರೆದೊಯ್ದನು. ತಂಗಳದ  ಅನ್ನ ಕೊಟ್ಟು ಸಿದ್ಧನನ್ನು ಹೈದರಸಾಬನು ಮಸೀದಿಗೆ ಕರಕೊಂಡು ಹೋದನು. ಉರಿಯುವ ದೀವಟಿಗೆಯನ್ನು ಸಿದ್ದನ ಕೈಯಲ್ಲಿ ಕೊಟ್ಟು ಈ ನರ್ತಕಿಯ ಬಲಬದಿಗೆ ದೀವಟಿಗೆಯನ್ನು ಹಿಡಿದಿರಬೇಕು ಅಂತಾ ಅಪ್ಪಣೆ ಮಾಡಿದನು. ಕುತಂಥ ಸಿದ್ದನು ದಿಗ್ಗನೆ ಎದ್ದು ಪಶ್ಚಿಮದ ಕಡೆ ನಡೆಯಲು ಓರ್ವನು ಆತನನ್ನು ಹಿಡ್ಕೊಂಡು ಬಂದು ಇಲ್ಲಿ ಕತ್ತಲೆ ಮಾಡಿ ಅಲ್ಲಿಗೇಕೆ ಹೋದಿ ಅಂತಾ ಗದರಿಸಿದನು. ಆಗ ಸಿದ್ಧನು ನಾನೇ  ಸೂರ್ಯನು. ನನ್ನ ಬೆಳಕಿನಲ್ಲಿ ನೀವೆಲ್ಲ ಇರುತ್ತಿರುವಿರಿ. ಸೂರ್ಯನು  ಒಂದೆಡೆ ನಿಲ್ಲಲಾರ ಹಾಗೆ ಅಲ್ಲಾನ ಆಜ್ಞೆ ಇಲ್ಲಾ  ಅಂತ ಹೇಳುತ್ತಿರುವಾಗ  ಎಲ್ಲರೂ ನಕ್ಕರು. ಹಾಗೆಯೇ ಅವನನ್ನು ಅಲ್ಲಿಯೇ ಕುಳ್ಳಿರಿಸಿದರು.


