ಹಠಯೋಗಿಗೆ ಯೋಗ ಸಾಧನೆಗಳ ಕುರಿತು ಹೇಳಿದ್ದು ಭಾಗ-2,
🌱ಹಠಯೋಗಿಗೆ ಯೋಗ ಸಾಧನೆಗಳ ಕುರಿತು ಹೇಳಿದ್ದು ಭಾಗ-2,
🕉️ ಆಸನ - ✡️
ಆಸನಗಳಲ್ಲಿ ಆರು ಪ್ರಕಾರಗಳಿವೆ. ೧. ಸಿದ್ಧಾಸನ, ೨. ಪದ್ಮಾಸನ, ೩.ಸಿಂಹಾಸನ, ೪. ಭದ್ರಾಸನ, ೫. ವೀರಾಸನ, ೬. ಸ್ವಸ್ತಿಕಾಸನ ಇವುಗಳ ವಿವರ ಈ ಕೆಳಗಿನಂತಿದೆ.
೧. ಎಡದ ಮಡದಿಂದ ಜನನೇಂದ್ರಿಯದ ಕೆಳಭಾಗವನ್ನು ಬಿಡದಂತೆ ಒತ್ತುತ್ತ ಬಲಗಡೆಯ ಹಿಂಬಡವನ್ನು ಜನನೇಂದ್ರಿಯದ ಮೇಲಿರಿಸಿ ಸೆಟೆದು ಕೂತು ಚಿತ್ತಿನ ಏಕಾಗ್ರತೆಯಿಂದ ಭ್ರೂಮಧ್ಯದಲ್ಲಿ ದೃಷ್ಟಿಯನ್ನಿಡುವುದೇ ಸಿದ್ಧಾಸನವು.
೨. ಎರಡೂ ತೊಡೆಗಳ ಮೇಲೆ ಎರಡೂ ಪಾದಗಳನ್ನಿರಿಸಿ ಬಲಗೈಯಿಂದ ಬಲ ಹೆಬ್ಬೆರಳನ್ನು ಎಡಗೈಯಿಂದ ಎಡ ಹೆಬ್ಬೆರಳನ್ನು ಬಿಗಿಯಾಗಿ ಹಿಡಿಯುತ್ತ ಮೂಗಿನ ತುದಿಗೆ ದೃಷ್ಟಿಯನ್ನಿಡುವುದೇ ಸುಖಕರ ಪದ್ಮಾಸನವು.
೩. ವೃಷಣದಿಂದ ಕೆಳಗೆ ಎರಡೂ ಮಡವನ್ನಿರಿಸಿ ಜನನೇಂದ್ರಿಯ ಒತ್ತಿ ಎರಡೂ ಮಂಡೆಗಳನ್ನು ನೆಲಕ್ಕೂರಿ ಅವುಗಳ ಮೇಲೆ ಹಸ್ತಗಳನ್ನಿರಿಸಿ ಬಾಯಿ ತೆಗೆದು ನಾಲಿಗೆಯನ್ನು ಹೊರಚಾಚಿ ಮೂಗಿನ ತುದಿಯನ್ನು ಏಕದೃಷ್ಟಿಯಿಂದ ನೋಡುತ್ತಿರುವುದೇ ಸಿಂಹಾಸನವು.
೪.ವೃಷಣದಿಂದ ಕೆಳಗೆ ಎರಡೂ ಮಡದಿಂದ ಜನನೇಂದ್ರಿಯದ ಕೆಳಭಾಗವನ್ನು ಒತ್ತುತ್ತ ಎರಡೂ ತೋಳುಗಳಲ್ಲಿ ಎರಡೂ ತೊಡೆಗಳನ್ನು ಬಂಧಿಸುತ್ತ ಎರಡೂ ಪಾದಗಳನ್ನು ಎರಡೂ ಹಸ್ತಗಳಿಂದ ಬಿಗಿಯಾಗಿ ಹಿಡಿಯುವುದೇ ಭದ್ರಾಸನವು.
೫. ಎಡದ ಮುಂಡಿಯೂರಿ ಹಿಮ್ಮಡದೊಡನೆ ಜನನೇಂದ್ರಿಯ ಒತ್ತಿ ಬಲಪಾದವನ್ನು ಎಡ ತೊಡೆಯ ಮೇಲೆ ಇರಿಸಿ ಮೊಳಕಾಲುಗಳ ಮೇಲೆ ಕೈಗಳನ್ನು ಇಡಲು ಹಗುರು ಶರೀರವಾಗಿ ಇದಕ್ಕೆ ವೀರಾಸನವನ್ನುವರು.
೬. ಸ್ವಸ್ತಿಕಾಸನ - ಎರಡು ತೊಡೆಗಳ ಸಂಧಿಯಲ್ಲಿ ಪಾದಗಳನ್ನು ಸೇರಿಸಿ ಸೆಟೆದು ಕೂಡುವುದೇ ಸ್ವಸ್ತಿಕಾಸನವೆನಿಸುವುದು.
ಈ ಆರು ಆಸನಗಳಲ್ಲಿ ಸ್ವಸ್ತಿಕಾಸನ, ವೀರಾಸನ ಮತ್ತು ಪದ್ಮಾಸನಗಳನ್ನು ಗೃಹಸ್ಥರು ಹಾಕಬೇಕು. ಉಳಿದ ಮೂರು ಆಸನಗಳನ್ನು ಯತಿಗಳು ಹಾಕಬೇಕು.
🕉️ಪ್ರಾಣಾಯಾಮ ✡️
ತಮ್ಮ ಪ್ರಾಣಾಯಾಮಗಳು ಪ್ರಾಕೃತ, ವೈಕೃತ , ಕುಂಭಕ ಅಂತಾ ಮೂರು ಪ್ರಕಾರಗಳಾಗಿವೆ. ಪ್ರಶ್ನಶೃತಿ ಮತದ ಪ್ರಕಾರ ಹೃದಯ ಗರ್ಭದಲ್ಲಿ ನಾಲ್ಕು ಅಂಗುಲಾಕೃತಿ ತತ್ತಿಯಂತೆ ಇರುವ ಗಡ್ಡೆಯು ನಾಭಿಗೆ ಹೊಂದಿಕೊಂಡಿರುತ್ತದೆ. ಹೃದಯದಿಂದ ಆರಂಭವಾದ ಎಪ್ಪತ್ತೆರಡು ಸಾವಿರ ನಾಡಿಗಳು ದೇಹದ ತುಂಬಾ ಪಸರಿರುತ್ತವೆ ಅಂತಾ ಅಭಿಪ್ರಾಯವಾಗಿದೆ. ಆ ಗಡ್ಡೆಗೆ ಹನ್ನೆರಡು ಬೆರಳುದ್ದದ ನಾಳಕ್ಕೆ ಹನ್ನೆರಡು ದಳಯುಕ್ತ ಚಕ್ರಾಕಾರ ತಾವರೆಯ ಬಳ್ಳಿಯಂತೆ ಸುತ್ತುವರೆಯಲ್ಪಟ್ಟಿವೆ. ಅದರಲ್ಲಿ ಮೇಲಿರುವ ಎಂಟು ದಳಗಳಲ್ಲಿ ತನ್ನ ಕರ್ಮಗಳ ಫಲಕ್ಕನುಸರಿಸಿ ಜೀವನು ದಳದಿಂದ ದಳಕ್ಕೆ ಜೇಡು ತನ್ನ ತಂತಮಯವಾದ ಬಲೆಯಲ್ಲಿ ಸುತ್ತುತ್ತಿರುವಂತೆ ಸುತ್ತಾಡುವನು. ಕೋಪ, ತಾತ ಶಾಂತಿ ಇತ್ಯಾದಿ ಗುಣಗಳಿಂದ ಭವಕ್ಕೆ ಗುರಿಯಾಗುವನು.
