ಶಿವ ದೇವಾಲಯದಲ್ಲಿ ಸಿದ್ಧನು ಗಾಯಕನಿಗೆ ಗಂಧರ್ವವೇದದ ಸಾರವನ್ನು ಹೇಳಿದ ಕಥೆ
ಗಂಧರ್ವವೇದದ ಸಾರವನ್ನು ಹೇಳಿದ್ದು 🌺
ಮಾರನೇ ದಿನ ಪ್ರಾತಃಕಾಲ ಆ ಸಾಹುಕಾರರಿಂದ ಬೀಳ್ಕೊಂಡು ಸಿದ್ಧನು ವಾಯು ವೇಗದಿಂದ ಮುಂದೆ ಪ್ರಯಾಣ ಮಾಡುತ್ತಾ ಗಯಾ ಕ್ಷೇತ್ರದತ್ತ ಸಾಗಿದನು. ಗಯಾ ಕ್ಷೇತ್ರಕ್ಕೆ ಬರುವ ಮಾರ್ಗದಲ್ಲಿ ಮಹಾನಗರವನ್ನು ಕಂಡು ಅಲ್ಲಿಯ
ಶಿವದೇವಾಲಯದಲ್ಲಿ ಸಿದ್ಧನು ವಿಶ್ರಾಂತಿ ಮಾಡಿದನು. ಪ್ರಾತಃಕಾಲ ಎಚ್ಚರವಾಯಿತು. ಈಶ್ವರನ ಪೂಜಾ ಪ್ರಾರಂಭವಾಗಿತ್ತು. ನಗಾರಿ, ಭೇರಿ ಮುಂತಾದ ವಾದ್ಯಗಳನ್ನು ಬಾರಿಸತೊಡಗಿದರು. ನಂತರ ಗಾಯಕನು ಗಾಯನವನ್ನು ಆರಂಭಿಸಿದನು. ಹಲ್ಲು ತೆಗೆಯುತ್ತಾ ಭೈರವಿ ರಾಗದಲ್ಲಿ ಹಾಡಿದ್ದನ್ನು ಆಲಿಸಿದ ಸಿದ್ಧನು ಮುಂದೆ ಬಂದು, ಆತನನ್ನು ಕುರಿತು, ಅಯ್ಯಾ ಗಾಯಕನೇ, ಈಗ ಪರಶಿವನ ಪೂಜಾ ಸಮಯವಾಗಿರುವುದರಿಂದ ನೀನು ಶಂಕರಾಭರಣದಲ್ಲಿ ಹಾಡುವದೇ ಯೋಗ್ಯ. ಯಾಕೆಂದರೆ ಉದರದಲ್ಲಿಯ ಕುಂಡಲಿನೀ ಸರ್ಪವು ನಾಭಿಯನ್ನು ಸುತ್ತಿ ಮೇಲ್ಮುಖವಾಗಿ ನಡೆಯುವುದು, ಬೆನ್ನುಹುರಿಯಿಂದ ಹಾಯ್ದು ಬ್ರಹ್ಮರಂದ್ರಕ್ಕೆ ಸತ್ಯವಾಗಿಯೂ ಸೇರುವದು. ಈ ಶರೀರದಲ್ಲಿಯ ಆತ್ಮರೂಪ ಪರಮ ಶಂಕರನಿಗೆ ಉಗಾಭರಣವಾಗುವದು. ಕಾರಣ ಈ ಸಮಯದಲ್ಲಿ ಶಂಕರಾಭರಣ ರಾಗದಲ್ಲಿ ಹಾಡುತ್ತಾ ಪರಮಾತ್ಮನ ಕೃಪೆಗೆ ಪಾತ್ರರಾಗಬೇಕು ಅಂತಾ ಹೇಳಲು ಅದಕ್ಕೆ ಸಮ್ಮತಿಸಿ ಆ ಗಾಯಕನು ಶಂಕರಾಭರಣ ರಾಗದಲ್ಲಿ ತನ್ಮಯತೆಯಿಂದ ಗಾಯನಮಾಡಿದನು. ನಂತರ ಸಿದ್ದನನ್ನು ಕುರಿತು ಹೇ ಯತಿಗಳೇ , ನನಗೆ ಸರಿಯಾದ ಮಾರ್ಗದರ್ಶನ ಮಾಡಿದ್ದಕ್ಕೆ ತಮಗೆ ಕೃತಜ್ಞತೆಗಳು. ಎಲ್ಲ ರಾಗಗಳ ಜನ್ಮಸ್ಥಾನವನ್ನು ತಿಳಿಸಿ ನನ್ನನ್ನು ಧನ್ಯನನ್ನಾಗಿ ಮಾಡಬೇಕೆಂದು ಭಯಭಕ್ತಿಯಿಂದ ಪ್ರಾರ್ಥಿಸಿದನು. ಆಗ ಅವನ ವಿನಮ್ರತೆಗೆ ಸಂತೋಷಪಟ್ಟ ಸಿದ್ಧನು ಗಂಧರ್ವ ವೇದದ ಸಾರವನ್ನು ತಿಳಿಸಿತೊಡಗಿದನು.
