ಸಿದ್ಧರಿಂದ ಚಿದಂಬರ ದೀಕ್ಷಿತನಿಗೆ ಮುಮುಕ್ಷತ್ವದ ಮಾರ್ಗದರ್ಶನ

 ✡️ ಸಿದ್ಧರಿಂದ ಚಿದಂಬರ ದೀಕ್ಷಿತನಿಗೆ ಮುಮುಕ್ಷತ್ವದ  ಮಾರ್ಗದರ್ಶನ 



ಸಿದ್ದನು ಬೋಧ ಮಾಡಿದ ವಾರ್ತೆಯು ಆ ನಗರದ ತುಂಬಾ ಪಸರಿಸಿತು. ಸಕ್ಕರೆಗೆ ಇರುವೆಗಳು ಮುತ್ತುವಂತೆ ನಗರದ ಜನತೆಯು ಸಿದ್ದನಿದ್ದಲ್ಲಿಗೆ ಬಂದು ಸುತ್ತುವರದರು. ಕೂಡಿದವರಲ್ಲಿ ಒಬ್ಬನು ಬಂದು, ಹೇ ಮಹಾತ್ಮನೇ, ಈ ಜಗತ್ತು ಯಾವ ಪ್ರಕಾಶದಿಂದ ಬೆಳಗುವದು ನಮಗೆ ತಿಳಿಸಿರಿ ಅಂತಾ ಕೇಳಿದನು.


ಆಗ ಸಿದ್ದನು ಹಗಲಿನಲ್ಲಿ ಈ ಜಗತ್ತು ಸೂರ್ಯಪ್ರಕಾಶದಿಂದ ಬೆಳಗುವದು.

ರಾತ್ರಿಯಲ್ಲಿ ದೀಪಗಳಿಂದಲೂ, ಚಂದ್ರ, ನಕ್ಷತ್ರ ಪ್ರಕಾಶಗಳಿಂದ ಬೆಳಗುವದು. ಇವರೆಲ್ಲರನ್ನು ನೇತ್ರವು ಬೆಳಗುವದು. ನೇತ್ರ ಮುಚ್ಚಲು ಬುದ್ದಿ ಪ್ರಕಾಶದಿಂದ ಬೆಳಗುವದು. ಆ ಬುದ್ದಿಯನ್ನು ಅಹಂಕಾರ ರೂಪ ಜೀವನು ಬೆಳಗುವನು. ಅಹಂಕಾರವು ಸಮಾಧಿಯಲ್ಲಿ ಲಯವಾಗಲು ಚಿದಾಭಾಸನು ಬೆಳಗುವನು. ಚಿದಾಭಾಸನು ಆತ್ಮನಲ್ಲಿ ಐಕ್ಯವಾಗಲು ಒಳಗೆ ಮತ್ತು ಹೊರಗೆ ಎಂಬುದನ್ನು ಅಳಿಯಲು ಸ್ವಯಂ ಜ್ಯೋತಿ ಸರ್ವವನ್ನು ಬೆಳಗುತಿಹಾತನೇ ಸತ್ಯನಾದ ಆತ್ಮನೇ ನೀನು ಎಂದು ಆನಂದದಿಂದ ಹೇಳಿದನು. ಈ ನುಡಿಗಳನ್ನು ಕೇಳಿದ ಆ ವಿಪ್ರನು ನಾನು ಧನ್ಯನಾದೆ. ನನ್ನ ತಂದೆ ತಾಯಿಗಳು ನನ್ನ ವಂಶವೆಲ್ಲ ಧನ್ಯತೆ ಪಡೆಯಿತು. ನಿನಗೆ ಜಯವಾಗಲಿ ಅಂತಾ ಹರ್ಷೋಲ್ಲಾಸಗಳಿಂದ ಸಿದ್ದನ ಪಾದಕಮಲಗಳಿಗೆ ದಂಡವತ್ ಪ್ರಣಾಮಗಳನ್ನು ಮಾಡಿ ಮೌನದಿಂದ ಕೂತನು.


ಚಿದಂಬರ ದೀಕ್ಷಿತನು ಮುಂದೆ ಬಂದು ಹೇ ಮಹಾತ್ಮನೇ, ತತ್ವಮಸಿಯ ಅರ್ಥವನ್ನು ತಿಳಿಸೋಣವಾಗಬೇಕು ಎನಲು ಸಿದ್ದನು ಶಂಭುರೂಪನೆ ನೀನಿರುವಿ ಎಂದು ಪೇಳಲು ದೀಕ್ಷಿತನು ಪುನಃ ಅಯ್ಯಾ ಸಿದ್ದನೇ ಕಿಂಚಿತ್ ಭೋಗವನ್ನು ಲಕ್ಷಿಸಿ ಶೃತಿಯಂತೆ ಪುರುಷನೊಬ್ಬನು ಅರಸನಿಗೆ ನೀನು ಅರಸನು ಎಂದು ಹೇಳುವದು ಜೀವನಲ್ಲಿ ಕಿಂಚಿತ್ ಜ್ಞಾನ ಇರುವದನ್ನು ತಿಳಿದು ತಿಳಿದೂ ನೀನು ಘನವಾದ ಜ್ಞಾನಿಯೆನ್ನುವದು ಸಾಮ್ಯವು. ಆದರೆ ಇದು ಸತ್ಯವಲ್ಲ. ಶೃತಿಯ ಭಾವಾರ್ಥವನ್ನು ತಿಳಿಯದೆ ಬೋಧ ಮಾಡುವದು ಉಚಿತವೇ ಇದಕ್ಕೆ ಪಂಡಿತರು ಒಪ್ಪಲಾರರು ಅಂತಾ ಪೇಳಲು ಸಿದ್ದನು ಉತ್ತರಿಸತೊಡಗಿದನು.


