ಗೋಕರ್ಣದಲ್ಲಿ ಸಿದ್ಧ ಮತ್ತು ಜಡಿಸಿದ್ದ ಯತಿಗಳಿಂದ ಅದ್ಭುತ ಲೀಲೆಗಳು
ಗೋಕರ್ಣದಲ್ಲಿ ಜಡಿಸಿದ್ಧ ಸ್ವಾಮಿಗಳ ಕೂಡ ಆನಂದ, ವಿಹಾರ, ಮಹಾಬಲೇಶ್ವರ ಸ್ಥಾನದಲ್ಲಿ ಜ್ಞಾನೇಶ್ವರಿಯ ಅರ್ಥವನ್ನು ಹೇಳಿದ್ದು, ನಾಗ ತೀರ್ಥದಲ್ಲಿ ಬ್ರಾಹ್ಮಣರಿಗೆ ಬೋಧಿಸಿದ್ದು
ಗೋಕರ್ಣದಲ್ಲಿ ಸಿದ್ಧ ಮತ್ತು ಜಡಿಸಿದ್ದ ಯತಿದ್ವಯರ ಲೀಲೆ 🕉️
ಗೋಕರ್ಣದಲ್ಲಿ ಕೋಟಿ ತೀರ್ಥದಲ್ಲಿ ಸಿದ್ದನು ಸ್ನಾನ ಮಾಡಿ ಪರಮ ಮಹಾ ಬಳೆಶ್ವರನ ದರ್ಶನ ಪಡೆದನು. ಗುಡಿಯಿಂದ ಹೊರಗೆ ಬಂದು ಗೋಕರ್ಣ ಕ್ಷೇತ್ರವನ್ನು ನಿರೀಕ್ಷಿಸಿದನು. ಈ ಭೂರೂಪ ಗೋವಿಗೆ ಹೊಂದಿಕೊಂಡು ಕರ್ಣವಾಗಿರುವ ಈ ಕ್ಷೇತ್ರಕ್ಕೆ ಗೋಕರ್ಣ ಅಂತಾ ಕರೆದರು. ಈ ಕ್ಷೇತ್ರವು ವೇದಗಳ ಮಹಾವಾಕ್ಯ ಶ್ರವಣಕ್ಕೆ ಬೋಧನೆಗೆ ಸೂಕ್ತ ಸ್ಥಾನವಾಗಿರುವದಲ್ಲದೆ ಮಾನವ ಮಾತ್ರನು ಉದ್ದಾರವಾಗ ತಕ್ಕ ಮುಕ್ತಿ ಮಂದಿರವಾಗಿದೆ ಅಂದುಕೊಳ್ಳುತ್ತಾ ಯಾತ್ರಿಕರನ್ನು ನೋಡುತ್ತಾ ಸಂತೋಷ ಪಡುತ್ತಾ ಸಿದ್ಧನು ಮುಂದೆ ನಡೆದನು.
ಮುಂದಕ್ಕೆ ಹೋದಾಗ ಎದುರಿಗೆ ಧವಳಾಂಗನೂ, ಕಂದು ಜಡೆಯುಳ್ಳವನೂ, ಸುಂದರ ವದನಾರವಿಂದನೂ, ಮಂದಹಾಸವುಳ್ಳವನೂ, ಹೇಮಕೂಟದಲ್ಲಿದ್ದ ದಕ್ಷಿಣಾಮೂರ್ತಿಯಂತಿದ್ದ ಜಡಿಸ್ವಾಮಿಯನ್ನು ಕಂಡನು. ಆತನ ಕೂಡ ಸಿದ್ಧನು ಕುಶಲ ಪ್ರಶ್ನೆಗಳನ್ನು ಮಾಡಿ ತನ್ನ ದಿವ್ಯದೃಷ್ಟಿಯಿಂದ ಈತನು ಜ್ಞಾನಿಯಂತಾ ನಿಶ್ಚಯಿಸಿದನು. ಆತನ ಕೈಗಳನ್ನು ಹಿಡಿದುಕೊಂಡು ಅವರಿಬ್ಬರೂ ಭಾವಪರವಶತೆಯುಳ್ಳವರಾಗಿ, ಸಮುದ್ರದತ್ತ ಸಾಗಿದರು. ಹಿಂದಕ್ಕೆ ಅಗಸ್ತ್ಯ ಮಹಾಮುನಿಯೊಬ್ಬನೇ ಬಂದು ಸಮುದ್ರದ ನೀರೆಲ್ಲವನ್ನೂ ಆಪೋಷಣೆ ಮಾಡಿ ತನ್ನ ಗರ್ವಭಂಗ ಮಾಡಿದ್ದನು. ಆದರೆ ಇಂತಹರೇ ಇರುವ ಈ ಸಲ ಇಬ್ಬರು ತಪೋಧನರು ಬಂದಿರುವರು. ಇವರಿಂದ ತನಗೇನಾದರೂ ಹಾನಿ ಸಂಭವಿಸಬಹುದೆ ಎಂಬ ಅನುಮಾನದಿಂದ ಭಯಭೀತನಾದ ಸಮುದ್ರರಾಜನು, ಮೈಮಣಿದು ಕರ ಮುಗಿದು ತಪೋಧನರ ಚರಣ ಕಮಲಗಳಲ್ಲಿ ನತಮಸ್ತಕನಾಗಿರುವ ನೆಂಬಂತೆ, ಸಮುದ್ರದ ತೆರೆಗಳು ಅವರಿಬ್ಬರ ಪಾದಗಳನ್ನು ಮುಟ್ಟಿ ತೊಳೆದವು. ಸಂತರ ಸತ್ಕಾರ ಮಾಡುವದು ರಾಜರ ಸಂತಸದ ಕರ್ತವ್ಯವು ಎಂಬಂತೆ ಶ್ರೇಷ್ಟವಾದ ಭಕ್ತಿಯಿಂದ ಎದುರುಗೊಳ್ಳಲು ಕುದುರೆ, ರಥ, ಆನೆ, ಛತ್ರ, ಚಾಮರಗಳಿಂದ ಚತುರಂಗ ಬಲದಿಂದ ಸಮುದ್ರರಾಜನು ಬರುತ್ತಿರುವನೋ ಎಂಬಂತೆ ಭೋರ್ಗರೆಯುತ್ತ ತೆರೆನೊರೆಗಳು ಬರುತ್ತಿದ್ದವು, ಮುತ್ತುಗಳನ್ನು ತಪೋಧನರ ಮೇಲೆ ತೂರುತ್ತಿರುವಂತೆ ತೊರೆಗಳ ತುಂತುರು ಹನಿಗಳು ಬೀಳುತ್ತಿದ್ದವು.
ಪಾಪಿಗಳು ಬಂದು ಬಂದು ಸ್ನಾನ ಮಾಡಿ ಸಮುದ್ರವನ್ನು ಮಲಿನಗೊಳಿಸಿದ್ದನ್ನು ತಪೋಧನರ ಪಾದಸ್ಪರ್ಶದಿಂದ ನಿರ್ಮಲವಾಗುವೆ ಅಂತಾ ತೆರೆಗಳು ಅವರ ಪಾದಗಳ ಮೇಲೆ ಅಪ್ಪಳಿಸುತ್ತಿದ್ದವು. ಸಮುದ್ರದ ತೆರೆ ನೊರೆಗಳ ಚೆಲ್ಲಾಟ ನಿರೀಕ್ಷಿಸುತ್ತಾ ಸಂತೋಷಭರಿತರಾಗಿ ಆ ತಪೋಧನರು ಊರಿನತ್ತ ಸಾಗಿದರು.
ಬಳಿಕ ತನಗೆ ಛಳಿ ಹತ್ತುತಲಿದೆ ಎಂದು ಜಡಿ ಸ್ವಾಮಿಯು ಹೇಳಿದ ಕೂಡಲೇ ಸಿದ್ದನು ಅಲ್ಲಿಯೇ ತಿಪ್ಪೆಯಲ್ಲಿ ಬಿದ್ದ ಚಾಪೆಯನ್ನು ತೆಗೆದುಕೊಂಡು ಅದಕ್ಕೆ ತೂತು ಮಾಡಿ ಜಡಿಸಿದ್ಧನ ಕೊರಳಲ್ಲಿ ಹಾಕಿದನು. ಟೆಂಗಿನಕಾಯಿ ಚಿಪ್ಪುಗಳ ಮಾಲೆ ಮಾಡಿ ಆತನ ಕೊರಳಲ್ಲಿ ಹಾಕಿ ಇದು ಶಿರಮಾಲೆ ಅಂತಾ ಅನ್ನುತ್ತಿದ್ದನು. ಅಲ್ಲಿಯೆ ಮಾರವಾಡಿ ಅಂಗಡಿಯಿಂದ ಕುಂಕುಮವನ್ನು ತಂದು ಆತನ ಹಣೆಗೆ ಹಚ್ಚಿದನು. ಬಿದ್ದ ಗಡಿಗೆಯನ್ನು ಆತನ ಕೈಯಲ್ಲಿ ಕೊಟ್ಟು, ಇದು ನಿನ್ನ ಕಮಂಡಲ ಅಂತಾ ಹೇಳಿದನು. ಹರಕು ಪೊರಕೆಯನ್ನು ತಂದು ಇದು ನವಿಲಿನ ಪಂಕಾ ಅಂತಾ ಕೊಟ್ಟನು. ಈ ಪ್ರಕಾರ ಜಡಿಸಿದ್ಧನನ್ನು ಶೃಂಗರಿಸಿ ಭೈರವನಂತೆ ಕಾಣುತ್ತಿ ಅಂತಾ ಸಿದ್ದನು ಪೇಳಿದನು. ಮುಂದೆ ಸಾಗುತ್ತಿರುವಲ್ಲಿ ತಪ್ಪಡಿ ಬಾರಿಸುವವನನ್ನು ಕರೆದು, ಬಂದ ಭಿಕ್ಷೆಯಲ್ಲಿ ನಿನಗೆ ಪಾಲು ಅಂತಾ ಒಪ್ಪಂದ ಮಾಡಿಕೊಂಡರು. ಅದಕ್ಕೆ ಒಪ್ಪಿದ ಕೂಡಲೇ ಡಂಡಣ ಅಂತಾ ತಪ್ಪಡಿ ನಾದದಲ್ಲಿ ಥೈ ಥೈ ಅಂತಾ ಜಡಿಸ್ವಾಮಿಯು ಕುಣಿಯುತ್ತಾ, ಗೆಣಸಿನ ಗಾಡಿಯ ಹತ್ತಿರ ಜೋರಾಗಿ ಕುಣಿಯತೊಡಗಿದರು. ಚಕ್ಕನ್ನಕ್ಕ ಢಂಢಣ ಎಂದು ತಪ್ಪಡಿ ಬಾರಿಸುತ್ತಿರಲು ಹಿಂದೆ ಭಾಪು ಭಾಪು ಶಬಾಸ್ ಭಲೆ ಭಲೆ ವಾಹವ್ವಾ ಅಂತಾ ಸಿದ್ಧನು ಪ್ರೋತ್ಸಾಹನೆ ಕೊಡುತ್ತಿದ್ದನು. ಪದ್ಯಗಳನ್ನು ಅನ್ನುತ್ತಾ ಸಾಗಿದರು.
ಚಕ್ಕನಕ್ಕ ಡಂಢಣ| ಚಕ್ಕನಕ್ಕ ಢಂಢಣllಪ||
ಹುಟ್ಟ ಬಂಜಿ ಹೆತ್ತಳು |ಒಳ್ಳೇ ಚಲ್ಪ ಹೆಂಣಾ || ಹುಟ್ಟು ಗುರುಡನಿಟ್ಟೆಹ | ನವಳ ಮೇಲೆ ಕಂಣಾ || ಹುಟ್ಟ ಪಂಢ ಭೋಗಿಸಿ | ಹಚ್ಚಿಕೊಂಡಾ ಹುಂಣಾ||
ಧಿಟ್ಟಜ್ಞಾನಿ ಮಾಡಿದ | ನೆಲ ಸುಟ್ಟು ಸುಂಣಾ ll1ll ಬಲ್ಲೆನೇಳ ಬಾಲೆ ನಿನ್ನ | ಯಲ್ಲಾ ಗುಕಾ|| ಕಂಬಳೀದು ಕೊಡುವೆ ನಿನಗೆ ಕುಬ್ಸದ್ ಖಣಾ||
ಕಬ್ಬಿಣದ ಸರಪಳಿಯಿಡುವೆ | ಸವ್ವಾ ಮಣಾ|| ಇಟ್ಟುಕೊಂಡು ಕುಣಿಯೆ ನೀನು ಠಣಾ ಫಣಾ||೨||
ಈ ಪ್ರಕಾರ ಪದಗಳನ್ನು ಹಾಡುತ್ತಾ ಜಡಿಸ್ವಾಮಿಗಳು ಕುಣಿಯುತ್ತಲಿರುವಾಗ ತಪ್ಪಡಿ ಬಾರಿಸುತ್ತಿರುವದನ್ನು ಕಂಡು ಸಂತಸದಿಂದ ಯಾತ್ರಿಕರೆಲ್ಲರೂ ನೋಡಲು ಮುತ್ತಿದರು. ಅಲ್ಲಿದ್ದ ಗಡಿಗೆ ತುಂಬ ಗೆಣಸುಗಳನ್ನು ಕೊಟ್ಟನು. ಅಲ್ಲಿಂದ ಅಂಗಡಿ ಅಂಗಡಿಗೆ ಹೋಗಲು ಜಿನಸುಗಳ ಭಿಕ್ಷೆ ನೀಡಿದರು. ಇಬ್ಬರೂ ತಪೋಧನರು ಹಾಗೂ ತಪ್ಪಡಿ ಬಾರಿಸುವವನು ಗೆಣಸುಗಳನ್ನು ತಿನ್ನುತ್ತಾ, ಮಹಾಬಲೇಶ್ವರನ ಗುಡಿಗೆ ಆಗಮಿಸಿದರು.
