ಪಂಜಾಬಕ್ಕೆ ಸಿದ್ಧನು ಆಗಮಿಸಿ, ವೈದ್ಯನಿಗೆ ಆಯುರ್ವೇದ ಮರ್ಮಗಳನ್ನು ವಿವರಿಸಿದ್ದು,
ಪಂಜಾಬಕ್ಕೆ ಸಿದ್ಧನು ಆಗಮಿಸಿ, ವೈದ್ಯನಿಗೆ ಆಯುರ್ವೇದ ಮರ್ಮಗಳನ್ನು ವಿವರಿಸಿದ್ದು,
ವೈದ್ಯನಿಗೆ ಆಯುರ್ವೇದ ತಿಳಿಸಿದ್ದು 🕉️
ಕಾಶ್ಮೀರದಿಂದ ಸಿದ್ದನು ಹೊರಟು ಪಂಜಾಬಕ್ಕೆ ಬಂದನು. ಭಾರತೀಯ ಚರಕ ಮುನಿಗಳ ಸಂಪ್ರದಾಯ ಬದ್ದನಾದ ವೈದ್ಯನಲ್ಲಿಗೆ ಸಿದ್ದನು ಬಂದು ರಸವತ್ತಾಗಿ ಕುಶಲ ಸಂಭಾಷಣೆ ಮಾಡಿದನು. ಆಗ ಆ ವೈದ್ಯನು ಸಿದ್ಧನನ್ನು ಕುರಿತು ಹೇ ಯತಿಯೇ ನಿಮ್ಮ ಮಾತುಗಳಲ್ಲಿಯ ವಿಚಾರ ನೋಡಲು ನಿಮಗೆ ಚರಕ ಶಾಸ್ತ್ರದಲ್ಲಿ ಗತಿಯಿರುವದಾಗಿ ಕಾಣುತ್ತಲಿದೆ. ಕಾರಣ ಶ್ರೇಷ್ಠವಾದ ಆಯುರ್ವೇದದಲ್ಲಿ ತಿಳಿಸಿದ ಪ್ರಕಾರ ಆರೋಗ್ಯಾದಿಗಳ ಲಕ್ಷಣ, ಸಾಧನಗಳನ್ನು ತಿಳಿಸೋಣವಾಗಬೇಕು ಅಂತಾ ಕೇಳಿ ಕೊಂಡನು. ಅದಕ್ಕೆ ಒಪ್ಪಿಕೊಳ್ಳುತ್ತಾ ಸಿದ್ಧನು ಹರ್ಷಭರಿತನಾಗಿ ಚರಕ ಶಾಸ್ತ್ರದ ಅನುಭವವನ್ನು ಹೇಳಹತ್ತಿದನು. ಹೇ ವೈದ್ಯನೇ ಏಕಾಗ್ರತೆಯಿಂದ ಆಲಿಸು ಪ್ರಥಮವಾಗಿ ಈ ದೇಹದ ರಚನೆ, ನಾಡಿಜ್ಞಾನ, ತ್ರಿದೋಷ ಲಕ್ಷಣಗಳನ್ನು ತಿಳಿದುಕೊಳ್ಳಬೇಕು.
ನಂತರ ಪರೀಕ್ಷಿಸಿ ಶರೀರದಲ್ಲಿ ಯಾವ ರೋಗವಿರುವದೆಂಬುದರ ಬಗ್ಗೆ ಖಚಿತ ಜ್ಞಾನ, ಆ ರೋಗಕ್ಕೆ ಪರಿಹಾರದ ಸಾಧನ, ಚಿಕಿತ್ಸಾ ಪಂಚಕಗಳ ಬಗ್ಗೆ ತಿಳಿದುಕೊಳ್ಳಬೇಕು.
