ಗೋಮುಖ ತೀರ್ಥದಲ್ಲಿ ಮಾರವಾಡಿ ರೋಗ ಗುಣಪಡಿಸಿದ ಕಥೆ
☘️ ಗೋಮುಖ ತೀರ್ಥದಲ್ಲಿ ಮಾರವಾಡಿ ರೋಗ ಗುಣಪಡಿಸಿದ್ದು
☘️ ಛತ್ತೀಸಗಡ ದತ್ತ ಸಾಗಿದ್ದು 🌺
ಕೆಲ ಕಾಲದ ನಂತರ ಎಚ್ಚರಗೊಂಡ ಸಿದ್ದನು ಅಡವಿಯಿಂದ ಒಂದು ದಾರಿಗೆ ಬಂದು, ಆ ದಾರಿಯಲ್ಲಿ ಸಂಚರಿಸುತ್ತ ನಡೆದನು. ಮಾರ್ಗದಲ್ಲಿ ಓರ್ವ ಭೈರಾಗಿಯು ಕೂಡಿದನು. ಇಬ್ಬರೂ ಕೂಡಿ ಊರು ಬಂದಲ್ಲಿ ಭಿಕ್ಷೆ ಬೇಡುತ್ತಾ ನೀರು ಕಂಡಲ್ಲಿ ಊಟ ಮಾಡುತ್ತಾ ನಡೆದರು. ಸ್ವಲ್ಪ ದೂರ ಹೋಗಲು ಸಿದ್ಧನನ್ನು ಕುರಿತು ಭೈರಾಗಿಯು ಮುಂದಕ್ಕೆ ನಾವು ಹೋಗಲು ಅಲ್ಲಿ ಛತ್ತೀಸಗಡ ಬರುವದು. ಅಲ್ಲಿ ಮಂಗಗಳ ಉಪದ್ರವವಾಗುವುದು. ಕಾರಣ ಬೇರೆ ಮಾರ್ಗದಿಂದ ಬೇರೆ ಊರಿಗೆ ಹೋಗೋಣ ಅಂತಾ ಎನ್ನಲು ಸಿದ್ಧನು ಆ ಭೈರಾಗಿಗೆ ಅಯ್ಯಾ ಭೈರಾಗಿ, ನಾಶವಾಗುವ ಈ ದೇಹವನ್ನು ಎಷ್ಟು ಕಾಲ ಪೋಷಿಸುವಿ. ಈ ದೇಹವು ನಾಶವಾದರೂ ದೇಹಿಗೆ ಸಾವಿಲ್ಲ. ಕಾರಣ ನಾಶವಾಗುವ ಈ ತನುವಿನಲ್ಲಿ ನಿಷ್ಠೆಯನ್ನಿಡದೆ ಮನಸ್ಸನ್ನು ನಿತ್ಯಾತ್ಮನಲ್ಲಿ ಐಕ್ಯಗೊಳಿಸಲು ದುಃಖ ಪರಿಹಾರವಾಗುವುದು. ಹೃದಯಗನ್ನಡಿ ಎದುರಿಗೆ ನಾಶವಾಗುವ ದೇಹವಿರೆ ಭಯವು ಹಿಂಗದು. ನಿತ್ಯಾತ್ಮ ಅದರ ಸಮ್ಮುಖದಲ್ಲಿರಲು ಅಭಯವುಂಟಾಗುವುದು. ಕಾರಣ ಆತ್ಮಜ್ಞಾನ ನಿಷ್ಟರ ಹೃದಯದರ್ಪಣದಲ್ಲಿ ಹರ್ಷ ಸತ್ ಚಿತ್ ರೂಪ ನಿರ್ಗುಣ ನಿರುಪಮಾತ್ಮನಿರಲು, ಸರ್ವ ಅಭಯವಿರಲು ಯಮನ ಭಯವೇ ಅಡಗಿ ಹೋಗುವಾಗ ಕ್ಷುದ್ರವಾದ ಕಪಿ ಭಯ ಹೇಗೆ ಇರಬಲ್ಲುದು? ಅಂತ ಹೇಳುತ್ತಾ ಸಿದ್ದನು ಆ ಬೈರಾಗಿಯನ್ನು ಬಿಟ್ಟುಕೊಟ್ಟು ಅದೇ ದಾರಿಯಿಂದ ಸಾಗಿದನು. ಮುಂದೆ ಹೋಗುತ್ತಿರುವಲ್ಲಿ ಭೈರಾಗಿ ಹೇಳಿದ ಪ್ರಕಾರ ಸಿದ್ಧನನ್ನು ನೋಡುತ್ತಲೇ ಓಡುತ್ತಾ ಜಿಗಿಯುತ್ತಾ ನೂರಾರು ಮಂಗಗಳು ಬಂದು ಅವನನ್ನು ಮುತ್ತಿದವು. ತಿನ್ನುವ ವಸ್ತುಗಳಿಲ್ಲದ ದಿಗಂಬರ ಸಿದ್ಧನನ್ನು ನೋಡಿ ಆ ಮಂಗಗಳು ಓಡಿ ಹೋದವು. ಬೈರಾಗಿ ಹೇಳಿದಂತಹ ಮಂಗಗಳ
ಉಪದ್ರವವಾಗದೆ ಸಿದ್ದನು ಮುಂದೆ ನಡೆದನು.
