ಒಂದಾನೊಂದು ದಿವಸ ಸಿದ್ಧನು ಬಾಲಕರ ಕೂಡ ಆಡುತ್ತಿರುವಾಗ, ಬಾಲಕರೆಲ್ಲ ಕೂಡಿ ಸಿದ್ದನಿಗೆ ಎಳ್ಳು ಕೇಳುವವರಾದರು. ಆಗ ಸಿದ್ಧನು ಅವರಿಗೆ ಆಶ್ವಾಸನೆ ಕೊಟ್ಟು ತನ್ನ ಮನೆಗೆ ಕರಕೊಂಡು ಬಂದನು. ಅವರನ್ನು ಕರೆದುಕೊಂಡು ಅಡುಗೆ ಮನೆಯೊಳಗೆ ಹೊಕ್ಕು ನೋಡುತ್ತಿರುವಾಗ, ಎಳ್ಳಿನ ಗಡಿಗೆಯು ಆತನ ಕೈಗೆ ನಿಲುಕಲಾರದಷ್ಟು ಎತ್ತರವಾದ ನೆಲುವಿನ ಮೇಲಿತ್ತು. ಆಗ ಸಿದ್ಧನು ಒಂದು ಬಡಿಗೆ ತಂದು ಅದರಿಂದ ಆ ಗಡಿಗೆಯ ಬುಡಕ್ಕೆ ಚುಚ್ಚಿ ತೂತು ಮಾಡಿದನು. ಆಗ ಎಳ್ಳು ಧಾರಾಕಾರವಾಗಿ ಸುರಿಯುತ್ತಿರುವುದನ್ನು ನೋಡಿ, ಹುಡುಗರೆಲ್ಲಾ ತಮತಮಗೆ ಬೇಕಾದಷ್ಟು ಎಳ್ಳನ್ನು ಕಟ್ಟಿಕೊಂಡು ಹೋದರು. ಅವರನ್ನು ಕಂಡು ಇತರ ಅನೇಕರೂ ಬಂದು ನೋಡಲು, ಸಣ್ಣದಾದ ಎಳ್ಳಿನ ಗಡಿಗೆಯ ಕೆಳಗೆ ದೊಡ್ಡ ಎಳ್ಳಿನ ರಾಶಿಯಿದ್ದು ನೋಡಿ ಎಷ್ಟೋ ಮಂದಿ ಅದರೊಳಗಿಂದ ಎಳ್ಳನ್ನು ಕಟ್ಟಿಕೊಂಡು ಹೋಗುತ್ತಿದ್ದರು. ಇದನ್ನು ಕಂಡು ಬಹು ಆಶ್ಚರ್ಯಭರಿತರಾಗಿ ಇದು ಬಾಲರೂಪದಿಂದ ಕಾಣಿಸಿಕೊಳ್ಳುವ ಸಾಕ್ಷಾತ್ ಅವತಾರಿಕನಾದ ಸಿದ್ಧನ ಮಹಿಮೆಯಂದು ಆತನನ್ನು ಕೊಂಡಾಡಿದರು. ಸಾವಿರಾರು ಗಡಿಗೆಯೊಳಗೆ ಹಿಡಿಸಲಾರದಷ್ಟು ಈ ಎಳ್ಳಿನ ರಾಶಿ ಒಂದು ಚಿಕ್ಕ ಗಡಿಗೆಯೊಳಗಿಂದ ಹೇಗೆ ಬಂತು ? ಎಂದು ಸಿದ್ಧನ ಖ್ಯಾತಿಯನ್ನು ಜನರು ಎಲ್ಲಾ ಕಡೆಯಲ್ಲಿ ವರ್ಣಿಸುತ್ತಿದ್ದರು. ಅಷ್ಟರಲ್ಲಿ ಸಿದ್ಧನ ತಾಯಿ ದೇವಮಲ್ಲಮ್ಮನು ಮನೆಯೊಳಗೆ ಬಂದು ನೋಡಲಾಗಿ, ಪುತ್ರನ ಲೀಲಾ ಕಂಡು ಆಶ್ಚರ್ಯಚಕಿತಳ...