ನೃತ್ಯವು  ಸಾಗಿತು. ಹಿಂದೆ ಓರ್ವ ಮುದುಕಿಯು  ತಲೆ ಹಾಕುತ್ತಾ ಗಾಯನ ಮಾಡುತ್ತಿರುವಾಗ ಆಕೆಯನ್ನು ಸಿದ್ಧನು  ಬಾಗಿ ನೋಡುತ್ತಾ ಎಲಾ, ಈಕೆಗೆ ರೋಗ ಬಂದಿದೆ ಸಾಹೇಬರೇ ಕೂಡಲೇ ಕಾದ ಕಬ್ಬಿಣದಿಂದ ಆ ಮುದುಕಿಯ  ಪಕ್ಕಡಿಗಳಿಗೆ ಮೂರು ಸಲ ಬರೆ ಹಾಕಬೇಕು ಅಂದರೆ ಈಕೆಯು  ಬದುಕುವಳು  ಅಂತಾ ಕುಣಿದಾಡ  ತೊಡಗಿದನು. ಈ ದೃಶ್ಯವನ್ನು ಕಂಡು ಎಲ್ಲರೂ ಬಿದ್ದು ಬಿದ್ದು ನಗುಹತ್ತಿದ್ದರು. ಅವರಲ್ಲಿಯ  ಒಬ್ಬನು ಸಿದ್ದನ ಕೈಹಿಡಿದು, ಎಲಾ  ಇಂತಹ ರೋಗವನ್ನು ಈ ಮೊದಲು ನೀನು ಎಲ್ಲಿ ನೋಡಿರುವಿ, ಅದಕ್ಕೆ ಪರಿಹಾರೋಪಚಾರದ ಬಗ್ಗೆ ನಿನಗಾರು ಹೇಳಿದರು ಅಂತ ಕೇಳಿದನು. ಅದಕ್ಕೆ ಸಿದ್ಧನು  ಅವರನ್ನು ಕುರಿತು ಈ ಮೊದಲು ನಾನು ಕೃಷ್ಣಾ ನದಿಯ ದಡದಲ್ಲಿ ಕುರಿಗಳನ್ನು ಕಾಯುತ್ತಿದ್ದೆ. ಒಮ್ಮೆ ಕುರಿಗಳಿಗೆ ಇಂಥಾ ರೋಗ ಬಂತು. ಆಗ  ಕುರುಬರು ಕಾದ ಕುಡದಿಂದ ಕುರಿಗಳಿಗೆ ಬರೆ ಕೊಟ್ಟರು. ಆಗ  ಗುಣವಾಯಿತು ಅಂತಾ ಹೇಳಲು ಅವರು, ಹೇ ಮೂರ್ಖನೇ ದೇವರ ಸತ್ಕಾರ್ಯದ  ಉತ್ಸವದಲ್ಲಿ ಈ ಪ್ರಕಾರ ಕೆಡಕು ನುಡಿಗಳನ್ನು ಆಡಬಾರದು ಸುಮ್ಮನೆ ಬಾಯಿ ಮುಚ್ಚು ಅಂತಾ ಗದರಿಸಿದನು. ಆಗ ಸಿದ್ಧನು  ಅವರನ್ನು ಕುರಿತು ಮುಂದುವರೆದು ಅಯ್ಯಾ ಈ ಸತ್ಕಾರ್ಯದಲ್ಲಿ ವ್ಯಭಿಚಾರಿಯಾದ ಈ ಮುದುಕಿಯ  ಅಪಸ್ವರಕ್ಕೆ ಪರಮ ಅಲ್ಲಾನು  ಒಪ್ಪುವನೇ? ಹೇಳು  ಅಂತಾ ನುಡಿಯಲು ಅದಕ್ಕೆ ಈಗ ಯಾಕೆ ವಿನಾಕಾರಣ ಗದ್ದಲ ಈತ ಹುಚ್ಚನಿರುವನು. ಇವನ ಕೂಡ ವಾದ ವಿವಾದ ಬೇಡ ಅಂತ ಮಾತನಾಡ ತೊಡಗಿದರು. ಆಗ ಸಿದ್ಧನು  ಸುಮ್ಮನಿರದೆ ಕುಣಿದಾಡುತ್ತಾ ಜೋರಾಗಿ ಗೊಣಗುತ್ತಾ ಲಲಿತವಾದ ಈ ಮುದುಕಿಯ  ಗಾಯನವನ್ನು ಕೇಳಲು ಅಲ್ಲಾ ಬರುತ್ತಾನೆ. ಅಲ್ಲಾ ಬರುತ್ತಾನೆ,  ನೋಡ್ರಿ ಅಂತಾ ವ್ಯಂಗೋಕ್ತಿಗಳನ್ನಾಡ ತೊಡಗಿದನು. ಇದೆಂಥಾ ಹಾಸ್ಯ, ಈತನನ್ನು ಥಳಿಸಿರಿ, ಆಚೆಗೆ ನೂಕಿರಿ ಅಂತಾ ಎಲ್ಲರೂ ಕೂಡಿ ಸಿದ್ಧನಿಗೆ ಹೊಡೆಯಲು ಹೋದರು. ಈಗ ಭುಸ್ ಭುಸ್ ಅಂತಾ ಭುಸಗುಟ್ಟುತ್ತಾ ಘಟಸರ್ಪವು ಜನರ ಮಧ್ಯೆ ಬಂದ ಕೂಡಲೇ ಪಂಜಗಳನ್ನು ಒಗೆದು ಮನ ಬಂದ ಕಡೆ ಓಡಿ ಹೋದರು.

