ಸಿದ್ಧರು ಪ್ರಥಮವಾಗಿ ಹುಬ್ಬಳ್ಳಿ ಬಂದ ಕಥೆ

 ಹುಬ್ಬಳ್ಳಿಗೆ ಆಗಮನ 🌷



ನಾವಿಕನ ಋಣವನ್ನು ತೀರಿಸಿದೆ. ತಲೆಯ ಮೇಲಿನ ಭಾರವು  ಹೆಗಲ ಮೇಲಿಳಿಯಿತು. ನಾನು ಧನ್ಯನಾದೆ ಅಂತಾ ಅಂದುಕೊಳ್ಳುತ್ತಾ ಪುರ, ಪಟ್ಟಣ, ಹಳ್ಳಿಗಳಲ್ಲಿ ಸಂಚರಿಸುತ್ತಾ ಸಂಚರಿಸುತ್ತಾ ಸಿದ್ದನು ಹುಬ್ಬಳ್ಳಿಗೆ ಆಗಮಿಸುವನು. ಹಳೇಹುಬ್ಬಳ್ಳಿ ಪಶ್ಚಿಮಕ್ಕೆ ದೇವರ ಗುಡಿಹಾಳ ರಸ್ತೆಯ ಅಯೋಧ್ಯಾ ಭಾಗದ ಇಮಾಜಿ ಗುಡ್ಡಕ್ಕೆ ದನಕರುಗಳನ್ನು ತೆಗೆದುಕೊಂಡು ಹೋಗಿ ಅಲ್ಲಿ ಸಾಯಂಕಾಲದವರೆಗೆ ಮೇಯಿಸುತ್ತ ಊರಿನಲ್ಲಿ ಬರುವ ವಾಡಿಕೆ ದನಕಾಯುವ ಹುಡುಗರು ಹಾಕಿಕೊಂಡಿದ್ದರು. ಈ ಗೋಪಾಲಕರು ದನಗಳನ್ನು ಆ ಗುಡ್ಡದಲ್ಲಿ ಮೇಯಲು ಬಿಟ್ಟು ಆಟವಾಡುತ್ತಿರುವದನ್ನು  ಕಂಡ ಸಿದ್ಧನು  ಅವರ ಜೊತೆ ಸೇರಿಕೊಂಡನು. ಗುಂಡು, ಚಿಣಿಪಣಿ, ಬಗರಿ, ಸರಮನಿ, ಚೆಂಡು, ಪಟ, ಕಬಡ್ಡಿ, ಗಿಡ ಮಂಗನಾಟಗಳನ್ನು ಆಡುತ್ತಾ ಕಾಲ ಕಳೆಯುತ್ತಿದ್ದನು. ಯಾರಿಗೂ ತೊಂದರೆ ಕೊಡದೆ ಊರಲ್ಲಿ ಬಂದು, ಕಂಡ ಮನೆಯ ಮುಂದೆ ಭಿಕ್ಷೆಗಾಗಿ ಕೈಯ ಬೊಗಸೆಯೊಡ್ಡಿ ಮೌನದಿಂದ ನಿಲ್ಲುತ್ತಿದ್ದನು, ಆ ಬೊಗಸೆಯಲ್ಲಿ ಹಾಕಿದ ಅನ್ನವನ್ನು ಸೇವಿಸುತ್ತಾ ಸಂಚರಿಸುತ್ತಿರುವಾಗ ಕೆಲವರು  ಈತನು  ಹುಚ್ಚನೆಂದೂ  ಕೆಲವರು ಈತನು ತಿರುಕನೆಂದೂ ಮಾದಿಗನೆಂದು ಹೀನ ಭಾಷೆಯಿಂದ ನಡೆಯುತ್ತಿದ್ದುದನ್ನು ಕೇಳಿದರೂ, ಆ ಕಡೆ ಗಮನ ಕೊಡದೆ ಮುಂದೆ ಸಾಗುತ್ತಿದ್ದನು. ಅದೇ ಅಯೋಧ್ಯಾ  ಭಾಗದಲ್ಲಿ ಪರಪ್ಪ ಕರ್ಜಗಿ ಇವರ ಹೊಲದಲ್ಲಿದ್ದ ಒಂದು ಪುಟ್ಟ ಶಿವಾಲಯಕ್ಕೆ ಪ್ರತಿನಿತ್ಯ ರಾತ್ರಿ ಬಂದು ಸಿದ್ಧನು  ಮಲಗುತ್ತಿದ್ದನು.