ಹೇ ವೈದ್ಯನೇ ಕೇಳು ಈ ಎಲ್ಲ ವಿಧಾನಗಳನ್ನು ತಿಳಿದುಕೊಳ್ಳುವ ಮೊದಲು, ವೈದ್ಯನಾಗ ಬಯಸುವವನು ಕಾಯಾ ವಾಚಾ ಮನಸ್ಸು ನಡೆ ನುಡಿಗಳಲ್ಲಿ ಪರಿಶುದ್ಧವುಳ್ಳವನಾಗಿ ಖ್ಯಾತನಾದ ಸದ್ಗುರುವಿನಲ್ಲಿ ಬೋಧನೆ ಪಡೆದುಕೊಂಡು ಉಚ್ಚ ನೀಚ ಭೇದ ಭಾವವನ್ನು ತೊರೆದು ಸರ್ವರಲ್ಲಿ ಸಮಾನ ದೃಷ್ಟಿಯುಳ್ಳವನಾಗಿ ನೀತಿಯುತನಾಗಿ, ಧರ್ಮಕಾರ್ಯದಲ್ಲಿ ಶ್ರದ್ಧೆಯುಳ್ಳವನಾಗಿ, ಇಷ್ಟದೈವತದಲ್ಲಿ ಉಪಾಸನವುಳ್ಳವನಾಗಿ, ಭೂತದಯೆಯುಳ್ಳವನಾಗಿ, ತಪಸ್ಸನ್ನಾಚರಿಸಿ ಸಾತಿಶಯದ ಪುಣ್ಯಶಾಲಿಯಾಗಿ ಸ್ವಾರ್ಥ ತ್ಯಾಗವುಳ್ಳವನಾಗಿ, ಎಲ್ಲ ರೋಗಿಗಳಲ್ಲಿ ಕರುಣಾರಸಭರಿತನಾಗುವದರಿಂದ ವಾಕ್
ಸಿದ್ಧಿಯಿಂದ ಮಾತನಾಡಿ ರೋಗಿಗಳ ರೋಗ ನಿವಾರಣೆಯ ಅಮೃತ ಹಸ್ತವುಳ್ಳವನಾಗುತ್ತಾನೆ. ಈತನೇ ನಿಜವಾದ ವೈದ್ಯನು, ಇವನಿಂದ ರೋಗಿಗಳ ರೋಗ ಗುಣಮುಖವಾಗಿ ಅವರೆಲ್ಲರ ಆರೋಗ್ಯಭಾಗ್ಯಕ್ಕೆ ಕಾರಣೀಭೂತನಾಗುವನು.
ಪೂರ್ವಜನ್ಮದಲ್ಲಿ ಮಾಡಿದ ಕರ್ಮಗಳಿಂದ ಒದಗಿದ ರೋಗಮಯ ಶರೀರದ ರಚನೆಯನ್ನು ತಿಳಿದುಕೊಳ್ಳಬೇಕು. ಈ ಶರೀರದ ರಚನೆಯು ಪಂಚ ಮಹಾಭೂತಗಳು ಅಂದರೆ ಪ್ರಥ್ವಿ, ಅಪ್, ತೇಜ, ವಾಯು, ಆಕಾಶಗಳಿಂದ ಆಗಿದೆ. ಈ ಪಂಚ ಮಹಾ ಭೂತಗಳಿಂದ ಉದಯಿಸಿದ ಪರಮಾಣು ಪುಂಜದ ರಕ್ತ ಮೊದಲಾದ ಸಪ್ತಧಾತುಗಳು, ಶ್ರೋತ್ರಾದಿ ನವರಂಧ್ರಗಳಿಂದ, ಹನ್ನೊಂದು ಇಂದ್ರಿಯಗಳಿಂದ ಸರಸವಾದ ಆರು ಕೋಶಗಳಿಂದ ಹೀಗೆ ಇಪ್ಪತ್ತೈದು ತತ್ವಗಳಿಂದ ಕೂಡಿದೆ. ಈ ಶರೀರಕ್ಕೆ ಎಂಟು ಕೋಟಿ ರೋಮಗಳಿವೆ. ಎಪ್ಪತ್ತೆರಡು ಸಾವಿರ ನಾಡಿಗಳಿವೆ. ತೊಂಭತ್ತಾರು ಬೆರಳುಗಳ ಉದ್ದಳತೆಯಿಂದ ಕೂಡಿದ ಈ ಶರೀರ ಆರು ವಿಕಾರಗಳಿಂದ ಕೂಡಿದೆ. ಪ್ರಾಣಾದಿಗಳಿಗೆ ಆಧಾರನಾದ ಜೀವನಿಗೆ ಸುಖದುಃಖಗಳನ್ನು ಉಣ್ಣಲು ಸ್ಥೂಲವಾದ ಈ ಶರೀರವು ವಸತಿಯೆನಿಸಿಕೊಂಡಿದೆ. ರೇತಸ್ಸು ಮತ್ತು ರಕ್ತ ಮಿಶ್ರಣಗಳಿಂದ ಈ ಶರೀರ ಉದಯಿಸಿದೆ.
ಈ ಶರೀರದ ನಡದ ಮೇಲಿನ ಉದರದಲ್ಲಿ ಅನ್ನಮಯಕೋಶವಿದೆ. ಎದೆಯಲ್ಲಿ ಪ್ರಾಣಮಯ ಕೋಶವಿದೆ. ಶ್ವಾಸಕೋಶದ ಎಡಬಲಕ್ಕೆ ರುಧಿರಮಯ ಕೋಶವಿದೆ.
