ಕ್ಷೀರಸಾಗರ ನಿವಾಸದಲ್ಲಿ ಸಿದ್ದಾರೂಢರ ಅಭೂತಪೂರ್ವ ಪ್ರವಚನಕ್ಕೆ ಜನಸಾಗರದ ಆಕರ್ಷಣೆ
ಕ್ಷೀರಸಾಗರ ನಿವಾಸದಲ್ಲಿ ಸಿದ್ದಾರೂಢರ ಅಭೂತಪೂರ್ವ ಪ್ರವಚನಕ್ಕೆ ಜನಸಾಗರದ ಆಕರ್ಷಣೆ 🌷🌷
ತೊರವಿ ಬಾವಿಯ ಮುಂದೆ ರಾಷ್ಟ್ರೀಯ ಹೆದ್ದಾರಿ ಮೇಲ್ಭಾಗದಲ್ಲಿ ಆ ದಾರಿಗೆ ಪೂರ್ವಭಾಗಕ್ಕೆ ಹತ್ತಿ ಗವಿಓಣಿಯಲ್ಲಿ ಬಸವಣ್ಣೆಪ್ಪ ಕ್ಷೀರಸಾಗರ ಇವರ ನಿವಾಸವಿದೆ. ಅಲ್ಲಿ ಪ್ರತಿನಿತ್ಯ ಯೋಗ ವಾಸಿಷ್ಠ ಗ್ರಂಥವನ್ನು ನಡೆಸುತ್ತಿದ್ದರು. ಇಲ್ಲಿ ಸುಮಾರು ೨೫, ೩೦ ಜನ ಶ್ರವಣಕ್ಕೆ ಬಂದು ಸತ್ಸಂಗದಲ್ಲಿ ಕಾಲಕ್ಷೇಪ ಮಾಡುತ್ತಿದ್ದರು. ಊರಿನಲ್ಲೊಬ್ಬ ಮಹಾತ್ಮನು ಉನ್ಮತ್ತಾವಸ್ಥೆಯಲ್ಲಿ ವೈರಾಗ್ಯ ಶಾಲಿಯಾಗಿ ತಿರುಗುತ್ತಿರುವನೆಂದೂ, ಬ್ರಹ್ಮಾನಂದದಿಂದ ಒಮ್ಮೊಮ್ಮೆ ಆಧ್ಯಾತ್ಮ ಸುಧಾಪಾನ ಮಾಡಿಸಿ ಸಂತೃಪ್ತ ಗೂಳಿಸುವನೆಂದು, ಈಗ ಸದ್ಯಃ ಮುಳ್ಳು ಕಂಟಿಗಳಿಂದ ಸುತ್ತುವರೆದ ವಿಷಜಂತು ಸಂಚಾರ ದಿಂದ ಕೂಡಿದ ತೊರವಿ ಹಾಳುಬಾವಿಯಲ್ಲಿ ವಾಸಮಾಡುತ್ತಿರುವನೆಂಬ ವಾರ್ತೆಯನ್ನು ಕೇಳಿ, ಆತನ ಮುಖದಿಂದ ಶ್ರವಣ ಮಾಡೋಣವೆಂಬ ಹಂಬಲದಿಂದ ಆ ಮಹಾತ್ಮನನ್ನು ಬರ ಮಾಡಿಕೊಳ್ಳಬೇಕೆಂದೂ ನಿರ್ಧರಿಸಿದರು.