ಇಲ್ಲಿ ಈತನನ್ನು ಕಂಡ ಜಡಿಮಠದ ಶಿವಲಿಂಗಯ್ಯ ಸ್ವಾಮಿಗಳು ಈತನು  ಮಹಾತ್ಮನೆಂದು ಗುರ್ತೈಸಿ  ತಡ ಮಾಡದೆ ಕೂಡಲೇ ಹಳೇ ಹುಬ್ಬಳ್ಳಿ ಅಕ್ಕಸಾಲಿಗರ ಓಣಿಯ ಪಕ್ಕಕ್ಕಿರುವ ಅಕ್ಕಿಪೇಟೆಯ  ಹನ್ನೆರಡು ಮಠಕ್ಕೆ ಬಂದರು. ಅಲ್ಲಿ ಇದ್ದ ಸಿದ್ದವೀರಯ್ಯ ಸ್ವಾಮಿಗಳನ್ನು ಕುರಿತು ಸ್ವಾಮಿಗಳೇ! ಆಶ್ಚರ್ಯ!! ನಾನು ಈ ದಿನ ಪ್ರಾತಃಕಾಲದಲ್ಲಿ ವಾಯುವಿಹಾರಕ್ಕಾಗಿ ಕರ್ಜಗಿ ಪರಪ್ಪನವರ ಹೊಲದ ಕಡೆ ಹೋಗಿದ್ದೆ. ಅಲ್ಲಿರುವ ಶಿವದೇವಾಲಯದಲ್ಲಿ ಈಶ್ವರ ಲಿಂಗ ದರ್ಶನಕ್ಕಾಗಿ  ಹೋದಾಗ ಹುಚ್ಚನಂತಿರುವ ಉನ್ಮತ್ತ ಅವಸ್ಥೆಯಲ್ಲಿಹ  ಒಂದು ವ್ಯಕ್ತಿಯನ್ನು ಕಂಡೆ.  ಅಜಾನುಬಾಹು, ವಿಶಾಲವಾದ ಎದೆ, ಉದ್ದವಾದ  ಕಾಲುಗಳು, ಪದ್ಮಾಸನಬದ್ಧನಾಗಿ ಈಶ್ವರ ಧ್ಯಾನದಲ್ಲಿ ಮಗ್ನನಾಗಿ ಈತನು ಮಹಾತ್ಮ ಅಂತಾ  ನನಗನಿಸಿದೆ  ಮುಂತಾಗಿ ವಿವರಿಸಿದರು. ಅದನ್ನು ಕೇಳಿದ  ತಾವೂ ದರ್ಶನ ಪಡೆಯಬೇಕೆಂಬ ಹಂಬಲದಿಂದ ಹನ್ನೆರಡು ಮಠದ ಸ್ವಾಮಿಗಳು ತಮ್ಮ ಶಿಷ್ಯಂದಿರಾದ  ಯರನಾಳ ಗುರುಪಾದಪ್ಪ, ನಡುಮನಿ ವೀರಪ್ಪ, ಮುದಗಲ್ ಗುರುಸಿದ್ದಪ್ಪ ಮುಂತಾದವರನ್ನು ಕೂಡಲೇ ಕರೆಸಿ, ಅವರೆಲ್ಲರನ್ನು ಕೂಡಿಕೊಂಡು ಪರಪ್ಪ ಕರ್ಜಗಿ ಹೋಲದಲ್ಲಿಯ  ಶಿವ ದೇವಾಲಯಕ್ಕೆ ಧಾವಿಸಿದರು. ಅಲ್ಲಿ ಹರಕ ಕವದಿಯನ್ನು ಹೊದ್ದುಕೊಂಡು ಚಿನುಮಯಾತ್ಮಕ

ಸರ್ಪಭೂಷಣ ಪರಶಿವನ ಧ್ಯಾನದಲ್ಲಿ ಏಕಾಗ್ರತೆಯಿಂದ ಮಗ್ನನಾಗಿದ್ದ ಸಿದ್ದನು, ಈಶ್ವರ ಲಿಂಗಕ್ಕೆ ಆತುಕೊಂಡು ಕೂತಿದ್ದನು. ಬಂದವರಲ್ಲಿ ಒಬ್ಬನು ಮೆಲ್ಲಗೆ ಒಳಗೆ ಇಣಿಕಿ ಹೆಡೆಯೆತ್ತಿದ ಘಟಸರ್ಪ ಸಿದ್ದನ ತಲೆಯ ಮೇಲೆ ಆಡುತ್ತಿದ್ದುದನ್ನು ಕಂಡು, ಭಯಗ್ರಸ್ತನಾಗಿ ಹಾವು ಇದೆ ಅಂತಾ ಕೂಗಾಡಲು ಎಲ್ಲರೂ ದೂರಿನಿಂದ ನೋಡಿದರು. ಬಳಿಕ ಆ ಭಯಂಕರ ಘಟಸರ್ಪವು  ಮೆಲ್ಲನೆ ಇಳಿದು ಗೋಡೆಯಲ್ಲಿದ್ದ ಜಲಹರಿಯೊಳಗೆ ಹೋಗಿ ಅದೃಶ್ಯವಾಯಿತು.


ಈ ದೃಶ್ಯವನ್ನು ಕಂಡು ಈತನು ಮಹಾತ್ಮನಿರುವನು ಎನ್ನುತ್ತಾ ಅಂಜುತ್ತಾ ಒಳಗೆ ಹೋಗಿ ಮಾತಾಡಿಸಿದರು. ಅವರಿಗೆ ಪ್ರತಿ ಮಾತನಾಡದೆ ಸಿದ್ದನು ಮೌನದಿಂದ ಸುಮ್ಮನಿದ್ದನು. ಕೊನೆಗೆ ಅವರೆಲ್ಲರೂ ಕೂಡಿ ಆತನ ಕೈಗಳನ್ನು ಹಿಡಿದುಕೊಂಡು ಹರ್ಷದಿಂದ ಹನ್ನೆರಡು ಮಠಕ್ಕೆ ಕರೆತಂದರು. ಕ್ಷೌರಿಕನನ್ನು  ಕರೆತಂದು ಕ್ಷೌರ  ಮಾಡಿಸಿದರು. ಮೈಗೆ ಎಣ್ಣೆ ಉಣಿಸುತ್ತಾ ತಿಕ್ಕಹತ್ತಿದರು. ಕೊಳೆಯಾದ ದೇಹದಿಂದ ತಿಕ್ಕಿದಂತೆಲ್ಲ ಮಣ್ಣಿನ ಬಳ್ಳಿಗಳಾಗಿ ಬೀಳುತ್ತಿದ್ದವು. ಒಂದು ಸೇರು ಕೊಬ್ಬರಿ ಎಣ್ಣೆ ಯನ್ನು ಮೈಗೆ ಉಣಿಸಿದರು. ಬಿಸಿ ನೀರಿನಿಂದ ಅಭ್ಯಂಗ ಸ್ನಾನವನ್ನು ಮಾಡಿಸಿ, ಮಡಿಯ ದೂತರು ಕೊಟ್ಟರು. ಶಾವಿಗೆ ಪಾಯಸ ಮಾಡಿ ಉಣಬಡಿಸಿದರು. ನಂತರ ಮಲಗಿಸಲು ನಿದ್ರೆಯಾವರಿಸಿತು. ಮಾರನೇ ದಿನ ಎಚ್ಚರವಾದ ಕೂಡಲೇ ಆ ಮಠದ ಸ್ವಾಮಿಯು  ಸಿದ್ಧನನ್ನು ಕುರಿತು ಅಯ್ಯಾ ಸ್ವಾಮಿಗಳೇ ಶೌಚಕ್ಕೆ ಹೋಗುವಿರೋ  ಎಂದು ಕೇಳಿದರು. ಅದಕ್ಕೆ ಹೌದು ಅಂತ ಹೇಳಿ ಅಲ್ಲಿಂದ ಬಿಡುಗಡೆಯಾದನೆಂದು ಯಾರಿಗೂ ಕೈಗೆ ಸಿಗದಂತೆ ಹೋದನು. ಯಾರಿಗೂ ಕಾಣದಂತೆ ಅಡವಿಯಲ್ಲಿಯೇ  ಇದ್ದುಕೊಂಡು ದನ ಕಾಯುವ ಹುಡುಗರಿಂದ ಸಲುಗೆಯಿಂದ ರೊಟ್ಟಿಯನ್ನು ಇಸಕೊಂಡು ತಿನ್ನುತ್ತಾ ಅವರ ಕೂಡ ಆಟವಾಡುತ್ತಾ ಆರು ತಿಂಗಳುಗಳವರೆಗೆ ಕಾಲ ಕಳೆದನು. ಇತ್ತಕಡೆ ಹನ್ನೆರಡು ಮಠದ ಸ್ವಾಮಿಗಳ ಶಿಷ್ಯರೆಲ್ಲರೂ ಸಿದ್ಧನನ್ನು ಹುಡುಕಿ ಹುಡುಕಿ ಸಿಗದಾದ  ಕಾರಣ ನಿರಾಶರಾದರು.