ಮಸ್ತಕದಲ್ಲಿಯ ಮನೋಮಯಕೋಶವು ಸಂಕಲ್ಪ ವಿಕಲ್ಪ ಮೊದಲಾದವುಗಳ ಉದಯಕ್ಕೆ ಕಾರಣವಾಗಬಲ್ಲ ಮೃದುವಾದ ನರಗಳ ಪುಂಜವಾಗಿರುವದು. ಅದರ ಮಿದುಳದಲ್ಲಿಯ ವಿಜ್ಞಾನಮಯಕೋಶವಿದೆ. ನಿರ್ಮಲತ್ವವನ್ನು ಅರಿಯುವ ಮತ್ತು ಮನಸ್ಸು ಲಯವಾಗುವ ಈ ಸ್ಥಳವೇ ಆನಂದಮಯಕೋಶವಾಗಿದೆ. ಹೀಗೆ ಆರು ಕೋಶಗಳಿರುತ್ತವೆ. ಎದೆಯಲ್ಲಿ ರಕ್ತದ ಕೋಶವೇ ಹೃದಯಕಮಲವಾಗಿದೆ. ಈ ಹೃದಯಕಮಲದಿಂದ ಶರೀರದ ತುಂಬಾ ರಕ್ತ ಚಲನವಲನೆಗಾಗಿ ನರಗಳಲ್ಲಿ ಅಂತರ್‌ನಾಡಿ ಮತ್ತು ಬಹಿರ್‌ನಾಡಿ ಅಂತಾ ಎರಡು ವಿಧಗಳಾಗಿರುವವು. ಬಾಹ್ಯ ನಾಡಿಯ ಮುಖಾಂತರ ಸ್ತ್ರೀಯರ ಋತುಕಾಲಕ್ಕೆ ಕೆಟ್ಟ ರಕ್ತವು ಹೊರಗೆ ಹೋಗುವದು. ವಿಚಾರ ಮಾಡಿ ನೋಡಲು ಶ್ವಾಸಕೋಶವೇ ಕಫ ಸ್ಥಾನವಾಗಿದೆ. ಇಲ್ಲಿ ರಕ್ತ ಶುದ್ದೀಕರಣವಾಗುತ್ತದೆ. ಈ ಶುದ್ದೀಕರಣದ ನಂತರ ಬೆನ್ನಿನ ಎಡಬಲಗಳಲ್ಲಿಯ ನಾಡಿಗಳಲ್ಲಿ ಒಂದರಲ್ಲಿ ಕೆಟ್ಟ ರಕ್ತವು ಸೇರುವದು. ಇನ್ನೊಂದರಲ್ಲಿ ಪಿತ್ತವು ಶೇಖರಣೆಯಾಗಿ ಪಿತ್ತಕೋಶದಲ್ಲಿ ಸೇರುವದು. ಉದರದ ಬಲಭಾಗಕ್ಕೆ ಬಾಳೇಹಣ್ಣಿನ ಗೊಂಚಲು ಜೋತು ಬಿದ್ದಂತೆ ಪಿತ್ತಕೋಶವು ಜೋತು ಬಿದ್ದಿರುತ್ತದೆ. ಎಡಕ್ಕೆ ನೀಲಿಬಣ್ಣದ ಗಡ್ಡೆಯು ಜೋತು ಬಿದಿರುತ್ತದೆ. ಈ ಗಡ್ಡೆಯಲ್ಲಿ ಜ್ವರ ತೋರುವದು. ಈ ಗಡ್ಡೆಗೆ ಗುಲ್ಮ ಕರೆಯುವರು. ಈ ಹಿಂದೆ ಹೇಳಿದ ಆರು ಕೋಶಗಳಲ್ಲಿ ಶ್ವಾಸಕೋಶ, ರಕ್ತಕೋಶ, ಅನ್ನಕೋಶ ಈ ಪ್ರಕಾರ ಮೂರು ವಿಧ ಕೋಶಗಳ
ವಿವರಗಳನ್ನು ಕೇಳಿದಿರಿ.