ಕುಂಡಲಿನಿ ಸರ್ಪವು ಆ ಗಡ್ಡೆಯ ಸುತ್ತುವರೆದು ನಾಭಿಯ ಕೆಳಭಾಗದಲ್ಲಿರುವ ಮೂತ್ರರಂಧ್ರದಲ್ಲಿ ತನ್ನ ಹೆಡೆಯನ್ನು ಸೇರಿಸಿ ಆ ಗಡ್ಡೆಯನ್ನು ಬಂಧಿಸಿ ಪಶ್ಚಿಮ ದ್ವಾರದ ಬ್ರಹ್ಮರಂಧ್ರದಲ್ಲಿ ತನ್ನ ಬಾಲವನ್ನು ಸೇರಿಸಿ ಪ್ರಕಾಶಮಾನವಾಗಿರುವದು.
ಆ ಗಡ್ಡೆಯ ಬಹುನಾಡಿಗಳಲ್ಲಿ ಶ್ರೋತ್ರ, ನೇತ್ರಗಳಿಗೆ ಸಾಂಧಾರಿ, ಹಸ್ತಿ, ಜಿಹ್ವೆ, ಪೂಷೆ, ಅಲಂಬುಕ್ಷಿ, ಶುಕ್ರ ಇತ್ಯಾದಿ ಮೂವತ್ತೆರಡು ಮುಖ್ಯ ನಾಡಿಗಳಲ್ಲಿ ಮಧ್ಯದಲ್ಲಿರುವ ಬೆನ್ನುಹುರಿಯೆ ಸುಷುಮ್ನಾನಾಡಿಯು ಬ್ರಹ್ಮರಂಧ್ರದವರೆಗಿರುವುದು. ಅದರ ಬಲದಲ್ಲಿ ನಾಶಿಕದವರೆಗಿನ ನಾಡಿಯು ಪಿಂಗಳೆ ಮತ್ತು ಎಡದಲ್ಲಿ ನಾಶಕದವರೆಗಿನ ನಾಡಿ ಈಡೆಯು.
🕉️ ಪ್ರಾಕೃತ ಪ್ರಾಣಾಯಾಮ ✡️
ರೇಚಕ ಪೂರಕಗಳಿಂದ ಹೃದಯಸ್ಥಾನದಲ್ಲಿನ ಪ್ರಾಣವಾಯು ಚರಿಸುತ್ತಿರುವುದೇ ಪ್ರಾಕೃತ ಪ್ರಾಣಾಯಾಮವೆನಿಸುವುದು.
🕉️ ವೈಕೃತಿ ಪ್ರಾಣಯಾಮ🌷
ಬಳಿಕ ಶಿವಾಗಮ ವಿಧಗಳಿಂದ ರೇಚಕ ಪೂರಕ ಕುಂಭಕಗಳಿಂದ ಪ್ರಾಣವಾಯುವನ್ನು ನಿರೋಧಿಸುವುದೇ ವೈಕೃತ ಪ್ರಾಣಾಯಾಮವು.
🕉️ ಕುಂಭಕ ಪ್ರಾಣಾಯಾಮ ✡️
ರೇಚಕ ಪೂರಕಗಳಿಂದ ಮಾಡುತ್ತಿರುವ ಪ್ರಾಣಾಯಾಮ ಕ್ಷಣಮಾತ್ರ ಪ್ರಾಣ ವಾಯುವು ನಿಶ್ಚಲವಾಗಿರುವುದೇ ಕುಂಭಕ ಪ್ರಾಣಾಯಾಮವು.
ಈ ಮೂರು ಪ್ರಕಾರವಾದ ಪ್ರಾಣಾಯಾಮಗಳನ್ನು ಮಾಡುವ ಯೋಗಿಯು ಶುಚಿರ್ಭೂತನಾಗಿ ಪೂರ್ವಾಭಿಮುಖವುಳ್ಳವನಾಗಿ ಉಚಿತಾಸನದಲ್ಲಿ ನೇರವಾಗಿ ಕೂತು ಗುರುಮುಖದಿಂದ ತಿಳಿದುಕೊಂಡ ಪ್ರಕಾರ ಮಾತ್ರ ನಿಯಮಗಳಂತೆ ರೇಚಕ ಪೂರಕ ಕುಂಭಕ ಪ್ರಾಣಾಯಾಮಗಳನ್ನು ಮಾಡಬೇಕು. ಶಿವಧ್ಯಾನರಹಿತ ಮಾಡಿದ ಪ್ರಾಣಾಯಾಮ ಕನಿಷ್ಠ ಪ್ರಾಣಾಯಾಮ ಧ್ಯಾನಸಹಿತ ಮಾಡುವುದೇ ಉತ್ತಮ ಪ್ರಾಣಾಯಾಮವು.
🌺 ಉತ್ಕರ್ಷಾದಿ ಪ್ರಾಣಾಯಾಮ ✡️
ಪ್ರಾಣವಾಯುವನ್ನು ಮೂಲಾಧಾರಗತ ಅಗ್ನಿ ಮೇಲಕ್ಕೆ ಆಕುಂಚನೆ ಮಾಡಿ ಸುಷುಮ್ನಾ ಮಾರ್ಗದಿಂದ ಬ್ರಹ್ಮರಂಧ್ರದವರೆಗೆ ಹೋಗುವುದೇ ಉತ್ಕರ್ಷವೆನಿಸುವುದು.
ಆ ಮಾರ್ಗದಿಂದ ಮೂಲಾಧಾರಪರಿಯಂತೆ ಬರುವುದೇ ಅಪಕರ್ಷವು. ಮೂಲಾಧಾರದಲ್ಲಿ ನಿರೋಧಿಸುವುದು ಶೂನ್ಯವು. ಪರಕಾಯ ಪ್ರವೇಶಕ್ಕಾಗಿ ಮೂಲಾಗ್ನಿಸಹಿತ ಸುಶಮ್ನಾಮಾರ್ಗದಿಂದ ಕಪಾಲರಂಧ್ರವನ್ನು ಒಡೆದು ಹೋಗುವುದೇ ಉತ್ಕೃoತಿ ಎನಿಸುವುದು. ಇದಕ್ಕೆ ವೈಕೃತ ಪ್ರಾಣಾಯಾಮವೆನ್ನುವರು.