ಹಳೇಹುಬ್ಬಳ್ಳಿಯ ಗಾಣಿಗೇರ ಚನ್ನಪ್ಪನ ಚೌಕಿಯಲ್ಲಿ ಶರಣಪ್ಪನೆಂಬವನು ಪ್ರತಿನಿತ್ಯ ಸಂಜೆ ನಿಜಗುಣರ  ಪರಮಾನುಭವ ಬೋಧೆಯ ಶಾಸ್ತ್ರ ಪ್ರವಚನವನ್ನು ನಡೆಸುತ್ತಿದ್ದನು. ದಿನಾಲು ಕಡ್ಡಿ ಪ್ರಭಪ್ಪ, ಉಜ್ಜಣ್ಣವರ ಭೀಮಣ್ಣ ಮೊದಲಾದ ೧೫, ೨೦ ಜನರು ಬಂದು ಶ್ರವಣ ಮಾಡುತ್ತಿದ್ದರು. ಒಂದಾನೊಂದು ದಿನ ಸಿದ್ದನು ಸಂಚರಿಸುತ್ತ ಸಾಯಂಕಾಲ ಆ ಚೌಕಿಗೆ ಬಂದು ಹೊರಗೆ ಕಟ್ಟೆಯ ಮೇಲೆ ಮರೆಯಲ್ಲಿ ಕೂತುಕೊಂಡು ಶಾಸ್ತ್ರವನ್ನು ಕೇಳತೊಡಗಿದರು. ಶಾಸ್ತ್ರ ಪ್ರವಚನದಲ್ಲಿ ಏಕಾಗ್ರ ಚಿತ್ತದಿಂದ ಕೂಡಿದವರು ಕೇಳುತ್ತಿಲಿದ್ದರು. ಶರಣಪ್ಪನು ಪ್ರವಚನ ಪ್ರಾರಂಭಿಸಿದ್ದನು. ಪರಮಾನುಭವ ಬೋಧೆಯ  ಮೂರನೇ ಸಂಧಿ ಐದನೇ ಸೂತ್ರದಲ್ಲಿಯ  ಎರಡನೇ ಪದ ಚಿತ್ ಪದದ ಅರ್ಥವನ್ನು ವಿವರಿಸುತ್ತಲಿದ್ದನು, ಚಿತ್ತು ಶಬ್ದಕ್ಕೆ ಕರಣ ಅಂತಾ ಅರ್ಥ ಮಾಡಿ ಪದೇ ಪದೇ ಹೇಳುತ್ತಿದ್ದುದನ್ನು ಕೇಳಿದ ಸಿದ್ದನು ಹೊರಗಿನಿಂದಲೇ ಜೋರಾಗಿ ಅವರನ್ನು ಕುರಿತು ಅಯ್ಯಾ ಶಾಸ್ತ್ರಿಗಳೇ ಚಿತ್ತು ಶಬ್ದಕ್ಕೆ ಕರಣವೆನ್ನುವುದು ಸರಿಯಲ್ಲ. ಹಾಗೇ ಅರ್ಥೈಸಬಾರದು ಅಂತ ಹೇಳಿದನು. ಆ ಧ್ವನಿಯನ್ನು ಕೇಳಿ ಹೊರಗೆ ಬಂದು ಹುಚ್ಚನಂತೆ ಕುಳಿತು ಸಿದ್ಧನನ್ನು ವಿನಯದಿಂದ ಒಳಗೆ ಕರೆದುಕೊಂಡು ಬಂದು ಉಚಿತಾಸನದಲ್ಲಿ ಕುಳ್ಳಿರಿಸಿ ಶರಣಪ್ಪನು ಆತನನ್ನು ಕುರಿತು ಹೇ ಸ್ವಾಮಿಗಳೇ, ನಾನು ಅರ್ಥ ಮಾಡಿದ್ದುದು  ಸರಿಯಲ್ಲ ಅಂತಾ ತಮ್ಮ ಅಭಿಪ್ರಾಯವಾದರೆ ನಮಗೆಲ್ಲ ತಿಳಿಯುವಂತೆ ಸರಿಯಾದ ಅರ್ಥವನ್ನು ಹೇಳಿ ಉದ್ದರಿಸು ಅಂತಾ ಕರಜೋಡಿಸಿ ಬೇಡಿಕೊಂಡನು. ಕೂಡಿದ ಶ್ರವಣಾಪೇಕ್ಷಿಗಳು ಸಿದ್ಧನನ್ನು ಕಂಡು ದರ್ಶನ ಪಡೆದು ವಂದನೆಗಳನ್ನು ಮಾಡಿದರು. ಆಗ ಸಿದ್ಧನು  ಹರ್ಷಚಿತ್ತದಿಂದ ಹೇ ಶ್ರವಣಾಪೇಕ್ಷಿಗಳಾದ ಮುಮುಕ್ಷುಗಳೇ  ಕೇಳಿರಿ. ನಿಜಗುಣಾರ್ಯರು  ಸಂಸ್ಕೃತದಲ್ಲಿಯ ತತ್ವಗಳನ್ನು ಸುಲಲಿತ ಕನ್ನಡ ನುಡಿಯಲ್ಲಿ ಬರೆದು ಕನ್ನಡ ನಾಡಿಗೆ ಆಧ್ಯಾತ್ಮ ಚಿಂತನೆಯ ಅಮೂಲ್ಯ ಕೊಡುಗೆಯನ್ನು ನೀಡಿ, ಅವಿಸ್ಮರಣೀಯರಾಗಿದ್ದಾರೆ.