ವಿಚಾರ ಮಾಡಲಾಗಿ ಶಿರಸ್ಸಿನ ಮಿದುಳಿನಲ್ಲಿಯ ನಾಡಿಯು ಬೆನ್ನೆಲುಬಿನ ಉಂಗುರಗಳನ್ನು ಸರಿಯಾಗಿ ಜೋಡಿಸಿಕೊಂಡು ಸರಳ ರಂಧ್ರದಲ್ಲಿ ಹಾಯ್ದು ನಾಭಿಯ ಕಂದವನ್ನು ಬಿಗಿದು ನಾಡಿಯ ಶಿರೋಭಾಗವು ಮೂತ್ರ ಸ್ಥಾನದಲ್ಲಿರಿಸಿ ಮೆರೆಯುತ್ತಲಿರುವದು. ಅದರ ಸೂಕ್ಷ್ಮ ನಾಡಿಗಳು ಎಲುಬಿನ ಉಂಗುರಕ್ಕೆ ಒತ್ತಿಕೊಂಡು ಸುತ್ತುವರೆದು ಸಂದಿನಿ, ಸರ್ವಾಂಗ ವ್ಯಾಪಿಸುತ್ತಾ ನಿತ್ಯಲೂ ಸುಖದುಃಖಗಳಿಗೆ ಕಾರಣವಾಗಿದೆ. ಸುಷುಮ್ನಾ ನಾಡಿಯು ನೆತ್ತಿಯಿಂದ ಕೆಳಮುಖವಾಗಿ ಹಬ್ಬಿಕೊಂಡಿರುವದು. ಆದ ಕಾರಣ ಈ ಶರೀರವು ವಿಪರೀತವಾದ ಗಿಡವೆಂದು ವೇದವು ಹೇಳಿದೆ. ದೊಡ್ಡದಾದ ಅನ್ನದ ಚೀಲಕ್ಕೆ ಉದರವೆಂದು, ಅನ್ನದ ಕಿರಿಚೀಲಕ್ಕೆ ಹೊಟ್ಟೆ ಅಂತಾ ಅನ್ನುವರು. ಇದರ ಕೆಳಗೆ ಕಿಬ್ಬೊಟ್ಟೆಯೆಂಬುವದೇ ಮಲದ ಚೀಲವು. ಈ ಪ್ರಕಾರ ಮೂರು ಕೋಶಗಳು ಒಂದಕ್ಕೊಂದು ಸಂಬಂಧವಾಗಿವೆ. ಬಳಿಕ ಅವೆರಡು ಪಕ್ಕದಲ್ಲಿರುವ ಜಲದ ಕೋಶಗಳಿಂದ ಹರಿವ ನಾಡಿಗಳೇ ಮೂತ್ರನಾಡಿಗಳು. ಮಲದ ಮುಂದಿರುವ ಗೆಜ್ಜೆಯ ಕೆಳಗಿನ ಚೀಲವೇ ಮೂತ್ರಕೋಶವು. ಇವು ಒಂದಕ್ಕೊಂದು ಸಂಬಂಧವಾಗಿರುವವು. ಎಲುವಿನ ಕೀಲ್ಬಾಳೆಗಳು ಎಲುವಿನ ಕವಚದ ಪರೆಗಳು ಒಂದಕ್ಕೊಂದು ಸಂಬಂಧವಾಗಿವೆ. ಗುದ ಮತ್ತು ವೃಷಣಗಳ ಮಧ್ಯದಲ್ಲಿ ಬಿಂದು (ವೀರ್ಯ) ಕೋಶವು ರೇತಸ್ಸಿಗೆ ಸ್ಥಾನವಾಗಿರುವದು. ವೃಷಣದ ಚಿಕ್ಕ ನರಗಳು ಸುತ್ತಿಕೊಂಡು ಚೀಲದಂತಿರುವ ಎರಡು ಅಂಡಕೋಶಗಳೆಂದು ಕರೆಯುವರು. ಆ ಎರಡು ವೃಷಣಗಳು ಜೋತು ಬೀಳಲು ಕಾರಣವಾದ ಎರಡು ನರಗಳ ಕುಣಿಕೆಗಳು ಗರ್ಭ ಕೋಶಕ್ಕೆ ವ್ಯಾಪಿಸಿಕೊಂಡು ನಾಭಿಯ ನಾಶವನ್ನು ಸೇರಿವೆ. ಈ ಪ್ರಕಾರ ನರನಾಡಿಗಳು ತಮ್ಮ ತಮ್ಮೊಳಕ್ಕೆ ಒಂದಕ್ಕೊಂದು ಸಂಬಂಧವಾಗಿರುವವು. ಅವುಗಳಿಗೆ ಚರ್ಮದ ಹೊದಿಕೆ ಇರುವದು. ಆ ಪರೆಗಳು ಮಾಂಸ ಮತ್ತು ಚರ್ಮಗಳ ನಡುವಿದ್ದು ಆ ಗ್ರಂಥಿಗಳನ್ನು ಪರಿಶುದ್ಧವಾಗಿ ರಕ್ಷಿಸುವದು. ದಪ್ಪವಾದ ಚರ್ಮವು ದೇಹ ಹೊದಿಕೆ ಯಾಗಿದೆ. ಅದರಲ್ಲಿ ರೋಮಕೂಪಗಳಿದ್ದು ತಿಳಿಯುವ ಸ್ಪರ್ಶಸ್ಥಾನಗಳಿವೆ. ಇವು ಒಂದಕ್ಕೊಂದು ಸಂಬಂಧವಾಗಿವೆ. ಭೋಜನ ಮಾಡಿದ ಅನ್ನವು ಜಠರಕ್ಕೆ ಇಳಿದು ಅಲ್ಲಿ ಜಠರಾಗ್ನಿಯಿಂದ ರಸವಾಗಿ ಗಂಜಿಯಾಗುತ್ತದೆ. ನಂತರ ತಿಳಿರಕ್ತವಾಗಿ ಸರ್ವನಾಡಿಗಳಲ್ಲಿ ಸೇರಿ ಹರಿದಾಡುವದು, ಹರಿಯುವ ರಕ್ತಕ್ಕೆ ಎಲ್ಲಿಯಾದರೂ ಅಡ್ಡಿ ಆತಂಕ ಬರಲು ಅಲ್ಲಿಯೇ ಗಡ್ಡೆಕಟ್ಟಿ ಕುರುವಾಗಿ ಬಾಧಿಸುವದು. ತಡೆಗಟ್ಟಿದ ಸ್ಥಾನದಲ್ಲಿ ಒಣಗಿದ ಗಿಡದ ಚಕ್ಕೆಯಂತೆ ಅದಕ್ಕೆ ಸ್ಪರ್ಶಜ್ಞಾನವಾಗಲಾರದು. ಅದಕ್ಕೆ ದಡ್ಡನಿಸುವರು. ಹರಿಯುವ ರಕ್ತದ ಒತ್ತಡ ಹೆಚ್ಚಾದರೆ ಛಳಕ ಅನ್ನುವರು. ಹೃದಯದಲ್ಲಿ ರಕ್ತವು ಅತ್ಯಧಿಕವಾದರೂ ಕಡಿಮೆಯಾದರೂ ಮೊದಲಿಗಿಂತ ಕ್ಷೀಣಿಸಿದರೂ ವಿಷವು ಕುಡಿದರೂ ರೋಗ ರುಜೆಗಳು ತೋರಿ ನಂತರ ಮರಣವಾಗುವದು. ಬದುಕಿ ಉಳಿಯಲು ಶುದ್ಧರಕ್ತವೇ ಮೂಲಕಾರಣವು. ಇನ್ನು ಪ್ರಾಣವು ರಸಮಯ ಅಂತಾ ವೇದವು ಸಾರಿದೆ. ಕಾರಣ ಇವೆಲ್ಲವುಗಳನ್ನು ಚಿಕಿತ್ಸೆ ಮಾಡಿ ಗುರ್ತೈಸಲು ವೈದ್ಯನಿಗೆ ಗುರುಕೃಪೆ ಅವಶ್ಯವಾಗಿದೆ. ನಾಭಿಯಿಂದ ಮೇಲೆ ಎರಡು ಬೆರಳು ಅಂತರದಲ್ಲಿ ಪುರುಷರಿಗೆ ಬಲಬದಿಗೆ ಸ್ತ್ರೀಯರಿಗೆ ಎಡಬದಿಗೆ ಭತ್ತದ ಕಾಳಿನಂತೆ ಜಠರಾಗ್ನಿಯು ಇರುವದು. ಇದು ಮೈಯಲ್ಲಿ ವ್ಯಾಪಿಸಿ ಅನ್ನವನ್ನು ಜೀರ್ಣ ಮಾಡುವದು ಅಂತಾ ಕೆಲವರು ಹೇಳುವರು. ಉದರದಲ್ಲಿ ಉರಿಯ ನಡುವೆ ಸೂಕ್ಷ್ಮ ಪೀತವರ್ಣದ ದೀಪದಂತೆ ವೈಶ್ವಾನರ ಜ್ಯೋತಿಯಿದ್ದು, ಇದಕ್ಕೆ ಜಠರಾಗ್ನಿಯೆನ್ನುವರು. ಇನ್ನು ಕೆಲವರು ಅನ್ನಕೋಶದ ಚಿಲುಮೆಯೆನ್ನುವರು. ಹುಳಿ, ನೀರು, ಅನ್ನಗಳನ್ನು ಜೀರ್ಣಿಸುವದೇ ಜಠರಾಗ್ನಿಯು. ಇದರಿಂದ ನಾಡಿಗಳು ಚಲಿಸದಂತೆ ಆ ದೀಪದ ಒಳಗಿನ ಬಿಸಿಯೇ ಗರ್ಭೋಷ್ಮವೆನ್ನುವರು. ಹೃದಯದ ಚಲನೆ ಮತ್ತು ಶ್ವಾಸೋಚ್ಛಾಸ ಚಲನೆಗೆ ಇವೇ ಮೂಲ ಕಾರಣಗಳು. ಬಿಸಿರಕ್ತ ಚಲನೆಯು ಒಡಲಲ್ಲಿಯ ಜೀವನಿಗೆ ಮೂಲಾಧಾರವಾಗಿದೆ.