🕉️ ಅಜಪಾಯೋಗ 🙏
ಪ್ರಕೃತಿ ಪ್ರಾಣಾಯಾಮದ ಅಜಪಾಯೋಗದ ಸ್ವರೂಪ ಈ ಪ್ರಕಾರವಿದೆ. 'ಸ 'ಕಾರದ ಮುಂದಿನ ಮಂತ್ರಬೀಜವೇ ಬಿಂದು ಸಹಿತ ಪ್ರಾಣವಾಯುವಿನ ರೇಚಕದೊಡನೆ ಕೂಡಿ ಹೊರಗೆ ಬರುವುದು. 'ಹ'ಕಾರದ ಮುಂದಿನ ಮಂತ್ರ ಬೀಜವೆ 'ವಿಸರ್ಗ' ಸಹಿತ ಪ್ರಾಣವಾಯುವಿನ ಪೂರಕದೊಡನೆ ಕೂಡಿ ಒಳಗೆ ಪ್ರವೇಶಿಸುತ್ತಿರುವ ಮಂತ್ರವರ್ಣ ದ್ವಯವು ಸಮಸ್ತ ಪ್ರಾಣಿಗಳಿಗೆ ಇಷ್ಟಾನಿಷ್ಟಂಗಳಲ್ಲಿ ಪ್ರವೃತ್ತಿ ನಿವೃತ್ತಿಗಳಂ ಮಾಡುವ ಜೀವನವೆಂಬ ಹಂಕಾರಾತ್ಮ ಚೈತನ್ಯಗಳೊಡಗೂಡಿದ ಪ್ರಾಣವಾಯು ಜೀವದ ಜಪವೆನಿಸುವ ಗಾಯತ್ರಿಯು ಕೂಡಿ ಅವಸ್ಥಾತ್ರಯಗಳಲ್ಲಿ ಅನವರತ 'ಹಂಸ' ಎಂದು ಜಪಿಸುತ್ತಿರುವುದೇ ಅಜಪಾಯೋಗ, ಶ್ರೀ ಗುರೂಪದೇಶದಿಂದ ಪ್ರಾತಃಕಾಲ ಮತ್ತು ಸಾಯಂಕಾಲ ಪ್ರತಿನಿತ್ಯ ಇಪ್ಪತ್ತೊಂದು ಸಾವಿರದಾ ಆರುನೂರು ಸಂಖ್ಯೆಯುಳ್ಳ ಅಜಪಾ ಗಾಯತ್ರಿ ಮಂತ್ರವನ್ನು ಸ್ಮರಿಸಿದರೆ ಸಕಲ ಪಾಪರಾಶಿಗಳು ಭಸ್ಮವಾಗಿ ಪರಮಾನಂದ ಪ್ರಾಪ್ತಿಯಾಗುವುದು.
🕉️ ವೈಕೃತ ಲಯಯೋಗ (ಪ್ರಣವು)✡️
ವೈಕೃತ ಪ್ರಾಣಯಾಮದ ಲಯಯೋಗದ ಲಕ್ಷಣ - ಆ ಅಜಪಾ ಗಾಯತ್ರಿ ಮಂತ್ರದ ' ಹಂಸಃ 'ಎಂಬ ಎರಡೂ ಅಕ್ಷರಗಳು ನಾದಾನು ಸಂಧಾನದ ಕಾಲಕ್ಕೆ ಭೂಮಧ್ಯಸ್ಥಾನದಲ್ಲಿ ' ಸೋಹಂ' ಅಂತಾ ಆಗುವುದನ್ನರಿತು ಮುಂದೆ ಕೀಚಕ ಪೂರಕಗಳಿಂದ 'ಸ' 'ಹ' ಕಾರಗಳಿದ್ದು 'ಓಂ' ಕಾರ ನಾದವು ಪ್ರತಿಧ್ವನಿಸುವುದು. ಇದಕ್ಕೆ ವೈಕೃತ ಲಯಯೋಗವೆನ್ನುವರು ಅಂತಾ ಮಾಂಡೂಕ್ಯ ಉಪನಿಷತ್ತಿನ ಅಭಿಪ್ರಾಯವಾಗಿದೆ.
🕉️ ತ್ರಿಕೂಟ✡️
'ಹಂಸ' ವರ್ಣಗಳಡಗಿ 'ಓಂ' ಕಾರ ಪ್ರಣವ ಸ್ವರೂಪದ ಉದಯಕ್ಕೆ ಕಾರಣವಾದ ಭ್ರೂಮಧ್ಯಕ್ಕೆ ತ್ರಿಕೂಟವೆನ್ನುವರು. ವಾಮಭಾಗದ 'ಈಡಾ' ನಾಡಿಗೆ ಚಂದ್ರನಾಡಿಯೆಂದೂ ಯಮುನಾ ನದಿಯೆಂದೂ, ದಕ್ಷಿಣ ಭಾಗದ ಪಿಂಗಳಾನಾಡಿಗೆ ಸೂರ್ಯನಾಡಿಯೆಂದೂ ಗಂಗಾನದಿಯೆಂದೂ ಹಾಗೂ ಮಧ್ಯ ನಾಡಿಗೆ ಸುಷುಮ್ನಾ ನಾಡಿಯೆಂದು, ಅಗ್ನಿಯೆಂದೂ, ಸರಸ್ವತಿಯೆಂದೂ ಈ ಮೂರು ನದಿಗಳ ಕೂಡುವಿಕೆಯ ಸ್ಥಳ ತ್ರಿವೇಣಿಯೆಂದೂ ಯೋಗಸ್ಥಲವೆಂದೂ, ತ್ರಿಕೂಟವೆಂದು ಕರೆಯುವರು. ಮಂತ್ರ ಸಂಸ್ಕಾರವಾದ ಪ್ರಾಣ ವಾಯುವಿನೊಡನ ವಿಷಯಗಳಿಂದ ಪರಾವರ್ತನೆಯಾದ ಪರಿಶುದ್ಧ ಮನಸ್ಸಿನಿಂದ ಕೂಡಿಕೊಂಡು ತ್ರಿಕೂಟಸ್ಥಾನದಲ್ಲಿ ಸುಸ್ಥಿರನಾಗಬೇಕು.
🕉️ತ್ರಿವಿಧ ಕುಂಡಲಿ ✡️
ಪ್ರಾಣವಾಯುವಿನ ರೇಚಕದಿಂದ ಹೊರಸೂಸುವ ಈ ಶರೀರವು ಜಾಲಂಧರ ಬಂಧದಿಂದ ತಡೆಯಲಾಗಿ, ಅತಿಸೂಕ್ಷ್ಮವಾದ ಕುಂಡಲಿನಿ ಶಕ್ತಿಯು ಅಧೋಮುಖವಾಗಿ ಧ್ಯಾನಕ್ಕೆ ಅಭಿಮುಖವಾಗುವುದು.
ಆ ಪ್ರಾಣವಾಯು ತಿರುಗಿ ತನ್ನ ಸ್ಥಾನಕ್ಕೆ ಬರಲು ಮಧ್ಯಕುಂಡಲಿನೀ ಶಕ್ತಿ ತನ್ನ ಕುಟಿಲತನವನ್ನು ಬಿಡುವುದು. ಆ ಪ್ರಾಣವಾಯುವು ಮೂಲಾಧಾರಕ್ಕೆ ಅಭಿಮುಖವಾಗಲು ಅಧಃ ಕುಂಡಲಿನೀ ಶಕ್ತಿಯು ಸಂಕೋಚವಾಗುವುದು.
ಊರ್ಧ್ವ ಕುಂಡಲಿನಿ, ಮಧ್ಯಕುಂಡಲಿನಿ, ಅಧಃಕುಂಡಲಿನಿ ಅಂತಾ ಮೂರು ಪ್ರಕಾರಗಳಿರುತ್ತವೆ.
🕉️ ತ್ರಿವಿಧ ಶಕ್ತಿ ✡️
ಪರಮಪದ ಪ್ರಾಪ್ತಿಗೆ ತ್ರಿವಿಧ ಶಕ್ತಿ ಕಾರಣವಾಗುವುದು. ತ್ರಿವಿಧ ಶಕ್ತಿಗಳನ್ನು ತಿಳಿದು ಪ್ರಣವಸ್ವರೂಪನಾಗಿ ಕ್ರಮದಿಂದ ವಿಶುದ್ಧಿ, ಮಣಿಪೂರಕ, ಆಧಾರವೆಂಬ ಚಂದ್ರ ಸೂರ್ಯಾಗ್ನಿ ಆಶ್ರಯಗಳಲ್ಲಿ ಜಾಲಂಧರ ಬಂಧ, ಉಡ್ಯಾಣಬಂಧ, ಆಧಾರಬಂಧ ಇತ್ಯಾದಿಗಳನ್ನು ಮಾಡುವದು ಯೋಗಿಗೆ ನಿಯಮಗಳು.