ಅವರ ಗ್ರಂಥದ ಪ್ರವಚನ ನಡೆಸುವವರು ಮತ್ತು ಕೇಳುವವರು ಧನ್ಯರು. ನಿಮ್ಮೊಡನೆ ಶ್ರವಣದಲ್ಲಿ ಭಾಗಿಯಾಗುತ್ತಿರುವ ನನಗೆ ಅತಿ ಹರ್ಷವಾಗಿದೆ. ಚಿತ್ತು ಶಬ್ದಕ್ಕೆ ಕರಣ ಸರಿಯಲ್ಲ. ಕರಣವೆಂದರೆ ಕಾರ್ಯ ಮಾಡುವ ಸಾಧನ, ಸಲಕರಣೆ ಹೀಗಾಗಿ ಚಿತ್ತನ್ನು ಸಾಧನ ಸಲಕರಣೆ ಅನ್ನಲಾಗದು. ಚಿತ್ ಅಂದರೆ ಜ್ಞಾನ ಅರ್ಥಾತ್ ಇಲ್ಲಿ ಆತ್ಮನೆಂದು ಅರ್ಥೈಸಬೇಕು. ಸ್ವಸ್ವರೂಪ ಜ್ಞಾನವೇ ಹೊರತು ಬೇರೆ ಇಲ್ಲ. ಈ ಪ್ರಕಾರ ನೈಜವಾದ ಅರ್ಥದೊಂದಿಗೆ ಸೂತ್ರದ ತಿರುಳನ್ನು ಹೇಳುತ್ತಿರುವಂತೆ ಎಲ್ಲರೂ ತಲೆದೂಗಿದರು. ಪಂಚ ಪಕ್ವಾನ್ನಗಳನ್ನು ತರಿಸಿ  ಸಿದ್ಧನ ಜೊತೆಗೆ ಎಲ್ಲರೂ ಅನ್ನ ಪ್ರಸಾದ ಸ್ವೀಕರಿಸಿ ಮಹದಾನಂದದಲ್ಲಿ ಮುಳುಗಿದರು. ರಾತ್ರಿ ಸಮಯವಾಗಿದ್ದರಿಂದ ಸಿದ್ಧನು ಅಲ್ಲಿಯೇ ಮಲಗಿದನು. ಬೆಳಗಾಗುವುದರೊಳಗಾಗಿ ಎಚ್ಚರಗೊಂಡ ಸಿದ್ದನು ಸದ್ದು ಮಾಡದೇ ಅಲ್ಲಿಂದ ಯಾರಿಗೂ ಹೇಳದ ತೆರಳಿದನು. ಬಳಿಕ ಎಚ್ಚರಾದ ಉಳಿದವರು ಸಿದ್ಧನು  ಇಲ್ಲದ್ದನ್ನು ಕಂಡು ಚಕಿತರಾಗಿ ಹಾಯ್ ಹಾಯ್ ದೊರೆತ ಚಿನ್ನದ ಮುದ್ದಿಯನ್ನು ಕಳಕೊಂಡು ಬುದ್ಧಿಹೀನರಾದೆವು ಅಂತಾ ಮರಗುತ್ತಾ ಅಲ್ಲಿಯೇ ಸಮೀಪದಲ್ಲಿದ್ದ ಹನ್ನೆರಡು ಮಠಕ್ಕೆ ಆಗಮಿಸಿದರು. ನಿನ್ನೆ ನಡೆದ ವಿಚಾರವನ್ನು ಸಿದ್ಧವೀರ ಸ್ವಾಮಿಗಳಿಗೆ ತಿಳಿಸಿದರು. ಘಟಸರ್ಪವು  ತಲೆಯ ಮೇಲೆ ಆಡಿದ ಸಂಗತಿಯನ್ನು ನೆನಪಿನಲ್ಲಿ ತಂದುಕೊಂಡು ಈತನು ಸರ್ಪಾಭರಣ ಪರಶಿವನೇ ಈ ರೂಪದಿಂದ ಬಂದದ್ದು  ಸತ್ಯ ಅಂತಾ ನುಡಿಯತೊಡಗಿದರು. ಆಗ ಸ್ವಾಮಿಗಳು ಭಕ್ತರನ್ನು ಕುರಿತು ಆ ಮಹಾತ್ಮನನ್ನು ಶೋಧ ಮಾಡಿ ಕರಕೊಂಡು ಬನ್ನಿರಿ. ಬಿಡಬೇಡಿ ಪರಿಶ್ರಮ ಮಾಡಬೇಕು ಅಂತ ಆಗ್ರಹ ಮಾಡಿದರು. ಪುರದ ಬೀದಿ ಬೀದಿಗಳಲ್ಲಿ ಸುತ್ತಲಿನ ಹೊಲಗದ್ದೆಗಳಲ್ಲಿ ಎಲ್ಲಾ ಸ್ಥಳಗಳಿಗೆ ತೆರಳಿದರೂ ಸಿಗಲಾರದ್ದಕ್ಕೆ ಬಹಳ ನೊಂದುಕೊಂಡರು.