ಅರಸನಿಗೆ ದೇವೇಂದ್ರನೆಂದು ಉದಾರತನದಿಂದ ಹೊಗಳಿ ಹೊಗಳಿ ಧನವನ್ನು ಸೆಳೆಯುವ ಬಡ ಯಾಚಕನ ಸ್ತುತಿಯಂತೆ, ಶ್ರೇಷ್ಠ ಇಚ್ಛೆಯಿಂದ ಶೃತಿಯ ಹೊಗಳುವ ಬಡ ಯಾಚಕನೇ ? ಜೀವನು ಶ್ರೇಷ್ಠ ದಾತೃವೇ ಬ್ರಹ್ಮ ತಾನು ಉಪಮಾನವೇ ಎಂದು ತಿಳಿದುಕೊಳ್ಳಲು ಆತ್ಮನು ನಿತ್ಯ ಮುಕ್ತನು, ಜರೆ ಮರಣ ದುಃಖಾದಿರಹಿತನು, ಸತ್ ಚಿತ್ ಆನಂದ ಲಕ್ಷಣನು, ನಿರುಪಮ ಅದ್ವೈತನು, ಹೀಗಿರಲು ಈ ದೃಷ್ಟಾಂತವು ವಿಷಯವಿರಲು ದ್ವೈತದ  ನುಡಿಯುಳ್ಳ ನಿನಗೆ ಹೇಗೆ ಸಿದ್ಧಿಸುವದು, ಕರ್ಮ, ಗುಣ, ವರ್ಣಾಶ್ರಮಗಳು ಕರ್ಮರಚಿತ ಶರೀರಕ್ಕೆ ಸಂಬಂಧ. ಆದರೆ ಆತ್ಮನಿಗೆ ಸ್ಪರ್ಶಿಸಲಾರವು.

ನಿರ್ಮಲವಾದ ಮಹಾವಾಕ್ಯವು ಕರ್ಮಪರವಲ್ಲ, ಕಾರಣ ಅದು ಸ್ತುತಿಪರವಲ್ಲ, ಸುಖೇಚ್ಚಾತತ್ವಮಸಿಯನ್ನು ನೀನು ಸ್ತುತಿಗೈಯುವದು, ಸತ್ಯವೆಂದಲ್ಲಿ ವಿಜ್ಞಾನಿಗಳು ನಿತ್ಯ ವರ್ಣಾಶ್ರಮಗಳಿಗೆ ಮನದಿಂದ ಒಪ್ಪಿ ಕರ್ಮ ಮಾಡಬಹುದಾಗಿತ್ತು. ಆದರೆ ಹೀಗಿಲ್ಲದ್ದರಿಂದ ಶೃತಿಯು ಸ್ತೌತ್ಯಪರವಲ್ಲ ಅಂತಾ ಹೇಳಿದ್ದನ್ನು ಕೇಳಿ ಚಿದಂಬರ ದೀಕ್ಷಿತನು ಸಂತಸಭರಿತನಾದನು. ಮತ್ತೊಬ್ಬ ರಾಮ ದೀಕ್ಷಿತನು ಸಿದ್ಧನನ್ನು ಕುರಿತು ಹೇ ಶಾಂತಮೂರ್ತಿಯೆ, ಪರಮವಾಕ್ಯದಲ್ಲಿ ನನಗೆ ಸಂಶಯವುಂಟಾಗಿದೆ. ಶಿಲಾ ಮೂರ್ತಿಗೆ ಹರಿಯೆನ್ನುವಂತೆ ಜೀವನಿಗೆ ಬ್ರಹ್ಮನೆಂದು ಉಪಾಸನೆಯನ್ನು ಬಿಡದೆ ಮಾಡುವರು. ನಾನು ಅಹಂ ಬ್ರಹ್ಮಾಸ್ಮಿ  ಉಪಾಸಕನು ಇರುವೆನು. ಕಾರಣ ಶ್ರುತಿಯು ಉಪಾಸನಾ ಪರವಾಗಿದೆಂದು ಅನುಮಾನವಿದೆ ಅಂತಾ ಹೇಳಿದನು.


ಆಗ ಸಿದ್ದನು ಅಯ್ಯಾ ವಿಪ್ರನೆ ಜ್ಞಾನಿಗೆ ಮಾನಸಿಕವಾಗಿ ಕರ್ಮಗಳಿಲ್ಲ. ಶೃತಿವಾಕ್ಯವನ್ನು ಪರೀಕ್ಷಿಸಲು ಉಪಾಸನಾ ಪರವೆಂಬುದು ನಿಜವಲ್ಲ. ಇದಕ್ಕೆ ಪ್ರಮಾಣ ಈ ಕೆಳಗಿನಂತಿದೆ.


ನಕರ್ಮಣಾ ನಪ್ರಜಯಾ ನಧನೇ 

ನತ್ಯಾಗೇ ನೈಕೇ ಅಮೃತತ್ವ ಮಾನಶಃ 

ಈ ಪ್ರಕಾರ ಶೃತಿವಾಕ್ಯವಿರಲು ನೀ ತ್ಯಾಗವು ಶ್ರೇಷ್ಟತೆಯೆನಲು 

ಜ್ಞಾನದೇವತು ಕೈವಲ್ಯಂ ನಾನ್ಯಃ ಪಂಥಾ ಅಯನಾಯ ವಿದ್ಯತೆ|| 


ಕಾರಣ ಶೃತಿಯು ಜ್ಞಾನಪರವಿದೆ. ಆದರೆ ಉಪಾಸನಾ ಪರವಲ್ಲ.