🕉️ಮೂಲಬಂಧ ✡️
ಮಡದಿಂದ ಮಲಾಧಾರವನ್ನೊತ್ತಿ ಗುದವನ್ನು ಆಕುಂಚನ ಮಾಡುವುದೇ ಮೂಲಬಂಧವು.
🕉️ ಉಡ್ಡಿಯಾಣ ಬಂಧ ✡️
ನಾಭಿಯ ಊರ್ಧ್ವಭಾಗ ಅಧೋಭಾಗಗಳನ್ನು ಒತ್ತಾಯದಿಂದ ಬಂಧಿಸುವುದೇ ಉಡ್ಡಿಯಾಣ ಬಂಧವು.
🕉️ಜಾಲಂಧರ ಬಂಧ ✡️
ಚುಬುಕವನು ಹೃದಯಸ್ಥಾನದಲ್ಲಿರಿಸಿ ಕಂಠವನ್ನು ಸಂಕೋಚ ಮಾಡುವುದೇ ಜಾಲಂಧರ ಬಂಧವು.
🕉️ ವಜ್ರೋಳಿ ✡️
ಯೋನಿ ಮುಖದಲ್ಲಿ ಚಲಿಸುವ ಬಿಂದುವನ್ನು ಊರ್ಧ್ವ ಮುಖಕ್ಕೆ ಏರಿಸುವುದೇ ವಜ್ರೋಳಿ ಎನಿಸುವುದು.
🕉️ ಶಕ್ತಿ ಚಾಲನ ✡️
ಇಡಾನಾಡಿ ಪಿಂಗಳಾ ನಾಡಿಗಳ ಮಧ್ಯದಲ್ಲಿ ವರ್ತಿಸುವ ಕುಂಡಲಿನಿ ಶಕ್ತಿಯನ್ನೆಬ್ಬಿಸುವುದೇ ಶಕ್ತಿಚಾಲನವೆನಿಸುವುದು, ಅವುಗಳ ವಿವರ ಈ ಕೆಳಗಿನಂತಿದೆ.
೧. ಫಾತಿ :- ನಾಲ್ಕು ಅಂಗುಲ ಅಗಲವಾದ ಹದಿನೈದು ಮೊಳ ಉದ್ದದ ವಸ್ತ್ರದ ಒಂದು ತುದಿಯನ್ನು ಹೃದಯದವರೆಗೆ ನುಂಗಿ ಹೊರಗೆ ತೆಗೆಯುವುದೇ ಫಾತಿ ಎನಿಸುವುದು.
೨. ಬಸ್ತಿ :- ನಾಭಿಯವರೆಗೆ ಜಲದಲ್ಲಿ ಕುಳಿತು ಆಧಾರವನ್ನು ಆಕುಂಚನ ಮಾಡಿ ನೀರು ತೆಗೆದುಕೊಂಡು ಬಿಡುವುದೇ ಬಸ್ತಿ ಎನಿಸುವುದು.
೩. ನೇತಿ :- ಹನ್ನೆರಡು ಅಂಗಲು ಪ್ರಮಾಣದ ನೂಲನ್ನು ಮೂಗಿನಲ್ಲೇರಿಸಿ ಬಾಯಿಂದ ಹೊರತೆಗೆಯುವುದೇ ನೇತಿಯೆನಿಸುವುದು.
೪. ತ್ರಾಟಕ :- ಅತಿ ಸೂಕ್ಷ್ಮವಾದ ವಸ್ತುಗಳನ್ನು ನೇರ ದೃಷ್ಟಿಯಿಂದ ಕಣ್ಣೀರು ಬರುವ ತನಕ ನೋಡುವುದೇ ತ್ರಾಟಕ ಎನಿಸುವುದು.
೫. ನೌಲಿ :- ಕಂಭವನ್ನು ನಿಲ್ಲಿಸಿ ಎಡಚಾರಿ ಬಲಚಾರಿಯಾಗಿ ಹೊಟ್ಟೆಯನ್ನು ತಿರುಗಿಸುವುದೇ ನೌಲಿ ಎನಿಸುವುದು.
೬.ಕಪಾಲಭೂತಿ :- ಇಡಾ ಪಿಂಗಳಾ ದ್ವಾರಗಳಲ್ಲಿ ಅತಿ ತೀವ್ರವಾಗಿ ರೆಚಕ ಪೂರಕ ಮಾಡುವುದೇ ಕಲಾಪಭುತಿ ಎನಿಸುವುದು.
✡️ ಈ ಮೇಲ್ಕಾಣಿಸಿದವು ಹಠಯಾಗದ ಷಟ್ಕರ್ಮಗಳು ✡️
೭. ಮಹಾಮುಕ್ತಿ :- ಹಠಯೋಗಿಯು ಭದ್ರಾಸನಾಬದ್ಧವಾಗಿ ಪ್ರಾಣವಾಯುವನ್ನು ಕುಂಭಕ ಮಾಡಿ ಚಾಲಂಧರ ಬಂಧದಿಂದ ಬಂಧಿಸುವುದೇ ಮಹಾಮುದ್ರೆಯು
೮. ಮಹಾಬಂಧ :- ಹಠಯೋಗಿಯು ಸಿದ್ಧಾಸನಾಬದ್ಧನಾಗಿ ಪ್ರಾಣವಾಯುವನ್ನು ಕುಂಭಕ ಮಾಡಿ ಜಾಲಂಧರ ಬಂದ ಬಂಧಿಸುವುದೇ ಮಹಾಬಂಧ.
೯. ಮಹಾವೇಧ :- ಹಠಯೋಗಿಯು ಈ ಬಂಧದಲ್ಲಿ ಆನಂದದಿಂದ ಇದ್ದು ಭೂಮಿಯಲ್ಲಿ ಸಮಹಸ್ತದಿಂದ ಜನನೇಂದ್ರಿಯವನ್ನು ಹಿಮ್ಮಡದಿಂದ ತಾಡನಗೈಯ್ಯುವುದೇ ಮಹಾವೇಧ.
೧೦.ಖೇಚರಿ ಛೇದನ :- ಚಾಲನ ದೋಹನಾದಿ ಕ್ರಿಯೆಗಳಿಂದಿರುವ ಜಿಹ್ವೆಯನ್ನು ಭ್ರೂಮಧ್ಯ ಸ್ಥಾನಕ್ಕೇರಿಸಿ ಸ್ಥಿರದೃಷ್ಟಿಯಾಗಿಹುದೆ ಬಾಹ್ಯ ಖೇಚರಿಯೆನಿಸುವುದು.
ಹೇ ಯೋಗಿಯೇ ಇಲ್ಲಿಯವರೆಗೆ ಪ್ರಾಣಾಯಾಮದ ಬಗ್ಗೆ ಹೇಳಿದ್ದಾಯಿತು ಈಗ ಪ್ರತ್ಯಾಹಾರದ ವಿವರ ಕೇಳು.
🕉️ ಪ್ರತ್ಯಾಹಾರ✡️
ಕೂರ್ಮವು ತನ್ನ ತಲೆ ಕಂಠ ಪಾದ ಮುಂತಾದ ಅವಯವಗಳನ್ನು ತನ್ನ ಶರೀರದಲ್ಲಿ ಅಡಗಿಸುವಂತೆ ,ಧೀರನಾದ ಯೋಗಿ ಮಿತಾಹಾರದಿಂದ ಇದ್ದು, ವಿಷಯದಿಂದ ವಿಷಯಕ್ಕೆ ಹಾರುವ ತನ್ನ ಮನವನ್ನು ಆಯಾ ವಿಷಯಗಳಿಂದ ವಿಮುಖ ಮಾಡಿ, ತನ್ನ ಹೃದಯ ಕಮಲದಲ್ಲಿ ಕೂಡಿಸುವುದೇ ಪ್ರತ್ಯಾಹಾರವೆನಿಸುವುದು.