ಅಲ್ಲಿ ಒಬ್ಬ ಸಂತನು ಜ್ಞಾನೇಶ್ವರಿ ಗ್ರಂಥವನ್ನು ಓದುತ್ತಿದ್ದನು. ಭಕ್ತಿಯಿಂದ ಕೆಲವರು ಶ್ರವಣ ಮಾಡುತ್ತಿದ್ದರು. ಮೂವರು ಆ ಸ್ಥಳಕ್ಕೆ ಧಾವಿಸಿ ಸಿದ್ಧನು ನಾನು ಶಾಸ್ತ್ರ ಪ್ರವಚನವನ್ನು ಮಾಡುವೆ ಅಂತಾ ಹೇಳಲು ಅದಕ್ಕೆ ಸಂತನು ಒಪ್ಪಿ ಸಿದ್ಧನನ್ನು ಆಗ್ರಪೀಠದಲ್ಲಿ ಕುಳ್ಳಿರಿಸಿದನು.
ಆಗ ಸಿದ್ದನು ಶ್ರವಣಾಪೇಕ್ಷಿಗಳನ್ನು ಕುರಿತು ಹೇ ಶ್ರವಣಕರೆ, ಚಿತ್ತವಿಟ್ಟು ಕೇಳಿರಿ. "ಊರ್ಧ್ವಮೂಲಂ ಮೇಣಧಃ ಶಾಖಾ ಎಂಬ ಶೃತಿವಾಕ್ಯದ ಅಭಿಮತವನ್ನು ಹೇಳುವೆ.
ವೃಕ್ಷಗಳನ್ನು ನೋಡಿದ ಪ್ರಕಾರ ಮೂಲಬೇರು ಭೂಮಿಯಲ್ಲಿದ್ದು, ಆ ವೃಕ್ಷದ ಶಾಖೆಗಳೆಲ್ಲವೂ ಮೇಲ್ಬಾಗಕ್ಕಿದ್ದು, ಬೆಳವಣಿಗೆಗೆ ಭೂಮಿಯ ಬೇರಿನಿಂದಲೇ ಮೇಲೆ ಶಾಖೆಗಳಿಗೆ ನೀರಿನ ವಿತರಣೆಯಾಗುವದನ್ನು ಪ್ರತ್ಯಕ್ಷ ಪ್ರಮಾಣವಿದೆ. ಆದರೆ ಈ ಮಾನವ ದೇಹದಲ್ಲಿ ಊರ್ಧ್ವ ಭಾಗವಾದ ಶಿರಸ್ಸಿನಲ್ಲಿ ಮೂಲಬೇರು ಅದರ ಶಾಖೆಗಳು ಕೆಳಮುಖವಾಗಿ ಹರಡಿರುತ್ತವೆ. ಸಹಸ್ರಾರು ಕಮಲವುಳ್ಳ ಶಿರಸ್ಸಿನಲ್ಲಿ ಕೋಟಿ ಸೂರ್ಯ ಪ್ರಕಾಶಮಾನ ಪರಬ್ರಹ್ಮನಿರುವನು. ಆ ಸ್ಥಾನವೇ ಇಡೀ ದೇಹದ ಚಲನ ವಲನೆಯನ್ನು ನಿಯಂತ್ರಿಸುತ್ತದೆ. ಶ್ರುತಿಯಲ್ಲಿಯ ಅನೇಕ ಪೂರ್ವ ಪ್ರಶ್ನಾವಳಿಗಳನ್ನು ಸಿದ್ಧನೇ ಮಾಡಿ ಅವುಗಳನ್ನು ಉತ್ತರ ಪಕ್ಷದಿಂದ ಖಂಡನೆ ಮಾಡುತ್ತಾ ಭಕ್ತಿ, ಜ್ಞಾನ, ವೈರಾಗ್ಯ ಪರ ಅರ್ಥಗಳಿಂದ ಅನುಭವಜನ್ಯ ಮುಕ್ತಿಗಳಿಂದ ಶೃತಿಯ ಸಾರವನ್ನು ಹೇಳುತ್ತಿರುವಲ್ಲಿ ಶ್ರವಣಿಕರೆಲ್ಲರೂ ತಲೆದೂಗುತ್ತಾ ಅಪಾರವಾದ ಮೆಚ್ಚಿಗೆಯನ್ನು ವ್ಯಕ್ತಪಡಿಸಿದರು. ಜ್ಞಾನೇಶ್ವರಿಯ ಆಳವಾದ ಅರ್ಥವನ್ನು ಕೇಳಿ ಚಕಿತಗೊಂಡ ಉಪಸ್ಥಿತರಿದ್ದ ಬ್ರಾಹ್ಮಣ ಮೊದಲಾದವರೆಲ್ಲರೂ ಹರ್ಷೋದ್ಘಾರಗಳಿಂದ ಸಾಕ್ಷಾತ್ ಪರಶಿವನೇ ಈ ರೂಪದಿಂದ ಬಂದು ಶ್ರವಣಾಮೃತಪಾನ ಮಾಡಿಸಿದನು. ನಾವು ಧನ್ಯರಾದೆವು ಅಂತಾ ಸಿದ್ಧನಿಗೆ ಮಂಗಳಾರತಿ ಮಾಡಿ ಜಯ ಜಯಕಾರ ಮಾಡುತ್ತಾ ದಂಡವತ್ ಪ್ರಮಾಣ ಸಲ್ಲಿಸಿದರು.