ಹೇ ಗಾಯಕನೇ ಲಕ್ಷ್ಯಕೊಟ್ಟು ಕೇಳು. ಪರಶಿವನಿಗೆ ಖ್ಯಾತವಾದ ಈಶ್ವರ, ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ, ಈಶಾನ್ಯ ಮತ್ತು ನಿರಂಗ ಅಂತಾ ಏಳು ಮುಖಗಳಿವೆ. ಇವುಗಳಿಂದ ಹೊರಡುವ ಸ್ವರಗಳು ಷಡ್ಜ, ಋಷಭ, ಗಾಂಧಾರ, ಮಧ್ಯಮ, ಪಂಚಮ, ಧೈವತ ಮತ್ತು ನಿಷಾದ ಅಂತಾ ಇವೆ, ಮಾನವರಲ್ಲಿಯ ಕಂಠದಲ್ಲಿ ಷಡ್ಜ, ಶಿರಸ್ಸಿನಲ್ಲಿ ಋಷಭ, ನಾಸಿಕದಲ್ಲಿ ಗಾಂಧಾರ, ಹೃದಯದಲ್ಲಿ ಮಧ್ಯಮ, ಮುಖದೊಳಗೆ ಪಂಚಮ, ಕಿರಿ ನಾಲಿಗೆಯ ಸ್ಥಾನದಲ್ಲಿ ಧೈವತ ಮತ್ತು ಪೂರ್ವಾಂಗದಲ್ಲಿ ನಿಷಾದವು ಉದಯಿಸುತ್ತವೆ. (ಸ, ರಿ, ಗ, ಮ, ಪ, ದ, ನಿ.)
ಇವುಗಳನ್ನು ಹಾಡುವ ಕಾಲವನ್ನು ಹೇಳುವೆ ತಿಳಿದುಕೊ, ಮಧ್ಯಾಹ್ನ ಷಡ್ಜಕ್ಕೆ, ಅಪರಾಹ್ನ ಋಷಭಕ್ಕೆ, ಸಾಯಂಕಾಲ ಗಾಂಧಾರಕ್ಕೆ, ಪ್ರಥಮ ರಾತ್ರಿ ಮಧ್ಯಮಕ್ಕೆ, ಅಪರಾತ್ರಿ ಪಂಚಮಕ್ಕೆ, ರಾತ್ರಿ ದೈವತಕ್ಕೆ ಮತ್ತು ಪ್ರಾತಃಕಾಲವೂ ನಿಷೇಧಕ್ಕೆ ಸಕಾಲಿಕವಾಗಿವೆ. ಈ ಸಪ್ತ ಸ್ವರಗಳಿಗೆ ಕ್ರಮವಾಗಿ ಹೋಲಿಕೆಗೆ ಪ್ರಾಣಿಗಳ ಸ್ವರವನ್ನು ಕೇಳು. ಅಂದರೆ ನವಿಲಿನ ಕೇಕೆ, ಗೂಳಿಯ ಗಂಭೀರರವ, ಕ್ರೌಂಚಪಕ್ಷಿಯ ಇನಿದಾದ ಸ್ವರ, ಕೋಗಿಲೆಯ ಇಂಪಾದ ಗಾನ, ಕುದುರೆಯ ಹುಂಕಾರ, ಆನೆ ಒದರುವ ಬೃಂಹಣ ಸ್ವರ ಹಾಗೂ ಗಾರ್ಧಭದ ಧ್ವನಿ ಹೀಗಿರುವವು, ಸ, ರಿ, ಗ, ಮ, ಪ, ದ, ನಿ ಅಂತಾ ಸಂಜ್ಞಾಕ್ಷರಗಳಿವೆ. ಇವುಗಳನ್ನೇ ಉಚ್ಚರಿಸುತ್ತಾ ಗಾಯಕರು ಗಾಯನ ಮಾಡುವವರು.
ಈ ಸ್ವರಗಳ ಗುಣವನ್ನು ತಿಳಿದುಕೊ. ನಿರಂತರವು ಪಂಚಮ ಮತ್ತು ಷಡ್ಜಗಳು ನಿರ್ವಿಕಾರಗಳಾಗಿವೆ, ಇವುಗಳಿಗೆ ನಿರ್ವಿಕಾರವಾಗಿದ್ದರಿಂದ ಪ್ರಕೃತಿ ಸ್ವರಗಳೆಂದು ಕರೆಯುವರು. ಉಳಿದವುಗಳಿಗೆ ವಿಕಾರಗಳಾಗಿರುವುದರಿಂದ ಪ್ರಕೃತಿ-ವಿಕೃತಿ ಕೂಡುವಿಕೆಯ ಮಿಶ್ರ ಸ್ವರಗಳೆಂದು ಕರೆಯುವರು. ಹೇ ಗಾಯಕನೇ ಆಲಿಸು, ಹರ್ಷದಿಂದ ಸಂಗೀತ ವಿದ್ಯೆಯನ್ನು ಕಲಿಯಬೇಕೆಂಬ ಹವ್ಯಾಸವಿದ್ದಲ್ಲಿ ನಿತ್ಯ ಪ್ರಕೃತಿ ಹಾಗೂ ವಿಕೃತಿ ಸ್ವರಗಳ ಜ್ಞಾನವನ್ನು ಪ್ರಥಮವಾಗಿ ಮಾಡಿಕೊಳ್ಳಬೇಕು. ನಿತ್ಯ ಪ್ರಕೃತಿ ಸ್ವರಗಳಾದ ಷಡ್ಜ ಮತ್ತು ಪಂಚಮ ಸ್ವರಗಳಿಗೆ ವಿಕಾರವಿಲ್ಲವು, ಋಷಭದಲ್ಲಿ ಶುದ್ಧ ಋಷಭ, ಚತುಶೃತಿ ಋಷಭ ಮತ್ತು ಷಡ್ ಶೃತಿ ಋಷಭ ಅಂತಾ ಮೂರು ವಿಧಗಳಾಗಿವೆ. ಗಾಂಧಾರ ಪ್ರಸಿದ್ಧ, ಸಾಧಾರಣ ಮತ್ತು ಅಂತರ್ಮುಖ ಅಂತಾ ಮೂರು ವಿಧವಾಗಿವೆ. ಮಧ್ಯಮವು ಶುದ್ಧ ಮಧ್ಯಮ, ಪ್ರತಿ ಮಧ್ಯಮ ಹೀಗೆ ಎರಡು ವಿಧವಾಗಿವೆ. ದೈವತ್ವವು ಶುದ್ಧ ದೈವತ, ಚತುಶ್ರುತಿ ದೈವತ ಹಾಗೂ ಸರಸವಾದ ಷಡ್‌ಶೃತಿ ದೈವತ ಅಂತಾ ಮೂರು ವಿಧವಾಗಿವೆ. ನಿಷೇಧವು ಶುದ್ಧ ನಿಷಾಧ, ಕೈಶಿಕ ನಿಷಾಧ ಮತ್ತು ಕಾಕಲಿ ನಿಷಾಧ ಅಂತಾ ಮೂರು ವಿಧವಾಗಿರುವದು.