ಈ ಪ್ರಕಾರ ನಿಜವಾದ ವೈದ್ಯನು ದೇಹದ ರಚನೆಯನ್ನು ತಿಳಿದುಕೊಂಡು ನಂತರ ನಾಡೀ ಜ್ಞಾನವನ್ನು ಅರಿಯಬೇಕು. ಪುರುಷನ ಬಲಗೈ ಸ್ತ್ರೀಯರ ಎಡಗೈ ನೋಡಬೇಕು. ಚತುರನಾದ ವೈದ್ಯನು ನಾಡಿಯನ್ನು ಪರೀಕ್ಷಿಸಿ ಪ್ರಕೃತಿಯ ಬಗ್ಗೆ ತಿಳಿದುಕೊಳ್ಳಬೇಕು. ತರ್ಜನಿ, ಮಧ್ಯ, ಅನಾಮಿಕ ಬೆರಳುಗಳನ್ನು ಒತ್ತುತ್ತ ಹಸ್ತದಲ್ಲಿಯ ಅಶುದ್ದನಾಡಿಯನ್ನು ಒತ್ತಿ ಒತ್ತಿ ರೋಗದ ಬಗ್ಗೆ ಪರೀಕ್ಷೆ ಮಾಡಬೇಕು. ತರ್ಜನಿ ಬೆರಳನ್ನು ಒತ್ತಲು ನಾಡಿ ಬಡಿದುಕೊಳ್ಳುವ ಗತಿ ಹೆಚ್ಚಾಗಲು ವಾತವಾಗಿರುವದೆಂದು ಗುರ್ತೈಸಬೇಕು. ಮಧ್ಯಮ ಬೆರಳು ಒತ್ತಿದಾಗ ನಾಡಿ ಬಡಿತ ಹೆಚ್ಚಾಗಲು ಪಿತ್ತವಾಗಿದ್ದನ್ನು, ಅನಾಮಿಕ ಬೆರಳು ಒತ್ತಲು ನಾಡಿ ಬಡಿತ ಹೆಚ್ಚಾಗಲು ಎದೆಯಲ್ಲಿ ಕಫ ಹೆಚ್ಚಾಗಿದೆ ಅಂತಾ ತಿಳಿಯಬೇಕು.
ಈ ಪ್ರಕಾರ ರೋಗಿಯ ನಾಡಿಯ ಗತಿ, ಮುಖವರ್ಣ, ಬೆವರುವಿಕೆ, ಶ್ವಾಸಗತಿ,ಚೇಷ್ಠೆ , ಸ್ವರ, ಶಿತೋಷ್ಣಗಳನ್ನು ನೋಟದಿಂದ, ಸ್ಪರ್ಶದಿಂದ ಆತನ ಪ್ರಕೃತಿಯಲ್ಲಿ ಕಂಡುಬರುವ ರೋಗದ ಬಗ್ಗೆ ತಿಳಿದುಕೊಳ್ಳಬೇಕು. ವಾತ, ಪಿತ್ತ, ಕಫ ಗುರ್ತೈಸುವ ನಾಡಿಗಳ ಬಡಿತ ಸಮನಾಗಿದ್ದರೆ ಆರೋಗ್ಯವಂತನೆಂದೂ ಆದರೆ ಇದರಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ರೋಗಬಾಧೆಯಿದೆ ಅಂತಾ ನಿರ್ಧರಿಸಬೇಕು. ನಂತರ ಶೀತೋಷ್ಟಗಳು ಪ್ರಕೃತಿಯಲ್ಲಿ ಸಮಗತಿಯಲ್ಲಿದ್ದರೆ ಆರೋಗ್ಯವುಳ್ಳವನೆಂದೂ ವಿಷಮವಿದ್ದಲ್ಲಿ ರೋಗಿಯ ಲಕ್ಷಣ ಅಂತಾ ನಿರ್ಧರಿಸಬೇಕು.