ಇದಕ್ಕೆ ಸಮ್ಮತಿಸಿದ ಕ್ಷೀರಸಾಗರ ಬಸವಣ್ಣೆಪ್ಪನವರು ತೊರವಿ ಬಾವಿಗೆ ಬಂದು ಸಿದ್ದನ ಪಾದಾರವಿಂದಗಳಲ್ಲಿ ನತಮಸ್ತಕರಾಗಿ ವಂದನೆಗಳನ್ನು ಸಲ್ಲಿಸುತ್ತಾ ಆತನನ್ನು ಕುರಿತು ಹೇ ಮಹಾತ್ಮನೇ, ಅತಿ ದುಃಖಕರ ಸಂಸಾರ ಸಾಗರದಿಂದ ಪಾರಾಗಲು ಭಕ್ತರ ಸಲುವಾಗಿ ಈ ಭೂಲೋಕದಲ್ಲಿ ತಾವು ಅವತಾರ ಧಾರಣೆ ಮಾಡಿದ್ದೀರಿ. ಕಾರಣ ತಾವು ನಮ್ಮ ಮನೆಗೆ ಬರಬೇಕು. ತಮ್ಮ ಶ್ರೀ ಮುಖದಿಂದ ಯೋಗವಾಸಿಷ್ಟ ಗ್ರಂಥದಲ್ಲಿಯ ತತ್ವಗಳ ಅಮೃತಪಾನ ಮಾಡಲು ಅಭಿಲಾಷೆಯುಳ್ಳ ಭಕ್ತರು, ಆಕಳ ಕರುವು ಹಾಲು ಕುಡಿಯಲು ಮೇಯಲು ಹೋದ ತನ್ನ ತಾಯಿಯ ಬರುವಿಕೆಯನ್ನು ನಿರೀಕ್ಷೆ ಮಾಡುವಂತೆ ತಮಗಾಗಿ ಕಾಯುತ್ತಲಿದ್ದಾರೆ. ತಮ್ಮ ಚರಣಾಗಮನವನ್ನೇ ಪೂರ್ಣವಾಗಿ ನಂಬಿ ಕೂತವರಿಗೆ ತಾವು ಬಂದು ಧನ್ಯರನ್ನಾಗಿ ತಾವೇ ಮಾಡಬೇಕು ಅಂತಾ ಅಂಗಲಾಚಿ ಬೇಡಿಕೊಂಡನು. ನಯ ವಿನಯದಿಂದ ಕೇಳಿಕೊಂಡ ಬಸವಣ್ಣಪ್ಪನ ಮೇಲೆ ಕೃಪಾ ದೃಷ್ಟಿ ಬೀರುತ್ತಾ ಸಿದ್ದನು ಒಪ್ಪಿಕೊಂಡ ಕೂಡಲೇ ಬಸವಣ್ಣೆಪ್ಪನು ಹರ್ಷೋಲ್ಲಾಸದಿಂದ ಸಿದ್ದನನ್ನು ತನ್ನ ಮನೆಗೆ ಕರೆತಂದನು. ಅಲ್ಲಿ ನೆರೆದ ಭಕ್ತ ಮಂಡಳಿ ಸೇರಿ ಕ್ಷೌರಿಕನನ್ನು ಕರಸಿ ಕ್ಷೌರ ಮಾಡಿಸಿ ಸಿದ್ದನಿಗೆ ಅಭ್ಯಂಗ ಸ್ನಾನ ಮಾಡಿಸಿದರು. ಮಡಿ ಬಟ್ಟೆಯನ್ನು ತೊಡಿಸಿದರು. ಸುಗಂಧ ಲೇಪನ ಮಾಡಿ ಹೂಮಾಲೆ ಹಾಕಿ ಪಾದಪೂಜೆ ಮಾಡಿ ಆರತಿ ಮಾಡಿದರು. ಬಸವಣ್ಣೆಪ್ಪನು ಯೋಗವಾಸಿಷ್ಠ ಗ್ರಂಥದಲ್ಲಿ ವಿವಿಧ ಅಧ್ಯಾಯಗಳನ್ನು ವಾಚನ ಮಾಡುತ್ತಿದ್ದನು. ನಂತರ ಸಿದ್ಧನು ಅರ್ಥ ವಿವರಣೆ ಮಾಡುತ್ತಾ ಆಧ್ಯಾತ್ಮ ಸುಧಾಪಾನ ಮಾಡಿಸುತ್ತಿದ್ದನು. ಈ ಪ್ರಕಾರ ಪ್ರತಿದಿನ ಸಾಯಂಕಾಲ ಸಿದ್ದನು ಕ್ಷೀರಸಾಗರ ಬಸವಣ್ಣೆಪ್ಪನ ನಿವಾಸಕ್ಕೆ ಬರುತ್ತಾ ಯೋಗ ವಾಶಿಷ್ಟದ ತಿರುಳನ್ನು ಮನವರಿಕೆ ಮಾಡಿಕೊಡುತ್ತಿದ್ದನು. ನಂತರ ತೊರವಿ ಬಾವಿಯಲ್ಲಿ ಇರುತಿದ್ದನು.