🙏 ಸಿಂಹಾಚಲದತ್ತ ಸಾಗಿದ್ದು 🌺
ಸಂಚಾರ ಮಾಡುತ್ತಾ ಸಿದ್ದನು ಸಿಂಹಾಚಲಕೆ ಆಗಮಿಸಿದರು. ಅಲ್ಲಿರುವ ನರಸಿಂಹ ದೇವಾಲಯದಲ್ಲಿ ಪ್ರವೇಶಿಸಿದನು. ನರಸಿಂಹನ ಪೂಜಾ ಆರಂಭವಾಗಿತ್ತು. ಅಭ್ಯಂಗ ಸ್ನಾನಗೈಯಿಸಿ ಅರ್ಚಕರು ಸುವಾಸನೆಯ ಗಂಧದ ಪ್ರೇರಣೆ ಮಾಡುತ್ತಲಿದ್ದರು. ಇದನ್ನು ಕಂಡ ಸಿದ್ಧನು ತನ್ನಲ್ಲಿ ತಾನು ಸದ್ಭಾನೆಯಿಂದ ಪರಮಾತ್ಮನ ಅರ್ಚನೆ ಮಾಡುಲು ಗೋಚರನಾಗುವನು. ಹುಟ್ಟು ಸಾವುಗಳೆಂಬ ದುರ್ವಾಸನೆಗೆ ಪರಮಾತ್ಮನು ಅಗೋಚರ ಅಂತಾ ಲಕ್ಷಾರ್ಥವೆ ಗಂಧದ ಪ್ರೇಕ್ಷಣೀಯ ಸಂಕೇತವಾಗಿದೆ ಅಂತಾ ಭಾವಿಸುತ್ತಾ ಸಾವಧಾನವಾಗಿ ಹೊರಬಂದು ಗೋಮುಖ ತೀರ್ಥದಲ್ಲಿ ಕುಳಿತನು.
🌺 ಗೋಮುಖ ತೀರ್ಥದಲ್ಲಿ ಮಾರವಾಡಿ ರೋಗ ಗುಣಪಡಿಸಿದ್ದು 🌺
ಬಳಿಕ ಪರ್ವತದ ಕೆಳಭಾಗ ಪುರದಿಂದ ಓಡಿ ಬರುತ್ತಿದ್ದ ಓರ್ವನ ಹಿಂದೆ ಬೇಡಾ ಬೇಡಾ ಅಂತಾ ಕೂಗುತ್ತಾ ಬಂದ ಬಹುಜನರ ಗುಂಪನ್ನು ಕಂಡು, ಏನಿದು ಗದ್ದಲ ಅಂತಾ ಸಿದ್ಧನು ಕೇಳಿದನು. ಅವರಲ್ಲಿ ಓರ್ವನು ಹೇ, ಯತಿಯೆ ಕೇಳು ಈ ಮಾರವಾಡಿಯು ಹನ್ನೆರಡು ವರ್ಷಗಳಿಂದ ಮಹಾರೋಗದಿಂದ ಬಳಲುತ್ತಿರುವನು. ಈಗ ಉಲ್ಬಣವಾಸ್ಥೆಯಿಂದ ಬಾಧೆಯನ್ನು ಸಹಿಸಿಕೊಳ್ಳಲಿಕ್ಕಾಗದೇ ಈ ಪರ್ವತವನ್ನು ಏರಿ ಅಲ್ಲಿಂದ ಉರುಳಿ ಪ್ರಾಣತ್ಯಾಗ ಮಾಡಬೇಕೆಂದು ಹೊರಟಿರುವನು. ಬೇಡಾ ಬೇಡಾ ಅಂತ ಎಷ್ಟು ಹೇಳಿದರೂ ಕೇಳಲಿಲ್ಲ ಅಂತಾ ಹೇಳಿದನು. ಆಗ ಸಿದ್ಧನು ಅಯ್ಯಾ ಮಾರವಾಡಿಯೇ, ಇಲ್ಲಿಗೆ ಬಾ ಕಾಮಧೇನುವಿನಂತೆ ಇರುವ ಈ ಗೋಮುಖ ತೀರ್ಥ ವಿರಲು ನಿನ್ನ ರೋಗವು ಯಾಕೆ ನಾಶವಾಗಲಿಲ್ಲ. ಬಾ ಇಲ್ಲಿ ಕುಳಿತುಕೊ, ಓಂ ನಮೋ ನರಸಿಂಹಾಯ ಎಂದು ನಾಮೋಚ್ಚಾರಣೆ ಮಾಡು ಅಂತಾ ಅವರಿಂದ ನುಡಿಸುತ್ತ ತನ್ನ ಬೊಗಸೆಯಲ್ಲಿ ಆ ತೀರ್ಥದಲ್ಲಿಯ ನೀರನ್ನು ತೆಗೆದುಕೊಂಡು ಆ ರೋಗಿಯ ತಲೆಯ ಮೇಲೆ ಹಾಕಿದನು . ತಲೆಯ ಮೇಲೆ ನೀರು ಬಿದ್ದಂತೆ ರೋಗ ವಾಸಿಯಾಯಿತು.