ಹಾವಿನಂತೆ, ಏಡಿಯಂತ ವಕ್ರಗತಿಯಿಂದ ನಾಡಿ ಹಾರಲು ವಾತದ ಉದ್ರೇಕವಾಗಿದೆ ಎಂದು, ಕಾಗೆಯಂತೆ, ಕಪ್ಪೆಯಂತೆ ಝಾವ ಝಾವಕ್ಕೆ ಹಾರಲು ಪಿತ್ತ ಉದ್ರೇಕವಾಗಿದೆಯಂದೂ ಪಾರಿವಾಳ, ಹಂಸ ಪಕ್ಷಿಯ ಗಮನದಂತೆ ಹಾರಲು ಕಫ ಉದ್ರೇಕವಾಗಿದೆ ಅಂತಾ ತಿಳಿದುಕೊಳ್ಳಬೇಕು. ಅನ್ನಕೋಶದ ಬಳಿಯ ಮಾಂಸವು ಭತ್ತದ ಅರಳಿನಂತೆ ಉಬ್ಬಲು ವಾತದ ಲಕ್ಷಣವೆಂದೂ, ಹಳದಿ ವರ್ಣದ, ವಿಷ, ಉಪ್ಪು, ಹುಳಿ ರಸಗಳಿಂದ ಹೃದಯಕೋಶದಲ್ಲಿರುವುದಕ್ಕೆ ಪಿತ್ತವನ್ನುವರು. ಲೊದಡಿಯಂತ ಶ್ವಾಸಕೋಶದಲ್ಲಿ, ಕಂಠನಾಳದಲ್ಲಿರುವದೇ ಕಫವು ತಿತ್ತಿರಿ ಪಕ್ಷಿಯ ಗತಿಯಂತೆ ವಿಷಮಗತಿ ನಡೆಯಲು ಸನ್ನಿಪಾತಕ ನಾಡಿಯ ಲಕ್ಷಣವೆಂದು ತಿಳಿದುಕೊಳ್ಳಬೇಕು. ಕಫ ಕಡಿಮೆಯಾಗಿ ಪಿತ್ತ ಹೆಚ್ಚಾಗುವದು ಅದಕ್ಕೆ ವಾತ ಕೂಡಲು ಪಿತ್ತವಾತವಾಗುವದು. ಪಿತ್ತಗತಿ ಕಡಿಮೆಯಾಗಿ ಕಫದ ವಾತದ ಒತ್ತಡ ಹೆಚ್ಚಾಗಲು ಅದಕ್ಕೆ ಶೀತವಾತ ಎಂದು ಕರೆಯುವರು. ವಾತಕ್ಕಿಂತ ಕಫ ಹೆಚ್ಚಾಗಲು ಅದಕ್ಕೆ ವಾತಶೀತವೆನ್ನುವರು. ವಾತ ಕಡಿಮೆಯಾಗಿ ಕಫ ಕ್ಷೀಣಿಸಿ ಪಿತ್ತ ಹೆಚ್ಚಾಗಲು ಅದಕ್ಕೆ ಶೀತಪಿತ್ತ ಎನ್ನುವರು. ಪಿತ್ತಕ್ಕಿಂತ ಕಫ ಹೆಚ್ಚಾದರೆ ಪಿತ್ತಶೀತವನ್ನುವರು.
ನರವು ಸ್ಥಾನಾಂತರವಾಗಿ ಸ್ಪುರಿಸಲು ಘಾತಕ ಲಕ್ಷಣ, ನರವು ಕೆಲಕಾಲ ತನ್ನ ಸ್ಥಳದಲ್ಲಿ ಕೆಲಕಾಲ ಭರದಿಂದ ಸ್ಥಾನಾಂತರ ಗತಿಸಲು ಮರಣ ಸೂಚನೆಯ ನಾಡಿ ಅಂತಾ ತಿಳಿಯಬೇಕು. ನರದ ಗತಿ ವೇಗವಾಗಿ ಬಿಸಿಯಾಗಲು ಜ್ವರದ ಲಕ್ಷಣ. ಬಳಿಕ ಆಶೆ, ಕೋಪ, ಭಯಗಳಿಂದ ಚಿಂತನಾದಿಗಳಲ್ಲಿ ನಾಡಿಯು ಸೂಕ್ಷ್ಮವಾಗಿ ತೀವ್ರವಾಗಿ ಗತಿಸುವದು.