ಆನಂದದ ಉನ್ಮಾದದಲ್ಲಿ ಅಲ್ಲಿಂದ ತೆರಳಿದರು. ದಿನದಕ್ಕಿಂತಲೂ ಹೆಚ್ಚು ಆರತಿಯಲ್ಲಿ ದಕ್ಷಿಣೆಗಳು ಬಂದವು. ವಿನೋದದಿಂದ ಸಿದ್ದನು ಈ ಆರತಿಯಲ್ಲಿ ಬಂದ ದುಡ್ಡು ನಮ್ಮದು. ನಮ್ಮ ಪ್ರವಚನದ ಪ್ರಯಾಸದಿಂದ ಈ ದುಡ್ಡನ್ನು ತೆಗೆದು ಕೊಳ್ಳುತ್ತೇವೆ ಅಂತಾ ಹೇಳುತ್ತಾ ಆರತಿ ತಾಟಿನಲ್ಲಿಯ ಎಲ್ಲ ದುಡ್ಡನ್ನು ತೆಗೆದುಕೊಂಡು ತನ್ನ ಉಡಿಯಲ್ಲಿ ಸುರುವಿಕೊಂಡನು. ಅದಕ್ಕೆ ಸಂತನು ಸಿದ್ಧನನ್ನು ಬೈದನು, ಈ ಆರತಿಯಲ್ಲಿ ಬಂದ ದುಡ್ಡು ನನ್ನದು ಅಂತಾ ಸಿದ್ದನನ್ನು ಎಳದಾಡತೊಡಗಿದನು. ಹೀಗೆ ಒಬ್ಬರಿಗೊಬ್ಬರು ಮಾಡುತ್ತಿರುವ ಜಗಳ ವಿಕೋಪಕ್ಕೆ ಹೋಯಿತು. ಆಗ ಅಲ್ಲಿಯ ಜನರ ಪೈಕಿ ಒಬ್ಬನು ಬಂದು, ಅಯ್ಯಾ ಸಂತನೆ ನೀನೊಬ್ಬನಿರುವಿ ಅವರು ಮೂವರಿರುವರು. ಬಂದ ದುಡ್ಡಿನಲ್ಲಿ ಎರಡು ಭಾಗ ಮಾಡು. ಅದರಲ್ಲಿ ಒಂದು ಭಾಗವನ್ನು ನೀನು ತೆಗೆದುಕೊ ಇನ್ನೊಂದು ಭಾಗವನ್ನು ಹರ್ಷದಿಂದ ಆ ಮೂವರು ಕೂಡಿ ತೆಗೆದು ಕೊಳ್ಳಲಿ ಅಂತಾ ಹೇಳಲು ಅದಕ್ಕೆ ಸಂತನು ಒಪ್ಪಿಕೊಂಡನು. ಇದನ್ನು ಕಂಡು ಸಿದ್ದನು ಅಯ್ಯಾ ಸಂತನೆ, ನೀನು ದೃವ್ಯ ಬಯಸುವ ಸಂತನೋ ಅಥವಾ ಶಾಂತಿಯುತ ಸಂತನೋ. ಈ ಅಲ್ಪ ಹಣಕ್ಕೆ ನೀನು ಜಗಳ ಮಾಡುವ ನೀನು ಭ್ರಾಂತಿದಾಯಕ ಮಹತ್ ವಿಷಯಗಳನ್ನು ನೀನು ಹೇಗೆ ತ್ಯಜಿಸುವಿ, ಆರೇಳು ರೂಪಾಯಿಗಳಿಗಾಗಿ ಅತ್ತರೆ ನೀನು ಸಂತನಾಗಲಾರೆ. ಶಾಸ್ತ್ರವನ್ನು ಹೇಳುವವ ಅಂತಾ ನೀನು ತಿಳಿದುಕೊಂಡರೆ ಇತರರು ನಿನಗೆ ಕಡು ಮೂರ್ಖಾ ಅಂತಾ ಕರೆಯುವರು. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಈ ಅರಿಷಡ್ವರ್ಗಗಳನ್ನು ಧಿಃಕರಿಸಿ ಶಾಂತಿಯಿಂದಿರುವಾತನೇ ನಿಜವಾದ ಸಂತನು ಅಂತಾ ವಿವರಿಸಿದನು. ನಂತರ ಸಿದ್ಧನು ತನ್ನ ಜೋಳಿಗೆಯಿಂದ ಏಳು ಭಂಗಾರದ ನಾಣ್ಯಗಳನ್ನು ತೆಗೆದು ಮಂದಹಾಸದಿಂದ ಸಂತನಿಗೆ ಕೊಟ್ಟನು. ಈ ಸಿದ್ದನ ಮಹಿಮೆಯನ್ನು ಕಂಡು ಆಶ್ಚರ್ಯಚಕಿತರಾದ ನೆರೆದ ಜನರು ಅಹಾಹಾ ಲೋಕೋದ್ಧಾರಕ್ಕಾಗಿ ಬಂದ ಶಿವನೇ ಈತನು ಅಂತಾ ಆನಂದಪಟ್ಟರು. ಈ ಪ್ರಕಾರ ನುಡಿಯುತಾ ಪರಮಾನಂದ ಭರಿತರಾಗಿ ಸಿದ್ದನಿಗೆ ನಮಿಸಿ ಅಲ್ಲಿಂದ ಹೊರಟರು.