ಗಾಣಿಗರ  ಮನೆಯಿಂದ ಹೊರಟ ಸಿದ್ಧನು  ಅಲ್ಲಲ್ಲಿ ತಿರುಗಾಡುತ್ತಾ ಯಾರ ಕೈಗೆ ಸಿಗದೇ ತೊರವಿಬಾವಿಯಲ್ಲಿ ಇಳಿದು ಅಲ್ಲಿ ವಾಸ ಮಾಡತೊಡಗಿದನು. ಸುತ್ತಲೂ ಮುಳ್ಳು ಕಂಟಿಗಳ ಗಿಡಗಳು ವಿಷಜಂತುಗಳಿಂದ ಕೂಡಿದ ಅದೊಂದು  ಹಾಳುಭಾವಿಯಾಗಿದ್ದರಿಂದ ಅಲ್ಲಿ ಯಾರೂ ಬರುತ್ತಿದ್ದಿಲ್ಲ. ಜನರು ಬಾರದ ಈ  ಹಾಳು ಸ್ಥಳ ತನಗೆ ಯೋಗ್ಯ ಅಂತ ಸಿದ್ಧನು  ಅಲ್ಲಿ ಏಕಾಂಗಿಯಾಗಿದ್ದನು. ಹನ್ನೆರಡು ಮಠದ ಸ್ವಾಮಿಗಳು ಭಕ್ತವೃಂದದೊಂದಿಗೆ ಶಿವದೇವಾಲಯದಲ್ಲಿ ಸರ್ಪದ ಹೆಡೆಯ  ಕೆಳಗೆ ಇದ್ದ ಬಗ್ಗೆ ಗಾಣಿಗರ ಚೌಕಿಯಲ್ಲಿ ಶಾಸ್ತ್ರ ಪ್ರವಚನ ಮಾಡಿದ ಬಗ್ಗೆ ಹುಚ್ಚನಂತೆ ಉನ್ಮತ್ತನಂತೆ ಸಂಚರಿಸುತ್ತಿದ್ದ ಸಿದ್ದನು ಓರ್ವ ಮಹಾತ್ಮನೆಂದು ಈತನ ದರ್ಶನ್ ಪಡೆಯಬೇಕೆಂದೂ  ಈತನ ಮುಖದಿಂದ ಅಧ್ಯಾತ್ಮ ಸುಧಾಪಾನ ಮಾಡಬೇಕೆಂಬ ಹಂಬಲದ ಕುರಿತು ವಾರ್ತೆ ಹುಬ್ಬಳ್ಳಿ ಪುರದ ತುಂಬಾ ದಟ್ಟವಾಗಿ ಹರಡಿತು.