ಮುಂದೆ ಆ ಸರ್ಪವು ಅಲ್ಲಿಯೇ ಮಾಯವಾಯಿತು. ಸಿದ್ದನು ಅಲ್ಲಿಯೇ ಶಯನ ಮಾಡಿದನು. ಮರುದಿನ ಬೀದಿ ಬೀದಿ ಸಂಚರಿಸುತ್ತಾ ಭಿಕ್ಷಾನ್ನ ಬೇಡಿದನು. ಜನರ ಕಾಟ ವಿಪರೀತವಾಗಲು  ಅಲ್ಲಿಂದ ಹಾಳು  ಬಿದ್ದ ಬಿನ್  ಚೀಪ ಮಸೀದಿಯ  ಕೋಟೆಯಲ್ಲಿ ವಾಸ ಮಾಡತೊಡಗಿದನು. ಅಲ್ಲಿಯ ಗಿಡಗಳಲ್ಲಿಯ  ಫಲಗಳನ್ನು ತಿನ್ನುತ್ತಾ ಅಲ್ಲಿಯೇ  ಕಾಲ ಕಳೆಯುತ್ತಿದ್ದನು.


ಅನ್ನ ವಸ್ತ್ರಗಳ ಆಶೆಯನ್ನು ತ್ಯಾಗ ಮಾಡಿ ದೃಢವಾದ ವೈರಾಗ್ಯದಿಂದ ಚಂಚಲತೆಯನ್ನು ಅಳಿದು ಏಕಾಗ್ರ ಚಿತ್ತದಿಂದ ತಾನೇ ತಾನಾಗಿ ಶರೀರ ರಾಜ್ಯಕ್ಕೆ ಅರಸನಾಗಿ ಪರಮ ಪೂರ್ಣಾನಂದದಲ್ಲಿ ಮುಳುಗಿದ್ದನು. ಅಜಾತ ಶತೃವಾಗಿ ಮದಗಜದಂತೆ ಬೀದಿಗಳಲ್ಲಿ ಸಂಚರಿಸುವಾಗ ಕೊಳೆ ತುಂಬಿದ ಈತನ ದೇಹವನ್ನು ಕಂಡು ಕೆಲವರು ಇವನು ಹೊಲೆಯನೆಂದೂ, ಇನ್ನೂ ಕೆಲವರು ಹುಚ್ಚನೆಂದು, ಮಾನಿನಿಯರು ಕರುಣೆಯಿಂದ  ಕೆಡುಕು ಪ್ರಾರಬ್ದವು  ಈತನಿಗೆ ಇಂತಹ ಅವಸ್ಥೆಯನ್ನು ತಂದಿರುವದು. ಜನರ ಸಂಗ ತ್ಯಜಿಸಿ ಅಡವಿಯಲ್ಲಿ ಚರಿಸುತ್ತಾ ಇರುವ ಸಿದ್ದನಿಗೆ ಪರಶಿವನು ಎಂತಹ ಅವಸ್ಥೆ ಯಲ್ಲಿ ನೂಕಿರುವನು ಅಂತಾ ಕನಿಕರ ಪಡುತ್ತಿದ್ದರು. ಈ ಪ್ರಕಾರ ವಿವಿಧ ಜನರ ಅನಿಸಿಕೆ ಗಳನ್ನು ಗಮನಿಸಿದ ಸಿದ್ದನಿಗೆ, ಈ ಮೊದಲು ಅನುಭವಿಸಿದ ಖೇದದಾಯಕ ಘಟನೆಗಳು ಅವನ ಸ್ಮೃತಿಪಟಲದ  ಮೇಲೆ ಸುಳಿಯತೊಡಗಿದವು.


ಅದೆಂದರೆ ಈ ಪೂರ್ವದಲ್ಲಿ ವೈರಾಗ್ಯದಿಂದ ಅಡವಿ ಅಡವಿ ಸಚರಿಸುತ್ತಾ ಶ್ರೀಶೈಲ ಗಿರಿಯ ಪೂರ್ವಕ್ಕಿರುವ ಬದ್ವೇಲಿ  ಗ್ರಾಮಕ್ಕೆ ಆಗಮಿಸಿ ಅಲ್ಲಿಯ  ದೇವಾಲಯದಲ್ಲಿ ಬಂದು ಕೂತನು, ಮಾತನಾಡುವಿಕೆಯನ್ನು ತ್ಯಾಗ ಮಾಡಿ ನಿಧಿಧ್ಯಾಸನ ಮಾಡುತ್ತಾ ಮೌನಧಾರಣ ಮಾಡಿದನು. ಅಷ್ಟರಲ್ಲಿ ಒಬ್ಬ ತಳವಾರನು ಬಂದು ಸಿದ್ಧನಿಗೆ ನೀನಾರು ಅಂತಾ ಕೇಳಿದನು. ಅದಕ್ಕೆ ಸಿದ್ದನ ಸುಮ್ಮನಿದ್ದನು. ಜೋರಾಗಿ ಆತನನ್ನು ಅಲುಗಾಡಿಸಿ ಕೇಳಿದರೂ ಮೊದಲಿನಂತೆ ಮೌನವಾಗಿದ್ದುದಕ್ಕೆ ಆತನನ್ನು ಒದೆಯುತ್ತಾ ಚಾವಡಿಗೆ ಎಳೆದೊಯ್ದು ಕೊತ್ವಾಲನಿಗೆ ಫಿರ್ಯಾದಿ ಮಾಡಿದನು. ಆದಾಗ್ಯೂ ಸಿದ್ಧನು  ಮೌನ ವ್ರತವನ್ನು ಮುರಿಯಲಿಲ್ಲ. ಆತನನ್ನು ಕತ್ತಲ ಕೋಣೆಯಲ್ಲಿ ಹಾಕಿ ಕೋತವಾಲನು  ಬೇರ ಕೆಲಸಕ್ಕೆ ಹೋದನು. ಮೂರನೇ ದಿನಕ್ಕೆ ನೆನಪಾಗಲು ಭರದಿಂದ ಬಂದು ಕೊತ್ವಾಲನು  ಕೋಣೆಯಿಂದ ಸಿದ್ಧನನ್ನು ಹೊರಗೆ ತಂದು ಹತ್ತಿರ ಕೂತು ನೀನಾರು ಅಂತ ಪರಿಪರಿಯಿಂದ ಕೇಳಿದರೂ ಸುಮ್ಮನೆ ಇದ್ದುದರಿಂದ ಕೊತವಾಲನಿಗೆ ಕೋಪವು ನೆತ್ತಿಗೇರಿತು. ಕಳ್ಳ ಸೂಳೆ ಮಗನೇ ನೀನಾರು ಅಂತ ಗದರಿಸುತ್ತಾ ಇವನಿಗೆ  ಮರ್ದನ ಮಾಡಬೇಕು ಅಂತ ತಳವಾರರಿಗೆ ಅಪ್ಪಣೆ ಕೊಟ್ಟನು. ಅವರು ಒಂದೇ ಸವನೆ ಸಿದ್ಧನನ್ನು ಹೊಡೆಯ ತೊಡಗಿದರು. ಹೊಡೆತ ಬಿದ್ದಂತೆ ಶಿವನಿಗೆ ಅರ್ಪಣವಾಗಲಿ ಅಂತಾ ಸಿದ್ದನ ಉದ್ಘರಿಸುತ್ತಲಿರುವದನ್ನು ಕಂಡು, ಅಲ್ಲಿರುವ ಬ್ರಾಹ್ಮಣನು ಸಾಕು ಸಾಕು, ಹೊಡೆಯಬೇಡಿ, ಈತನು ಬ್ರಹ್ಮಜ್ಞಾನಿಯಾಗಿರುವಂತೆ ತೋರುತ್ತದೆ ಅಂತ ಅವರಿಂದ ಬಿಡಿಸಿಕೊಂಡು ತನ್ನ ಮನೆಗೆ ಕರೆತಂದನು, ಸಿದ್ದನಿಗೆ ಅಭ್ಯಂಗ ಸ್ನಾನವನ್ನು ಮಾಡಿಸಿ, ಮಡಿಯ ವಸ್ತುಗಳನ್ನು ಕೊಟ್ಟು ಆತನ ಪಾದ ಪದ್ಮಗಳನ್ನು ಪೂಜಿಸಿ ವಿನಯದಿಂದ ಪಂಚ ಪಕ್ಷಾನ್ನಗಳನ್ನು ಉಣಬಡಿಸಿ ತೃಪ್ತಿಪಡಿಸಿದನು. ಆ ವಿಪ್ರನ ಮನೆಯ ಸುತ್ತಲಿನ ಜನರೆಲ್ಲರೂ ಈ ವಾರ್ತೆಯನ್ನು ಕೇಳಿ ಅಲ್ಲಿಗೆ ಧಾವಿಸಿ ದರ್ಶನ ಪಡೆದು ಸಿದ್ದನಿಗೆ ನಮಿಸಿ ಅಲ್ಲಿಯೇ ಕೂಡ್ರಲು  ಭಕ್ತಿ ಜ್ಞಾನ ವೈರಾಗ್ಯ ಭರಿತ ಬೋಧನೆಯನ್ನು ಆಲಿಸಿ ಈ ಮಹಾಮಹಿಮರನ್ನು ಚಿತ್ರಹಿಂಸೆ ಮಾಡಿದ ಕೊತವಾಲ ಹಾಗೂ ತಳವಾರರನ್ನು ನಿಂದಿಸುತ್ತ ಅವರ ಮೇಲೆ ಕ್ಷೋಭೆಗೊಂಡು. ಈ ವಾರ್ತೆಯು ಗ್ರಾಮದ ತುಂಬಾ ದಟ್ಟವಾಗಿ ಹರಡಿದ್ದನ್ನು ಕೇಳುತ್ತಲೇ ಕೊತವಾಲನು ವಿಪ್ರನ ಮನೆಗೆ ಧಾವಿಸಿದನು. 