ಬಳಿಕ ಆ ದೇವಾಲಯದ ಪಶ್ಚಿಮ ದ್ವಾರದಿಂದ ಜಡಿಸ್ವಾಮಿಯು ಕುಣಿಯುತ್ತಾ ಸಿದ್ಧನು ಭಲೆ ಭಲೆ ಎನ್ನುತ್ತ ಇನ್ನೋರ್ವನು ತಪ್ಪಡಿ ಬಾರಿಸುತ್ತಾ ಹೊರಟು ಬ್ರಾಹ್ಮಣರ ಓಣಿಗೆ ಬಂದರು. ಆಗ ಒಬ್ಬ ಬಾಹ್ಮಣನು ಪೂಜಾ ಸಾಮಗ್ರಿ, ಹಣ್ಣು ಹಂಪಲ ನೈವೇದ್ಯ ತೆಗೆದುಕೊಂಡು ಮಹಾಬಲೇಶ್ವರನಿಗೆ ಸಮರ್ಪಿಸಲು ಬರುತ್ತಿದ್ದನು. ಅವನನ್ನು ಕಂಡು ಸಿದ್ಧನು, ಅಯ್ಯಾ ಬ್ರಾಹ್ಮಣನೆ ಈ ಎಲ್ಲಾ ಪೂಜಾ ಸಾಹಿತ್ಯ ನೈವೇದ್ಯವನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತಿರುವಿ ಅಂತಾ ಕೇಳಲು ಆ ಬ್ರಾಹ್ಮಣನು ದೇವರಿಗೆ ಅರ್ಪಿಸಲು ಹೋಗುತ್ತಿರುವೆ ಅಂತಾ ಉತ್ತರಿಸಿದನು. ಸಿದ್ಧನು ಆತನನ್ನು ಕುರಿತು, ಶ್ರೇಷ್ಠರಾದ ದೇವರೇ ನಾನಿರುವಾಗ ನೀನೆಲ್ಲಿಗೆ ತೆಗೆದುಕೊಂಡು ಹೋಗುತ್ತಿರುವಿ. ನಮಗೆ ಈ ಎಲ್ಲ ನೈವೇದ್ಯ ಅರ್ಪಿಸು ಅಂತಾ ಹೇಳಿದನು. ಆಗ ಆ ಬ್ರಾಹ್ಮಣನು ಗಹಗಹಿಸಿ ನಗುತ್ತಾ, ಎಲಾ ನೀನೆಂಥಾ ದೇವನು ಅನ್ನದ ಮೇಲೆ ಆಶೆ ಇರುವ ನೀನು ದೇವರು ಹೇಗಾಗುವಿ ಅಂತಾ ಮುಂದೆ ಸಾಗಿದನು. ಅಷ್ಟರಲ್ಲಿ ಅವನನ್ನು ತಡೆಯಲು ಜಡಿಸ್ವಾಮಿಯು ಅವನನ್ನು ಮುಟ್ಟಲು ಹೋದ ಕೂಡಲೇ ಆ ಬ್ರಾಹ್ಮಣನು ಉಚ್ಛವಾದ ಧ್ವನಿಯಿಂದ ಕೂಗಲು ನೆರೆಹೊರೆಯ ಜನರೆಲ್ಲರೂ ಅಲ್ಲಿಗೆ ಧಾವಿಸಿ ಜಡಿಸ್ವಾಮಿಗೆ ಹೊಡೆಯಲು ಮುಂದಾಗಿದ್ದನ್ನು ಕಂಡು ಸಿದ್ದನು ಅವರೆಲ್ಲರನ್ನು ಕುರಿತು ಹೇ ಬ್ರಾಹ್ಮಣರೇ, ಪರಮ ಜ್ಞಾನಿಯಾದ ಈ ಜಡಿಸ್ವಾಮಿಗೆ ಹೊಡೆಯುವದು ಸರಿಯಲ್ಲ, ಪರಶಿವನು ಸರ್ವರಲ್ಲಿ ವ್ಯಾಪಕನಾಗಿರುವನು. ಈ ಪರಮ ಜ್ಞಾನಿಯ ಮುಖದಿಂದ ಅನ್ನವನ್ನು ಸೇವಿಸಿ ಪರಮಾತ್ಮನು ತೃಪ್ತಿ ಪಡುವನು. ಅದಕ್ಕೆ ಗೀತಾ ಪ್ರಮಾಣವಿದೆ.