ಅಹಂ ಬ್ರಹ್ಮಾಸ್ಮಿ ಎಂಬ ಶೃತಿವಾಕ್ಯವನ್ನು ತಿಳಿದುಕೊಳ್ಳಬೇಕು. ಹಮ್ಮೆ ದೇವಾಲಯವು ಬ್ರಹ್ಮವೇ ದೈವತವೆಂದು ನಿಜವಾಗಿ ಉಪಾಸನೆ ಮಾಡುತ್ತಿರಲು ನಿಮ್ಮ ಉಪಾಸ್ಯ ಮತ್ತು ಉಪಾಸತ್ವದ ಹಮ್ಮು ಅಳಿದು ಬೊಮ್ಮನಾಗುವದರಿಂದ ನಮ್ಮದು ನಿರ್ಗುಣವಲ್ಲದೆ ಸಗುಣಪರವಲ್ಲ. 


ಮಾಂಡುಕ್ಯಪನಿಷತ್ ವಾಕ್ಯ ಹೀಗಿದೆ :-


ನಾಂತಃ ಪ್ರಜ್ಞಂ ನ ಬಹಿಷ್ಟ್ರಜ್ಞಂ ನೋ ಭಯತಃ || ಪ್ರಜ್ಞoನ ಪ್ರಜ್ಞಾನ ಘನಂ ನ ಪ್ರಜ್ಞಂ ನಾ ಪ್ರಜ್ಞಾ ಮ್ 

ಅದೃಷ್ಟಮವ್ಯವಹಾರ್ಯ ಮಗ್ರಾಹ್ಮ ಮಲಕ್ಷಣ ಮಚಿಂತ್ಯ 

ಮವ್ಯಪದೇಶ್ಯಮೇಕಾತ್ಮ ಪ್ರತ್ಯಯ ಸಾರಂ ಪ್ರಪಂಚೋಪಶಮಂ ಶಾಂತಂ ಶಿವಮ ದ್ವೈತ೦

ಚತುರ್ಥo ಮನ್ಯoತೇ ಆತ್ಮಾ ಸವಿಜ್ಞೆಯಃ


ಅಹಂ ಬ್ರಹ್ಮಾಸ್ಮಿ ಆ ಶೃತಿ ವಾಕ್ಯವು ಜ್ಞಾನಪರ ನಿಜವು ಅಂತಾ ತಿಳುವಳಿಕೆ ಬಾರದಿದ್ದರೆ ಅಜ್ಞಾನವು ನಷ್ಟವಾಗಿಲ್ಲ ಅಂತಾ ತಿಳಿಯಬೇಕು ಅಂತಾ ಸಿದ್ದನು ಹೇಳಿದ್ದನ್ನು ಕೇಳಿ ಸಂತಸಪಟ್ಟ ಆ ವಿಪ್ರನು ತನ್ನ ಸಂಶಯಗಳು ನಿವಾರಣೆಗೊಂಡವು ಅಂತಾ ನಮಿಸಿದನು. 


ನಂತರ ತಿರುಕಂಭಟ್ಟನೆಂಬ ನೈಯಾಯಿಕ್ ಮುಂದೆ ಬಂದು ಹೇ  ಸ್ವಾಮಿಯೆ, ಬ್ರಹ್ಮಾತ್ಮ ನಿಜಾವಸ್ತುವ ಲಕ್ಷಣ, ಭಾವದಲ್ಲಿ ಲಕ್ಷಿಸುವಿಕೆ ಬಗ್ಗೆ ತಾವು ಪೇಳಿದಿರಲ್ಲವೆ ಅಂತಾ ಪ್ರಶ್ನಿಸಿದನು. ಆಗ ಸಿದ್ದನು ಭಟ್ಟನನ್ನು  ಕುರಿತು, ಭಟ್ಟರೆ, ಸಮಾಧಾನದದಿಂದ  ಕೇಳಿರಿ. ಮಾಯಾ, ಅವಿದ್ಯಾಭಾವ ಕಲ್ಪಿತ  ಉಪಾಧಿಗಳನ್ನು ಕಳೆದು ಉಳಿದ ಕೊರತೆ ಇಲ್ಲದ, ವಿಶುದ್ದ, ವ್ಯಾಪಕ, ನಿತ್ಯ, ಅಪಾರ ಚಿತ್‌ಸುಖ ತಾನು ನಾನೆಂಬರಹಿತ, ಸರ್ವಾಧಾರ, ಮತಿದೂರ, ಜಾಣನೇ ಇನಿತು ಲಕ್ಷಣಗಳಿಂದ ಸದ್ಗುರುವಿನ ಮಾರ್ಗದರ್ಶನ ದಿಂದ ಆ ವಸ್ತುವನ್ನು ಕಾಣುವೆವು ಅಂತಾ ಹೇಳಲು ಭಟ್ಟರು ಅಯ್ಯಾ ಸ್ವಾಮಿಯ ಬ್ರಹ್ಮಕ್ಕೆ ಪರಮಸುಖ ಲಕ್ಷಣ ಒಂದೇ ಮುಖ್ಯವಾಗಿರಲು ನಿತ್ಯಾದಿ ಮುಂತಾದ ಲಕ್ಷಣಗಳ ಕಾರಣಗಳ್ಯಾಕೆ ಎಂದು ಕೇಳಲು ಹರ್ಷಚಿತ್ತದಿಂದ ಸಿದ್ದನು ಪೇಳತೊಡಗಿದನು.