ಬಹಿರ್ ಮುಖವಾದ ಚಿತ್ತವನ್ನು ಅಂತರ್ ಮುಖಿಯನ್ನಾಗಿ ಮಾಡುವುದೇ ಪ್ರತ್ಯಾಹಾರ, ಹೃದಯಸ್ಥಾನದಿಂದ ಪುನಃ ಪುನಃ ಹೊರಗೆ ಬರುವ ಮನಸ್ಸು ಅಲ್ಲಿ ಸ್ಥಾಪಿಸುವುದೇ ಪ್ರತ್ಯಾಹಾರ, ಅನಾತ್ಮಕವಾದ ದೇಹೇಂದ್ರಿಗಳಲ್ಲಿಯ ಆತ್ಮಬುದ್ದಿಯನ್ನು ಅಲ್ಲಿಂದ ಬಿಡಿಸಿ ಸ್ವಸ್ವರೂಪ ಸಾಕ್ಷಾತ್ಕಾರ ಮಾಡುವುದೇ ಪ್ರತ್ಯಾಹಾರ.
🕉️ ಧ್ಯಾನಾಂಗ✡️
ಬಳಿಕ ಪ್ರತ್ಯಾಹಾರದಿಂದ ಉದಯಿಸಿದ ಸದ್ ವಾಸನಾ ಗಂಧಲೇಪನದಿಂದ ಶಿವನ ಧ್ಯಾನ ಮಾಡುವ ವಿವಿಧ ಚಕ್ರ ದಳಗಳನ್ನು ಹರ್ಷದಿಂದ ಹೇಳುವೆ. ಏಕಚಿತ್ತದಿಂದ ಕೇಳು.
ಆಧಾರ ಚಕ್ರಕ್ಕೆ ನಾಲ್ಕು ದಳಗಳು, ಸ್ವಾಧಿಷ್ಠಾನದ ಚಕ್ರಕ್ಕೆ ಆರು ದಳಗಳು, ಮಣಿಪೂರಕ್ಕೆ ಹತ್ತು ದಳಗಳು, ಅನಾಹತಕ್ಕೆ ಹನ್ನೆರಡು ದಳಗಳು, ವಿಶುದ್ದಿಗೆ ಹದಿನಾರು ದಳಗಳು,ಆಗ್ನೇಯಕ್ಕೆ ಎರಡು ದಳಗಳು. ಇವುಗಳಿಗೆ ಕಮಲಗಳು ಅಂತಾ ಕರೆಯುವರು. ಈ ಕಮಲಗಳ ಕರ್ಣಿಕಾ ಮಧ್ಯದಲ್ಲಿ ಕ್ರಮವಾಗಿ ಅರುಣ, ವಿದ್ಯುತ್, ಮಣಿ, ಸ್ವರ್ಣಜ್ಯೋತಿ, ಮಿಂಚು ಪ್ರಕಾಶ ರೂಪಂಗಳಾದ ನಕಾರ, ಮಕಾರ, ಶಿಕಾರ, ವಾಕಾರ, ಯಕಾರ, ಅಕಾರ, ಉಕಾರ, ಮಕಾರ, ಬಿಂದು ಕಳೆಗಳೆಂಬ ವರ್ಣರೂಪಗಳಾದ ಹೂವುಗಳಿಂದ ಅವುಗಳಲ್ಲಿ ಕ್ರಮವಾಗಿ ವ ಆದಿ ಸ ಅಂತ್ಯ, ಬ ಆದಿ ಲ ಅಂತ್ಯ, ಡ ಆದಿ ಫ ಅಂತ್ಯ, ಕ ಆದಿ ಠ ಅಂತ್ಯ ಅ ದಿಂದ ಕ್ರಮವಾಗಿ ಹದಿನಾರು ಸ್ವರಗಳು, ಹಂ ಕ್ಷಂ ವರ್ಣಗಳ ಸಮೂಹದಿಂದ ಆಯಾ ಕಮಲಗಳಲ್ಲಿದ್ದ ಲಿಂಗಗಳನ್ನು ಹೃದಯದಲ್ಲಿ ಮೋದದಿಂದ ಪೂಜಿಸುವುದೇ ಧ್ಯಾನಾಂಗ ಸಾಧನೆಯಾಗಿದೆ.
🕉️ ಧಾರಣಾಂಗ ✡️
ಯಮ, ನಿಯಮಗಳಿಂದ ಶುದ್ಧವಾದ ದೇಹವೆಂಬ ಪಾತ್ರೆಯಲ್ಲಿ ಪ್ರಾಣಾಯಾಮ, ಪ್ರತ್ಯಾಹಾರಗಳಿಂದ ಶುಷ್ಕವಾದ ಮನದ ಮಾರುತ ಕಾಷ್ಠಗಳನ್ನು ಜ್ವಲಿಸುವ ಧ್ಯಾನರೂಪ ಅಗ್ನಿಯಲ್ಲಿ ಸ್ಥೂಲ, ಸೂಕ್ಷ್ಮ ದಶವಿಧ ಪೃಥಿವ್ಯಾದಿ ಪಂಚಭೂತಗಳ ಧಾರಣಾ, ಸಂಗ್ರಹಣೆ, ಪಾಕ,ವ್ಯೂಹನ , ಅವಕಾಶ, ದಾನ ಮೊದಲಾದ ದಶಾಂಗರೂಪದಲ್ಲಿ ಹಾಕಿ ವಿವೇಕಿಯಾದ ಯೋಗಿಯು ಶಿವಧ್ಯಾನ ಸದ್ ವಾಸನೆಯಿಂದ ಹೊರಡುವನು. ಜಾತಿ, ಕುಲ, ಅಭಿಮಾನದ ಸ್ಥೂಲ ದೇಹಕ್ಕೆ ಪುನರಾವೃತ್ತಿ ಇಲ್ಲದಂತೆ, ಸಂಕಲ್ಪ ವಿಕಲ್ಪಾತ್ಮಕ ವಿಷಯಗಳ ಸೆಳೆತಕ್ಕೆ ಹಾರಾಡುವ ಕೀಳ ಮನಸ್ಸನ್ನು ಮುದ್ರಾ, ಕರಣ, ಬಂಧನಗಳಿಂದ ಅಂತರ್ ಮುಖಿಯನ್ನಾಗಿ ಮಾಡಿ, ತೈಲಧಾರೆಯಂತೆ ಶಿವನಧ್ಯಾನ ಮಾಡುತ್ತಾ ಅದರಲ್ಲಿ ಕರಗಿ ನಿಶ್ಚಲತೆಯನ್ನು ಹೊಂದುವದೇ ಧಾರಣಾಂಗ ಸಾಧನೆಯು.
🕉️ ಸಮಾಧಿ ಅಂಗ ✡️
ಧಾರಣಾಯೋಗ ಸಾಧಿಸಿ, ಬಿಂದುವೆಂಬ ಹೃದಯಸ್ಥಾನದಲ್ಲಿ ಕ್ರಿಯಾಶಕ್ತಿಯೇ ಪೀಠದಲ್ಲಿ ಜ್ಞಾನಶಕ್ತಿರೂಪವಾದ ಲಿಂಗವನ್ನು ಸವಿಕಲ್ಪರೂಪದಿಂ ಪುನಃ ಪುನಃ ಅರಿವ ನಿರ್ಮಲಜ್ಞಾನಗಳೆಂಬ ದೀಪಗಳಿಂದ ಮನನರೂಪ ಚೈತನ್ಯದಿಂದ ಕಂಡು ಆ ಲಿಂಗಕ್ಕೆ ಕ್ಷೀರ ಕ್ಷೀರ ಸಮರಸಭಾವದಿಂದ ಕೂಡುವುದೇ ಸಮಾಧಿಯೋಗ.