ಅಹಂ ವೈಶ್ವಾನರೋ ಭೂತ್ವಾ|
ಪ್ರಾಣಿನಾಂ ದೇಹಮಾಶ್ರೀತ||
ಪ್ರಾಣಾಪಾನ ಸಮಾಯುಕ್ತ||
ಪಚಾಮ್ಯನ್ನಂ ಚತುರ್ವಿಧಮ್||
ಹೇ ವಿಪ್ರರೇ ಶಿಲಾಮೂರ್ತಿಯ ಮುಖದಿಂದ ಪರಮಾತ್ಮನು ಸೇವಿಸಿ ತೃಪ್ತನಾಗುವನೇ ಶಿಲೆಯು ಪರಮಾತ್ಮನಾಗುವದೇ ತಿಳಿದು ವಿಚಾರಿಸಿರಿ. ರಾಜನು ತನ್ನ ಪುಟ್ಟ ಮಗುವಿಗೆ ಆಟವಾಡಲು ಕಟ್ಟಿಗೆಯ ಆನೆಯನ್ನು ಕೊಡುವನು. ಆದರೆ ಆ ಮಗು ದೊಡ್ಡವನಾದ ಮೇಲೆ ನಿಜವಾದ ಆನೆಯನ್ನು ಬಿಟ್ಟು ಕಟ್ಟಿಗೆಯ ಆನೆಗೆ ಮೋಹಿಸುವನೆ? ಪರಮಾತ್ಮನ ನೈಜವಾದ ಇರವನ್ನು ತಿಳಿಯದ ಮಾನವರಿಗೆ ಅವರಲ್ಲಿ ಸುಪ್ತವಾದ ಭಕ್ತಿಯನ್ನು ಜಾಗೃತಿ ಮಾಡಲು ಶಿಲಾಮೂರ್ತಿಯನ್ನು ಋಷಿಮುನಿಗಳು ಸ್ಥಾಪಿಸಿ ಈ ಶಿಲಾಮೂರ್ತಿ ದೇವರು ಅಂತಾ ಬೋಧಿಸಿ ಧ್ಯಾನ ಮಾಡಲು ಹಚ್ಚಿದ್ದಾರೆ. ವಸ್ತುಸ್ಥಿತಿ ಹೀಗಿದ್ದು, ಬ್ರಾಹ್ಮಣರಾದ ನೀವು ವಿವೇಕಿಗಳು ಸಾರಾಸಾರ ವಿಚಾರ ಮಾಡಲು ಪ್ರಜ್ಞಾವಂತರಾದ ನೀವೇ ಮೂರ್ತಿ ಪೂಜೆಯಲ್ಲಿ ಆಸಕ್ತರಾಗಿ ಬ್ರಹ್ಮ ವಿದ್ಯೆಯನ್ನು ತೊರೆಯುವದು ನಿಮಗೆ ಭೂಷಣವಲ್ಲ. ಇದು ನಿಮಗೆ ಯೋಗ್ಯವಲ್ಲ. ಕಾರಣ ಜ್ಞಾನಿಗಳಾದ ಮಹಾನ್ ಸಾಧು ಸಂತರ ಪ್ರಾಣಮುಖದಿಂದ ಈಶನು ಭೋಜನ ಮಾಡಿ ತೃಪ್ತಿ ಪಡುವನು ಅಂತಾ ಅವರೆಲ್ಲರ ಮನಸ್ಸಿನಲ್ಲಿ ಒಡಮೂಡುವಂತೆ ಪ್ರಭಾವಯುತವಾಗಿ ಸಿದ್ದನು ಮನವರಿಕೆ ಮಾಡಿಕೊಟ್ಟನು.