ಒಂದಾನೊಂದು ದಿನ ಶಾಸ್ತ್ರ ನಡೆದಾಗ ಗುರುಲಿಂಗಯ್ಯ ಶಾಸ್ತ್ರಿಯು ಮುಂದೆ ಬಂದು ಸಿದ್ಧನನ್ನು ಕುರಿತು ಹೇ ಸ್ವಾಮಿಗಳೇ, ಈ ದೇಹದಲ್ಲಿ ಆತ್ಮನಿರುವನು ಅಂತಾ ಹೇಳಿದಿರಿ. ಆದರೆ ಈ ದೇಹದಲ್ಲಿಯೇ ಇರುವಾತನು ನಮ್ಮ ನೇತ್ರಕ್ಕೆ ಯಾಕೆ ಗೋಚರಿಸುವುದಿಲ್ಲ. ಈ ಬಗ್ಗೆ ತಿಳಿಸಿ ಹೇಳಬೇಕು ಅಂತಾ ಕೇಳಿಕೊಂಡನು. ಆಗ ಸಿದ್ಧನು ಆತನನ್ನು ಕುರಿತು ಅಯ್ಯಾ ಶಾಸ್ತ್ರಿ ನೀನು ಮಾಡಿದ ಪ್ರಶ್ನೆಯು ಸರಿಯಾದುದಾಗಿದೆ. ಈ ಪ್ರಶ್ನೆಗೆ ಕೊಡುವ ಉತ್ತರವನ್ನು ಸರ್ವರೂ ಏಕಚಿತ್ತದಿಂದ ಆಲಿಸಿರಿ. ಹೇ ಶಾಸ್ತ್ರಿಯೇ , ಈ ತೆರೆದ ಕಣ್ಣುಗಳಿಗೆ ಶರೀರದಲ್ಲಿಯ ಆತ್ಮನು ನೂರು ಜನ್ಮಗಳು ಬಂದರೂ ಕಾಣಲಾರನು. ಆತ್ಮನು ಹೊರಗಿನ ಕಣ್ಣಿಗೆ ಗೋಚರವಾಗಲಾರ. ಆತನು ಹೊರಗಡೆ ಇಲ್ಲಾ . ಯೋಗವಾಸಿಷ್ಠ ಗ್ರಂಥದಲ್ಲಿ ಶ್ರೀರಾಮಚಂದ್ರನಿಗೆ ವಸಿಷ್ಠ ಮಹರ್ಷಿಗಳು ಹೇಳಿದ್ದನ್ನು ಅರಿತುಕೊ, ಜಲದೊಳಗೆ ಅಡಗಿರುವ ಶಿತಾಂಶ ಕಣ್ಣಿಗೆ ಕಾಣುವದೇ? ಬಿಸಿನೀರಿನಲ್ಲಿಯ ಬಿಸಿಯು ಸ್ಪರ್ಶದಿಂದ ಗೋಚರಿಸುವುದಲ್ಲದೆ ನೇತ್ರಗಳಿಗೆ ಹೇಗೆ ಗೋಚರವಾಗುವುದು. ಆ ಪ್ರಕಾರ ಈ ತನುವಿನಲ್ಲಿ ಸ್ವಯಂಪೂರ್ಣ ಪ್ರಕಾಶಮಾನವಾಗಿ ಬೆಳಗುವ ಆತ್ಮನು ಭ್ರಾಂತಿರಹಿತ ಜ್ಞಾನಕ್ಕೆ ಗೋಚರಿಸುವನಲ್ಲದೆ ಸತತವಾಗಿ ಬಹಿರಂಗ ವಸ್ತುವನ್ನು ಸಂತಸದಿಂದ ಅರಿಯುವ ಅಜ್ಞ ನೇತ್ರಗಳಿಗೆ ಹೇಗೆ ಗೋಚರವಾಗಬಲ್ಲನು ನೋಡು ವಿಚಾರ ಮಾಡು. ಜ್ಞಾನವೆಂತಹುದು ಅಂತಾ ಪರಾಮರ್ಶಿಸಿದರೆ ಆತ್ಮನಾತ್ಮ ಸುವಿವೇಕರಚಿತ ಶೋಧದಿಂದ ಅಹಂ ಬ್ರಹ್ಮಾಸ್ಮಿ
ಎಂಬ ಜ್ಞಾನವು ದೃಢವಾಗಿ ಮೊದಲಿನ ಅನಾತ್ಮ ವೃತ್ತಿಯನ್ನುಳಿದು ಬ್ರಹ್ಮ ಸ್ವರೂಪಾಕಾರ ವೃತ್ತಿಯಿಂದ ನಿರ್ವಿಕಲ್ಪ ಯಾರಲ್ಲಿ ಜ್ಞಾನ ಇರುವುದೋ ಅವರ ದಿವ್ಯ ದೃಷ್ಟಿಗೆ ಮಾತ್ರ ಆತ್ಮನು ಗೋಚರಿಸುವನು.