ಅವನಲ್ಲಿಯ  ತಾಮಸ ಗುಣವು  ಅಡಗಿತ್ತು. ಪಶ್ಚಾತ್ತಾಪದಿಂದ ವಿವೇಕೋದಯವಾಗಿತ್ತು. ವಿನಯಶೀಲನಾಗಿ ಭಯಭಕ್ತಿಯಿಂದ ಸಿದ್ಧನ ಪಾದಗಳಲ್ಲಿ ತನ್ನ ಶಿರವನ್ನಿಟ್ಟು, ಹೊರಳಾಡುತ್ತ ಪರಮಸ್ವಾಮಿಯೇ ನನ್ನಿಂದ ಮಹಾಪರಾಧವಾಯಿತು. ಪಾಪಾತ್ಮನಾದ ನನಗೆ ಕ್ಷಮಿಸಿ ಕೃಪೆದೋರಿ ಕಾಪಾಡಬೇಕು ಅಂತಾ ಗೋಗರೆದನು. ಆಗ ಸಿದ್ಧನು ಆತನನ್ನು ಕುರಿತು ಹೇ ದಯಾಳುವೇ, ನನ್ನಲ್ಲಿಯ ಸಂಚಿತ ಕರ್ಮವನ್ನು ಹೊಡೆದೋಡಿಸಿದ ನೀನು ನನ್ನ ನಿಜವಾದ ಗುರುವಾಗಿರುವಿ ಅಂತಾ ನಮಸ್ಕರಿಸಿದರು. ಆಗ ಕೊತ್ವಾಲ್ ಸಿದ್ಧನನ್ನು ಕುರಿತು ಹಾಯ್ ಹಾಯ್, ಹೇ ಸ್ವಾಮಿಗಳೇ  ಇದೇನು ಮಾಡಿದಿರಿ ಪರಮ ಪಾತಕಿಯಾದ ನನ್ನನ್ನು ರಕ್ಷಿಸು ಅಂತ ತಮ್ಮಲ್ಲಿ ಕೇಳಿಕೊಂಡರೂ ನನಗೆ ಪ್ರತಿಯಾಗಿ ನಮಸ್ಕರಿಸಿ ನನ್ನನ್ನು ನರಕದಲ್ಲಿ ನೂಕುವದರಿಂದ ಯೋಗ್ಯವಾಗುವದೇ ಕರುಣಾಸಾಗರನಾದ ಸ್ವಾಮಿಯೇ ಹೇಳು ಅಂತ ಕಣ್ಣೀರು ಸುರಿಸತೊಡಗಿದನು. ಆಗ ಸಿದ್ಧನು  ನನ್ನ ಮಾತುಗಳನ್ನು ಕೇಳು. ನನ್ನ ಸಂಚಿತ ಕರ್ಮವು ನಿನ್ನ ನೇತ್ರಗಳ ಮುಖಾಂತರ ನಿನ್ನ ಮನಸ್ಸಿನಲ್ಲಿ ಸೇರಿತು. ಅಲ್ಲಿ ಅಂತರಾಳದಲ್ಲಿಯ  ದಯಾಘನನಾದ ಗುರುವು ನಿನ್ನಲ್ಲಿ ಪ್ರೇರಣೆ ಮಾಡಿ, ನಿನ್ನ ಕೈಗಳಿಂದ ಈ ಕೃತಿಯನ್ನು ಅಂದರೆ ಚಿತ್ರಹಿಂಸೆಯನ್ನು ಮಾಡಿಸಿಧನು. ನನ್ನ ಪ್ರಾರಬ್ಧ ಕರ್ಮಗಳನ್ನು ನಾಶ ಮಾಡಿದ ಪರಮ ಗುರುವಿಗೆ ನನ್ನ ನಮನಗಳು ಇರುವಾಗ ನಿನಗೇನು ಬಾಧಕವು, ನೀನ್ಯಾಕೆ ದುಃಖಪಡುವಿ. ನಿನ್ನದೇನು ಇದರಲ್ಲಿ ಯಾವ ತಪ್ಪು ಇಲ್ಲ, ವಿನಾಕಾರಣ ನೋವು ಮಾಡಿಕೊಳ್ಳಬೇಡಾ  ಅಂತಾ ಆತನಿಗೆ ಪ್ರಸಾದವನ್ನು ತಿನ್ನಿಸುತ್ತಾ ಶಾಂತಿ ಸಮಾಧಾನಗೊಳಿಸುತ್ತಿದ್ದನ್ನು ಕಂಡು ಪುರಜನರೆಲ್ಲರಿಗೆ ಸಖೇದಾಶ್ಚರ್ಯವಾಯಿತು. ಅವರೆಲ್ಲರೂ ತಮ್ಮ ತಮ್ಮಲ್ಲಿ ಆಹಾ, ಕಡು ನಿರ್ದಯದಿಂದ ಹೊಡೆಸಿದವನಲ್ಲಿ ಈತನು ಕ್ರೋಧ ತಾಳಲಾರದೆ, ಬೇಸರ ಮಾಡಿಕೊಳ್ಳದೆ, ಅಂಥವರಲ್ಲಿ ಗುರು ಭಾವದಿಂದ ಸತ್ತರಿಸಿದ ಮಹಾಮಹಿಮನು ಪರಮ ವೈರಾಗ್ಯಶಾಲಿ. ಈತನಲ್ಲಿ ಸಮಭಾವ ತಿತೀಕ್ಷೆ ನೆಲೆಸಿದ್ದರಿಂದ ಈತನು ಪರಶಿವನು ಮಾನವನಲ್ಲ ಅಂತಾ ಅಂದುಕೊಳ್ಳುತ್ತಾ ಸಿದ್ದನ ಚರಣ ಕಮಲಗಳಲ್ಲಿ ನಮಿಸುತ್ತಾ, ಹೇ ಸದ್ಗುರುವೇ, ನಿನ್ನ ಹೆಸರಿನಿಂದ ಇಲ್ಲಿ ದೇವಾಲಯವನ್ನು ನಿರ್ಮಾಣ ಮಾಡಲು ಆಶೀರ್ವದಿಸು ಅಂತಾ ಹೇಳಿಕೊಂಡರು. ಅದಕ್ಕೆ ತಥಾಸ್ತು ಅಂತ ಅಭಯವನ್ನಿತ್ತು ಸಿದ್ದನು ಅಲ್ಲಿಂದ ಹೊರಟನು.