ಸಂಪೂರ್ಣ ವಾಸಿಯಾದ ಮಾರವಾಡಿಯು, ಪೂರ್ವಜನ್ಮದ ಪುಣ್ಯದಿಂದ ನನಗೆ ದೇವ ವೈದ್ಯನಾದ ನರಸಿಂಹನೇ ಈತನ ರೂಪದಿಂದ ಬಂದು ನನ್ನ ರೋಗವನ್ನು ಗುಣ ಮಾಡಿದನು. ಧನ್ಯನಾದೆ, ಧನ್ಯನಾದೆ ಅಂತಾ ಆನಂದೋತ್ಸಾಹಗಳಿಂದ ಸಿದ್ಧನ ಪೂಜ್ಯ ಚರಣಕಮಲಗಳಲ್ಲಿ ನತಮಸ್ತಕನಾಗಿ ವಂದನೆಗಳನ್ನು ಅರ್ಪಿಸಿದನು. ಕೂಡಿದ ಪುರ ಜನರು ನಮಿಸಿದರು. ಸಿದ್ಧನನ್ನು ಪಲ್ಲಕ್ಕಿಯಲ್ಲಿ ಕೂಡ್ರಿಸಿ ಪುರದ ಪ್ರಮುಖ ನಾಲ್ಕೂ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವವನ್ನು ವೈಭವದಿಂದ ಮಾಡಿದರು. ನಂತರ ಮಾರವಾಡಿಯು ತನ್ನ ಸದನಕ್ಕೆ ಸಿದ್ಧನನ್ನು ಕರೆದೊಯ್ದು ಮೃಷ್ಟಾನ್ನ ಭೋಜನ ಮಾಡಿಸಿ ತೃಪ್ತಿಪಡಿಸಿದನು. ನಂತರ ತನ್ನ ದೇಹ, ಗೃಹ, ಧನ, ಧಾನ್ಯ, ಸಂಪತ್ತು ಸತಿ ಸುತರೆಲ್ಲರನ್ನು ಸಿದ್ದನ ಚರಣಗಳಲ್ಲಿ ಅರ್ಪಿಸಿ ತರ್ಪಣ ಬಿಡುತ್ತಾ ಇದೆಲ್ಲಾ ತಮಗೆ ಸೇರಿವೆ. ಪುನಃ ಮರೆವು ಬರಬಹುದು. ಕಾರಣ ತ್ಯಾಗ ಮಾಡಿದ ಈ ಎಲ್ಲವುಗಳನ್ನು ತಾವು ಸ್ವೀಕರಿಸಬೇಕು ಅಂತಾ ಕೇಳಿಕೊಂಡನು. ಆಗ ಸಿದ್ಧನು ಇದೆಲ್ಲ ನನ್ನ ಒಡೆತನದ್ದಾಗಿ ನಿನ್ನಲ್ಲಿ ಇರಲಿ. ದ್ರವ್ಯದೊಳಗಿನ ಅರ್ಧ ಭಾಗವನ್ನು ನಿನ್ನ ಮಕ್ಕಳಿಗೆ ಕೊಡು. ಉಳಿದರ್ಧ ಭಾಗವನ್ನು ದಾನ ಮಾಡಬೇಕು ಅಂತಾ ಹೇಳಲು ಆ ಮಾರವಾಡಿಯು ತಕ್ಷಣ ಸಂತಸದಿಂದ ಅರ್ಧಭಾಗ ದ್ರವ್ಯವನ್ನು ಅನಾಥರಿಗೆ ದಾನ ಮಾಡಿದನು.
ಪ್ರಾಪ್ತವಾಗುವುದು
👇👇👇👇👇👇👇👇👇👇👇👇👇👇
ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
👉ಸಿದ್ಧಾರೂಢರಿಂದ ಮಾರವಾಡಿಗೆ ದೇಹ ಪಂಚೀಕರಣ ಹೇಳಿದ ಕಥೆ
ಎಲ್ಲಾ ಕಥೆಗಳ ಲಿಂಕಗಳು
👉ಸಿದ್ಧಾರೂಢ ಭಾಗವತ ಕಥಾ ಸಂಗ್ರಹ 👉🛃
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ
1)WhatsApp shareಗಾಗಿ click ಮಾಡಿ📲☎️
2)Facebook shareಗಾಗಿ👉
3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚
«««««ಓಂ ನಮಃ ಶಿವಾಯ »»»»»»»