ಯೋಗಾಭ್ಯಾಸಿಗಳಾಗುವ ಸಿದ್ದಿಗಳು (ಪಾರಮಾರ್ಥಿಕ ಪ್ರಕಾಶಿಕೆಯಿಂದ)
ಈ ಪ್ರಕಾರ ಹಠಯೋಗದ ಅಷ್ಟಾಂಗ ಸಾಧನೆಗಳನ್ನು ನಿರಾಲಸ್ಯದಿಂದ ಎಡಬಿಡದೆ ಮಾಡಿದವನಿಗೆ ಆಗುವ ಸಿದ್ದಿಗಳು ಈ ಕೆಳಗಿನಂತಿವೆ.
ಮೊದಲನೇ ವರ್ಷದಲ್ಲಿ ನಿರೋಗಿಯಾಗಿ ಸಕಲ ಜನರ ಪ್ರೀತಿಗೆ ಪಾತ್ರನಾಗುವನು. ಎರಡನೇ ವರ್ಷದಲ್ಲಿ ಸಂಸ್ಕೃತ ಭಾಷೆಯ ಕವಿತ್ವ ಮಾಡುವನು. ಮೂರನೇ ವರ್ಷದಲ್ಲಿ ಸರ್ಪಾದಿ ದುಷ್ಟ ಪ್ರಾಣಿಗಳು ಬಾದೆ ಮಾಡಲಾರವು. ನಾಲ್ಕನೇ ವರ್ಷದಲ್ಲಿ ಹಸಿವು, ತೃಷಿ, ನಿದ್ರೆ, ಶೋಕ, ಮೋಹಾದಿಗಳನ್ನು ತ್ಯಾಗ ಮಾಡುವನು. ಐದನೇ ವರ್ಷದಲ್ಲಿ ದೂರ ಶ್ರವಣ, ವಾಕ್ಸಿದ್ದಿ ಪರಕಾಯ ಪ್ರವೇಶವುಳ್ಳಾತನಾಗುವನು. ಆರನೇ ವರ್ಷದಲ್ಲಿ ವಜ್ರಾದಿ ಆಯುಧಗಳಿಂದ ಭೇದಿಸಲಾರದಂತಹನಾಗಿ ಶೀಘ್ರಗಾಮಿಯಾಗಿ ದೂರದರ್ಶನವುಳ್ಳವನಾಗುವನು. ಏಳನೇ ವರ್ಷದಲ್ಲಿ ಆಕಾಶ ಗಮನವುಳ್ಳವನಾಗುವನು. ಎಂಟನೇ ವರ್ಷದಲ್ಲಿ ಅಣಿಮಾದಿ ಅಷ್ಟೈಶ್ವರ್ಯ ಸಂಪನ್ನನಾಗುವನು. ಒಂಭತ್ತನೇ ವರ್ಷದಲ್ಲಿ ಸ್ವೇಚ್ಚಾಗಮನಿಯಾಗಿ ವಜ್ರಶರೀರಿಯಾಗುವನು. ಹತ್ತನೇ ವರ್ಷದಲ್ಲಿ ಮನೋವೇಗಿಯಾಗಿ ಇಚ್ಚಾವಿಷಯಗಳನ್ನು ಪಡೆವನು. ಹನ್ನೊಂದನೇ ವರ್ಷದಲ್ಲಿ ಸಕಲ ಲೋಕಗಳ ಶಾಸನ ಮಾಡುವನು. ಹನ್ನೆರಡನೇ ವರ್ಷದಲ್ಲಿ ಶಿವಸಮಾನನಾಗಿ ಸೃಷ್ಟಿ ಸ್ಥಿತಿ ಲಯ ಮಾಡುವನು.
🕉️ ರಾಜಯೋಗ ✡️
ಮಂತ್ರಯೋಗ, ಲಯಯೋಗ ಹಠಯೋಗಗಳ ಸಾಧನೆಗಳಿಂದ ಅನೇಕ ಕಷ್ಟ ಕಾರ್ಪಣ್ಯಗಳಾದರೂ ಮನೋನಿಗ್ರಹ ಮಾತ್ರ ಸಾಧಿಸುವುದು. ಫಲಪ್ರಾಪ್ತಿಯಾಗಲಾರದು. ಪರಮ ಸದ್ಗುರುವಿನ ಅನುಗ್ರಹಕ್ಕೆ ಪಾತ್ರನಾಗಿ, ಶಿವ ಜೀವ ಐಕ್ಯತೆಯಿಂದ ದೃಢವಾದ ಬ್ರಹ್ಮ ಸಾಕ್ಷಾತ್ಕಾರವನ್ನು ಪಡೆಯಲು ರಾಜಯೋಗವನ್ನು ಸಾಧಿಸಲೇಬೇಕು. ಈ ರಾಜಯೋಗಕ್ಕೆ ಜ್ಞಾನದ ಅಷ್ಟಾಂಗ ಸಾಧನೆಗಳನ್ನು ತಿಳಿಸುವೆ. ಚಿತ್ತವಿಟ್ಟು ಕೇಳು ಅಂತಾ ಸಿದ್ಧ ಬಾಲಕನು ಆ ಹಠಯೋಗಿಗೆ ಹೇಳತೊಡಗಿದನು.
🕉️ ಯಮಾಂಗ 🌷
ಪ್ರಪಂಚಾಕಾರದ ದಶೇಂದ್ರಿಯಗಳ ವಿಷಯೋಪ ಭೋಗಗಳನ್ನು, ಶೀತೋಷ್ಣಾದಿ ಬಾಧೆಗಳನ್ನು ತಮೋಗುಣಾತ್ಮಕ ನಿದ್ರೆಯನ್ನು ತಡೆದು ಚಿತ್ತದಲ್ಲಿ ಉದಯಿಸುವ ರಾಗ ದ್ವೇಷಗಳನ್ನು ಧೀರತನದಿಂದ ಕಿತ್ತೆಸೆದು, ಸತ್ಯವನ್ನು ನುಡಿಯುವುದೇ ಯಮಾಂಗ ಸಾಧನೆಯು.
🌷 ನಿಯಮಾಂಗ🌷
ಷಡಧ್ವಾತೀತನಾಗಿ, ಶ್ರೀಗುರುವಿನಲ್ಲಿ ಭಕ್ತಿಯುಳ್ಳವನಾಗಿ, ನಿಜ ಮುಕ್ತಿ ಸ್ಥಾನದಲ್ಲಿಯ ಪ್ರಕಾಶಮಾನ ಸ್ವಯಂ ಜ್ಯೋತಿಯಲ್ಲಿ ಪ್ರೀತಿಯುಳ್ಳವನಾಗಿ, ಜನರ ಸಂಗವನ್ನು ತ್ಯಾಗ ಮಾಡಿ ವೈರಾಗ್ಯದಿಂದ ಏಕಾಂತವಾಸ ಮಾಡುತ್ತಾ, ಯಾವದೇ ಪ್ರಯತ್ನ ಇಲ್ಲದೆ ಅನಿಚ್ಚಾ ಪ್ರಾರಬ್ದದಿಂದ ಬಂದುದರಲ್ಲಿ ತೃಪ್ತಿಯಾಗುವುದು. ವಿಷಯಗಳಲ್ಲಿ ವೈರಾಗ್ಯತೆ ಮನಸ್ಸನ್ನು ಬಹಿರ್ಮುಖದಿಂದ ಪರಾವರ್ತನೆಗೊಳಿಸುವುದೇ ನಿಯಮಾಂಗ.