ಬ್ರಹ್ಮಕ್ಕೆ ಸುಖದ ಒಂದೇ ಲಕ್ಷಣ ಹೇಳಿದರೆ ಎಲ್ಲ ವಿಷಯಗಳಲ್ಲಿ ಆನಂದ ದೊರೆವದು. ಅದರಂತೆ ನಿದ್ರೆಯಿಂದ ಎಚ್ಚೆತ್ತ ಕೂಡಲೇ ನಿರ್ವಿಷಯದ ಆನಂದ ತೋರುತ್ತದೆ. ಒಂದು ವಸ್ತುವಿನಲ್ಲಿ ಕಾಣುವ ಲಕ್ಷಣ ಇನ್ನೊಂದು ವಿಷಯದಲ್ಲಿ ಕಂಡರೆ ಅತಿವ್ಯಾಪ್ತಿ ದೋಷ ಬರುವದು. ಹಾಲು ಬೆಳ್ಳಗಿದೆ ಅಂತಾ ಲಕ್ಷಣ ಹೇಳಿದಲ್ಲಿ ಬೆಳ್ಳಗಿರುವದಲ್ಲ ಹಾಲು ಆಗಲಾರದು. ಯಾಕಂದರೆ ಸುಣ್ಣ, ಕಾಗದ ಇವುಗಳಲ್ಲಿ ಸಹ ಬೆಳ್ಳಗೆ ತೋರಿದರೂ ಹಾಲು ಆಗಲಾರದು. ಹಾಲಿಗೆ ದ್ರವರೂಪದ ಲಕ್ಷಣ ಹೇಳಿದರೆ ಸುಣ್ಣದ ನೀರು ಕಳ್ಳಿ ಹಾಲು ಎಕ್ಕಿ ಹಾಲು ಬಿಳಿ ಮತ್ತು ದ್ರವ ಕಂಡರೂ ಹಾಲು ಆಗಲಾರದು. ಹಾಲಿನ ಮಧುರತೆ, ದ್ರವತೆ ಲಕ್ಷಣ ಹೇಳಿದರೆ ಬೆಲ್ಲದ ನೀರಿನಲ್ಲಿ ಇವೆರಡೂ ಕಂಡು ಬಂದು ಹಾಲಾಗಲಾರದು. ಮಧುರತೆ, ಶುಭ್ರತೆ ಲಕ್ಷಣ ಹೇಳಿದಲ್ಲಿ ಸಕ್ಕರೆಯಲ್ಲಿ ಶುಭ್ರತೆ ಹಾಗೂ ಮಧುರತೆ ಇದ್ದರೂ ಹಾಲಾಗಲಾರದು. ಕಾರಣ ಈ ಅತಿ ವ್ಯಾಪ್ತಿದೋಷ ನಿವಾರಣೆಗಾಗಿ ಮೂರು ಲಕ್ಷಣಗಳನ್ನು ಹೇಳಬೇಕಾಗುತ್ತದೆ. ಈ ಮೂರೂ ಲಕ್ಷಣ ಕಂಡಲ್ಲಿ ಮಾತ್ರ ಹಾಲು ಅಂತಾ ಹೇಳಬೇಕಾಗುತ್ತದೆ. ಪರಬ್ರಹ್ಮಕ್ಕೆ ನಿತ್ಯ ಲಕ್ಷಣ ಒಂದನ್ನೇ ಹೇಳಲು ನ್ಯಾಯಮತದವರು ಜಡದಲ್ಲಿ ನಿತ್ಯ ಲಕ್ಷಣಗಳು ಆತ್ಮನಿಗಿರುವಂತೆ ಆಕಾಶ, ಕಾಲ ಮೊದಲಾದವುಗಳಿಗೂ ಇರುವವೆಂದು ಹೇಳುವರು. ಕಾರಣ ಇವೇ ಅತಿವ್ಯಾಪ್ತಿ ದೋಷವು. ಇದನ್ನು ಕಳೆಯಲು ಚಿತ್ತ  ಲಕ್ಷಣ ಹೇಳಲು ಅದು ನಿರ್ದೋಷವಾಗಿದೆ.


ಬ್ರಹ್ಮಕ್ಕೆ ನಿತ್ಯ ಲಕ್ಷಣದೊಡನೆ ಚಿತ್ (ಪ್ರಕಾಶ) ಲಕ್ಷಣವನ್ನು ಹೇಳಿದಲ್ಲಿ ಸೂರ್ಯ, ಅಗ್ನಿ, ನಕ್ಷತ್ರ ಮುಂತಾದವುಗಳಲ್ಲಿ ಪ್ರಕಾಶವು ಕ್ಷಣಿಕವಾಗುವಂತೆ, ಆತ್ಮನು ಪರಿಚ್ಛಿನ್ನ ಪ್ರಕಾಶವುಳ್ಳವನು ಅಂತಾ ಅತಿವ್ಯಾಪ್ತಿ ದೋಷ ಬರುತ್ತದೆ. ಈ ದೋಷದ ನಿವಾರಣೆಗಾಗಿ ಪ್ರಕಾಶ ಲಕ್ಷಣ ಹೇಳುವಾಗ ವ್ಯಾಪಕ ಲಕ್ಷಣ ಹೇಳಲು ನಿರ್ದೋಷವಾಗುವದು. ಇದೇ ಪ್ರಕಾರ ಬ್ರಹ್ಮಕ್ಕೆ ವ್ಯಾಪಕ ಲಕ್ಷಣ ಹೇಳಿದಲ್ಲಿ ಸಾಂಖ್ಯವಾದಿಗಳು ವ್ಯಾಪಕತ್ವವನ್ನು ಪ್ರಕೃತಿಯಲ್ಲಿ ಮತ್ತು ನಭದಲ್ಲಿ ಕಂಡು ಅತಿವ್ಯಾಪಿ ದೋಷವುಂಟಾಗುವದು ಅಂತಾ ಪ್ರತಿಪಾದನೆ ಮಾಡುವರು. ವ್ಯಾಪಕದೊಡನೆ ಆಧಾರ ಲಕ್ಷಣ ಹೇಳಿದಲ್ಲಿ ನಿರ್ದೋಷವು. ಇನ್ನು ಬ್ರಹವೇ ಸರ್ವಕ್ಕೂ  ಆಧಾರ ಅಂತಾ ಹೇಳಿದಲ್ಲಿ ನೇಣಿನಲ್ಲಿ ಪ್ರತಿಭಾಸಿಕ ಸರ್ವ ತೋರಿ ಅತಿವ್ಯಾಪ್ತಿ  ದೋಷ ಬರುವದು. ಕಾರಣ ಆಧಾರದೊಡನೆ ಅಪಾರ ಲಕ್ಷಣ ಹೇಳಲೇಬೇಕಾಗುತ್ತದೆ.