ಈ ಎಲ್ಲ ಸಂಗತಿಗಳನ್ನು ನೆನಪು ಮಾಡಲು ಸ್ಮೃತಿ ಪಟಲದ ಮೇಲೆ ಸುಳಿದು ಹೋದದ್ದನ್ನು ನೆನಪಿಸಿಕೊಳ್ಳುತ್ತಾ, ಇಲ್ಲಿ ಅಂದುಕೊಳ್ಳುತ್ತಾ ಸ್ತ್ರೀಯನ್ನು ಕಂಡು ಮಾನಿನಿಯಾರಾದ  ತಾಯಂದಿರೇ  ಆ ಬದ್ವೇಲಿಯಲ್ಲಿ ಘಟಿಸಿದ ಹೀನ ಪ್ರಾರಬ್ಧಕ್ಕಿಂತಲೂ ಈಗಿನದೇನು  ಅಷ್ಟೊಂದು ದುಃಖಕರವಾಗಿಲ್ಲ ಎಂದು ನುಡಿಯುತ್ತಾ ಸಿದ್ಧಾರೂಢ ಭಾರತಿಯು ಸಾನುರಾಗದಿಂದ ಮನಸ್ಸನ್ನು ಸ್ವಸ್ವರೂಪದಲ್ಲಿ ಲೀನಗೊಳಿಸಿ ಬ್ರಹ್ಮಾನಂದ ಸುಖದಲ್ಲಿ ತಲ್ಲೀನನಾದನು. 