🕉️ ಆಸನ ✡️
ಭೋಗದಾಯಕ ಸರ್ವ ವಿಷಯಗಳನ್ನು ತ್ಯಾಗ ಮಾಡಿ, ಗುರುಮುಖದಿಂದ ಸ್ವಯಂ ಪ್ರಕಾಶಮಾನ ಸ್ವಸ್ವರೂಪವನ್ನು ತಿಳಿದು ಶ್ರೇಷ್ಟವಾದ ಅಚಲ ಸ್ವರೂಪ, ಸತ್ಯರೂಪ ಪ್ರಕಾಶಮಾನ ಸುಖಮಯನೆಂದು ನಿಶ್ಚಯಿಸುವುದೇ ಆಸನವು.
🌷 ಪ್ರಾಣಾಯಾಮ ✡️
ನಂತರ ರೇಚಕ ಪೂರಕ ಕುಂಭಕಗಳಿಂದ ಕೂಡಿದ ಪ್ರಾಣವಾಯುವಿನ ಸಂಚಾರವಿಲ್ಲದೆ ಕೇವಲ ಕುಂಭಕದಿಂದ ಪ್ರಾಣ ಸ್ಥಿರತ್ವವು, ಈ ಪ್ರಕಾರ ಅನುಸಂಧಾನ ಮಾಡುತ್ತಾ ಅನನ್ಯಭಾವದಿಂದ ಇರುವುದೇ ಪ್ರಾಣಾಯಾಮವು.
🌺 ಪ್ರತ್ಯಾಹಾರ🌷
ಪ್ರಪಂಚಾಕಾರಕ್ಕೆ ಕಾರಣವಾಗುವ ವಿಷಯಗಳೆಂಬ ತಾಮಸದ ಅನ್ನವನ್ನು ತ್ಯಾಗ ಮಾಡಿ, ಸ್ವಯಂ ಜ್ಯೋತಿ ಆತ್ಮಜ್ಞಾನವೆನಿಸುವ ರಸಭರಿತ ಸಾತ್ವಿಕಾನ್ನವನ್ನು ಭೋಜನ ಮಾಡುತ್ತಾ ತಾನು ಸಾಧಿಸಿದ ಸವಿಕಲ್ಪ ಸಮಾಧಿಯ ಯಶಸ್ಸಿನ ಸತ್ ಚಿತ್ ಆನಂದದಿಂದ ವಿಷಯಗಳಿಂದ ಮುಕ್ತನಾಗುವುದೇ ಪ್ರತ್ಯಾಹಾರವು.
🕉️ ಧ್ಯಾನ 🌷
ಪ್ರಾಕೃತ ಪ್ರಾಣಾಯಾಮದ ಹಂಸ ಮಂತ್ರಾನುಸಂಧಾನ ವೈಕೃತ ಪ್ರಾಣಾಯಾಮ ದಿಂದ ಸೋಹಂ ಎನಿಸುವುದು. ಆ ಸೋಹಂ ಎಂಬ ಮಂತ್ರ ಜ್ಞಾತೃಜ್ಞೆಯ ರೂಪಗಳಾದ ಆದಿ ಅಂತ್ಯ ವರ್ಣಗಳ ಲೋಪದಿಂದ ಓಂಕಾರ ಆಗುವುದು. ಸಕಲ ಚೈತನ್ಯದ ಅಂತರ್ಯಮಿಯಾದ ಓಂಕಾರವನ್ನು ವಿಭಾಗಿಸಲು ಅ ಕಾರವನ್ನು ಉ ಕಾರದಲ್ಲಿ ಅಡಗಿಸಿ, ಆ ಉ ಕಾರವನ್ನು ಬಿಂದುವಿನಲ್ಲಿ ಅಡಗಿಸಿ, ಬಿಂದು ಶೂನ್ಯವಾಗಲು ಪರಮವು.
ಆ ಪರಮ ಶೂನ್ಯದಲ್ಲಿ ಜೀವ ಪರಮರ ಐಕ್ಯನಾಭುವರೂಪ ಪರಮ ಸಾಯುಜ್ಯವನ್ನು ಪಡೆದ ಆತ್ಮಾರಾಮನಾಗುವದೇ ಧ್ಯಾನಾಂಗವು.
🕉️ ಧಾರಣ✡️
ಸರ್ವವೂ ನಾನಾಗಿರುವನೆಂದು ಶುದ್ದ ಚಿತ್ತದಿ ಅನುಸಂಧಾನಗೈಯುತ್ತಾ ಉನ್ನತವಾದ ಪರತತ್ವವನ್ನು ಧರಿಸುವುದೇ ಸಾಲಯಧಾರಣೆ. ಇದರ ಪರಿಪಕ್ವತೆಯೇ ನಿರಾಲಂಬಧಾರಣೆ.
🕉️ ಸಮಾಧಿ🌷
ಪಿಂಡಾಂಡರೂಪವಾದ ಸಕಲ ತತ್ವಗಳಿಗೆ ತನ್ನನ್ನು ಸಾಕ್ಷಿಕನೆಂದು ತಿಳಿದುಕೊಂಡು ಆ ಅರಿವನ್ನು ಪುನಃ ಸವಿಕಲ್ಪಕ್ಕೆ ತರದೇ, ಆ ಅಖಂಡ ವಸ್ತುವಿನಲ್ಲಿ ಸಾಯುಜ್ಯದಿಂದ ಇರುವದೇ ಸಮಾಧಿಯು.
ಆಗ ಸಿದ್ದ ಬಾಲಕನು ಹಠಯೋಗಿಯನ್ನು ಕುರಿತು ''ಅಯ್ಯಾ ಹಠಯೋಗಿಯೇ ಬಹಳ ಕಷ್ಟ ಕಾರ್ಪಣ್ಯಗಳಿಂದ ಹಠಯೋಗ ಸಾಧಿಸಿದರೂ ನಿನಗೆ ಮುಕ್ತಿ ದೊರೆಯದು. ಕಾರಣ ನೀನು ಕೈಗೊಂಡ ಮಾರ್ಗವನ್ನು ತ್ಯಾಗ ಮಾಡಿ, ಜ್ಞಾನವುಳ್ಳ ರಾಜಯೋಗವನ್ನು ಸಾಧನೆ ಮಾಡಿದಲ್ಲಿ ಪರಮ ಪದ ಪ್ರಾಪ್ತಿಯಾಗುವುದು' ಅಂತಾ ಹೇಳಿದನು.
ಆಗ ಹಠಯೋಗಿಯು "ಹೇ ಮಹಾಮಹಿಮನೆ ಹಠಯೋಗ ಸಾಧನೆಯಿಂದ ಮನಸ್ಸಿನ ವಶವಾಗುವದು. ಆದರೆ ಕೇವಲ ಜ್ಞಾನದಿಂದ ಮನಸ್ಸು ವಶವಾಗಲಾರದು. ಚಂಚಲವಾದ ಈ ಮನಸ್ಸಿನ ವಶವಾಗದಿದ್ದರೆ ಮುಕ್ತಿ ದೊರೆಯಲಾರದು. ಕಾರಣ ಚಂಚಲ ಮನಸ್ಸನ್ನು ವಶಮಾಡಿಕೊಳ್ಳಲು ಕಾರಣವಾದ ಯೋಗ ಸಾಧನೆಯಿಂದಲೇ ಮುಕ್ತಿ ದೊರೆಯುವುದು” ಅಂತಾ ಹೇಳಿದನು.