ಆಗ ಆ ಬ್ರಾಹ್ಮಣರು ತಂದ ನೈವೇದ್ಯವನ್ನು ಆ ಜಡಿಸ್ವಾಮಿ ಮತ್ತು ಸಿದ್ಧ ತಪೋಧನರಿಗೆ ಅರ್ಪಿಸಲು ಈರ್ವರೂ ಭೋಜನ ಮಾಡಿ ತೃಪ್ತರಾದರು. ನಂತರ ಆ ಬ್ರಾಹ್ಮಣರು ಈ ತಪೋಧನರ ವಾಸಸ್ಥಾನ ಕೇಳಲು, ನಾವು ನಾಗತೀರ್ಥದಲ್ಲಿ ಇರುತ್ತೇವೆ ಅಂತಾ ಹೇಳುತ್ತಾ ಅಲ್ಲಿಂದ ಹೊರಟು ನಲಿಯುತ್ತಾ ಕುಣಿಯುತ್ತಾ ಹಣ್ಣು ಹಂಪಲ ದುಡ್ಡಿನ ಭಿಕ್ಷೆ ಪಡೆಯುತ್ತ ಸಮುದ್ರತೀರಕ್ಕೆ ಆಗಮಿಸಿ ವಿಶ್ರಮಿಸಿದರು. ಅಲ್ಲಿ ಬಂದ ಭಿಕ್ಷೆಯೆಲ್ಲವನ್ನು ಸಮುದ್ರನಾಥನ ಮುಂದೆ ಇಟ್ಟು, ನೈವೇದ್ಯ ಮಾಡಿದರು. ನಂತರ ಸಿದ್ದನು ಹಣ್ಣು ಹಂಪಲ ದುಡ್ಡು ವಗೈರೆ ಎಲ್ಲಾ ಭಿಕ್ಷೆಯನ್ನು ತಪ್ಪಡಿ ಬಾರಿಸುವವನಿಗೆ ಆನಂದದಿಂದ ಕೊಟ್ಟನು. ಅವೆಲ್ಲವುಗಳನ್ನು ಕೃತಜ್ಞತಾಪೂರ್ವಕ ಸ್ವೀಕರಿಸಿದ ತಪ್ಪಡಿಯವನು ಆನಂದದಿಂದ ನನ್ನ ಹೆಂಡತಿ ಮಕ್ಕಳಿಗೆಲ್ಲ ಬಟ್ಟೆ ತರಲು ಸಾಧ್ಯವಾಯಿತು ಅಂತಾ ಅನ್ನುತ್ತ ಆ ತಪೋಧನರಿಗೆ ದಂಡವತ್ ಪ್ರಣಾಮ ಸಲ್ಲಿಸಿ ಅಲ್ಲಿಂದ ಹೊರಟನು. ಅವರಿಬ್ಬರು ನಾಗತೀರ್ಥಕ್ಕೆ ಆಗಮಿಸಿ ಸ್ನಾನ ಮಾಡಿ ಭಿಕ್ಷೆ ಪಡೆದು ಭೋಜನ ಮಾಡಿದರು. ಇದೇ ಪ್ರಕಾರ ಅಲ್ಲಿ ಮೂರು ದಿನಗಳವರೆಗೆ ವಾಸ ಮಾಡಿದರು. ಪ್ರತಿನಿತ್ಯ ಸಾಯಂಕಾಲ ಅನೇಕ ಬ್ರಾಹ್ಮಣರು ಸಿದ್ಧನಲ್ಲಿಗೆ ಬಂದು, ತಮ್ಮಲ್ಲಿ ಒಡಮೂಡಿದ ಸಂಶಯಗಳನ್ನು ಪರಿಹರಿಸಿಕೊಂಡು, ಸಿದ್ದನ ಮುಖದಿಂದ ಕೇಳಿದ ಬೋಧಾಮೃತಪಾನ ಮಾಡಿ
ಹರ್ಷಿಸುತ್ತಿದ್ದರು.
ಪ್ರಾಪ್ತವಾಗುವುದು
👇👇👇👇👇👇👇👇👇👇👇👇👇👇
ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
👉ಗೋಕರ್ಣದಿಂದ ಹೊರಟ ಸಿದ್ಧರಿಂದ ಉಜ್ಜಯಿನಿ, ಮಥುರಾ ದರ್ಶನ
ಎಲ್ಲಾ ಕಥೆಗಳ ಲಿಂಕಗಳು
👉ಸಿದ್ಧಾರೂಢ ಭಾಗವತ ಕಥಾ ಸಂಗ್ರಹ 👉🛃
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ
1)WhatsApp shareಗಾಗಿ click ಮಾಡಿ📲☎️
2)Facebook shareಗಾಗಿ👉
3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚
«««««ಓಂ ನಮಃ ಶಿವಾಯ »»»»»»»