ಸುಖವು ಆತ್ಮನ ಗುಣವೆಂದು ಹೇಳುವರು. ವಸ್ತುವಿನಲ್ಲಿ ಗುಣವು ಆಗಂತುಕವಾಗಿದೆ. ರವಿಯ ಪ್ರಕಾಶವು ಗುಣವಾಗಿರದೆ, ಆತನ ಲಕ್ಷಣವಾಗಿರುವಂತೆ ಸುಖವು ಆತ್ಮನ ಲಕ್ಷಣವಲ್ಲದೆ  ಆಗಂತುಕವಲ್ಲ ಎಂದು ಶೃತಿ ಯುಕ್ತಿ, ಪ್ರಮಾಣಗಳಿಂದ ನೈಯಾಯಿಕರು ಒಪ್ಪುವಂತೆ ಬ್ರಹ್ಮಜ್ಞಾನಿಯಾದ ಸಿದ್ದನು ಬೋಧಿಸಿದನು. ಉಪಸ್ಥಿತರಿದ್ದವರೆಲ್ಲರೂ ಆನಂದೋತ್ಸಾಹಗಳಿಂದ ಸಿದ್ದನಿಗೆ ನಮಿಸಿದರು. ಪುನಃ ತಿರುಕಂಭಟ್ಟನು ಸಿದ್ಧನನ್ನು ಕುರಿತು ಹೇ ಮಹಾಮಹಿಮನೆ, ಬ್ರಹ್ಮವು ಮತಿಗೆ ಅಗೋಚರನೆಂದರೆ  ಮತಿಯ ದುಃಖದ ನಿವೃತ್ತಿಯಾಗುವ ಬಗೆ ಹೇಗೆ ಎಂದನು.


ಅದಕ್ಕೆ ಸಿದ್ದಬಾಲಕನು ಅಯ್ಯಾ ಭಟ್ಟರೆ ಕೇಳಿರಿ, ಬ್ರಹ್ಮವು ಮಲಿನ ಮತಿಗೆ ಅಗೋಚರವೇ ಹೌದು. ಆದರೆ ಪರಿಶುದ್ಧವಾದ ಮತಿಗೆ ಮಾತ್ರ ಗೋಚರ, ತಾನು ಪರಿಶುದ್ದ ಬುದ್ದಿಯಿಂದ ನಿತ್ಯವೂ ತತ್, ತ್ವಂ ಪದಗಳ ಶೋಧ ಮಾಡುತ್ತಿರಬೇಕು. ಹೀಗೆ ಅಭ್ಯಾಸ ಬಲದಿಂದ ಬ್ರಹ್ಮಾತ್ಮ ಐಕ್ಯಭಾವ ಉದಯಿಸಿ ಬುದ್ದಿಯಲ್ಲಿ ಸ್ಥಿರತೆಯಾಗಿ ಲಯವಾಗಲು ದುಃಖ ದೂರಾಗುವದು ಅಂತಾ ಸಂಶಯ ನಿವಾರಣೆ ಮಾಡಿದನು. ಆಗ ಆನಂದೋಲ್ಲಾಸಗಳಿಂದ ತಿರುಕಂಭಟ್ಟನು ಗುರುಗಳೇ ನೀವು ಹರಿಯ ಪರಾವತಾರಿಗಳಾಗಿದ್ದೀರಿ. ನಿಮ್ಮ ಬೋಧನೆಯಿಂದ ನನ್ನಲ್ಲಿ ಆವರಿಸಿದ್ದ ದ್ವೈತ  ಮತಿಯು ನಾಶವಾಯಿತು. ನಾನು ಧನ್ಯನಾದೆ ಅಂತಾ ಉದ್ದರಿಸುತ್ತಾ ಸಿದ್ಧನಿಗೆ ಪುನಃ ಪುನಃ ನಮಸ್ಕರಿಸುತ್ತಾ ಜಯ ಜಯಕಾರ ಮಾಡಿದನು. ಅಷ್ಟರಲ್ಲಿ ಓರ್ವ ದ್ವಿಜನು ಬಂದು ಸಿದ್ದನಿಗೆ ಭೋಜನ ಅರ್ಪಿಸಿದ್ದನ್ನು ಸಿದ್ದನು ಸ್ವೀಕರಿಸಿ ವಿಶ್ರಾಂತಿ ಮಾಡಹತ್ತಿದನು. ಆಗ ಗೋವಿಂದ ಭಟ್ಟನು ಸಿದ್ಧನನ್ನು ಕುರಿತು ಹೇ ಯತಿಯೇ ನಿಮ್ಮ ಹಸಿವೆಯ ಬಾಧೆ ಹಿಂಗಿಸಲು ಅನ್ನವನ್ನು ಭೋಜನ ಮಾಡಿದಿರಿ. ನೀವು ಹೇಳುವ ಪ್ರಕಾರ ಆತ್ಮನು ನಿತ್ಯಾನಂದನಿದ್ದ ಕಾರಣ ನಿಮ್ಮ ಹಸಿವೆಯ ದುಃಖ ನಿವಾರಣೆಗೆ ಕಾರಣವಾಗಲಾರದ್ದು. ಜನ್ಮಾದಿ ದುಃಖಗಳನ್ನು

ಹೇಗೆ ಕಳೆಯಬಲ್ಲುದು ಇಂತಹ ನಿಮ್ಮ  ಬ್ರಹ್ಮಜ್ಞಾನವನ್ನು ನಂಬುವದರಿಂದ ಯಾವ ಪ್ರಯೋಜನವಾಗುವದು ಅಂತಾ ಪ್ರಶ್ನಿಸಿದನು.