ಆಗ ಸಿದ್ದನು "ಅಯ್ಯಾ ಯೋಗಿಯೆ, ಸ್ವಾಭಾವಿಕವಾಗಿ ಡೊಂಕಾದ ನಾಯಿ ಬಾಲವನ್ನು ಒತ್ತಾಯಪೂರ್ವಕ ಕೊಳವೆಯಲ್ಲಿ ಹಾಕಿದಾಗ ಮಾತ್ರ ಸರಳವಾಗುತ್ತದೆ. ಕೊಳವೆಯಿಂದ ಆ ಬಾಲವನ್ನು ಹೊರಗೆ ತೆಗೆಯಲು ಪುನಃ ಡೊಂಕಾಗುವದು. ಅದರಂತೆ ಯೋಗ ಸಾಧನೆಯ ಸಮಯದಲ್ಲಿ ಮಾತ್ರ ಮನಸ್ಸು ಸ್ಥಿರವಾಗುವುದು. ಈ ಸಾಧನೆ ಮುಗಿಯಲು ಪುನಃ ಮನಸ್ಸು ಮೊದಲಿನಂತೆ ಚಂಚಲವಾಗುವುದು. ಹೇ ಹಠಯೋಗಿಯೇ ಕೇಳು ಕತ್ತಲಲ್ಲಿ ಅಂಕು ಡೊಂಕಾಗಿ ಕಂಡ ವಸ್ತುವನ್ನು ಹಾವು ಅಂತಾ ಭ್ರಾಂತಿಯಿಂದ ಕಂಡ ಭಯವು ಪ್ರಕಾಶ ಬಂದ ಕೂಡಲೇ ಆ ಅಂಕು ಡೊಂಕು ವಸ್ತುವು ಹಾವಲ್ಲ.
ಹಗ್ಗ ಅಂತಾ ಜ್ಞಾನ ಬಂದ ಕೂಡಲೇ ಭಯ ಹೊರಟು ಹೋಗುವುದಲ್ಲವೆ? ಈ ಪ್ರತ್ಯಕ್ಷ ಪ್ರಮಾಣದಂತೆ ಪ್ರಾಣಚಿತ್ತ ನಿರೋಧವಾಗಿ ಬ್ರಹ್ಮತ್ಮೈಕ್ಯತೆಯೆಂಬುದನ್ನು ಜ್ಞಾನಯೋಗದಿಂದ ಅರಿವಾಗುವುದಲ್ಲದೆ ಹಠಯೋಗದಿಂದಲ್ಲ, ಹಲವಾರು ಯೋಗವನ್ನೇ ಸಾರತರವಾದ ಮುಕ್ತಿಯೆನ್ನುವರು. ಈ ನುಡಿ ಸತ್ಯವೆಂದರೆ ಅದನ್ನು ಸಿದ್ದ ಮಾಡಬೇಕು. ತೋರತಕ್ಕ ಯೋಗ ತನ್ನಲ್ಲಿ ಲಯಸಿ ಹೋಗುವುದು. ಲಯವಾಗುವ ಯೋಗ ಮುಕ್ತಿಯಲ್ಲ. ತನ್ನಲ್ಲಿ ತೋರಿ ಅಡಗುವ ಯೋಗವು ಸ್ವಯಂ ಪ್ರಕಾಶಮಾನ ಆತ್ಮ ತಾನಲ್ಲ. ಕಾರಣ ಭವಬಾಧೆ ನಾಶಕ ಜ್ಞಾನಯೋಗವನ್ನು ಗುರುಮುಖದಿಂದ ತಿಳಿದು ಸಾಧಿಸಬೇಕು ಯೋಗಿಯೇ” ಅಂತಾ ಸಿದ್ಧನು ಆ ಹಠಯೋಗಿಗೆ ತಿಳುವಳಿಕೆ ಮಾಡಿ ಕೊಟ್ಟನು. ಆಗ ಹಠಯೋಗಿಗೆ ಭ್ರಾಂತಿ ನಿವಾರಣೆಯಾಗಿ ಜ್ಞಾನಯೋಗದಲ್ಲಿ ಆತನನ್ನು ಆಕರ್ಷಿಸಲು ಹರ್ಷಭರಿತನಾಗಿ ಸಿದ್ಧನನ್ನು ವಂದಿಸಿ ನಾನು ಧನ್ಯನಾದೆ. ನಿನಗೆ ಜಯವಾಗಲಿ ಅಂತಾ ಹಾರೈಸಿದನು.
ಆ ಸ್ಥಾನವನ್ನು ತ್ಯಜಿಸಿ ಸಿದ್ಧನು ಧನುಷ್ಕೋಟಿಗೆ ಆಗಮಿಸಿದನು. ಅಲ್ಲಿ ಸ್ನಾನ ಮಾಡುತ್ತಿರುವ ಯಾತ್ರಿಕರಲ್ಲಿಯ ಓರ್ವನನ್ನು ಕುರಿತು ಅಯ್ಯಾ ಯಾತ್ರಿಕನೆ, ಶುಚಿ ಅಶುಚಿ ಯಾವುದು ಅಂತಾ ತಿಳಿದುಕೊಂಡು ಸ್ನಾನ ಮಾಡುವಿ ಅಂತಾ ಕೇಳಿದನು. ಅದಕ್ಕೆ ಆ ಯಾತ್ರಿಕನು ಅಶುದ್ದವಾದ ಕಾಯಕ ಶುದ್ದಿಗಾಗಿ ಸ್ನಾನ ಮಾಡುವೆ ಎನ್ನಲು, ಸಿದ್ದನು ಅದು ಹೇಗೆ ಎನ್ನಲು ಜಾತಕಕರ್ಮದ ಆಧಾರ ಅಂತಾ ಎನಲು ಈತನು ಮೂರ್ಖನಿರುವನೆಂದು ಭಾವಿಸಿ, ಸಿದ್ಧನು ಮುಂದೆ ಸಾಗಿ ದರ್ಭಶಯನನ ಕ್ಷೇತ್ರವನ್ನು ನೋಡಿ ಮುಂದೆ ಸಂಚಾರ ಮಾಡುತ್ತಾ ತಿರ್ನಲ್ವೇಲಿಪುರಕ್ಕೆ ಬಂದು ತಿರ್ನಲ್ ಸ್ವಾಮಿಯ ಪೂಜಾದ ಆನಂದವನ್ನು ನೋಡಿ, ಆ ದೇವಾಲಯದಲ್ಲಿ ವಿಶ್ರಮಿಸಿದನು.
ಪ್ರಾಪ್ತವಾಗುವುದು
👇👇👇👇👇👇👇👇👇👇👇👇👇👇
ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
👉ಸಿದ್ಧಾರೂಢರಿಂದ ಪಿಚ್ಚಂಡಯ್ಯನ ಪ್ರಶ್ನೆಗಳಿಗೆ ಉತ್ತರ ಹಾಗೂ ಧ್ಯಾನ ಮತ್ತು ಕರ್ಮಯೋಗಿಗಳ ವಿಕ್ಷೇಪ ತಿಳಿಸಿದರು
ಎಲ್ಲಾ ಕಥೆಗಳ ಲಿಂಕಗಳು
👉ಸಿದ್ಧಾರೂಢ ಭಾಗವತ ಕಥಾ ಸಂಗ್ರಹ 👉🛃
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ
1)WhatsApp shareಗಾಗಿ click ಮಾಡಿ📲☎️
2)Facebook shareಗಾಗಿ👉
3)
«««««ಓಂ ನಮಃ ಶಿವಾಯ »»»»»»»