ಈತನು ಯಾರ ಕಣ್ಣಿಗೆ ಕಾಣದೇ ಅಡಗಿದನೆಂತಲೂ ಈತನನ್ನು ಶೋಧ ಮಾಡಬೇಕೆಂದು ಜನರು ಅಲ್ಲಲ್ಲಿ ಉತ್ಸುಕತೆಯಿಂದ ನೋಡುತ್ತಿದ್ದರು. ಈ ಚಿಂತನೆಯ ಪಕ್ವತೆಯಲ್ಲಿ ಕೆಲವರು ತೊರವಿ ಹಾಳು ಬಾವಿಯಲ್ಲಿ ಇಣುಕಿ ನೋಡಿದರು. ಅಲ್ಲೇ ಈತನ ಇರುವಿಕೆಯನ್ನು ಗುರ್ತೈಸಿದವರು ಭರದಿಂದ ಊರಲ್ಲಿ ಬಂದು ಬಹು ಪ್ರಸಿದ್ಧ ದೊಡ್ಡ ವೈಶ್ಯನು, ಮಹಾತ್ಮರಲ್ಲಿ ಭಯಭಕ್ತಿಯುಳ್ಳ ಮದಲೇಟೆಪ್ಪನೆಂಬವನನ್ನು ಆ ಬಾವಿಗೆ ಕರೆತಂದರು. ಆ ಬಾವಿಯಲ್ಲಿ ದೃಷ್ಟಿ ಬೀರಲು, ಸೂರ್ಯನ ಕಿರಣಗಳ ಪ್ರಕಾಶ ದಂತೆ ಪರಬ್ರಹ್ಮ ತೇಜಃಪುಂಜದಿಂದಲೂ, ಕಜೂರ ಫಲದ ವರ್ಣದಂತಿರುವ ಮುಖ ಕಮಲ ದಿಂದಲೂ, ಒಣಗಿದ ಮೈಯುಳ್ಳವನೂ, ಚಿನ್ಮಯ ಸ್ವರೂಪದಿಂದ ಬ್ರಹ್ಮಾನಂದವಲ್ಲಿ ರತನಾದ ಸಿದ್ಧನನ್ನು ಕಂಡು ಹರ್ಷದಿಂದ ನಮನಗಳನ್ನು ಅರ್ಪಿಸುತ್ತಾ ಆತನ ಕರವನ್ನು ಹಿಡಿಯುತ್ತಾ ಮೇಲಕ್ಕೆ ಕರೆತಂದನು. ಪ್ರಾತಃಕಾಲದಲ್ಲಿ ಸೂರ್ಯನಾರಾಯಣನ ರಥವನ್ನು ಎಳೆಯುವ ಅರುಣೋದಯದ ಪ್ರಕಾಶದಂತೆ ಸಿದ್ದನು ಆ ಭಾವಿಯಿಂದ ಮೇಲೆ ಬರುವಾಗ ಕಂಡನು. ನಂತರ ಮದಲೇಟಪ್ಪನು ತನ್ನ ಮನೆಗೆ ಕರೆತಂದು, ಅಭ್ಯಂಗ ಸ್ನಾನವನ್ನು ಮಾಡಿಸಿ, ಪೂಜೆ ಮಾಡಿ ಮೃಷ್ಟಾನ್ನ ಭೋಜನ ನೀಡಿ, ಶುಭ್ರ ವಸ್ತ್ರವನ್ನು ಹೊದಿಸಿ ಸಿದ್ಧನನ್ನು ಮಲಗಿಸಿದನು. ಮಾರನೇ ದಿನ ಪ್ರಾತಃಕಾಲ ಎಚ್ಚರ. ಗೊಂಡ ಸಿದ್ಧನು  ಎಲ್ಲ ವಸ್ತುಗಳನ್ನು ಅಲ್ಲಿಯೇ ಬಿಟ್ಟು ತನ್ನ ಜೀರ್ಣವಸ್ತ್ರಗಳನ್ನು ತೆಗೆದುಕೊಂಡು ಅಲ್ಲಿಂದ ತೊರವಿ ಬಾವಿಗೆ ಪುನಃ ಮರಳಿದನು. ಈತನ ಬಲವತ್ತರ. ವೈರಾಗ್ಯವನ್ನು ಕಂಡು ಮದಲೇಟೆಪ್ಪನು ಚಕಿತನಾದನು. ಇಲ್ಲಿಯೇ ಇದ್ದಾಗ ತನ್ನ ಶಿಷ್ಯರೊಂದಿಗೆ ಗುರುಲಿಂಗಯ್ಯನು  ಬಂದು ತನ್ನಲ್ಲಿಯ  ಸಂಶಯಗಳನ್ನು ನಿವಾರಿಸಿ ಕೊಂಡು ಸಂತಸಭರಿತವಾಗಿ ಕೊಂಡಾಡುತ್ತಾ ಹೋದನು.