 

ಈ ಎಲ್ಲ ಪ್ರಶ್ನೆಗಳನ್ನು ಸಾವಧಾನವಾಗಿ ಆಲಿಸಿದ ಸಿದ್ದನು ಆ ಭಟ್ಟನನ್ನು ಕುರಿತು, ಹೇ ಭಟ್ಟರೇ ನೀನು ಆತ್ಮನ ಚೈತನ್ಯವನ್ನು ಲಕ್ಷಿಸಿ ಕೇಳುವಿಯೋ ಅಥವಾ ಪಂಚಭೂತಾತ್ಮಕ ಈ ಶರೀರವನು ಲಕ್ಷಿಸಿ ಕೇಳುವಿಯೋ ಮೊದಲನೇದ್ದರ ಪ್ರಕಾರ, ಕೇಳಿದಲ್ಲಿ ಆತ್ಮನು ಜನನ, ಮರಣ, ಹಸಿವೆ, ತೃಷೆ, ಶೋಕ, ಮೋಹಗಳಿಗೂ ಅನ್ನಮಯ ಪಂಚಕೋಶಗಳಿಗೂ ಸಾಕಿಕನಾಗಿದ್ದರಿಂದ ಇದು ಸಿದ್ಧವಾಗಲಾರದು. ಇನ್ನು ಎರಡನೇದ್ದರ ಪ್ರಕಾರ ಕೇಳಿದಲ್ಲಿ ಕಾಣತಕ್ಕ ಈ ಸ್ಥೂಲ ಶರೀರವು ಪ್ರಾರಬ್ಧ ಕರ್ಮಗಳಿಗೆ ಆಧೀನವಾಗಿರುವದು, ಹಸಿವೆ,ತೃಷೆ,  ಸುಖ, ದುಃಖ, ನಿದ್ರೆ, ವಿಷಯ ರೋಗಾದಿಗಳಿಂದ ಈ ಶರೀರವು ಪ್ರಾರಬ್ಧ ಕರ್ಮಕ್ಕನುಗುಣವಾಗಿ ಅನುಭವಿಸಿ ನಂತರ ನಾಶವಾಗುವದು. ವಿಚಾರ ಮಾಡಿದಲ್ಲಿ ಆತ್ಮ, ದೇಹಗಳ ಬೆಸುಗೆ ಮೇಘ ಆಕಾಶದಂತೆ ಇರುವದು. ಜ್ಞಾನವನ್ನು ಸಾಧಿಸುವ ವೈರಾಗ್ಯ ಸಂಪನ್ನ ಸಾಧಕನಿಗೆ ದೇಹ ಸಂಬಂಧದ ಬಾಧೆ ಇರಲಾರದು. ಪರಬ್ರಹ್ಮ ಸ್ವರೂಪವನ್ನು ತಿಳಿದ ಜ್ಞಾನಿಯು ದುಃಖದಲ್ಲಿ ಎಂದೂ ಸಿಲುಕಲಾರನು. ನೀರೊಳಗಿನ ಕಮಲಪತ್ರವು ತೊಯ್ಯದಂತೆ, ಒದಗಿ ಬಂದ ಪ್ರಾರಬ್ಧ ಕರ್ಮದ ಸುಖ ದುಃಖ ಭೋಗಿಸಿದರೂ ನಿರ್ಲಿಪ್ತನಾಗಿರುವನು ಅಂತಾ ಸಿದ್ಧನು ಸವಿವರವಾಗಿ ಹೇಳಿ ಭಟ್ಟನ ಸಂಶಯ ನಿವಾರಿಸಿದನು.


ಸಂಶಯ ನಿವಾರಣೆಗೊಂಡ ಗೋವಿಂದ ಭಟ್ಟನು ಎದ್ದುನಿಂತು ಕೈಮುಗಿದು ನಮ್ರತೆಯಿಂದ ಸಿದ್ಧನನ್ನು ಕುರಿತು, ಹೇ ಗುರುವರ್ಯ, ಜಡಮತಿಯಾದ ನಾನು ತಿಳುವಳಿಕೆಯಿಲ್ಲದಲೇ ನಿಮ್ಮ ಇಂಗಿತವನ್ನು ಅರ್ಥ ಮಾಡಿಕೊಳ್ಳದೇ ಪ್ರಶ್ನಿಸಿದೆ. ವೇದಾಂತ ಸಾರಭೂತ ಬೋಧನೆಯನ್ನು ಮಾಡಿ ನನ್ನನ್ನು ಧನ್ಯನನ್ನಾಗಿ ಮಾಡಿರುವಿ. ನಿನ್ನ ಬೋಧದಿಂದ ನನ್ನಲ್ಲಿ ಬ್ರಹ್ಮ ಜ್ಞಾನದ ಬಗ್ಗೆ ದೃಢತೆ ಬಂದಿರುವದಲ್ಲದೆ ಅತ್ಯಂತ ದುಃಖ ನಿವೃತ್ತಿ ಮಾಡಿ ಪರಮಾನಂದ ಪ್ರಾಪ್ತಿಯ ಪುರುಷಾರ್ಥದತ್ತ ನನಗೆ ಬೆಳಕನ್ನು ತೋರಿಸಿದಿ ಸದ್ಗುರುರಾಯನೇ ನಿನ್ನ ಕರುಣಾರಸ ಪೂರ್ಣ ಶ್ರವಣಾಮೃತಪಾನ ಮಾಡಿದ ನಾನು ಕೃತಾರ್ಥನಾದೆ ಅಂತಾ ಹರ್ಷಭರಿತನಾಗಿ ಜಯ ಜಯಕಾರ ಹಾಕಿದನು.