ಮಲಗಿದ ಮಗುವನ್ನು ತಾಯಿಯು  ಎಚ್ಚರಿಸಿ ಮೊಲೆಯುಣಿಸುವಂತೆ, ಪ್ರಾರಬ್ಧ ತಾಯಿಯು ಸಿದ್ಧನನ್ನು ಎಚ್ಚರಗೊಳಿಸಿರುವಳೋ ಎಂಬಂತೆ ನಿರ್ವಿಕಲ್ಪ ಸಮಾಧಿಯಿಂದ ಸಿದ್ಧನು ಉತ್ಥಾನಗೊಂಡನು. ಮೊಹರಮ್ ಹಬ್ಬವಿದ್ದುದರಿಂದ ಸೆರೆ ಕುಡಿದು ಮತ್ತರಾದ ಮೂರ್ಖರು ಸಿದ್ಧನನ್ನು ಬಲಾತ್ಕಾರವಾಗಿ ಕರೆದೊಯ್ದು ಎತ್ತಿನ ಬಂಡಿಯ ನೊಗವನ್ನು ಆತನ ಹೆಗಲ ಮೇಲೆ ಹೇರಿ ಬಂಡಿಯನ್ನು ಎಳೆಯ ಹಚ್ಚಿದರು. ಊರೊಳಗೆ ಈ ಬಂಡಿ ಹೋಗುತ್ತಿರುವಲ್ಲಿ ಆ ಕುಡುಕರು ಗಡಿಗೆಗಳನ್ನು ಹಿಡಿದುಕೊಂಡು ಎರಡೂ ಕಡೆ ಮನೆಗಳ ಜನರಿಂದ ದುಡ್ಡನ್ನು ಬೇಡತೊಡಗಿದರು. ಮೊಹರಂ ಕುಂಡದ ಸುತ್ತಲೂ ಕುಣಿದಾಡತೊಡಗಿದರು. ಭಾರ ತಾಳಲಾರದೆ ಸಿದ್ದನು ನೊಗವನ್ನು ಇಳಿಸಲು ಮುಂದಾದ ಕೂಡಲೇ ಹೊಡೆಯತೊಡಗಿದರು. ಹಣ್ಣು ಹಂಪಲ ತೊಟ್ಟು ನೀರು ಕುಡಿಸುತ್ತ ಸಾಯಂಕಾಲದವರೆಗೆ ತಿರುಗಾಡಿದರು. ಸಿದ್ಧನು ಎರಡು ತೊಡೆಗಳು ಕೆತ್ತಿ ಬಹಳೇ ಬಾಧೆಯಾಗತೊಡಗಿತು. ಮುಂದೆ ನಡೆಯಲು ಬಾರದೇ ಇದ್ದುದರಿಂದ ನಡು ದಾರಿಯಲ್ಲಿ ಬಿದ್ದನು. ಉಳಿದ ಮೂರ್ಖರು ತಮ್ಮ ದಾರಿಗೆ ಹೋದರು. ವಿಕ್ಷೇಪಕ್ಕೆ ಕಾರಣವಾಗಬಲ್ಲ ಚಂಚಲತೆಯನ್ನು ಕಳೆಯಲು ಅತ್ತಲಿತ್ತ ಹೋಗದಂತೆ ಪರಶಿವನು ಈ ಅವಸ್ಥೆಯನ್ನು ತಂದಿರುವನು ಅಂತಾ ಅನ್ನುತ್ತಲೇ ಸಿದ್ದನು ನಿರ್ವಿಕಲ್ಪ ಸಮಾಧಿಸ್ಥನಾದನು. ಎಚ್ಚರಗೊಂಡ ನಂತರ ಬೀದಿಯಲ್ಲಿ ಬಾಲಕರ ಜೊತೆಗೆ ಚಂಡು, ಗುಂಡು, ಚಿಣಿಪಣಿ, ಪಟ ಆಡುತ್ತಾ ಎಲ್ಲರಿಗೂ ಕೆಲವು ದಿನ ಮೋದಗೊಳಿಸಿದನು.