ಹಾನಿಕಾರಕ ಆವರಣ ನಾಶವಾದಲ್ಲಿ ಮಾತ್ರ ಆತ್ಮನು ಗೋಚರಿಸುವನು, ಜಡವಾದ ಘಟಕದಂತೆ ಅವನು ಗೋಚರಿಸಬಹುದು ಅಂತಾ ನೀವು ತಿಳಿದಿದ್ದರೆ ಅದು ಸರಿಯಲ್ಲ. ನಿನಗೆ ಶಬ್ದಜ್ಞಾನ ಮಾತ್ರ ಇದೆ. ಆದರೆ ಅನುಭವ ಜ್ಞಾನವಿಲ್ಲದ ಕಾರಣ ಆತ್ಮನು ತೋರಲಾರ ಅಂತಾ ನಿನಗೆ ಸಂಶಯ ಬಂದಿರಬಹುದು ಎಂದರು. ಆಗ ಆ ಶಾಸ್ತ್ರಿಯು ಹೇ ಸದ್ಗುರುವೇ ನನ್ನ ಮನಸ್ಸಿನಲ್ಲಿಯ ಸಂಶಯಗಳನ್ನು ನಿವಾರಣೆ ಮಾಡಿ ಸತ್ಯದ ಅರಿವನ್ನು ತಂದುಕೊಟ್ಟು ನನ್ನನ್ನು ಧನ್ಯನನ್ನಾಗಿ ಮಾಡಿದಿರಿ ಅಂತಾ ದಂಡವತ್ ಪ್ರಣಾಮಗಳನ್ನು ಮಾಡಲು ಆ ದಿನದ ಪ್ರವಚನದ ಕಾರ್ಯಕ್ರಮ ಮುಕ್ತಾಯ ಗೊಂಡಿತು. ಎಲ್ಲರೂ ತಮ್ಮ ತಮ್ಮ ಮನೆಗೆ ತೆರಳಿದರು. ಈ ಶಾಸ್ತ್ರ ಪ್ರವಚನದ ಅಭಿರುಚಿಯಿಂದ ದಿನೇ ದಿನೇ ತುಮಕೂರಗಲ್ಲಿ, ದಿವಟೆಗಲ್ಲಿ, ಸಿದ್ವೀರಪ್ಪನ ಪೇಟೆ, ಕಮರಿ ಪೇಟೆ, ಅರಳಿಕಟ್ಟೆ ಓಣಿ, ಕುಂಬಾರ ಓಣಿ ಮುಂತಾದ ಸುತ್ತಮುತ್ತಲಿನ ಭಾಗಗಳಿಂದ ಭಕ್ತರು ಕಿಕ್ಕಿರಿದು ನೆರೆಯತೊಡಗಿದರು. ಕ್ಷೀರಸಾಗರ ಬಸವಣ್ಣಪ್ಪನ ಮನೆ ತುಂಬಿ ಹೊರಗಡೆಯ ಸಾಲುಕಟ್ಟೆಗಳು ರಸ್ತೆ ತುಂಬಾ ಜನಸಂದಣಿಯೇ , ಜನರು ಸಿದ್ಧಾರೂಢ ಸ್ವಾಮಿಗಳ ಪ್ರವಚನವನ್ನು ಏಕಾಗ್ರತೆಯಿಂದಲೂ ಅತ್ಯಂತ ಶಾಂತಿ ಯಿಂದಲೂ ಕೇಳುತ್ತಿದ್ದರು. ಶ್ರೀರಾಮಚಂದ್ರನಿಗೆ ವಸಿಷ್ಠ ಮಹರ್ಷಿಗಳು ಸವಿಸ್ತಾರವಾಗಿ ಯೋಗವಾಶಿಷ್ಠ ಹೇಳುವಾಗಿನ ದೃಶ್ಯವು ಬಸವಣ್ಣೆಪ್ಪನ ಸ್ಥಾನದಲ್ಲಿ ಕಾಣುತ್ತಿರುವದೋ ಎಂಬಂತೆ ಭಾಸವಾಗುತ್ತಿತ್ತು. ಈ ಪ್ರವಚನವು ಬಹುದಿನಗಳವರೆಗೆ ನಡೆದು ಹುಬ್ಬಳ್ಳಿ ಊರಿನ ತುಂಬಾ ಪಸರಿಸಿತು. ಶ್ರವಣಾಪೇಕ್ಷಿಗಳು ದೂರದೂರದಿಂದ ಬರಹೋಗುತ್ತಿರುವಧು ನಿತ್ಯದ ಮಾತಾಗಿತ್ತು .