ಇನ್ನು ವಿಕೃತಿ ಪ್ರಕೃತಿಗಳ ಮಿಶ್ರಣದಿಂದ ಹನ್ನೆರಡು ಸ್ವರಗಳ ಸ್ಥಾನಗಳಿರುವವು. ಅವುಗಳನ್ನು ಹದಿನಾರು ಸ್ಥಾನಗಳವರೆಗೆ ಹೆಚ್ಚಿಸುತ್ತಾ ಆಯಾ ಸ್ಥಾನಗಳನ್ನು ಏರಿಸುತ್ತಾ ಸ್ವರ ಉಚ್ಚಾರಣೆಗೆ ಆರೋಹಣವೆನ್ನುವರು. ಏರಿದ ತಾಣದಿಂದ ಕ್ರಮವತ್ ಇಳಿಯುತ್ತಾ ಷಡ್ಜವರೆಗೆ ಬರಲು ಅವರೋಹಣವೆನ್ನುವರು. ಆರೋಹಣ ಮತ್ತು ಅವರೋಹಣಗಳನ್ನು ನುಡಿಯುತ್ತಿರುವಾಗ ತಾನಗಳು ಹೊರಡುವವು. ಈ ತಾನ ಅಂದರೆ ಮೂರ್ಛನೆ ಗಳಲ್ಲಿಯೇ ಭೈರವ ಮುಂತಾದ ರಾಗಗಳು ಹೊರಹೊಮ್ಮುವವು. ಈ ಪ್ರಕಾರ ಸರಸವಾಗಿ ಇಂಪಾದ ಸಂಗೀತ ಸುಧೆಯು ಇಂಪಾಗಿ ಮನಸ್ಸಿಗೆ ಆಹ್ಲಾದವನ್ನುಂಟು ಮಾಡುವದು. ಇದಕ್ಕೆ ಜಂಟಿಯಾಗಿ ಅಲಂಕಾರ ಸಾಹಿತ್ಯಾದಿಗಳನ್ನು ವಿಚಾರಿಸಲು ಗಾಯನ, ವಾದನ, ತಾಳ, ಕಾಲಗತಿ ಮುಂತಾಗಿ ಅವಶ್ಯವಾಗಿರುವುದು.
🙏 ಗಾಯನವಾದನಗಳಿಗೆ ತಾಳಗಳು 🌺
ಅಯ್ಯಾ ಗಾಯಕ ಶಿರೋಮಣಿಯೇ, ಗಾಯನದ ವಿವಿಧ ಅಂಗಗಳನ್ನು ತಿಳುವಳಿಕೆಯೊಂದಿಗೆ ಅದಕ್ಕೆ ರಸವತ್ತಾದ ಇಂಪು ಬರಲು ತಾಳಗಳು ಅವಶ್ಯವಾಗಿವೆ. ಅವುಗಳನ್ನು ಹೇಳುವೆ. ಚಿತ್ತವಿಟ್ಟು ಕೇಳು. ತಾಳಗಳಲ್ಲಿ ಧೃವ, ಮಠ್ಯ , ರೂಪಕ, ಝಂಪಾ ತ್ರಿವಟ, ನಟ್ ಹಾಗೂ ಯಕ್ಕಾ ಎಂಬ ಮುಖ್ಯ ಸಪ್ತ ತಾಳಗಳು. ಅವುಗಳಿಗೆ ಆರು ಅಂಗಗಳಿವೆ. ಅನುದೃತ, ದೃತ, ಲಘು, ಕಾಕಪದ, ಗುರು, ಸುಪ್ಲುತಗಳಾಗಿವೆ ಮತ್ತು ಚತುಃಶ್ರ, ತ್ರಿಶ್ರ, ಮಿಶ್ರ, ಖಂಡ ಸಂಕೀರ್ಣ ಅಂತಾ ಐದು ಪ್ರಕಾರದ ಜಾತಿಯ ತಾಳಗಳಾಗಿವೆ. ಒಂದು ಪೆಟ್ಟು ಮೂರು ಮಾತ್ರೆಗಳಿಂದ ಲಘುವಿರಲು ಚತುಃ ಶ್ರವವಾಗಿದೆ. ಒಂದು ಪೆಟ್ಟು ಎರಡು ಮಾತ್ರೆ ಲಘುವಿರಲು ತ್ರಿಶ್ರವವಾಗಿದೆ. ಒಂದು ಘಾತ ಆರು ಮಾತ್ರೆಗಳಿಂದ ಲಘುವಿದ್ದರೆ ಮಿಶ್ರ ಜಾತಿಯದು. ಒಂದು ಘಾತ ನಾಲ್ಕು ಮಾತ್ರೆ ಲಘುವಿದ್ದರೆ ಖಂಡಜಾತಿ. ಒಂದು ಘಾತ, ಎಂಟು ಮಾತ್ರೆಗಳಿಂದ ಲಘುವಿದ್ದರೆ ಸಂಕೀರ್ಣ ಜಾತಿ ಎನ್ನುವರು. ಮುಂದೆ ಅನಧ್ರುತಕ್ಕೆ ಘಾತ ಒಂದೇ ಇರುವದು. ಧೃತಕ್ಕೆ ಒಂದು ಪೆಟ್ಟು ಹುಸಿ ಮತ್ತೊಂದು ದಿಟ ಹೀಗೆ ಎರಡು ಇರುವವು. ಇದಕ್ಕೆ ಮೊದಲು ಒಂದು ಲಘುಬಿದ್ದು ಬಳಿಕ ತಾನೊಂದು ಧೃತ ತಾಟರೀತಿ ಇದ್ದು ಬಳಿಕ ಲಘು ಎರಡಿದ್ದರೆ ಧೃವತಾಳವೆನಿಸುವದು. ಬಳಿಕ ಮೊದಲೊಂದು ಲಘು, ನಂತರ ಒಂದು ಧೃತ ನಂತರ ಒಂದು ಲಘುವಿರಲು ಅದಕ್ಕೆ ಮಠ್ಯ ತಾಳವೆನ್ನುತ್ತಾರೆ. ಬಳಿಕ ಮೊದಲೊಂದು ಧೃತ ನಂತರ ಲಘುವಿದ್ದರೆ ಅದಕ್ಕೆ ರೂಪಕ ತಾಳವೆನ್ನುವರು. ಮೊದಲಿಗೆ ಒಂದು ಲಘು ನಂತರ ಅನದೃತ ಹಾಗೂ ಧೃತವಿದ್ದರೆ ಝ0ಪಾ ತಾಳವೆನ್ನುವರು. ಮೊದಲಿಗೆ ಒಂದು ಲಘು ನಂತರ ಎರಡು ಧೃತಗಳಿದ್ದರೆ ಅದಕ್ಕೆ ತ್ರಿವಟ ತಾಳವೆನ್ನುವರು. ಮೊದಲಿಗೆ ಎರಡು ಲಘು, ಎರಡು ಧೃತಗಳಿದ್ದರೆ ಅದಕ್ಕೆ ನಟ್ ತಾಳವೆನ್ನುವರು. ಲಘು ಒಂದೇ ಇದ್ದರೆ ಅದಕ್ಕೆ ಯಕ್ಕಾ ತಾಳ (ಏಕತಾಳ) ಅನ್ನುವವರು. ಈ ಏಳು ತಾಳಗಳಿಗೂ ಮುಖ್ಯ ಅಂಗವೆನಿಸುವ ಲಘುವಿಗೆ ಐದು ಜಾತಿಗಳ ಅಳತೆಗಳಿಂದ ಮೂವತ್ತೈದು ಪ್ರಕಾರದ ತಾಳಗಳಾಗಿರುವವು ಅಂತ ತಾಳಗಳ ತಿಳುವಳಿಕೆ ನೀಡುತ್ತಿದ್ದ ಸಿದ್ಧನಲ್ಲಿ ಆಶ್ಚರ್ಯಕರವಾದ ಸಂಗೀತಜ್ಞಾನ ಕರಗತವಾಗಿರುವ ಅವಿಸ್ಮರಣೀಯವಾಗಿದೆ.
ಪುನಃ ಸಿದ್ಧನು, ಅಯ್ಯಾ ಗಾಯಕನೇ ಕೇಳು, ಹ್ರಸ್ವ ಅಕ್ಷರವನ್ನು ಉಚ್ಚರಿಸುವ ಕಾಲಕ್ಕೆ ಒಂದು ಮಾತ್ರೆ ಇರುವದು. ವಿಸರ್ಗ, ಅನುಸ್ವಾರ, ದೀರ್ಘ ಮತ್ತು ಸಂಯುಕ್ತ ಸ್ವರಗಳನ್ನು ಉಚ್ಚರಿಸುವ ಕಾಲಕ್ಕೆ ಎರಡು ಮಾತ್ರೆಗಳಿರುವವು. ಈ ಮಾತ್ರಾ ಕ್ರಮಗಳ ಸಮೂಹಕ್ಕೆ ತಾಳವೆನ್ನುವರು. ಸರಳವಾದ ಚತುರಶ್ರ ಜಾತಿಯ ತ್ರಿವಟ ತಾಳವನ್ನು ವಿಚಾರ ಮಾಡಿ ನೋಡಿದಾಗ ಅದು ಆದಿತಾಳವೆನಿಸುವುದು. ಹರ್ಷದಿಂದ ಮಾತ್ರೆಗಳನ್ನು ಉಚ್ಚರಿಸಿದಂತೆ ಕಾಲ ನಡೆಯುತ್ತವೆ. ಅದು ಆರು ಕಾಲಗಳಿವೆ. ಒಂದೊಂದೇ ಮಾತ್ರೆಯನ್ನು ಸಾವಧಾನದಿಂದ ನುಡಿಯಲು ಇದು ಪ್ರಥಮ ಕಾಲವಾಗುವದು. ಒಂದು ಮಾತ್ರೆಯ ಬದಲಾಗಿ ಎರಡು ಮಾತ್ರೆಗಳನ್ನು ನುಡಿಯಲು ಎರಡನೇ ಕಾಲವಾಗುವದು. ನಾಲ್ಕು ಮಾತ್ರೆಗಳನ್ನು ನುಡಿಯಲು ಮೂರನೇ ಕಾಲವಾಗುವದು. ಎಂಟು ಮಾತ್ರೆಗಳನ್ನು ನುಡಿಯಲು ನಾಲ್ಕನೇ ಕಾಲವಾಗುವದು. ಹದಿನಾರು ಮಾತ್ರೆಗಳನ್ನು ನುಡಿಯಲು ಐದನೇ ಕಾಲವಾಗುವದು. ಮೂವತ್ತೆರಡು ಮಾತ್ರೆಗಳನ್ನು ನುಡಿಯಲು ಆರನೇ ಕಾಲವಾಗುವದು. ಈ ಎಲ್ಲ ಮಾತ್ರೆಗಳ ಉದಯದ ತಾಣದಲ್ಲಿ ಆ ಎಲ್ಲ ಮಾತ್ರೆಗಳು ಲಯವಾದಲ್ಲಿ ಪರಶಿವನ ಕೃಪಾಶೀರ್ವಾದದಿಂದ ಗಾಯಕನಿಗೆ ಜ್ಞಾನವಾಗಿ ಮುಕ್ತಿಯು ದೊರೆಯುವದು. ಪರಶಿವನ ಪ್ರೀತಿ ಸಂಪಾದನೆಗಾಗಿ ಸ್ವರವನ್ನು ದಂಡಿಸಬೇಕು. ಮಾನವರನ್ನು ಒಲಿಸಲು ಸ್ವರವನ್ನು ದಂಡಿಸಬಾರದು. ಇದು ಸತ್ಯ. ನೋಡು, ಹೇ ಗಾಯಕನೇ ಈ ಶಾಸ್ತ್ರೋಕ್ತ ಸಂಗೀತ ಕಲೆಯು ಬಹು ಕಠಿಣವಾಗಿದೆ. ಗುರುಮುಖೇನ ತಿಳಿದುಕೊಂಡು ಆತನ ಮಾರ್ಗದರ್ಶನದಂತೆ ನಿರಂತರವಾಗಿ ಸಾಧನಗಳನ್ನು ಮಾಡಿದಲ್ಲಿ ದೈವಕೃಪೆಯಿಂದ ಸಂಗೀತ ವಿದ್ಯೆಯು ಕರಗತವಾಗುವದು ಅಂತಾ ವಿವರವಾಗಿ ಹೇಳಿದನು.
ಸಿದ್ಧನು ಚಿಕ್ಕ ವಯಸ್ಸಿನಲ್ಲಿ ಹೇಳಿದ ಗಂಧರ್ವ ಶಾಸ್ತ್ರದ ಗರ್ಭದಲ್ಲಿ ಅಡಗಿದ ಸಂಗೀತ ಕಲೆಯ ಶಾಸ್ತ್ರೋಕ್ತ ವಿವರಕ್ಕೆ ತಲೆದೂಗಿದ ಗಾಯಕ ಮತ್ತು ಸಂಗಡಿಗರು ಈತನು ಸಾಕ್ಷಾತ್ ಈಶ್ವರನ ಅವತಾರಿ ಅಂತಾ ಜಯ ಜಯಕಾರ ಮಾಡುತ್ತಾ ವಂದನೆಗಳನ್ನು ಸಲ್ಲಿಸಿ ಅಲ್ಲಿಂದ ತೆರಳಿದರು.
ಪ್ರಾಪ್ತವಾಗುವುದು
👇👇👇👇👇👇👇👇👇👇👇👇👇👇
ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
ಎಲ್ಲಾ ಕಥೆಗಳ ಲಿಂಕಗಳು
👉ಸಿದ್ಧಾರೂಢ ಭಾಗವತ ಕಥಾ ಸಂಗ್ರಹ 👉🛃
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ
1)WhatsApp shareಗಾಗಿ click ಮಾಡಿ📲☎️
2)Facebook shareಗಾಗಿ👉
3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚
«««««ಓಂ ನಮಃ ಶಿವಾಯ »»»»»»»