ಮಾವುತನು ಮದ್ದಾನೆಯನ್ನು ಅಂಕುಶದಿಂದ ಅಂಕಿತದಲ್ಲಿಟ್ಟುಕೊಳ್ಳುವಂತೆ, ಸಿದ್ಧ ಬಾಲಕನು ತನ್ನ ಜ್ಞಾನ ಚಾತುರ್ಯದ ಅಂಕುಶದಿಂದ ಸಂಕುಚಿತವಾದಗಳಿಂದ ಮದವೇರಿದ ನೈಯಾಯಿಕ ಮುಂತಾದ ವಾದಿಗಳನ್ನು ಖಂಡ ತುಂಡವಾಗಿ ಪರಾಭವ ಮಾಡಿ ತನ್ನ ಅಂಕಿತಕ್ಕೆ ಬರುವಂತೆ ಬೋಧಿಸಿದನು. ದ್ವೈತ  ಭಾವದ ಈ ಎಲ್ಲ ವಿಪ್ರರೂ ಪರಾವರ್ತನೆಗೊಂಡು ಭಯ ಭಕ್ತಿಯಿಂದ ಸಿದ್ಧನನ್ನು ಕುರಿತು, ಈತನು ಮಾನವನಾಗಿ ಬಂದ ಹರನೇ ಧರೆಗಿಳಿದು ಬಂದು ನಮ್ಮನ್ನು ವೇದಾಂತ ರಥದಲ್ಲಿ ಕುಳ್ಳಿರಿಸಿ ಬ್ರಹ್ಮತ್ಮೈಕ್ಕತೆ  ಬೋಧಿಸಿದನು ಅಂತಾ ಮೆಚ್ಚಿಕೆಯನ್ನು ವ್ಯಕ್ತಪಡಿಸಿದರು. ಕೆಲ ಕಾಲದವರೆಗೆ ಸಿದ್ಧನನ್ನು ತಮ್ಮಲ್ಲಿ ವಾಸ್ತವ್ಯ ಮಾಡಿಸಿಕೊಂಡು, ಪ್ರತಿನಿತ್ಯ ವೇದಾಂತದ ಶ್ರವಣ ಮಾಡುತ್ತಾ ಗುರುಕೃಪೆಗೆ ಪಾತ್ರರಾದರು. ಈ ವಾರ್ತೆಯು ನಗರದ ತುಂಬಾ ಹರಡಿತು. ಅನೇಕ ಭಕ್ತರು ಬಂದು ಬಂದು ಶ್ರವಣ ಮಾಡುತ್ತಿದ್ದರು. ಒಂದಾನೊಂದು ದಿನ ವಿರಕ್ತಳಾದ ಗುಜ್ಜಮ್ಮನು ಆಗಮಿಸಿದಳು, ಫಲ ಪುಷ್ಟಗಳನ್ನು ಗುರುಗಳಿಗೆ ಅರ್ಪಿಸಿ ಭಕ್ತಿಯುಕ್ತಳಾಗಿ ದಂಡವತ್ ಪ್ರಣಾಮಗಳನ್ನು ಮಾಡಿ ಗುರುಗಳ ಪಾದಗಳನ್ನು ಗಟ್ಟಿಯಾಗಿ ಹಿಡಿದು ಹೇ ಕರುಣಾಕರನಾದ ಕೃಪಾಸಿಂಧು ಸದ್ಗುರುನಾಥನೆ  ಭವಸಾಗರದಲ್ಲಿ ಜನ್ಮ ಜನ್ಮಾಂತರಗಳಿಂದಲೂ ದುಃಖ ಪಡುತ್ತಿರುವ ನನಗೆ ಮುಕ್ತಿ ದೊರೆಯುವ ಮಾರ್ಗವನ್ನು ತೊರಿ ಉದ್ದರಿಸು ಅಂತಾ ಕೇಳಿಕೊಂಡಳು.


ಆಗ ಸಿದ್ದನು ಆ ವಿರಕ್ಕಳನ್ನು ಎತ್ತಿ ಹಿಡಿದು ಆಕೆಯ ಭಕ್ತಿಪೂರ್ವಕ ನುಡಿಯನ್ನು ಕೇಳಿ ಬೋಧಿಸತೊಡಗಿದರು. ಉತ್ತಮ ಅಧಿಕಾರದ ಲಕ್ಷಣವನ್ನು ಗುರುತಿಸಿದ ಸಿದ್ದನು ಹೇಳಿದ ಪ್ರಕಾರ ಆ ವಿರಕ್ಕಳು ಅಭ್ಯಂಗಸ್ನಾನ ಮಾಡಿ ಬಂದಳು. ಆಕೆಗೆ ವಿಭೂತಿಧಾರಣೆ ಮಾಡಿಸಿ, ರುದ್ರಾಕ್ಷಿ ಹಾಕಲು ತಿಳಿಸಿದನು. ನಂತರ ಅಂಗಸ್ನಾನ, ಕರನ್ಯಾಸ, ಮಾನಸ ಪೂಜೆಯ ವಿಧಾನಗಳನ್ನು ತಿಳಿಸಿದನು. ಪ್ರತಿನಿತ್ಯಲೂ ಅಂಗಸ್ನಾನ, ಕರನ್ಯಾಸ ಮಾಡುತ್ತಾ ಹೃತ್ಕಮಲದಲ್ಲಿ ಕೋಟಿ ಸೂರ್ಯ ಪ್ರಕಾಶ ಮಾನ ರತ್ನ ಖಚಿತ ಸಿಂಹಾಸನದಲ್ಲಿ ಇಷ್ಟ ದೈವತವನ್ನು ಕುಳ್ಳಿರಿಸಿ ಉಪದೇಶಿಸಿದ ಪಂಚಾಕ್ಷರಿ ಮಂತ್ರವನ್ನು ಜಪಿಸುತ್ತಾ ನಿರಂತರವೂ ಅರ್ಪಿಸುವ ಮಾನಸಪೂಜೆಯನ್ನು ಮಾಡುತ್ತಿರುವಲ್ಲಿ  ಪರಿಪಕ್ಷಾವಸ್ಥೆ ಪ್ರಾಪ್ತಿಯಾಗುವದು.

ಇದರಿಂದ ಭವರೋಗ ಪರಿಹಾರವಾಗಿ ಚಿನ್ಮಯ ಸುಖವು ಪ್ರಾಪ್ತಿಯಾಗುವದು ಅಂತಾ ಬೋಧಿಸಿದನು. ಈ ಬೋಧನೆಯಿಂದ ಆ ಗುಬ್ಬಮ್ಮನು ಕೃತಜ್ಞತೆಯಿಂದ ಹೇ ಸದ್ಗುರುವೇ ನಾನು ಧನ್ಯನಾದೆ ಅಂತಾ ವಂದನೆಗಳನ್ನು ಸಲ್ಲಿಸುತ್ತಾ ನಿರ್ಗಮಿಸಿದಳು.


ಸಿದ್ಧಬಾಲಕನು ಅಲ್ಲಿಂದ ಮುಂದೆ ಪ್ರಯಾಣ ಮಾಡುವದಾಗಿ ತಿಳಿಸಿದನು. ಕೂಡಲೇ ಸಿದ್ಧನನ್ನು ಸರ್ವವಿಧವಾಗಿ ಅಲಂಕರಿಸಿ ಈ ಕೆಳಗಿನಂತೆ ಆರತಿಯನ್ನು ಹೇಳದೊಡಗಿದರು.


ಜಯತು ತಾಮಸ ತಿಮಿರ ದಿನಮಣಿ|

ಜಯತು ಭವಕುಲ ಶರಧಿ ಸುತರಣಿ|

ಜಯತು ಮೋಕ್ಷಾಸಕ್ತ ಜನ ಚಿಂತಾಮಣಿಯೆ ಜಯತು |

ಜಯತು ಬ್ರಹ್ಮಜ್ಞಾನ ವರಖಣಿ|

ಜಯತು ಸದ್ಗುರು ಜನ ಕುಲಾಗ್ರಣಿ |

ಜಯತು ಸಿದ್ಧಾರೂಢ ಸದ್ಗುಣ ಮಣಿಯೆ ಜಯ ಜಯತು|| 


ಈ ಪ್ರಕಾರ ಆರತಿ ಮಾಡಿ ಪಲ್ಲಕ್ಕಿಯಲ್ಲಿ ಕೂಡ್ರಿಸಿ, ವಾದ್ಯ ವೈಭವದೊಂದಿಗೆ ನಾನಾ ಬೀದಿಗಳಲ್ಲಿ ಸಂಚರಿಸಿ, ನಗರ ಪ್ರದಕ್ಷಿಣೆ ಮಾಡುವಾಗ ಜನಸಾಗರ ಉಕ್ಕಿ ಹರಿದು ಬಂದು ಸಿದ್ದನ ದರ್ಶನ ಪಡೆಯುತ್ತ ಹೂವು, ಹಣ್ಣು ಫಲಗಳನ್ನು ಅರ್ಪಿಸುತ್ತಾ ವಂದನೆಗಳನ್ನು ಸಲ್ಲಿಸುತ್ತಾ ಆನಂದ ಸಾಗರದಲ್ಲಿ ತೇಲಾಡಿದರು. ಆ ನಗರದ ಭಕ್ತವೃಂದಕ್ಕೆ ಶುಭಾಶೀರ್ವಾದ ಮಾಡುತ್ತಾ ಸಿದ್ದನು ಅಲ್ಲಿಂದ ಮುಂದೆ ಸಾಗಿದವು.

ಪ್ರಾಪ್ತವಾಗುವುದು

👇👇👇👇👇👇👇👇👇👇👇👇👇👇

ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜನ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ, ಬೇರೆಯರಿಗೂ share ಮಾಡಿ, ಅವರಿಗೂ help ಮಾಡಿ ಅಜ್ಜನ ಕೃಪೆಗೆ ಪಾತ್ರರಾಗಿರಿ

ಈ link ಒತ್ತಿ 👉 📖 👈 ಒತ್ತಿ

ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ

👉ತಿರುವಾಂಕುರ ಪದ್ಮನಾಭನ ದೇವಾಲಯದಲ್ಲಿ ಸಿದ್ಧನಿಗೆ ಬ್ರಾಹ್ಮಣರಿಂದ ಅಗ್ರಪೂಜೆ

ಎಲ್ಲಾ  ಕಥೆಗಳ ಲಿಂಕಗಳು 

👉ಸಿದ್ಧಾರೂಢ ಭಾಗವತ ಕಥಾ ಸಂಗ್ರಹ 👉🛃

ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 

1)WhatsApp shareಗಾಗಿ click ಮಾಡಿ📲☎️

2)Facebook shareಗಾಗಿ👉

3)



«««««ಓಂ ನಮಃ ಶಿವಾಯ »»»»»»»

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