👇👇👇👇👇👇👇👇👇👇👇👇👇👇

ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜನ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ, ಬೇರೆಯರಿಗೂ share ಮಾಡಿ, ಅವರಿಗೂ help ಮಾಡಿ ಅಜ್ಜನ ಕೃಪೆಗೆ ಪಾತ್ರರಾಗಿರಿ

ಈ link ಒತ್ತಿ 👉 📖 👈 ಒತ್ತಿ

ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ

👉ವಿಜಾಪುರದಲ್ಲಿ ತುಳಜಪ್ಪನೆಂಬ ಸದ್ಭಕ್ತನ ಮನೆಯಲ್ಲಿ ಕೆಲವು ದಿನವಿದ್ದು ಶಾಸ್ತ್ರವನ್ನು ನಡೆಸಿ ಬಳಿಕ ಬಿನ್‌ಚೀಪ್ ಮಸೀದಿಗೆ ಹೋದ ಕಥೆ

ಎಲ್ಲಾ  ಕಥೆಗಳ ಲಿಂಕಗಳು 

👉ಸಿದ್ಧಾರೂಢ ಭಾಗವತ ಕಥಾ ಸಂಗ್ರಹ 👉🛃

ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 

1)WhatsApp shareಗಾಗಿ click ಮಾಡಿ📲☎️

2)Facebook shareಗಾಗಿ👉

3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚



«««««ಓಂ ನಮಃ ಶಿವಾಯ »»»»»»»

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