ಕ್ಷೀರಸಾಗರ ಬಸವಣ್ಣೆಪ್ಪನ ಒಂದು ಪುಟ್ಟದಾದ ಮನೆಯಲ್ಲಿ ಸಾಕ್ಷಾತ್ ಪರಶಿವನ ಅವತಾರಿ ಸಿದ್ಧಾರೂಢ ಸ್ವಾಮಿಗಳಿಂದ ಅವ್ಯಾಹತವಾಗಿ ಬಹುದಿನ ಯೋಗವಾಸಿಷ್ಟದ ಪ್ರವಚನವು ನಡೆಯಲು ಆಶ್ಚರ್ಯಚಕಿತರಾದ ಅಸಂಖ್ಯಾತ ಗಣ್ಯರು, ಶ್ರವಣಾಪೇಕ್ಷಿಗಳು ಸಾಗರದ ಅಬ್ಬರದ ಅಲೆಗಳಂತೆ ತೆರೆತೆರೆಯಾಗಿ ನಿತ್ಯವೂ ಬರುತ್ತಿದ್ದ ಸಮೂಹವನ್ನು ಕಂಡು, ಸಿದ್ಧನು ಈಗ ಈ ಗದ್ದಲದ ಸಹವಾಸಕ್ಕಿಂತಲೂ ಏಕಾಂತವೇ ಲೇಸು ಅಂತಾ ಭಾವಿಸಿ, ಒಮ್ಮಿಂದೊಮ್ಮೆಲೆ ತೊರವಿ ಭಾವಿಯನ್ನು ತ್ಯಾಗ ಮಾಡಿ ಅಲ್ಲಿಂದ ಹೊರಟನು. ಸ್ವಾಮಿಗಳ ಪ್ರವಚನದಲ್ಲಿ ಕಾಣದಾದ ಕಾರಣ ಜನರೆಲ್ಲರೂ ಚಿಂತಾ ಕ್ರಾಂತರಾದರು. ಭವರೋಗತಾರಕನೇ ನೀನೆಲ್ಲಿಗೆ ಹೋದೆ ಅಂತ ನೆನೆಯತೊಡಗಿದರು
👇👇👇👇👇👇👇👇👇👇👇👇👇👇
ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
ಎಲ್ಲಾ ಕಥೆಗಳ ಲಿಂಕಗಳು
👉ಸಿದ್ಧಾರೂಢ ಭಾಗವತ ಕಥಾ ಸಂಗ್ರಹ 👉🛃
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ
1)WhatsApp shareಗಾಗಿ click ಮಾಡಿ📲☎️
2)Facebook shareಗಾಗಿ👉
3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚
«««««ಓಂ ನಮಃ ಶಿವಾಯ »»»»»»»