👇👇👇👇👇👇👇👇👇👇👇👇👇👇

ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜನ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ, ಬೇರೆಯರಿಗೂ share ಮಾಡಿ, ಅವರಿಗೂ help ಮಾಡಿ ಅಜ್ಜನ ಕೃಪೆಗೆ ಪಾತ್ರರಾಗಿರಿ

ಈ link ಒತ್ತಿ 👉 📖 👈 ಒತ್ತಿ

ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ

👉ಹುಬ್ಬಳ್ಳಿಯ ಗವಿ ಓಣಿಯಲ್ಲಿಯ ಕ್ಷೀರಸಾಗರ ಬಸವಣ್ಣೆಪ್ಪನ ಮನೆಯಲ್ಲಿ ಸಿದ್ಧನು ಯೋಗವಾಶಿಷ್ಠ ಗ್ರಂಥ ಶ್ರವಣ ಮಾಡಿಸುವಾಗ ಜನಸಾಗರದ ಸಂಗಮ.

ಎಲ್ಲಾ  ಕಥೆಗಳ ಲಿಂಕಗಳು 

👉ಸಿದ್ಧಾರೂಢ ಭಾಗವತ ಕಥಾ ಸಂಗ್ರಹ 👉🛃

ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 

1)WhatsApp shareಗಾಗಿ click ಮಾಡಿ📲☎️

2)Facebook shareಗಾಗಿ👉

3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚



«««««ಓಂ ನಮಃ ಶಿವಾಯ »»»»»»»


Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