ಹೇ ಜಾಣ ವೈದ್ಯನೇ ಕೇಳು. ಧಾತು ಕ್ಷೀಣಿಸಿದವನ, ಮಂದಾಗ್ನಿಯಾದವನ ನಾಡಿಯು ಮಂದಗತಿಯಿಂದ ಚಲಿಸುವದು. ಮಾಂಸ, ರಕ್ತ ಹೆಚ್ಚಾಗಲು ಆತನ ನಾಡಿಯು ಸ್ಪಷ್ಟವಾಗಿ ಕಾಣುವದಲ್ಲದೆ ಅಲ್ಪ ಬಿಸಿಯಾಗಿರುವದು. ಭರದಿಂದ ಯೋಗ ಸಾಧನವು ವೃದ್ಧಿಯಾದವನ ನಾಡಿಯು ಸ್ಪಷ್ಟತೆಯಿಂದ ಬಲಯುತವಾಗಿರುವದಲ್ಲದೆ ಮಂದಗತಿಯಿಂದ ಚಲಿಸುವದು, ಜಠರಾಗ್ನಿಯು ವೃದ್ಧಿಯಾದವನ ನಾಡಿಯು ಲಗುಬಗೆಯಿಂದ ಚಲಿಸುವದು. ಪರಮ ಸುಖಿಗಳ ನಾಡಿಯು ಬಲಯುತವಾಗಿ ಸ್ಥಿರತೆಯಿಂದ ಚಲಿಸುವದು, ಹಸಿದವನ ನಾಡಿಯು ಚಪಲತೆಯಿಂದ ಕೂಡಿರುವದು. ಉತ್ತಮ ಆಹಾರದಿಂದ ತೃಪ್ತಿಯಾದವನ ನಾಡಿಯು ಶಾಂತತೆಯಿಂದ ಚಲಿಸುವದು. ಈ ಪ್ರಕಾರ ನಾಡಿಗಳ ಲಕ್ಷಣ ಕಂಡುಕೊಂಡು ರೋಗದ ಬಗ್ಗೆ ಗುರ್ತೈಸಬೇಕು.
ಭೂತಗ್ರಹಪೀಡಿತರ ನಾಡಿಗಳನ್ನು ಪರೀಕ್ಷಿಸಲು ವಾತ, ಪಿತ್ತಗಳೆರಡೂ ಸಂಕಲಿತವಾಗಿರುವವು. ಇದರಿಂದ ನಡುಕ, ಹೆಚ್ಚು ವೇಗದ ಚಲನೆ ಮುಟ್ಟಿದಾಗ ಒಮ್ಮೆ ತಣ್ಣಗೆ ಮತ್ತೊಮ್ಮೆ ಬಿಸಿ ಆಗಿರುವದು ಕಂಡು ಬರುತ್ತದೆ. ಕ್ರೂರವಾದ ನೋಟ, ಕೆಂಗಣ್ಣು, ನಿಶ್ಯಕ್ತಿ, ನಿರಾಹಾರ, ಒಮ್ಮೊಮ್ಮೆ ಭೂರಿಭೋಜನ ಮಾಡುವಿಕೆ, ಭಯಂಕರ ಸ್ವಪ್ನಗಳ ಭಯದಿಂದ ಬೆಚ್ಚಿ ಬೀಳುವದು ಇತ್ಯಾದಿ ಲಕ್ಷಣಗಳು ತೋರುತ್ತವೆ.
ಗರ್ಭಿಣಿ ಸ್ತ್ರೀಯರ ಸ್ನಾಯುವಿನೊಳಗೆ ಅರುಂಧತಿ ನಾಡಿಯು ವಶಿಷ್ಠ ನಾಡಿಯೊಂದಿಗೆ ನಕ್ಷತ್ರಗಳಂತೆ ಅತಿ ಸೂಕ್ಷ್ಮಗತಿಯಿಂದ ಒಮ್ಮೆ ಸ್ಥೂಲಗತಿಯಿಂದ ಮಂದಗತಿಯಿಂದ ಚಲಿಸುವದು. ವೃದ್ಧ ಬಾಲ ಉನ್ಮತ್ತರಾಗಿದ್ದವರ ನಾಡಿಗಳು ಅತಿಸೂಕ್ಷ್ಮವಾಗಿರುವುದರಿಂದ ಮುಟ್ಟಿದಲ್ಲಿ ಅವುಗಳ ಗತಿ ತಿಳಿಯಲಾರದು.
ರೋಗಿಯು ಉಂಡದ್ದು ಆತನ ಆಯುಷ್ಯವನ್ನು ಗುರುಕೃಪೆಯಿದ್ದ ವೈದ್ಯ ಹೇಳಲು ಸಾಧ್ಯ.
ಪ್ರಾಪ್ತವಾಗುವುದು
👇👇👇👇👇👇👇👇👇👇👇👇👇👇
ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
👉ವಾತಾದಿ ಮೂರು ದೋಷಗಳ ಹಾಗೂ ಅವುಗಳ ಪರಿಹಾರಕ್ಕೆ ಉಪಾಯ ಹೇಳಿದ್ದು
ಎಲ್ಲಾ ಕಥೆಗಳ ಲಿಂಕಗಳು
👉ಸಿದ್ಧಾರೂಢ ಭಾಗವತ ಕಥಾ ಸಂಗ್ರಹ 👉🛃
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ
1)WhatsApp shareಗಾಗಿ click ಮಾಡಿ📲☎️
2)Facebook shareಗಾಗಿ👉
3
«««««ಓಂ ನಮಃ ಶಿವಾಯ »»»»»»»
